ಹಾಸ್ಟೆಲ್ ಹೊರಗುತ್ತಿಗೆ ಸಿಬ್ಬಂದಿಗೆ ಸಂಕಷ್ಟ; ಕಳೆದ ಒಂಬತ್ತು ತಿಂಗಳಿಂದ ವೇತನ ಸಿಗದೇ ಪರದಾಟ
ಅವರೆಲ್ಲ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಕಡಿಮೆ ಸಂಬಳಕ್ಕೆ ದುಡಿಯುವ ಅವರೆಲ್ಲ, ತಮಗೆ ಪ್ರತಿ ತಿಂಗಳಿಗೆ ಬರುವ ವೇತನದ ಮೇಲೆಯೇ ಜೀವನ ನಡೆಸುತ್ತಿದ್ದಾರೆ. ಆದ್ರೆ, ಜನರಿಗೆ ಗ್ಯಾರಂಟಿ ಯೋಜನೆಗಳ ಮೂಲಕ ಅನೇಕ ಕೊಡುಗೆಗಳನ್ನು ನೀಡಿರುವ ಸರ್ಕಾರ, ಪ್ರತಿ ತಿಂಗಳು ದುಡಿಯುವ ಜನರಿಗೆ ಮಾತ್ರ ಸರಿಯಾಗಿ ವೇತನ ನೀಡುತ್ತಿಲ್ಲ. ಇದು ಹಾಸ್ಟೇಲ್ಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಕಾರ್ಮಿಕರ ಸಂಕಷ್ಟ ಹೆಚ್ಚಿಸುತ್ತಿದೆ.
ಕೊಪ್ಪಳ, ಮೇ.16: ರಾಜ್ಯದಲ್ಲಿ ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಡಿಯಲ್ಲಿ ಅನೇಕ ವಸತಿ ನಿಲಯಗಳಿವೆ. ಈ ವಸತಿ ನಿಲಯಗಳಲ್ಲಿ ಅಡುಗೆ ಸಿಬ್ಬಂಧಿ, ಕಾವಲುಗಾರರು, ಸ್ವಚ್ಚತೆ ಕೆಲಸ ಸೇರಿದಂತೆ ಅನೇಕ ಕೆಲಸಗಳಿಗಾಗಿ ಹೊರಗುತ್ತಿಗೆ(Outsourcing) ಆಧಾರದ ಮೇಲೆ ಏಜನ್ಸಿಗಳ ಮೂಲಕ ಸಿಬ್ಬಂಧಿಯನ್ನು ನಿಯೋಜಿಸಲಾಗಿದೆ. ಪ್ರತಿ ತಿಂಗಳು ಹತ್ತರಿಂದ ಇಪ್ಪತ್ತು ಸಾವಿರ ವೇತನಕ್ಕಾಗಿ ರಾಜ್ಯದ ಸರ್ಕಾರಿ ಹಾಸ್ಟೇಲ್ಗಳಲ್ಲಿ ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಅದೇ ರೀತಿ, ಕೊಪ್ಪಳ ಜಿಲ್ಲೆಯಲ್ಲಿರುವ ಸರ್ಕಾರಿ ಹಾಸ್ಟೇಲ್ಗಳಲ್ಲಿ ಕೂಡ 1145 ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.
ವೇತನಕ್ಕಾಗಿ ಪರದಾಟ
ಕೊಪ್ಪಳ ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿರುವ ಹಾಸ್ಟೇಲ್ಗಳಲ್ಲಿಯೇ ಮುನ್ನೂರಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಆದ್ರೆ, ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೇಲ್ನಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಕಳೆದ ಎಂಟು ತಿಂಗಳಿಂದ ವೇತನ ಸಿಕ್ಕಿಲ್ಲ. ಬಿಸಿಎಂ ಹಾಸ್ಟೇಲ್ ನಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಕಳೆದ ನಾಲ್ಕು ತಿಂಗಳಿಂದ ವೇತನ ಸಿಕ್ಕಿಲ್ಲ. ಇದು ಹಾಸ್ಟೇಲ್ನಲ್ಲಿ ಕೆಲಸ ಮಾಡುತ್ತಿರುವ ಕಾರ್ಮಿಕರ ಆಕ್ರೋಶಕ್ಕೆ ಕಾರಣವಾಗಿದೆ. ತಮಗೆ ವೇತನ ನೀಡುವಂತೆ ಸ್ಥಳೀಯ ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಏಜನ್ಸಿಗಳಿಗೆ ಕೂಡ ಹತ್ತಾರು ಬಾರಿ ಮನವಿ ಸಲ್ಲಿಸಿದ್ದಾರೆ. ಆದ್ರೆ, ಯಾರು ಕೂಡ ಸ್ಪಂಧಿಸುತ್ತಿಲ್ಲವಂತೆ. ಹೀಗಾಗಿ ನಾವು ಜೀವನ ಮಾಡೋದು ಹೇಗೆ ಅಂತಿದ್ದಾರೆ ಕಾರ್ಮಿಕರು.
ಇದನ್ನೂ ಓದಿ:ಬೆಂಗಳೂರಿನಲ್ಲಿ ಮುಂದುವರಿದ ತಾಪಮಾನ: ವೇತನ ಸಹಿತ ಅರ್ಧ ದಿನ ರಜೆಗೆ ಪೌರಕಾರ್ಮಿಕರ ಆಗ್ರಹ
ಇನ್ನು ಹಾಸ್ಟೇಲ್ಗಳಲ್ಲಿ ಕೆಲಸ ಮಾಡುವ ಬಹುತೇಕ ಕಾರ್ಮಿಕರು ಬಡವರೇ ಆಗಿದ್ದಾರೆ. ಹೊಟ್ಟೆ ಚೀಲ ತುಂಬಿಸಿಕೊಳ್ಳಲು ಅಡುಗೆ ಸೇರಿದಂತೆ ಇನ್ನಿತರ ಕೆಲಸ ಮಾಡುತ್ತಿರುವ ಕಾರ್ಮಿಕರು, ತಮಗೆ ಬರುವ ವೇತನದಲ್ಲಿಯೇ ಜೀವನ ನಡೆಸುತ್ತಿದ್ದರು. ಮನೆ ಬಾಡಿಗೆ, ತಿಂಗಳ ಮನೆ ಖರ್ಚು, ಮಕ್ಕಳ ಶಿಕ್ಷಣದ ಖರ್ಚು ವೆಚ್ಚ ಸೇರಿದಂತೆ ಎಲ್ಲಾ ಖರ್ಚನ್ನು ತಮಗೆ ಬರುತ್ತಿದ್ದ ವೇತನದಲ್ಲಿಯೇ ಸರಿದೂಗಿಸುತ್ತಿದ್ದರು. ಆದ್ರೆ, ಒಂದು ತಿಂಗಳ ವೇತನವೇ ಬರದಿದ್ದರೆ ಸಾಕಷ್ಟು ತೊಂದರೆಯಾಗುತ್ತದೆ. ಆದರೆ ಇಲ್ಲಿ ಕಳೆದ ಎಂಟು ತಿಂಗಳಿಂದ ವೇತನವೇ ಆಗಿಲ್ಲ. ಹೀಗಾಗಿ ದೈನಂದಿನ ಖರ್ಚು ವೆಚ್ಚಕ್ಕೂ ಕೂಡ ಕಾರ್ಮಿಕರು ಇದೀಗ ಪರದಾಡಬೇಕಾದ ದುಸ್ಥಿತಿ ನಿರ್ಮಾಣವಾಗಿದೆ.
ಇಷ್ಟಾದರೂ ಕೂಡ ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಸತಿ ನಿಲಯಗಳ ಜವಾಬ್ದಾರಿ ಇರೋ ಇಲಾಖೆಗಳ ಸಚಿವರು ಮತ್ತು ಮೇಲಾಧಿಕಾರಿಗಳು ಅನೇಕ ನೆಪಗಳನ್ನು ಹೇಳಿ ವೇತನ ನೀಡುತ್ತಿಲ್ಲವಂತೆ. ಇಷ್ಟು ದಿನ ಅನುಧಾನ ಕೊರತೆ ನೆಪ ಹೇಳುತ್ತಿದ್ದ ಅಧಿಕಾರಿಗಳು ಇದೀಗ ಚುನಾವಣೆ ನೆಪ ಹೇಳುತ್ತಿದ್ದಾರಂತೆ. ಹೀಗಾದ್ರೆ ನಮ್ಮ ಜೀವನದ ಗತಿಯೇನು ಎಂದು ಕಾರ್ಮಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳಿಗೆ ಕೇಳಿದ್ರೆ ಆದಷ್ಟು ಬೇಗನೆ ವೇತನ ನೀಡುತ್ತೇವೆ ಏದಮು ಹೇಳ್ತಿದ್ದಾರೆ. ಕಡಿಮೆ ಸಂಬಳಕ್ಕೆ ದುಡಿಯುವ ಕಾರ್ಮಿಕರಿಗೆ ಪ್ರತಿನಿತ್ಯ ವೇತನ ನೀಡುವ ಕೆಲಸವನ್ನು ಸರ್ಕಾರ ಮಾಡಬೇಕಿದೆ. ನಾಲ್ಕರಿಂದ ಎಂಟು ತಿಂಗಳ ವೇತನ ಸಿಗದಿದ್ರೆ ಕಾರ್ಮಿಕರು ಕುಟುಂಬಗಳು ಬೀದಿಗೆ ಬೀಳುತ್ತವೆ. ಇನ್ನಾದರೂ ಗುತ್ತಿಗೆ ಪಡೆದಿರುವ ಏಜನ್ಸಿಗಳು, ಸರ್ಕಾರ, ಕಾರ್ಮಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:53 pm, Thu, 16 May 24