ಕಾಂಗ್ರೆಸ್ಗೆ ಬಿಸಿ ತುಪ್ಪವಾದ ಇಕ್ಬಾಲ್ ಅನ್ಸಾರಿ; ಪಕ್ಷದ ಯಾವುದೇ ಸಭೆಗೆ ಹೋಗದಂತೆ ಬೆಂಬಲಿಗರಿಗೆ ಸೂಚನೆ
ತನ್ನ ಸೋಲಿಗೆ ಕಾಂಗ್ರೆಸ್ ನಾಯಕರೇ ಕಾರಣ, ಲೋಕಸಭಾ ಚುನಾವಣೆಯಲ್ಲಿ ಆದರ ಪರಿಣಾಮ ಗೊತ್ತಾಗಲಿದೆ ಅಂತ ಇಕ್ಬಾಲ್ ಅನ್ಸಾರಿ ಗುಡುಗಿದ್ದಾರೆ. ಲೋಕಸಭಾ ಚುನಾವಣೆ ಸಂಬಂಧ ಕಾಂಗ್ರೆಸ್ ಪಕ್ಷದಿಂದ ಕರೆಯಲಾಗುವ ಯಾವುದೇ ಸಭೆಗಳಿಗೆ ಹೋಗಬೇಡಿ, ಯಾರು ಕರೆದರೂ ಹೋಗಬೇಡಿ ಎಂದು ಇಕ್ಬಾಲ್ ಅನ್ಸಾರಿ ತನ್ನ ಬೆಂಬಲಿಗರಿಗೆ ಸೂಚನೆ ನೀಡಿದ್ದಾರೆ.
ಕೊಪ್ಪಳ, ಮಾರ್ಚ್.27: ಕೇಂದ್ರದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ (Congress) ರಾಜ್ಯದಲ್ಲಿ ಲೋಕಸಭಾ ಚುನಾವಣೆ (Lok Sabha Election) ಸಮರದಲ್ಲಿ ಗೆಲ್ಲಲು ನಾನಾ ಕಸರತ್ತು ಮಾಡುತ್ತಿದೆ. ಅಳೆದು ತೂಗಿ ಅಭ್ಯರ್ಥಿಗಳನ್ನು ಆಯ್ಕೆ ಮಾಡ್ತಿದೆ. ಈಗಾಗಲೇ ಟಿಕೆಟ್ ಸಿಗದೇ ಹತಾಶರಾಗಿರುವ ಕೊಪ್ಪಳ ಸಂಸದ ಕರಡಿ ಸಂಗಣ್ಣ (Karadi Sanganna) ಬಿಜೆಪಿಗೆ ಬಂಡಾಯದ ಬಿಸಿ ಮುಟ್ಟಿಸಿದ್ದಾರೆ. ಈಗ ಮತ್ತೊಂದೆಡೆ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ (Iqbal Ansari) ಕಾಂಗ್ರೆಸ್ಗೆ ಬಿಸಿ ತುಪ್ಪವಾಗಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ಕಾಂಗ್ರೆಸ್ನಲ್ಲಿ ಬಂಡಾಯದ ಬೇಗುದಿ ಎದ್ದಿದೆ. ಕಾಂಗ್ರೆಸ್ ಪಕ್ಷದ ನಾಯಕರ ಮೇಲಿನ ಮುನಿಸು ಮರೆಯದ ಇಕ್ಬಾಲ್ ಅನ್ಸಾರಿ, ಲೋಕಸಭಾ ಚುನಾವಣೆ ಅಂಗವಾಗಿ ನಡೆಯುವ ಯಾವುದೇ ಸಭೆಗೆ ಹೋಗಬೇಡಿ. ಯಾರೇ ಸಭೆ ಕರೆದರೂ ಹೋಗಬೇಡಿ, ಸಮಸ್ಯೆ ಇನ್ನು ಬಗೆಹರಿದಿಲ್ಲ ಅಂತ ತಮ್ಮ ಬೆಂಬಲಿಗರಿಗೆ ಇಕ್ಬಾಲ್ ಅನ್ಸಾರಿ ಕಚೇರಿಯಿಂದ ಸಂದೇಶ ರವಾನೆಯಾಗಿದೆ. ತನ್ನ ಸೋಲಿಗೆ ಕಾಂಗ್ರೆಸ್ ನಾಯಕರೇ ಕಾರಣ, ಲೋಕಸಭಾ ಚುನಾವಣೆಯಲ್ಲಿ ಆದರ ಪರಿಣಾಮ ಗೊತ್ತಾಗಲಿದೆ ಅಂತ ಇಕ್ಬಾಲ್ ಅನ್ಸಾರಿ ಗುಡುಗಿದ್ದಾರೆ. ಇದು ಲೋಕಸಭಾ ಚುನಾವಣೆಯ ಗೆಲುವಿನ ಮೇಲೆ ಪರಿಣಾಮ ಬೀರಲಿದೆ. ಇನ್ನು ಅನ್ಸಾರಿ ಮುನಿಸು ಶಮನ ಮಾಡಲು ಕಾಂಗ್ರೆಸ್ ನಾಯಕರು ಯತ್ನಿಸುತ್ತಿದ್ದಾರೆ. ಸ್ವತಃ ಸಿಎಂ ಸಿದ್ದರಾಮಯ್ಯ, ಗಂಗಾವತಿಯಲ್ಲಿರೋ ಅನ್ಸಾರಿ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ. ಕಳೆದ ವಾರ ಸಚಿವ ಶಿವರಾಜ್ ತಂಗಡಗಿ ಕೂಡಾ ಅನ್ಸಾರಿ ಜೊತೆ ಮಾತುಕತೆ ನಡೆಸಿದ್ದರು. ಆದರೆ ನಾಯಕರ ಸಂಧಾನ ಯಾವುದೇ ಪ್ರಯೋಜನವಾಗಿಲ್ಲ.
ಇದನ್ನೂ ಓದಿ: ಸಿದ್ದರಾಮಯ್ಯ ತವರಲ್ಲೇ ವಿಜಯೇಂದ್ರ ಕಾರ್ಯಾಚರಣೆ ಶುರು: ಪಕ್ಷ ಬಿಡುತ್ತಿದ್ದ ಮುಖಂಡನ ಮನವೊಲಿಸುವಲ್ಲಿ ಯಶಸ್ವಿ
ಪಕ್ಷದ ನಾಯಕರ ವಿರುದ್ಧ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಮುನಿಸು, ನಾಯಕರ ಸಂಧಾನಕ್ಕೂ ಬಗ್ಗೆದ ಹಿನ್ನೆಲೆ ಇದೀಗ ಅನ್ಸಾರಿ ವಿರುದ್ಧ ಸಭೆ ಮಾಡಲು ಕಾಂಗ್ರೆಸ್ ಕಾರ್ಯಕರ್ತರು ಮುಂದಾಗಿದ್ದಾರೆ. ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದಲ್ಲಿ ಇಂದು ಕಾಂಗ್ರೆಸ್ ಮುಖಂಡರ ಸಭೆ ನಡೆಯಲಿದೆ. ಅನ್ಸಾರಿ ನಡೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಪರ ಕೆಲಸ ಮಾಡೋ ಸಂಬಂಧ ಸಭೆ ನಡೆಯಲಿದೆ. ಮಾಜಿ ಸಚಿವ ಅನ್ಸಾರಿಗೆ ಶಾಕ್ ಕೊಡಲು ಕಾಂಗ್ರೆಸ್ ನಾಯಕರು ಮುಂದಾಗಿದ್ದಾರೆ. ಅನ್ಸಾರಿ ಬರದೇ ಇದ್ದರೂ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಪರ ಪ್ರಚಾರ ಮಾಡಲು ಕೈ ಮುಖಂಡರು ಮುಂದಾಗಿದ್ದಾರೆ. ಸ್ವಕ್ಷೇತ್ರದಲ್ಲಿಯೇ ಅನ್ಸಾರಿಗೆ ಶಾಕ್ ಕೊಡಲು ಅನ್ಸಾರಿ ವಿರುದ್ಧ ಪಡೆಯೊಂದು ರೆಡಿಯಾಗುತ್ತಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ