ಕೊಪ್ಪಳ ದಲಿತರ ಮೇಲೆ ದೌರ್ಜನ್ಯ ಪ್ರಕರಣ: 101 ಜನ ಅಪರಾಧಿಗಳಲ್ಲಿ ಓರ್ವ ಸಾವು

ಕೊಪ್ಪಳದ ಮರಕುಂಬಿ ಗ್ರಾಮದಲ್ಲಿ 2014ರಲ್ಲಿ ನಡೆದ ದಲಿತರ ಮೇಲಿನ ದೌರ್ಜನ್ಯ ಪ್ರಕರಣದಲ್ಲಿ 101 ಜನರನ್ನು ಅಪರಾಧಿ ಎಂದು ನ್ಯಾಯಾಲಯ ಘೋಷಿಸಿದೆ. 98 ಜನರಿಗೆ ಜೀವಾವಧಿ ಶಿಕ್ಷೆ ಮತ್ತು ಐದು ಸಾವಿರ ರೂಪಾಯಿ ದಂಡ ವಿಧಿಸಲಾಗಿದೆ. ಮೂವರಿಗೆ ಐದು ವರ್ಷ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಲಾಗಿದೆ. ಶಿಕ್ಷೆಯ ನಂತರ ಒಬ್ಬ ಅಪರಾಧಿ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ.

ಕೊಪ್ಪಳ ದಲಿತರ ಮೇಲೆ ದೌರ್ಜನ್ಯ ಪ್ರಕರಣ: 101 ಜನ ಅಪರಾಧಿಗಳಲ್ಲಿ ಓರ್ವ ಸಾವು
ಮೃತ ರಾಮಣ್ಣ ಭೋವಿ
Follow us
| Updated By: ವಿವೇಕ ಬಿರಾದಾರ

Updated on: Oct 25, 2024 | 12:15 PM

ಕೊಪ್ಪಳ, ಅಕ್ಟೋಬರ್​ 25: ಮರಕುಂಬಿ ಗ್ರಾಮದಲ್ಲಿ ದಲಿತರ ಮೇಲೆ ದೌರ್ಜನ್ಯ (Koppal Dalit Atrocity) ಎಸಗಿದ ಅಪರಾಧಿ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ. ರಾಮಣ್ಣ ಭೋವಿ (40) ಮೃತದುರ್ದೈವಿ. ರಾಮಣ್ಣ ಭೋವಿ ಅನಾರೋಗ್ಯದಿಂದ ಬಳಲುತ್ತಿದ್ದನು. ಗುರುವಾರ ನ್ಯಾಯಾಲಯಕ್ಕೆ ಕರೆದುಕೊಂಡು ಹೋದಾಗಲೂ ರಾಮಣ್ಣ ಅಸ್ವಸ್ಥನಾಗಿದ್ದನು. ವೈದ್ಯರು ನ್ಯಾಯಾಲಯದಲ್ಲೇ ರಾಮಣ್ಣಗೆ ಪ್ರಾಥಮಿಕ ಚಿಕಿತ್ಸೆ ನೀಡಿದ್ದರು. ನ್ಯಾಯಾಲಯದಿಂದ ಶಿಕ್ಷೆ ಪ್ರಕಟವಾದ ಬಳಿಕ ರಾಮಣ್ಣನನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನ್ಯಾಯಾಲಯ ರಾಮಣ್ಣ ಭೋವಿಗೆ ಐದು ವರ್ಷ ಕಠಿಣ ಜೈಲು ಶಿಕ್ಷೆ ಮತ್ತು ಎರಡು ಸಾವಿರ ರೂ. ದಂಡ ವಿಧಿಸಿತ್ತು.

ಕೊಪ್ಪಳ ದಲಿತರ ಮೇಲೆ ದೌರ್ಜನ್ಯ

2014ರ ಆಗಸ್ಟ್ 28 ರಂದು ಗಂಗಾವತಿ ತಾಲೂಕಿನ ಮರಕುಂಬಿ ಗ್ರಾಮದ ಮಂಜುನಾಥ ಮತ್ತು ಸ್ನೇಹಿತರು ಎಂಬುವರು ಪವರ್ ಸಿನಿಮಾ ನೋಡಲು ಗಂಗಾವತಿ ನಗರದಲ್ಲಿರುವ ಶಿವ ಚಿತ್ರಮಂದಿರಕ್ಕೆ ಹೋಗಿದ್ದರು. ಈ ಸಮಯದಲ್ಲಿ ಟಿಕೆಟ್ ತೆಗೆದುಕೊಳ್ಳುವ ವಿಚಾರಕ್ಕೆ ಜಗಳ ಆರಂಭವಾಗಿತ್ತು. ಬಳಿಕ, ಮಂಜುನಾಥ್ ಮತ್ತು ಆತನ ಸ್ನೇಹಿತರು, “ನಮ್ಮೂರಿನ ದಲಿತರು ನಮ್ಮ ಮೇಲೆ ಹಲ್ಲೆ ಮಾಡಿಸಿದ್ದಾರೆ” ಅಂತ ಗ್ರಾಮದಲ್ಲಿ ಹೇಳಿದ್ದರು. ಇದು ಸವರ್ಣೀಯ ಕುಟುಂಬಗಳ ಆಕ್ರೋಶಕ್ಕೆ ಕಾರಣವಾಗಿತ್ತು.

ಹೀಗಾಗಿ ಅಂದು ಸಂಜೆ ಗ್ರಾಮದ ಸವರ್ಣೀಯರು, ದಲಿತರ ಕೇರಿ ಮೇಲೆ ದಾಳಿ ಮಾಡಿದ್ದರು. ದಲಿತರಿಗೆ ಸೇರಿದ್ದ ನಾಲ್ಕು ಗುಡಿಸಲುಗಳಿಗೆ ಬೆಂಕಿ ಹಚ್ಚಿದ್ದರು. ಅನೇಕರ ಮೇಲೆ ಸಿಕ್ಕಸಿಕ್ಕ ವಸ್ತುಗಳಿಂದ ಹಲ್ಲೆ ಮಾಡಿದ್ದರು. ಬೆಂಕಿ ಅವಘಡದಲ್ಲಿ ಗುಡಿಸಲುಗಳು ಸುಟ್ಟು ಭಸ್ಮವಾಗಿದ್ದವು. ಅದೃಷ್ಟವೆನ್ನುವಂತೆ ಗುಡಿಸಲುಗಳಲ್ಲಿ ಯಾರು ಇಲ್ಲದೇ ಇದ್ದಿದ್ದರಿಂದ ಅಂದು ಯಾವುದೇ ಪ್ರಾಣಾಪಾಯವಾಗಿರಲಿಲ್ಲ.

ಇದನ್ನೂ ಓದಿ: ಬೀಡಿ ಸೇದುತ್ತ ಕೆಎಸ್​ಆರ್​ಟಿಸಿ ಬಸ್ ಓಡಿಸಿದ ಚಾಲಕ, ವಿಡಿಯೋ ವೈರಲ್ 

ಕೇವಲ ಬೆಂಕಿ ಹಚ್ಚಿದ್ದು ಮಾತ್ರವಲ್ಲ, ಅಂದು 27 ದಲಿತರ ಮೇಲೆ ಹಲ್ಲೆಯಾಗಿತ್ತು. ಈ ಬಗ್ಗೆ ಅಂದು ಘಟನೆಯಲ್ಲಿ ಗಾಯಗೊಂಡವರು ಗಂಗಾವತಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಸವರ್ಣೀಯರ ವಿರುದ್ದ ಅಟ್ರಾಸಿಟಿ, ಕೊಲೆಗೆ ಯತ್ನ, ದೊಂಬಿ, ಜೀವ ಬೆದರಿಕೆ ಸೇರಿದಂತೆ ಅನೇಕ ಸೆಕ್ಷನ್​ ಅಡಿಯಲ್ಲಿ ಪ್ರಕರಣಗಳು ದಾಖಲಿಸಿದ್ದರು. 117 ಸವರ್ಣೀಯರ ಮೇಲೆ ಅಂದು ಕೇಸ್ ದಾಖಲಾಗಿತ್ತು. ಮರಕುಂಬಿ ಗ್ರಾಮದಲ್ಲಿ ದಲಿತರ ಮೇಲೆ ನಡೆದಿದ್ದ ದೌರ್ಜನ್ಯ, ದೇಶಾದ್ಯಂತ ಸುದ್ದಿಯಾಗಿತ್ತು. ಘಟನೆ ನಂತರ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದರು. ನಂತರ ಎಲ್ಲರು ಜಾಮೀನಿನ ಮೇಲೆ ಹೊರಗಿದ್ದರು. ಆದರೆ, ಕಳೆದ ಹತ್ತು ವರ್ಷಗಳಿಂದ ಪ್ರಕರಣದ ವಿಚಾರಣೆ ನಡೆಯುತ್ತಲೇ ಇತ್ತು.

ದಲಿತರ ಮೇಲೆ ದೌರ್ಜನ್ಯ: 101 ಜನ ಅಪರಾಧಿಗಳು

ಆರಂಭದಲ್ಲಿ ಸೆಷನ್ ಕೋರ್ಟ್ ವಿಚಾರಣೆ ನಡೆಸಿತ್ತು. ನಂತರ, 2015ರಲ್ಲಿ ಪ್ರಕರಣ ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಲಯಕ್ಕೆ ವರ್ಗಾವಣೆಯಾಗಿತ್ತು. ಪ್ರಕರಣ ಸಂಬಂಧ ಅಕ್ಟೋಬರ್ 21 ರಂದು ವಿಚಾರಣೆ ನಡೆಸಿದ್ದ ನ್ಯಾಯಾಧೀಶರು, ಘಟನೆಯಲ್ಲಿ ಬಾಗಿಯಾಗಿದ್ದ 101 ಜನರು ಅಪರಾಧಿಗಳು ಅಂತ ಘೋಷಣೆ ಮಾಡಿದ್ದರು. ಹೌದು, 117 ಜನರ ಪೈಕಿ ಈಗಾಗಲೇ ಅನೇಕರು ಬಾರದ ಲೋಕಕ್ಕೆ ಹೋಗಿದ್ದು, ಉಳಿದ 101 ಜನರು ಅಪರಾಧಿಗಳು ಅಂತ ಆದೇಶ ನೀಡಿದ್ದರು. ಕೊಪ್ಪಳದ, ಪ್ರಧಾನ ಮತ್ತು ಜಿಲ್ಲಾ ಸತ್ರ ನ್ಯಾಯಾಧೀಶರು ಗುರುವಾರ ಅಪರಾಧಿಗಳಿಗೆ ಶಿಕ್ಷೆ ಪ್ರಮಾಣ ಘೋಷಣೆ ಮಾಡಿದ್ದರು.

ಬರೋಬ್ಬರಿ 98 ಜನರಿಗೆ ಜೀವಾವಧಿ ಶಿಕ್ಷೆ ಮತ್ತು ತಲಾ ಐದು ಸಾವಿರ ದಂಡ ವಿಧಿಸಿದ್ದರೇ, ಎಸ್ಸಿ-ಎಸ್ಟಿ ವರ್ಗಕ್ಕೆ ಸೇರಿದ್ದ ಮೂವರಿಗೆ ಅಟ್ರಾಸಿಟಿ ಕಾಯ್ದೆ ಅನ್ವಯವಾಗದೇ ಇರುವುದರಿಂದ ಐದು ವರ್ಷ ಶಿಕ್ಷೆ, ಎರಡು ಸಾವಿರ ರೂಪಾಯಿ ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.

ನ್ಯಾಯಾಧೀಶರು, ಶಿಕ್ಷೆಯನ್ನು ಪ್ರಕಟಿಸುತ್ತಿದ್ದಂತೆ ಅಪರಾಧಿಗಳು ಕಂಗಾಲಾಗಿದ್ದರು. ಮತ್ತು ಅಪರಾಧಿಗಳು ಕುಟುಂಬದವರು ಕಣ್ಣೀರು ಹಾಕಿದ್ದರು. ನ್ಯಾಯಾಲಯದ ಆವರಣದಲ್ಲಿ ಸೇರಿದ್ದ ಕುಟುಂಬಸ್ಥರು, ಕಣ್ಣೀರು ಹಾಕಿ, ತಮ್ಮ ನೋವನ್ನು ತೋಡಿಕೊಂಡಿದ್ದರು. ನಂತರ ಪೊಲೀಸರು ಬಿಗಿ ಭದ್ರತೆಯಲ್ಲಿಯೇ ಸಂಜೆ ಏಳು ಗಂಟೆಗೆ ಅಪರಾಧಿಗಳನ್ನು ಕೊಪ್ಪಳ ಉಪ ಕಾರಾಗೃಹಕ್ಕೆ ಕರೆದುಕೊಂಡು ಹೋಗಿದ್ದರು. ಈ 101 ಜನ ಅಪರಾಧಿಗಳಲ್ಲಿ ಓರ್ವ ಇಂದು (ಅ.25) ಅನಾರೋಗ್ಯದಿಂದ ಮೃತಪಟ್ಟಿದ್ದಾನೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ