ಕೊಪ್ಪಳ, ಮಾರ್ಚ್ 10: ರಾಜ್ಯದ ಕೊಪ್ಪಳ (Koppal), ವಿಜನಯಗರ (Vijayanagar) ಜಿಲ್ಲೆಯಲ್ಲಿ ವಿಶ್ವಪಾರಂಪಿರಕ ಮತ್ತು ಐತಿಹಾಸಿಕ ಅನೇಕ ಸ್ಥಳಗಳಿವೆ. ಐತಿಹಾಸಿಕ ಸ್ಥಳಗಳನ್ನು ನೋಡಲು ದೇಶ ವಿದೇಶದಿಂದ ಸಾವಿರಾರು ಪ್ರವಾಸಿಗರು ಬರುತ್ತಾರೆ. ಇನ್ನೊಂದಡೆ ಇದೇ ಸ್ಥಳದಲ್ಲಿ ಹರಿದಿರುವ ತುಂಗಭದ್ರಾ ನದಿ, ರಮಣೀಯ ದೃಶ್ಯಗಳು ಪ್ರವಾಸಿಗರನ್ನು ಕೈಬಿಸಿ ಕರೆಯುತ್ತಿದ್ದು, ಪ್ರವಾಸಿಗರ ಅನಕೂಲಕ್ಕಾಗಿಯೇ ಈ ಭಾಗದಲ್ಲಿ ರೆಸಾರ್ಟ್‌ಗಳು, ಹೋಮ್ ಸ್ಟೇಗಳು ನಾಯಿಕೊಡೆಗಳಂತೆ ಹುಟ್ಟಿಕೊಂಡಿವೆ. ಆದರೆ, ಹೋಮ್ ಸ್ಟೇ, ರೆಸಾರ್ಟ್ ಮಾಲೀಕರು, ಕಾನೂನುಗಳನ್ನು ಉಲ್ಲಂಘಿಸುತ್ತಿವೆ ಎಂಬ ಆರೋಪ ಕೇಳಿಬಂದಿದೆ.
ಗಂಗಾವತಿ ತಾಲೂಕಿನ ಆನೆಗೊಂದಿ, ಕೊಪ್ಪಳ ತಾಲೂಕಿನ ಬಸ್ಸಾಪುರ ಬಳಿ ನೂರಕ್ಕೂ ಹೆಚ್ಚು ರೆಸಾರ್ಟ್, ಹೋಮ್ ಸ್ಟೇಗಳು ತಲೆ ಎತ್ತಿವೆ. ಬಹುತೇಕ ರೆಸಾರ್ಟ್‌ಗಳು ಅನಧಿಕೃತವಾಗಿ ನಡೆಯುತ್ತಿವೆ ಎಂಬ ಆರೋಪ ಕೇಳಿಬಂದಿದೆ. ಇದರ ಜೊತೆಗೆ ಪ್ರವಾಸಿಗರಿಂದ ಹೆಚ್ಚಿನ ಹಣ ಪಡೆವ ಮಾಲೀಕರು, ಮೋಜು ಮಸ್ತಿ, ಆನಂದದಾಯ ಕ್ಷಣಗಳನ್ನು ಕಳೆಯುವ ನೆಪ ಹೇಳಿ ಅಪಾಯಕಾರಿ ಸ್ಥಳಗಳಿಗೆ ಕರೆದುಕೊಂಡು ಹೋಗುತ್ತಿರುವ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ.
ವಿದೇಶಿ ಪ್ರವಾಸಿಗರು ಹೋಮ್ ಸ್ಟೇ, ರೆಸಾರ್ಟ್ನಲ್ಲಿ ತಂಗಲು ಬಂದರೇ ಅವರ ಸಂಪೂರ್ಣ ಮಾಹಿತಿಯನ್ನು ಪಡೆದು, ರೆಸಾರ್ಟ್ ಮಾಲೀಕರು, ಪೊಲೀಸರಿಗೆ ನೀಡಬೇಕು. ಪಾರ್ಮ್ ಸಿಯನ್ನು ಭರ್ತಿ ಮಾಡಿ, ಯಾವ ದೇಶದಿಂದ ಪ್ರವಾಸಿಗರು ಬಂದಿದ್ದಾರೆ, ಅವರು ಎಷ್ಟು ದಿನ ಇರುತ್ತಾರೆ. ಅವರ ಅಧಿಕೃತ ದಾಖಲೆಗಳ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡುವುದು ಕಡ್ಡಾಯವಾಗಿದೆ.
ಆದರೆ, ಕೊಪ್ಪಳ ಜಿಲ್ಲೆಯಲ್ಲಿ ಗಂಗಾವತಿ, ಮುನಿರಾಬಾದ್ ಠಾಣಾ ವ್ಯಾಪ್ತಿಯಲ್ಲಿ ನೂರಾರು ರೆಸಾರ್ಟ್ಗಳ ಬಹುತೇಕ ಮಾಲೀಕರು ವಿದೇಶಿ ಪ್ರವಾಸಿಗರ ಬಗ್ಗೆ ಪೊಲೀಸರಿಗೆ ಯಾವ ಮಾಹಿತಿಯನ್ನು ಕೂಡ ನೀಡುತ್ತಿಲ್ಲ. ಇನ್ನು, ವಿದೇಶಿ ಪ್ರವಾಸಿಗರ ಬಗ್ಗೆ ರೆಸಾರ್ಟ್, ಹೋಮ್ ಸ್ಟೇ ಮಾಲೀಕರು ತಮಗೆ ಮಾಹಿತಿ ನೀಡದಿರುವುದರ ಬಗ್ಗೆ ಪೊಲೀಸರಿಗೆ ಕೂಡ ಗೊತ್ತಿದೆ. ಗೊತ್ತಿದ್ದರೂ ಕೂಡ ಇಲ್ಲಿಯವರಗೆ ಯಾವ ರೆಸಾರ್ಟ್, ಹೋಮ್ ಸ್ಟೇ ಮಾಲೀಕರ ಮೇಲೆ ಇಲ್ಲಿವರಗೆ ಪೊಲೀಸರು ಒಂದೇ ಒಂದು ಕ್ರಮ ಕೈಗೊಂಡಿಲ್ಲ. ಹೀಗಾಗಿ ಅಕ್ರಮದಲ್ಲಿ ಸ್ಥಳೀಯ ಕೆಲ ಪೊಲೀಸರು ಶಾಮೀಲಾಗಿದ್ದಾರೆ ಅನ್ನೋ ಅನುಮಾನ ಹುಟ್ಟಿಕೊಂಡಿದೆ.
ಇನ್ನು ಜಿಲ್ಲೆಯಲ್ಲಿರುವ ಅನೇಕ ಹೋಮ್ ಸ್ಟೇ, ರೆಸಾರ್ಟ್‌ಗಳು ವಿದೇಶಿಗರಿಗೆ ಮೋಜು ಮಸ್ತಿ ಹೆಸರಲ್ಲಿ ಅಕ್ರಮ ದಂದೆಯನ್ನು ಕೂಡ ಮಾಡುತ್ತಿರುವ ಆರೋಪಗಳು ಮೇಲಿಂದ ಮೇಲೆ ಕೇಳಿ ಬರುತ್ತಲೇ ಇವೆ. ವಿದೇಶಿಗರಿಗೆ, ಕೆಲ ರೆಸಾರ್ಟ್, ಹೋಮ್ ಸ್ಟೇಗಳಲ್ಲಿ ಅನಧಿಕೃತವಾಗಿ ಗಾಂಜಾ ಪೂರೈಕೆ, ಬೇಕಾದ ಮದ್ಯ ಪೂರೈಕೆ ಮಾಡುವ ಕೆಲಸ ಕೂಡಾ ನಡೆಯುತ್ತಿದೆ. ಹೆಚ್ಚಿನ ಹಣ ಪಡೆದು, ಅವರಿಗೆ ಬೇಕಾದ ಸೇವೆಯನ್ನು ನೀಡುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಗಾಂಜಾ ಮತ್ತು ಕುಡಿದ ಮತ್ತಿನಲ್ಲಿ ಈ ಭಾಗದಲ್ಲಿ ಅನೇಕ ಅಹಿತಕರ ಘಟನೆಗಳು ನೆಡದರೂ ಕೂಡ ಅವುಗಳನ್ನು ಮುಚ್ಚಿಹಾಕುವ ಕೆಲಸವನ್ನು ಕೂಡಾ ವ್ಯವಸ್ಥಿತವಾಗಿ ರೆಸಾರ್ಟ್ ಮಾಲೀಕರು ಮಾಡಿಕೊಂಡು ಬರ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಇದನ್ನೂ ಓದಿ: ವಿದೇಶಿ, ದೇಶಿ ಪ್ರವಾಸಿಗರ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ, ಓರ್ವ ಪ್ರವಾಸಿಗ ನಾಪತ್ತೆ
ಇನ್ನು, ಸಾಣಾಪುರ ಕೆರೆ ಬಳಿ, ತುಂಗಭದ್ರಾ ಎಡದಂಡೆ ಕಾಲುವೆ ಬಳಿ ನಡೆದ ಹಲ್ಲೆ ಮತ್ತು ಗ್ಯಾಂಗ್ ರೇಪ್ ಪ್ರಕರಣದ ನಂತರ ಎಚ್ಚೆತ್ತ ಕೊಪ್ಪಳ ಜಿಲ್ಲಾ ಪೊಲೀಸರು ಇದೀಗ ಕ್ರಮಕ್ಕೆ ಮುಂದಾಗಿದ್ದಾರೆ. ಸ್ವತ ಕೊಪ್ಪಳ ಎಸ್ಪಿ ಡಾ.ರಾಮ್ ಎಲ್ ಅರಸಿದ್ದಿ, ಗಂಗಾವತಿಯಲ್ಲಿ ರೆಸಾರ್ಟ್ ಮಾಲೀಕರ ಜೊತೆ ಸಭೆ ನಡೆಸಿದ್ದು, ಪಾರ್ಮ್ ಸಿಯನ್ನು ಕಡ್ಡಾಯವಾಗಿ ಭರ್ತಿ ಮಾಡಿ, ವಿದೇಶಿಗರ ಬಗ್ಗೆ ಮಾಹಿತಿ ನೀಡಬೇಕು. ಅನೈತಿಕ ಚಟುವಟಿಕೆಗಳನ್ನು ನಡೆಸಬಾರದು ಅಂತ ರೆಸಾರ್ಟ್ ಮಾಲೀಕರಿಗೆ ಖಡಕ್ ಸೂಚನೆ ನೀಡಿದ್ದಾರೆ. ಇನ್ನು ರೆಸಾರ್ಟ್ಗಳಲ್ಲಿ ಗಾಂಜಾ ಪೂರೈಕೆ ಸೇರಿದಂತೆ ಯಾವುದೇ ಅಕ್ರಮ ದಂದೆ ನಡೆಸಿದರೇ ಅವರ ವಿರುದ್ಧ ಕಠೀಣ ಕ್ರಮ ಕೈಗೊಳ್ಳುವುದಾಗಿ ಎಸ್ಪಿ ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ