ಕೊಪ್ಪಳ: ವಿದೇಶಿ, ದೇಶಿ ಪ್ರವಾಸಿಗರ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ, ಓರ್ವ ಪ್ರವಾಸಿಗ ನಾಪತ್ತೆ
ಗಂಗಾವತಿ ತಾಲೂಕಿನ ಆನೆಗೊಂದಿ, ಅಂಜನಾದ್ರಿ, ನೆರೆಯ ಐತಿಹಾಸಿಕ ಹಂಪೆಯನ್ನು ನೋಡಲು ದೇಶ, ವಿದೇಶದಿಂದ ಪ್ರವಾಸಿಗರು ಬರ್ತಾರೆ. ರೆಸಾರ್ಟ್ಗಳು, ಹೋಮ್ ಸ್ಟೇ ಗಳಲ್ಲಿ ಉಳಿದು ತುಂಗಭದ್ರಾ ನದಿ, ಎದಡಂಡೆ ಕಾಲುವೆ ಸುತ್ತಮುತ್ತಲಿನ ಹತ್ತಾರು ಪ್ರವಾಸಿ ಸ್ಥಳಗಳಿಗೆ ಹೋಗಿ, ಅಲ್ಲಿನ ಪ್ರಕೃತಿ ಸೌಂದರ್ಯವನ್ನು ಸವಿಯುತ್ತಾರೆ. ಇದೇ ರೀತಿ ರಾತ್ರಿ ಸಮಯದಲ್ಲಿ ಆಕಾಶ ನೋಡ್ತಾ, ಗಿಟಾರ್ ಬಾರಿಸುತ್ತಾ ಕೂತಿದ್ದ ದೇಶಿ ಮತ್ತು ವಿದೇಶಿ ಪ್ರವಾಸಿಗರ ಮೇಲೆ ದುಷ್ಕರ್ಮಿಗಳು ಹಲ್ಲೆ ಮತ್ತು ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ನಡೆದಿದೆ.

ಕೊಪ್ಪಳ, ಮಾರ್ಚ್ 07: ಜಿಲ್ಲೆಯ ಗಂಗಾವತಿಯನ್ನು (Gangavathi) ರಾಜ್ಯದ ಮಿನಿ ಗೋವಾ ಅಂತಲೇ ಕರೆಯುತ್ತಾರೆ. ಸುತ್ತಮುತ್ತಲಿನ ಐತಿಹಾಸಿಕ ಪ್ರವಾಸಿ ಸ್ಥಳಗಳು, ಪ್ರಕೃತಿ ಸೌಂದರ್ಯವನ್ನು ಸವಿಯಲು ದೇಶ, ವಿದೇಶಗಳಿಂದ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು (tourist) ಬರ್ತಾರೆ. ಆದರೆ ಇದೇ ರೀತಿ ಬಂದಿದ್ದ ವಿದೇಶಿ, ದೇಸಿ ಪ್ರವಾಸಿಗರ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿ ತುಂಗಭದ್ರಾ ಎಡದಂಡೆ ಕಾಲುವೆಗೆ ದೂಡಿದ್ದರೆ, ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಕೇಳಿ ಬಂದಿದೆ. ಇಷ್ಟೆಲ್ಲಾ ನಡೆದದ್ದು ನೂರು ರೂಪಾಯಿಗಾಗಿ ಎನ್ನಲಾಗಿದೆ.
ವಿದೇಶಿ, ದೇಸಿ ಪ್ರವಾಸಿಗರ ಮೇಲೆ ದುಷ್ಕರ್ಮಿಗಳ ಅಟ್ಟಹಾಸ
ಗಂಗಾವತಿ ತಾಲೂಕಿನ ಸಾಣಾಪುರ ಕೆರೆ ಬಳಿ ಹರಿದು ಹೋಗಿರುವ ತುಂಗಭದ್ರಾ ಎಡದಂಡೆ ಕಾಲುವೆ ಬಳಿ, ಕಳೆದ ರಾತ್ರಿ 11:30ರ ಸಮಯದಲ್ಲಿ ಇಸ್ರೇಲ್ ದೇಶದ ಮಹಿಳಾ ಪ್ರವಾಸಿ, ಅಮೆರಿಕ ದೇಶದ ಪ್ರವಾಸಿಗ, ಮಹಾರಾಷ್ಟ್ರದ ಓರ್ವ ಪ್ರವಾಸಿಗ, ಒರಿಸ್ಸಾದ ಓರ್ವ ಪ್ರವಾಸಿಗನನ್ನು ಸಮೀಪದ ಹಾರ್ಟ್ ಲೈನ್ ಹೋಂ ಸ್ಟೇ ನಾ ಮಹಿಳಾ ಓನರ್ ಕರೆದುಕೊಂಡು ಬಂದಿದ್ದರು. ಐವರು ಕೂಡ ವಾಯು ವಿಹಾರಕ್ಕೆ ಅಂತ ಬಂದು, ಆಕಾಶ ನೋಡ್ತಾ, ಗಿಟಾರ್ ಬಾರಿಸಿಕೊಂಡು ಕೂತಿದ್ದರಂತೆ. ಈ ಸಮಯದಲ್ಲಿ ಬೈಕ್ ಮೇಲೆ ಬಂದಿದ್ದ ಮೂವರು ದುಷ್ಕರ್ಮಿಗಳು, ತಮ್ಮ ಬೈಕ್ ನಲ್ಲಿನ ಪೆಟ್ರೋಲ್ ಖಾಲಿಯಾಗಿದೆ. ಸ್ವಲ್ಪ ಹಣ ಕೊಡಿ ಅಂತ ಕೇಳಿದ್ದರಂತೆ. ಆಗ ಅವರಿಗೆ ಇಪ್ಪತ್ತು ರೂಪಾಯಿ ಹಣವನ್ನು ನೀಡಿದ್ದರಂತೆ.
ಇದನ್ನೂ ಓದಿ: ಸೇಡಂ ಬಳಿ ಎರಡು ಬೈಕ್ಗಳ ಭೀಕರ ಅಪಘಾತ: ನಾಲ್ವರು ಯುವಕರ ದುರಂತ ಅಂತ್ಯ
ಆದರೆ ತಮಗೆ ನೂರು ರೂಪಾಯಿ ಬೇಕು ಅಂತ ಜಗಳ ಆರಂಭಿಸಿದ ದುಷ್ಕರ್ಮಿಗಳು, ಮೊದಲು ಅಮೆರಿಕದಿಂದ ಬಂದಿರುವ ಡೇನಿಯಲ್, ಮಹಾರಾಷ್ಟ್ರದ ಪಂಕಜ್, ಒರಿಸ್ಸಾದ ಬಿಬಾಸ್ ಜೊತೆ ಜಗಳ ಆರಂಭಿಸಿದ್ದಾರೆ. ಹಣದ ಬ್ಯಾಗ್ಗಳನ್ನು ಕಿತ್ತುಕೊಂಡಿದ್ದಾರೆ. ನಂತರ ಮೂವರಿಗೂ ಕಲ್ಲಿನಿಂದ ಹೊಡೆದು, ಪಕ್ಕದಲ್ಲಿದ್ದ ಎದಡಂಡೆ ಕಾಲುವೆಗೆ ದೂಡಿದ್ದಾರೆ. ಇನ್ನು ಇಸ್ರೇಲ್ ದೇಶದ ಮಹಿಳೆ, ಹೋಮ್ ಸ್ಟೇ ನಾ ಮಹಿಳಾ ಓನರ್ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಪರಾರಿಯಾಗಿದ್ದಾರಂತೆ.
ಒರಿಸ್ಸಾ ಮೂಲದ ಪ್ರವಾಸಿಗ ನಾಪತ್ತೆ, ಹುಡುಕಾಟ
ಎಡದಂಡೆ ಕಾಲುವೆಯಲ್ಲಿ ಬಿದ್ದಿದ್ದ ಡೇನಿಯಲ್ ಮತ್ತು ಪಂಕಜ್ ಎನ್ನುವವರು ಈಜಿಕೊಂಡು ದಡ ಮುಟ್ಟಿ, ತಮ್ಮ ಸಹಚರರ ಬಳಿ ಬಂದಿದ್ದಾರೆ. ಆದರೆ ಬಿಬಾಸ್ ಮಾತ್ರ ಎಲ್ಲಿ ಇದ್ದಾನೆ ಅನ್ನೋದು ಗೊತ್ತಾಗಿಲ್ಲ. ನಂತರ ಸ್ಥಳೀಯರಿಗೆ ಮಾಹಿತಿ ಮುಟ್ಟಿಸಿ, ಗಂಗಾವತಿ ಗ್ರಾಮೀಣ ಠಾಣೆಗೆ ಹೋಗಿ ತಮ್ಮ ಮೇಲಾಗಿರುವ ದೌರ್ಜನ್ಯವನ್ನು ತಿಳಿಸಿದ್ದಾರೆ.
ಮಾಹಿತಿ ತಿಳಿದ ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ಕಳೆದ ರಾತ್ರಿಯಿಂದಲೇ ನಾಪತ್ತೆಯಾಗಿರುವ ಒರಿಸ್ಸಾ ಮೂಲದ ಪ್ರವಾಸಿಗ ಬಿಬಾಸ್ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಕೂಡ ಕಾಲುವೆಯಲ್ಲಿ ಹುಡುಕಾಟ ನಡೆಸಿದ್ದಾರೆ. ಇನ್ನು ಮುಂಜಾನೆ ಬಳ್ಳಾರಿ ವಲಯ ಐಜಿಪಿ ಲೋಕೇಶ್ ಕುಮಾರ್, ಕೊಪ್ಪಳ ಎಸ್ಪಿ ಡಾ. ರಾಮ್ ಎಲ್ ಅರಸಿದ್ದಿ, ಘಟನಾ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಕಳೆದ ರಾತ್ರಿಯಿಂದ ಹುಡುಕಾಡಿದರು ಕೂಡ ಬಿಬಾಸ್ ಸುಳಿವು ಇಲ್ಲಿವರಗೆ ಸಿಕ್ಕಿಲ್ಲ.
ಇದನ್ನೂ ಓದಿ: 8 ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್: ಕಂತೆ-ಕಂತೆ ಹಣ, ವಜ್ರ-ವೈಡೂರ್ಯ ಪತ್ತೆ
ಸದ್ಯ ಬಿಬಾಸ್ಗಾಗಿ ಹುಡುಕಾಟ ತೀರ್ವವಾಗಿದೆ. ಇನ್ನೊಂದಡೆ ಪ್ರವಾಸಿಗರ ಮೇಲೆ ಹಲ್ಲೆ ಮಾಡಿರುವ ದುಷ್ಕರ್ಮಿಗಳ ಹುಡುಕಾಟವನ್ನು ಕೂಡ ಪೊಲೀಸರು ತೀರ್ವಗೊಳಿಸಿದ್ದಾರೆ. ಅದಕ್ಕಾಗಿ ಆರು ತಂಡಗಳನ್ನು ರಚನೆ ಮಾಡಲಾಗಿದೆ. ಪ್ರವಾಸಿಗರ ಮೇಲೆ ಹಲ್ಲೆ ಮಾಡುವ ದುಷ್ಕರ್ಮಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕಾಗಿದೆ. ಜೊತೆಗೆ ರಾತ್ರಿ ಸಮಯದಲ್ಲಿ ನಿರ್ಜನ ಪ್ರದೇಶದಲ್ಲಿ ಪ್ರವಾಸಿಗರನ್ನು ಕರೆದುಕೊಂಡು ಹೋಗೋ ಹೋಮ್ ಸ್ಟೇ, ರೆಸಾರ್ಟ್ ಮಾಲೀಕರ ಮೇಲೆ ಕೂಡ ಕ್ರಮ ಕೈಗೊಳ್ಳಬೇಕಾಗಿದೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.