ಪ್ರವಾಸಿಗರ ಮೇಲೆ ಅತ್ಯಾಚಾರ ಕೇಸ್: ಪರಾರಿಯಾಗಿದ್ದ ಮತ್ತೋರ್ವ ಆರೋಪಿ ತಮಿಳುನಾಡಿನಲ್ಲಿ ಅರೆಸ್ಟ್
ಕೊಪ್ಪಳದ ಸಾಣಾಪೂರದಲ್ಲಿ ವಿದೇಶಿ ಪ್ರವಾಸಿ ಮತ್ತು ಮಹಿಳಾ ರೆಸಾರ್ಟ್ ಮಾಲೀಕರ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ. ಪೊಲೀಸರು ಪ್ರಕರಣದ ತನಿಖೆ ಮುಂದುವರೆಸಿದ್ದಾರೆ. ಸಚಿವ ಶಿವರಾಜ್ ತಂಗಡಗಿ ಮಾತನಾಡಿ ಈ ಘಟನೆ ನನ್ನ ಮನಸಿಗೆ ನೋವು ತಂದಿದೆ ಎಂದು ಹೇಳಿದ್ದಾರೆ. ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಕೊಪ್ಪಳ, ಮಾರ್ಚ್ 09: ಪ್ರವಾಸಿಗರ (Tourist) ಮೇಲೆ ಹಲ್ಲೆ ಮತ್ತು ಇಬ್ಬರು ಮಹಿಳೆಯರ ಮೇಲೆ ಗ್ಯಾಂಗ್ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಇಬ್ಬರು ಆರೋಪಿಗಳನ್ನು ಬಂಧಿಸಿದ್ದ ಜಿಲ್ಲೆಯ ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ತಲೆಮರೆಸಿಕೊಂಡಿದ್ದ ಇನ್ನೊಬ್ಬ ಆರೋಪಿಯನ್ನು ಇಂದು ತಮಿಳುನಾಡಿನಲ್ಲಿ ಬಂಧಿಸಿದ್ದು (arrest), ಕರೆದುಕೊಂಡು ಬರುತ್ತಿದ್ದಾರೆ. ಆ ಮೂಲಕ ಪೊಲೀಸರು ಪ್ರಕರಣದ ಎಲ್ಲಾ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
ಮಲ್ಲೇಶ್(22), ಚೇತನ್ಸಾಯಿ ಸಿಳ್ಳೇಕ್ಯಾತರ್(21) ಮತ್ತು ಮೂರನೇ ಆರೋಪಿ ಸಾಯಿರಾಮ್ ಬಂಧಿತರು. ಮಲ್ಲೇಶ್ ಮತ್ತು ಚೇತನ್ಸಾಯಿ ನಿನ್ನೆ ಪೊಲೀಸರಿಗೆ ಲಾಕ್ ಆಗಿದ್ದರು. ಆದರೆ ಸಾಯಿರಾಮ್ ಮಾತ್ರ ತಲೆಮರೆಸಿಕೊಂಡಿದ್ದ. ಹಾಗಾಗಿ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದರು.
ಇದನ್ನೂ ಓದಿ: ಪ್ರವಾಸಿಗರ ಮೇಲೆ ಹಲ್ಲೆ, ಮಹಿಳೆಯರಿಬ್ಬರ ಮೇಲೆ ಗ್ಯಾಂಗ್ರೇಪ್: ಇಬ್ಬರ ಬಂಧನ, ಓರ್ವ ಪ್ರವಾಸಿಗ ಶವವಾಗಿ ಪತ್ತೆ
ನೆರೆಯ ತಮಿಳುನಾಡಿಗೆ ಆರೋಪಿ ಪರಾರಿಯಾದ ಬಗ್ಗೆ ಮಾಹಿತಿ ಹಿನ್ನೆಲೆ ಪೊಲೀಸರ ಒಂದು ತಂಡ ತಮಿಳುನಾಡಿಗೆ ಹೋಗಿದ್ದರು. ಈಗಾಗಲೇ ಬಂಧಿತ ಇಬ್ಬರು ಆರೋಪಿಗಳಿಂದ ಮಾಹಿತಿ ಸಂಗ್ರಹಿಸಿದ್ದಾರೆ. 3ನೇ ಆರೋಪಿಯ ಮೊಬೈಲ್ ನಂಬರ್ ಸೇರಿ ಅನೇಕ ಮಾಹಿತಿಯನ್ನು ಪೊಲೀಸರು ಸಂಗ್ರಹಿಸಿದ್ದರು. ಆ ಮೂಲಕ ಆತನನ್ನು ಬಂಧಿಸಲಾಗಿದೆ.
ಈ ಘಟನೆ ನನ್ನ ಮನಸಿಗೆ ನೋವು ತಂದಿದೆ ಎಂದ ಸಚಿವ ಶಿವರಾಜ್ ತಂಗಡಗಿ
ಇನ್ನು ಈ ಬಗ್ಗೆ ನಗರದಲ್ಲಿ ಸಚಿವ ಶಿವರಾಜ್ ತಂಗಡಗಿ ಪ್ರತಿಕ್ರಿಯಿಸಿದ್ದು, ಈಗಾಗಲೇ ಘಟನೆ ಬಗ್ಗೆ ಮಾಹಿತಿ ಪಡೆದಿದ್ದೇನೆ. ಈ ರೀತಿಯ ಕೃತ್ಯ ಆಗಬಾರದಿತ್ತು. ಈ ಘಟನೆ ನನ್ನ ಮನಸಿಗೆ ನೋವು ತಂದಿದೆ. ನಿನ್ನೆ ಇಬ್ಬರನ್ನು ಬಂಧಿಸಲಾಗಿತ್ತು. ಇಂದು ಮತ್ತೊಬ್ಬರನ್ನು ಬಂಧಿಸಲಾಗಿದೆ ಎಂದು ಹೇಳಿದ್ದಾರೆ.
ಪ್ರವಾಸಿಗರ ರಕ್ಷಣೆಗೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುವುದು. ಕ್ಷುಲಕ ವಿಚಾರಕ್ಕೆ ಈ ರೀತಿಯ ಘಟನೆ ಆಗಿದೆ. ಆರೋಪಿಗಳಿಗೆ ಕಠಿಣ ಶಿಕ್ಷೆ ಕೊಡಿಸುವ ಕೆಲಸ ಮಾಡುತ್ತೇವೆ. ನಿರ್ಜನ ಪ್ರದೇಶದಲ್ಲಿ ರಾತ್ರಿ ಅಡ್ಡಾಡಲು ಹೋಗಬಾರದಿತ್ತು. ಅಲ್ಲಿ ಚಿರತೆ, ಕರಡಿ ಸೇರಿ ಕಾಡು ಪ್ರಾಣಿಗಳ ಉಪಟಳವಿದೆ. ಈ ಬಗ್ಗೆ ಪೂರ್ಣ ತನಿಖೆ ಮಾಡಿಸಲಾಗುತ್ತಿದೆ. ಅನಧಿಕೃತ ರೆಸಾರ್ಟ್ಗಳ ವಿರುದ್ಧ ಎಲ್ಲಾ ರೀತಿಯ ಕ್ರಮಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ಇಬ್ಬರು ಆರೋಪಿಗಳಿಂದ ಸ್ಥಳ ಮಹಜರು
ಇನ್ನು ಇಂದು ಬಂಧಿತ ಆರೋಪಿಗಳನ್ನು ಘಟನೆ ನೆಡದ ಸ್ಥಳಕ್ಕೆ ಕರೆದುಕೊಂಡು ಬಂದ ಪೊಲೀಸರು ಸ್ಥಳ ಪಂಚನಾಮೆ ಮಾಡಿದ್ದಾರೆ. ಘಟನೆ ಹೇಗಾಯ್ತು, ತಾವು ಯಾವ ರೀತಿ ಕೃತ್ಯ ವೆಸಗಿದ್ದೇವೆ ಅನ್ನೋದನ್ನು ಆರೋಪಿಗಳಿಂದಲೇ ಸ್ಥಳದಲ್ಲಿ ಹೇಳಿಕೆ ಪಡೆದು, ಪಂಚನಾಮೆ ಮಾಡಿದ್ದಾರೆ.
ಇನ್ನು ಗಂಗಾವತಿ ತಾಲೂಕಿನ ಆನೆಗೊಂದಿ, ಹಂಪೆ ನೋಡಲು ದೇಶ ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಬರ್ತಾರೆ. ಹೀಗಾಗಿ ಆನೆಗೊಂದಿ ಸುತ್ತಮುತ್ತ ಹೋಮ್ ಸ್ಟೇ, ರೆಸಾರ್ಟ್ ಗಳು ನಾಯಿಕೊಡೆಗಳಂತೆ ತಲೆ ಎತ್ತಿವೆ. ಆದ್ರೆ ಇದೇ ಹೋಮ್ ಸ್ಟೇ ಮಾಲೀಕರು, ರೆಸಾರ್ಟ್ ಮಾಲೀಕರು, ಪ್ರವಾಸಿಗರ ಜೀವದ ಜೊತೆ ಚೆಲ್ಲಾಟವಾಡ್ತಿರೋ ಆರೋಪಿಗಳು ಇದೀಗ ಕೇಳಿ ಬರ್ತಿವೆ. ಪ್ರವಾಸಿಗರಿಂದ ಹೆಚ್ಚಿನ ಹಣ ಪಡೆವ ಮಾಲೀಕರು, ಮೋಜು ಮಸ್ತಿ, ಆನಂದದಾಯ ಕ್ಷಣಗಳನ್ನು ಕಳೆಯುವ ನೆಪ ಹೇಳಿ ಅಪಾಯಕಾರಿ ಸ್ಥಳಗಳಿಗೆ ಕರೆದುಕೊಂಡು ಹೋಗುತ್ತಿರುವ ಘಟನೆಗಳು ಮೇಲಿಂದ ಮೇಲೆ ನಡೆಯುತ್ತಿವೆ.
ಕೊಪ್ಪಳ ಎಸ್ಪಿ ಡಾ. ರಾಮ್ ಎಲ್ ಅರಸಿದ್ದಿ ಹೇಳಿದ್ದಿಷ್ಟು
ಮೊನ್ನೆ ನಡೆದ ಘಟನೆಗೆ ಹೋಮ್ ಸ್ಟೇ ಮಾಲೀಕೆಯ ನಿರ್ಲಕ್ಷ್ಯ ಕೂಡಾ ಪ್ರಮುಖ ಕಾರಣ ಅಂತ ಹೇಳಲಾಗುತ್ತಿದೆ. ಘಟನೆ ನಡೆದ ಸ್ಥಳ, ನಿರ್ಜನ ಪ್ರದೇಶವಾಗಿದ್ದು, ಹಗಲೊತ್ತಿನಲ್ಲಿಯೇ ಜನರ ಸಂಚಾರ ಕಡಿಮೆ ಇರುತ್ತದೆ. ಈ ಭಾಗದಲ್ಲಿ ಕರಡಿ, ಚಿರತೆ ಸೇರಿದಂತೆ ಕಾಡು ಪ್ರಾಣಿಗಳ ಹಾವಳಿ ಕೂಡಾ ಹೆಚ್ಚಾಗಿರೋದರಿಂದ ಜನರು ರಾತ್ರಿ ಸಮಯದಲ್ಲಿ ಓಡಾಡಲು ಭಯ ಪಡ್ತಾರೆ. ಆದ್ರೆ ಇದೆಲ್ಲಾ ಗೊತ್ತಿದ್ದರು ಕೂಡಾ ಹೋಮ್ ಸ್ಟೇ ಮಾಲೀಕೆ, ರಾತ್ರಿ ಹನ್ನೊಂದು ಗಂಟೆ ಸಮಯದಲ್ಲಿ ಪ್ರವಾಸಿಗರನ್ನು ಕರೆದುಕೊಂಡು ಹೋಗಿದ್ದೇ, ಘಟನೆಗೆ ಪ್ರಮುಖ ಕಾರಣ ಅಂತ ಹೇಳಲಾಗುತ್ತಿದೆ. ಹೀಗಾಗಿ ರೆಸಾರ್ಟ್, ಹೋಮ್ ಸ್ಟೇ ಮಾಲೀಕರ ವಿರುದ್ದ ಕೂಡಾ ಕ್ರಮವಾಗಬೇಕು ಅನ್ನೋ ಆಗ್ರಹ ಹೆಚ್ಚಾಗಿದೆ. ಈ ಬಗ್ಗೆ ಕೊಪ್ಪಳ ಎಸ್ಪಿ ಡಾ. ರಾಮ್ ಎಲ್ ಅರಸಿದ್ದಿ, ರೆಸಾರ್ಟ್ ನವರ ವಿರುದ್ದ ಕೂಡಾ ಕ್ರಮ ಕೈಗೊಳ್ಳೋದಾಗಿ ಹೇಳುತ್ತಿದ್ದಾರೆ.
ಇದನ್ನೂ ಓದಿ: ಕೊಪ್ಪಳ: ವಿದೇಶಿ, ದೇಶಿ ಪ್ರವಾಸಿಗರ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ, ಓರ್ವ ಪ್ರವಾಸಿಗ ನಾಪತ್ತೆ
ದೇಶಾದ್ಯಂತ ದೊಡ್ಡ ಸುದ್ದಿಯಾಗಿರುವ ಗ್ಯಾಂಗ್ ರೇಪ್ ಪ್ರಕರಣದ ಬಗ್ಗೆ ಪೊಲೀಸರು ತನಿಖೆಯನ್ನು ಮಾಡುತ್ತಿದ್ದಾರೆ. ಆದರೆ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕಿದೆ. ಜೊತೆಗೆ ಪ್ರವಾಸಿಗರ ಜೀವದ ಜೊತೆ ಚೆಲ್ಲಾಟವಾಡ್ತಿರೋ ರೆಸಾರ್ಟ್, ಹೋಮ್ ಸ್ಟೇ ಮಾಲೀಕರ ವಿರುದ್ದ ಕೂಡ ಕ್ರಮಕೈಗೊಳ್ಳಬೇಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:05 pm, Sun, 9 March 25