ಹೈದರಾಬಾದ್‌ನ ವೈದ್ಯ ವಿದ್ಯಾರ್ಥಿನಿ ದುರಂತ ಅಂತ್ಯ: ಮೂವತ್ತು ಗಂಟೆಗಳ ಬಳಿಕ ಶವ ಪತ್ತೆ
ಹೈದರಾಬಾದ್‌ನ ವೈದ್ಯ ವಿದ್ಯಾರ್ಥಿನಿ ತುಂಗಭದ್ರಾ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ನಿನ್ನೆ ನದಿಯಲ್ಲಿ ಈಜಲು ಹೋಗಿದ್ದಾಗ ನೀರುಪಾಲಾಗಿದ್ದಾಳೆ. ವಿವಿಧ ತಂಡಗಳಿಂದ ಮೂವತ್ತು ಗಂಟೆಗಳ ಕಾರ್ಯಾಚರಣೆ ನಂತರ ಇಂದು ಶವ ಪತ್ತೆ ಆಗಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರ ಬಳಿ ನಿನ್ನೆ ಘಟನೆ ನಡೆದಿದೆ.

ಕೊಪ್ಪಳ, ಫೆಬ್ರವರಿ 20: ಆಕೆ ಪ್ರತಿಭಾವಂತ ಭರತನಾಟ್ಯ ಕಲಾವಿದೆ. ಎಂಬಿಬಿಎಸ್ ಓದಿದ್ದ ಆಕೆಗೆ ಎಂಡಿ ಮಾಡುವ ಆಸೆಯಿತ್ತು. ಹೀಗಾಗಿ ಅದಕ್ಕಾಗಿ ತಯಾರಿ ಕೂಡ ನಡೆಸಿದ್ದಳು. ಆದರೆ ಸ್ನೇಹಿತರ ಜೊತೆ ಪ್ರವಾಸಕ್ಕೆ ಬಂದಾಗ ತುಂಗಭದ್ರಾ ನದಿ ಪಾಲಾಗಿದ್ದಾಳೆ (death). ಹೈದ್ರಾಬಾದ್ನ ಪ್ರಭಾವಿ ಶಾಸಕ ಮತ್ತು ಮಾಜಿ ಶಾಸಕರ ಸಂಬಂಧಿಯೂ ಆಗಿರುವ ವೈದ್ಯ ವಿದ್ಯಾರ್ಥಿನಿ ಇದೀಗ ನದಿಯಲ್ಲಿ ಶವವಾಗಿ ಪತ್ತೆ ಆಗಿದ್ದಾಳೆ.
ಸಾಣಾಪುರ ಬಳಿಯಿರುವ ತುಂಗಭದ್ರಾ ನದಿಯಲ್ಲಿ ನಿನ್ನೆ ಹೈದ್ರಾಬಾದ್ ಮೂಲದ ಇಪ್ಪತ್ತೇಳು ವರ್ಷದ ವೈದ್ಯೆ ಅನನ್ಯಾ ರಾವ್ ನೀರು ಪಾಲಾಗಿದ್ದಳು. ಮೂರು ದಿನದ ಹಿಂದೆ ಹಂಪಿಗೆ ಪ್ರವಾಸ್ಕಕೆ ಬಂದಿದ್ದ ಅನನ್ಯಾ ರಾವ್, ನಿನ್ನೆ ಮುಂಜಾನೆ ಅಂಜನಾದ್ರಿಗೆ ಹೋಗಲು ಸಿದ್ದವಾಗಿದ್ದಳು. ಆದರೆ ಅದಕ್ಕೂ ಮೊದಲೇ ತುಂಗಭದ್ರಾ ನದಿ ಬಳಿ ಹೋಗಿ, ಅಲ್ಲಿನ ಪ್ರಕೃತಿ ಸೌಂದರ್ಯ ನೋಡಿಕೊಂಡು ಬರಲು ಹೋಗಿದ್ದರು. ಹರಿಯುತ್ತಿರುವ ನದಿಯನ್ನು ನೋಡುತ್ತಿದ್ದಂತೆ, ಈಜು ಬರ್ತಿದ್ದ ಅನನ್ಯಾ ರಾವ್ಗೆ ನದಿಯಲ್ಲಿ ಈಜುವ ಮನಸ್ಸು ಆಗಿದೆ.
ಇದನ್ನೂ ಓದಿ: ಈಜಲು ಹೋಗಿದ್ದ ವೈದ್ಯೆ ನೀರುಪಾಲು.. 20 ಅಡಿ ಎತ್ತರದಿಂದ ಜಿಗಿದ ಭಯಾನಕ ದೃಶ್ಯ!
ತಾನು ಬಂಡೆ ಮೇಲಿಂದ ಡೈವ್ ಹೊಡೆದು, ನದಿಯಲ್ಲಿ ಈಜುವುದನ್ನು ವಿಡಿಯೋ ಮಾಡಲು ಸ್ನೇಹಿತರಿಗೆ ಹೇಳಿದ್ದಾಳೆ. ಹಿಂಬಾಗದ ಕಲ್ಲುಬಂಡೆ ಮೇಲಿದ್ದ ಸ್ನೇಹಿತೆ ವಿಡಿಯೋ ಮಾಡಿದ್ದರೆ, ಮುಂಬಾಗದಲ್ಲಿದ್ದ ಸ್ನೇಹಿತ ಕೂಡ ವಿಡಿಯೋ ಮಾಡುತ್ತಿದ್ದ. ಈ ಸಮಯದಲ್ಲಿ ಕಷ್ಟಪಟ್ಟು ನದಿಗೆ ಜಿಗಿದಿದ್ದ ಅನನ್ಯಾ ರಾವ್, ನಾಲ್ಕೈದು ನಿಮಿಷ ಈಜಿದ್ದಾಳೆ. ನಂತರ ಸುಸ್ತಾಗಿ ನೀರಲ್ಲಿ ಮುಳಗಿದ್ದಾಳೆ. ನೀರಲ್ಲಿ ಮುಳುಗುತ್ತಿರುವ ವಿಡಿಯೋ ಮತ್ತು ನದಿಗೆ ಜಿಗಿಯುವ ವಿಡಿಯೋಗಳು ಇದೀಗ ವೈರಲ್ ಆಗಿವೆ.
ರೀಲ್ಸ್ ಹುಚ್ಚಿಗೆ ಜೀವ ಕಳೆದುಕೊಂಡ ವೈದ್ಯ ವಿದ್ಯಾರ್ಥಿ
ಇನ್ನು ಹೈದ್ರಾಬಾದ್ ಮೂಲದ ಅನನ್ಯಾ ರಾವ್, ಎಂಬಿಬಿಎಸ್ ಪದವೀಧರೆಯಾಗಿದ್ದು, ಎಂಡಿ ಮಾಡಲು ಸಿದ್ದತೆ ನಡೆಸಿದ್ದಳು. ಭರತನಾಟ್ಯ ಕಲಾವಿದೆ ಕೂಡ ಹೌದು. ರೀಲ್ಸ್ ಮಾಡುವ ಹುಚ್ಚು ಕೂಡ ಇತ್ತು. ಹೀಗಾಗಿ ವಿಡಿಯೋ ಮಾಡಲು ಹೇಳಿ ನದಿಗೆ ಜಿಗಿದವಳು ನೀರಲ್ಲಿ ಮುಳುಗಿ ನಾಪತ್ತೆಯಾಗಿದ್ದಳು. ಇನ್ನು ಅನನ್ಯಾ ರಾವ್, ಹೈದ್ರಾಬಾದ್ನ ಮೇದಕ್ ಶಾಸಕ ರೋಹಿತ್ ಮೈನಪಲ್ಲಿ, ಮಲಕಾಜಗಿರಿ ಮಾಜಿ ಶಾಸಕ ರೋಹಿತ್ ಮೈನಪಲ್ಲಿ ಸಂಬಂಧಿಯಾಗಿದ್ದಾರೆ. ನೀರಲ್ಲಿ ಮುಳುಗಿ ನಾಪತ್ತೆಯಾದ ಸುದ್ದಿ ತಿಳಿದು, ಶಾಸಕ ಮತ್ತು ಮಾಜಿ ಶಾಸಕರ ಕುಟುಂಬದವರು ಸ್ಥಳಕ್ಕೆ ಬಂದಿದ್ದರು.
ಇನ್ನು ನಿನ್ನೆ ಮುಂಜಾನೆ ಹತ್ತು ಗಂಟೆಯಿಂದ ಅಗ್ನಿಶಾಮಕ ಸಿಬ್ಬಂದಿ ಮತ್ತು ಸ್ಥಳೀಯ ಮೀನುಗಾರರು ಶವಕ್ಕಾಗಿ ಹುಡುಕಾಟ ನಡೆಸಿದ್ದರು. ಆದರೆ ನಿನ್ನೆ ಇಡೀ ದಿನ ಕಾರ್ಯಚಾರಣೆ ನಡೆಸಿದರು ಕೂಡ ಶವ ಪತ್ತೆಯಾಗಿರಲಿಲ್ಲ. ಇಂದು ಡ್ರೋಣ್ ಕ್ಯಾಮರಾ ಬಳಸಿ, ಅನೇಕ ಕಡೆ ಹುಡುಕಾಡಿದ್ದಾರೆ. ನದಿಯಲ್ಲಿ ಕಲ್ಲುಬಂಡೆಗಳು, ಗುಹೆಗಳು ಇರೋದರಿಂದ ಎಲ್ಲಾದರೂ ಶವ ಸಿಲುಕಿರುವ ಬಗ್ಗೆ ಹುಡುಕಾಟ ಮಾಡಿದ್ದರು. ಆದರೆ ಕ್ಯಾಮರಾ ಕಣ್ಣಿಗೆ ಕೂಡ ಕಂಡಿರಲಿಲ್ಲ.
ಇದನ್ನೂ ಓದಿ: ತುಂಗಭದ್ರಾ ನದಿಯಲ್ಲಿ ನೀರುಪಾಲು, ಕೊನೇ ಕ್ಷಣದಲ್ಲಿ ಜೀವ ಉಳಿಸಿಕೊಳ್ಳಲು ಒದ್ದಾಡಿದ್ದ ವೈದ್ಯೆ, ವಿಡಿಯೋ ಇಲ್ಲಿದೆ
ಬಳಿಕ ಬಳ್ಳಾರಿ ಜಿಲ್ಲೆಯ ತೋರಣಗಲ್ನ ಜೆಎಸ್ಡಬ್ಲೂ ಸ್ಟೀಲ್ ತಂಡ, ಇಂದು ಕಾರ್ಯಾಚರಣೆ ಮಾಡಿದೆ. ಬೋಟ್ನಲ್ಲಿ ಆರು ಜನರ ತಂಡ ಕಾರ್ಯಾಚರಣೆ ನಡೆಸಿದರೆ, ಇನ್ನೊಂದಡೆ ಸ್ಕೂಬಾ ಡೈವಿಂಗ್ ತಂಡ ಕೂಡ ನೀರಲ್ಲಿ ಮುಳುಗಿ ಹುಡುಕಾಟ ನಡೆಸಿದರು. ಇನ್ನು ತುಂಗಭದ್ರಾ ಜಲಾಶಯದಿಂದ ಹೆಚ್ಚಿನ ನೀರು ಬಿಟ್ಟಿದ್ದರಿಂದ ಮತ್ತು ಕಲ್ಲುಬಂಡೆಗಳು ಇರೋದರಿಂದ ಹುಡುಕಾಟಕ್ಕೆ ಸಾಕಷ್ಟು ತೊಂದರೆಯಾಗಿದೆ. ಹೀಗಾಗಿ ಜಲಾಶಯದಿಂದ ಬಿಡುವ ನೀರನ್ನು ಕಡಿಮೆ ಮಾಡಲಾಗಿತ್ತು. ಸತತ ಮೂವತ್ತು ಗಂಟೆಗಳ ಕಾರ್ಯಾಚರಣೆ ನಂತರ ಶವ ಪತ್ತೆ ಆಗಿದೆ.
ಜೀವನದಲ್ಲಿ ಹತ್ತಾರು ಕನಸು ಕಂಡಿದ್ದ ವೈದ್ಯೆ ವಿಡಿಯೋ ಹುಚ್ಚಿಗೆ ನದಿಗೆ ಜಿಗಿದು ಪ್ರಾಣ ಕಳೆದುಕೊಂಡಿದ್ದಾಳೆ. ಮೋಜು ಮಸ್ತಿಗಾಗಿ ನೀರಿಗೆ ಇಳಿಯುವ ಮುನ್ನ ಜಾಗೃತಿ ವಹಿಸುವುದು ಸೂಕ್ತ. ಗೊತ್ತಿಲ್ಲದ ಜಾಗದಲ್ಲಿ ಈಜಲು ಹೋದರೆ ಆಪತ್ತು ಗ್ಯಾರಂಟಿ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:38 pm, Thu, 20 February 25