Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಧಿಕಾರಿಗಳ ನಿರ್ಲಕ್ಷ್ಯ: ಪ್ರವಾಸಿಗರ ಸಾಲು ಸಾಲು ಸಾವು, ಮೃತ್ಯುಕೂಪಾದ ತುಂಗಭದ್ರಾ ನದಿ

ತುಂಗಭದ್ರಾ ನದಿಯಲ್ಲಿ ಪ್ರವಾಸಿಗರು ಈಜಲು ಹೋಗಿ ಮುಳುಗಿ ಸಾಯುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಸೂಕ್ತ ಮಾಹಿತಿ ಕೊರತೆಯೇ ಇದಕ್ಕೆ ಕಾರಣವೆನ್ನಲಾಗುತ್ತಿದೆ. ನದಿಯ ಅಪಾಯಕಾರಿ ಪ್ರದೇಶಗಳ ಬಗ್ಗೆ ತಿಳುವಳಿಕೆ ಇಲ್ಲದಿರುವುದು ಮತ್ತು ಜೀವರಕ್ಷಕ ಸಿಬ್ಬಂದಿಗಳು ಇಲ್ಲದಿರುವುದರಿಂದ ಹೆಚ್ಚಾಗಿ ಪ್ರವಾಸಿಗರು ಪ್ರಾಣಕಳೆದುಕೊಳ್ಳುತ್ತಿದ್ದಾರೆ.

ಅಧಿಕಾರಿಗಳ ನಿರ್ಲಕ್ಷ್ಯ: ಪ್ರವಾಸಿಗರ ಸಾಲು ಸಾಲು ಸಾವು, ಮೃತ್ಯುಕೂಪಾದ ತುಂಗಭದ್ರಾ ನದಿ
ಅಧಿಕಾರಿಗಳ ನಿರ್ಲಕ್ಷ್ಯ: ಪ್ರವಾಸಿಗರ ಸಾಲು ಸಾಲು ಸಾವು, ಮೃತ್ಯುಕೂಪಾದ ತುಂಗಭದ್ರಾ ನದಿ
Follow us
ಸಂಜಯ್ಯಾ ಚಿಕ್ಕಮಠ, ಕೊಪ್ಪಳ
| Updated By: ಗಂಗಾಧರ​ ಬ. ಸಾಬೋಜಿ

Updated on:Feb 21, 2025 | 7:13 PM

ಕೊಪ್ಪಳ, ಫೆಬ್ರವರಿ 21: ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶವನ್ನು ರಾಜ್ಯದ ಮಿನಿ ಗೋವಾ ಅಂತಲೇ ಕರೆಯುತ್ತಾರೆ. ಆ ಸ್ಥಳಕ್ಕೆ ರಾಜ್ಯದಲ್ಲಿ ಅತಿ ಹೆಚ್ಚು ವಿದೇಶಿಗರು ಬರ್ತಾರೆ. ದೇಶದ ವಿವಿಧ ಕಡೆಯಿಂದ ಕೂಡ ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಬರ್ತಾರೆ. ಬಂದ ಪ್ರವಾಸಿಗರನ್ನು ಅತಿ ಹೆಚ್ಚು ಸೆಳೆಯುವದು ಕಪ್ಪು ಕಲ್ಲುಬಂಡೆಗಳ ನಡುವೆ ಹರಿಯುವ ತುಂಗಭದ್ರಾ (Tungabhadra) ನದಿ. ಪ್ರವಾಸಿ ಸ್ಥಳಗಳನ್ನು ನೋಡಿ ದಣಿದು ಬಂದವರು ತುಂಗಭದ್ರಾ ನದಿಯಲ್ಲಿ ಈಜಲು ಹೋಗುತ್ತಾರೆ. ಆದ್ರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ, ಸೂಕ್ತ ಮಾಹಿತಿ ಇಲ್ಲದೆ, ಈಜಲು ಹೋಗಿ ಅನೇಕರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಜೀವನದಿ, ಅನೇಕರ ಪಾಲಿಗೆ ಮೃತ್ಯುಕೂಪವಾಗುತ್ತಿದೆ.

ಜಿಲ್ಲೆಯ ಆನೆಗೊಂದಿ, ಅಂಜನಾದ್ರಿ, ಕಿಷ್ಕಿಂದೆ, ನೆರೆಯ ವಿಜಯನಗರ ಜಿಲ್ಲೆಯಲ್ಲಿರುವ ಹಂಪೆ ಮತ್ತು ಸುತ್ತಮುತ್ತಲಿನ ಸ್ಥಳಗಳನ್ನು ನೋಡಲು ಪ್ರತಿನಿತ್ಯ ಸಾವಿರಾರು ಪ್ರವಾಸಿಗರು ಬರ್ತಾರೆ. ಐತಿಹಾಸಿಕ ಸ್ಥಳ ನೋಡಿದ ನಂತರ ಹೆಚ್ಚಿನ ಜನರು ಬರೋದು ತುಂಗಭದ್ರಾ ನದಿಗೆ. ನೋಡಲು ಕಣ್ಣಿಗೆ ಹಬ್ಬದಂತೆ ಕಾಣುವ ತುಂಗಭದ್ರಾ ನದಿ ಪಾತ್ರದ ಪರಿಸರವನ್ನು ಆಸ್ವಾದಿಸುತ್ತಾರೆ. ಆದ್ರೆ ಇನ್ನು ಅನೇಕರು ನದಿಯಲ್ಲಿ ಈಜಲು ಮುಂದಾಗುತ್ತಾರೆ. ನದಿಯ ಬಗ್ಗೆ ಸರಿಯಾದ ಮಾಹಿತಿ ಇರದೇ ಅನೇಕರು ತೊಂದರೆಗೆ ಸಿಲಕುತ್ತಿದ್ದಾರೆ.

ಇದನ್ನೂ ಓದಿ: ಹೈದರಾಬಾದ್​​ನ ವೈದ್ಯ ವಿದ್ಯಾರ್ಥಿನಿ ದುರಂತ ಅಂತ್ಯ: ಮೂವತ್ತು ಗಂಟೆಗಳ ಬಳಿಕ ಶವ ಪತ್ತೆ

ಕೆಲವರು ಕಷ್ಟಪಟ್ಟು ಪ್ರಾಣ ಕಾಪಾಡಿಕೊಂಡರೆ, ಇನ್ನು ಕೆಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಮೊನ್ನೆ ಇದೇ ನದಿಯಲ್ಲಿ ಈಜಲು ಹೋಗಿ ಹೈದರಾಬಾದ್‌ ಮೂಲದ ಅನನ್ಯ ರಾವ್ ಅನ್ನೋ ವೈದ್ಯೆ ಪ್ರಾಣ ಕಳೆದುಕೊಂಡಿದ್ದಾಳೆ. ಈ ರೀತಿಯ ಘಟನೆಗಳು ತುಂಗಭದ್ರಾ ನದಿಯಲ್ಲಿ ಆಗಾಗ ನಡೆಯುತ್ತಲೇ ಇದ್ದು, ಸಂಭ್ರಮದಿಂದ ನೀರಿಗಿಳಿದವರು ಜೀವ ಕಳೆದುಕೊಳ್ಳುತ್ತಿದ್ದಾರೆ.

ಮಾಹಿತಿಯೂ ಇಲ್ಲಾ, ಜೀವರಕ್ಷಕ ಸಿಬ್ಬಂದಿಯೂ ಇಲ್ಲಾ

ಇನ್ನು ಹೆಚ್ಚಿನ ಪ್ರವಾಸಿಗರು ಬರುವ ಈ ಸ್ಥಳದಲ್ಲಿ ಬಹುತೇಕರಿಗೆ ಮಾಹಿತಿ ಕೊರತೆ ಇದೆ. ತುಂಗಭದ್ರಾ ನದಿ, ಕಲ್ಲುಬಂಡೆಗಳು, ಗುಹೆಗಳ ನಡುವೆ ಹರಿಯುತ್ತದೆ. ಎಲ್ಲಿ ನೋಡಿದ್ರು ಕೂಡಾ ನದಿಯಲ್ಲಿ ಕಲ್ಲಿನ ರಾಶಿಗಳೇ ಕಾಣುತ್ತವೆ. ಇಂತಹ ಸ್ಥಳದಲ್ಲಿ ಈಜುವುದು ಕಷ್ಟದಾಯಕವಾಗಿದೆ. ಆದರೆ ಕೆಲವರು ಈ ಸ್ಥಳದ ಪರಿಚಯವಿಲ್ಲದೇ ನೀರಿಗೆ ಧುಮುಕಿ ಸಂಕಷ್ಟವನ್ನು ಎಳೆದುಕೊಳ್ಳುತ್ತಿದ್ದಾರೆ.

ಇನ್ನು ಹೆಚ್ಚಿನ ಪ್ರವಾಸಿಗರು ಬಂದ್ರು ಕೂಡ, ಇಲ್ಲಿ ಯಾವೊಬ್ಬ ಗೈಡ್ ಗಳು ಇಲ್ಲ. ಅಪಾಯಕಾರಿ ಸ್ಥಳದ ಬಗ್ಗೆ ಮಾಹಿತಿ ನೀಡುವ ನಾಮಫಲಕಗಳು ಇಲ್ಲ. ಭದ್ರತಾ ಸಿಬ್ಬಂದಿ ಕೂಡ ಇಲ್ಲಾ. ಈ ಹಿಂದೆ ಮೀನುಗಾರರು ತೆಪ್ಪ ಹಾಕುತ್ತಿದ್ದರು. ಆದ್ರೆ ಇದೀಗ ಅದಕ್ಕೂ ಕೂಡಾ ಬ್ರೇಕ್ ಹಾಕಿದ್ದರಿಂದ ಯಾರಾದ್ರು ನೀರು ಪಾಲಾದ್ರು ಕೂಡಾ ಅವರನ್ನು ರಕ್ಷಣೆ ಮಾಡೋರು ಕೂಡ ಯಾರು ಇಲ್ಲದಂತಾಗಿದೆ. ಇನ್ನು ನದಿಗೆ ಈಜಲು ಹೋಗುವರನ್ನು ತಡೆಯಲು ಕೂಡ ಯಾರು ಇಲ್ಲದಂತಾಗಿದೆ. ಯಾವುದೇ ಮಾಹಿತಿ ಇಲ್ಲದೇ ಇರೋದರಿಂದ, ಪ್ರವಾಸಿಗರು ಈಜಲು ಹೋಗಿ ತೊಂದರೆಕೆ ಸಿಲುಕುತ್ತಿದ್ದಾರೆ.

Tungabhadra

ಈ ಪ್ರದೇಶ ಅರಣ್ಯ ಇಲಾಖೆ, ಜಿಲ್ಲಾಡಳಿತದ ವ್ಯಾಪ್ತಿಯಲ್ಲಿದೆ. ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು, ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳು, ಜಿಲ್ಲಾಡಳಿತ ಸಂಪೂರ್ಣವಾಗಿ ಈ ಪ್ರದೇಶಗಳನ್ನು ನಿರ್ಲಕ್ಷ್ಯಸಿದೆ. ಕನಿಷ್ಟ ಅಪಯಾಕಾರಿ ಸ್ಥಳ, ಈಜಬೇಡಿ ಅಂತ ಬೋರ್ಡ್ ಹಾಕಿದ್ರು ಹೆಚ್ಚಿನ ಜನರು ನದಿಗೆ ಈಜಲು ಹಿಂದೇಟು ಹಾಕ್ತಾರೆ. ಸುತ್ತಮುತ್ತ ನಾಯಿಕೊಡೆಗಳಂತೆ ರೆಸಾರ್ಟ್ ಗಳಿಗೆ ಅವಕಾಶ ನೀಡಿರೋ ಅಧಿಕಾರಿಗಳು, ಬಂದ ಪ್ರವಾಸಿಗರಿಗೆ ಮಾಹಿತಿ ನೀಡುವ ಫಲಕಗಳನ್ನು ಮಾತ್ರ ಹಾಕಲು ಹಿಂದೇಟು ಹಾಕ್ತಿದ್ದಾರೆ. ಹೀಗಾಗಿ ಅನೇಕರು ಖುಷಿಯಿಂದ ಈಜಲು ಹೋಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ ಅಂತಿದ್ದಾರೆ ಸ್ಥಳೀಯರು.

ಇದನ್ನೂ ಓದಿ: ತುಂಗಭದ್ರಾ ನದಿಯಲ್ಲಿ ನೀರುಪಾಲು, ಕೊನೇ ಕ್ಷಣದಲ್ಲಿ ಜೀವ ಉಳಿಸಿಕೊಳ್ಳಲು ಒದ್ದಾಡಿದ್ದ ವೈದ್ಯೆ, ವಿಡಿಯೋ ಇಲ್ಲಿದೆ

ಸಾಣಾಪುರ, ಆನೆಗೊಂದಿ ಸೇರಿದಂತೆ ಸುತ್ತಮುತ್ತಲಿನ ಸ್ಥಳಗಳಿಗೆ ಹೆಚ್ಚಿನ ಪ್ರವಾಸಿಗರು ತುಂಗಭದ್ರಾ ನದಿಗೆ ಈಜಲು ಹೋಗ್ತಿದ್ದಾರೆ. ಆದರೆ ಮಾಹಿತಿ ಕೊರತೆಯಿಂದ ಅನೇಕರು ಜೀವ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಇನ್ಮುಂದೆ ಅಧಿಕಾರಿಗಳು, ಈ ಭಾಗದಲ್ಲಿ ಭದ್ರತಾ ಸಿಬ್ಬಂದಿ ನಿಯೋಜನೆ ಮಾಡೋದರ ಜೊತೆಗೆ ಮಾಹಿತಿಯ ನಾಮಫಲಕಗಳನ್ನು ಹಾಕುವ ಕೆಲಸ ಮಾಡಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 7:11 pm, Fri, 21 February 25