ಪ್ರವಾಸಿಗರ ಮೇಲೆ ಹಲ್ಲೆ, ಮಹಿಳೆಯರಿಬ್ಬರ ಮೇಲೆ ಗ್ಯಾಂಗ್ರೇಪ್: ಇಬ್ಬರ ಬಂಧನ, ಓರ್ವ ಪ್ರವಾಸಿಗ ಶವವಾಗಿ ಪತ್ತೆ
ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಪ್ರವಾಸಿಗರ ಮೇಲೆ ನಡೆದ ಹಲ್ಲೆ ಮತ್ತು ಗ್ಯಾಂಗ್ ರೇಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಬಲೆ ಬಿಸಿದ್ದಾರೆ. ಈ ಘಟನೆ ಮಾರ್ಚ್ 6 ರಂದು ರಾತ್ರಿ ನಡೆದಿದೆ. ದೇಶ, ವಿದೇಶಿ ಪ್ರವಾಸಿಗರ ಪೈಕಿ ಓರ್ವ ಪ್ರವಾಸಿಗ ಶವವಾಗಿ ಪತ್ತೆಯಾಗಿದ್ದಾರೆ.

ಕೊಪ್ಪಳ, ಮಾರ್ಚ್ 08: ಪ್ರವಾಸಿಗರ (Tourist) ಮೇಲೆ ಹಲ್ಲೆ, ಇಬ್ಬರು ಮಹಿಳೆಯರ ಮೇಲೆ ಗ್ಯಾಂಗ್ರೇಪ್ ಪ್ರಕರಣ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಜಿಲ್ಲೆಯ ಗಂಗಾವತಿ ಗ್ರಾಮೀಣ ಠಾಣೆ ಪೊಲೀಸರು ಬಂಧಿಸಿದ್ದಾರೆ (. ಮಲ್ಲೇಶ್(22) ಮತ್ತು ಚೇತನ್ಸಾಯಿ ಸಿಳ್ಳೇಕ್ಯಾತರ್(21) ಬಂಧಿತರು. ಬಂಧಿತರಿಬ್ಬರು (Arrested) ಗಂಗಾವತಿ ತಾಲೂಕಿನ ಸಾಯಿನಗರದ ನಿವಾಸಿಗಳು. ಪರಾರಿಯಾದ ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಮಾರ್ಚ್ 6ರಂದು ರಾತ್ರಿ 11 ಗಂಟೆ ಸುಮಾರಿಗೆ ಗಂಗಾವತಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು.
ಓರ್ವ ಪ್ರವಾಸಿಗ ಶವವಾಗಿ ಪತ್ತೆ
ಇನ್ನು ದೇಶ, ವಿದೇಶದ ಐವರು ಪ್ರವಾಸಿಗರ ಮೇಲೆ ದುಷ್ಕರ್ಮಿಗಳು ಹಲ್ಲೆ ಮಾಡಿದ್ದರು. ಆ ಪೈಕಿ ಎರಡು ದಿನದ ಹಿಂದೆ ನಾಪತ್ತೆಯಾಗಿದ್ದ ಪ್ರವಾಸಿಗ ಇಂದು ಜಿಲ್ಲೆಯ ಗಂಗಾವತಿ ತಾಲೂಕಿನ ಮಲ್ಲಾಪುರ ಬಳಿ ತುಂಗಭದ್ರಾ ಎಡದಂಡೆ ಕಾಲುವೆಯಲ್ಲಿ ಶವವಾಗಿ ಪತ್ತೆ ಆಗಿದ್ದಾರೆ.
ಇದನ್ನೂ ಓದಿ: ಕೊಪ್ಪಳ: ವಿದೇಶಿ, ದೇಶಿ ಪ್ರವಾಸಿಗರ ಮೇಲೆ ದುಷ್ಕರ್ಮಿಗಳಿಂದ ಹಲ್ಲೆ, ಓರ್ವ ಪ್ರವಾಸಿಗ ನಾಪತ್ತೆ
ಒರಿಸ್ಸಾ ಮೂಲದ ಬಿಬಾಸ್ (33) ಮೃತ ಪ್ರವಾಸಿಗ. ದುಷ್ಕರ್ಮಿಗಳು ಹಣಕ್ಕಾಗಿ ಹಲ್ಲೆ ಮಾಡಿ ಎಡದಂಡೆ ಕಾಲುವೆಗೆ ದೂಡಿದ್ದರು. ನಾಲ್ವರು ಸುರಕ್ಷಿತವಾಗಿದ್ದರೆ, ಬಿಬಾಸ್ ನಾಪತ್ತೆಯಾಗಿದ್ದರು. ಬಿಬಾಸ್ಗಾಗಿ ಹುಡುಕಾಟ ನಡೆಸಲಾಗಿತ್ತು. ಆದರೆ ಸಿಕ್ಕಿರಲಿಲ್ಲ. ಇಂದು ಮುಂಜಾನೆ ಶವವಾಗಿ ಪತ್ತೆಯಾಗಿದ್ದಾರೆ.
ಕೊಪ್ಪಳ ಘಟನೆ ಖಂಡಿಸಿದ ಸಿಎಂ ಸಿದ್ದರಾಮಯ್ಯ
ಈ ಪ್ರಕರಣ ಬಗ್ಗೆ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, ಜಿಲ್ಲೆಯ ಗಂಗಾವತಿ ತಾಲೂಕಿನ ಸಾಣಾಪುರದಲ್ಲಿ ಇಸ್ರೇಲಿ ಪ್ರಜೆ ಹಾಗೂ ಹೋಮ್ ಸ್ಟೇ ಮಾಲಕಿ ಮೇಲೆ ನಡೆದ ಹಲ್ಲೆ ಹಾಗೂ ಅತ್ಯಾಚಾರ ಅತ್ಯಂತ ಹೇಯ ಕೃತ್ಯ. ಘಟನೆ ವರದಿಯಾದ ಕೂಡಲೇ ಸಂಬಂಧಪಟ್ಟ ಪೊಲೀಸರಿಂದ ಮಾಹಿತಿ ಪಡೆದು, ಕಟ್ಟುನಿಟ್ಟಿನ ತನಿಖೆ ಕೈಗೊಂಡು, ಅಪರಾಧಿಗಳನ್ನು ಶೀಘ್ರ ಪತ್ತೆಹಚ್ಚುವಂತೆ ಸೂಚಿಸಿದ್ದೆ ಎಂದಿದ್ದಾರೆ.
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಸಾಣಾಪುರದಲ್ಲಿ ಇಸ್ರೇಲಿ ಪ್ರಜೆ ಹಾಗೂ ಹೋಮ್ ಸ್ಟೇ ಮಾಲಕಿ ಮೇಲೆ ನಡೆದ ಹಲ್ಲೆ ಹಾಗೂ ಅತ್ಯಾಚಾರ ಅತ್ಯಂತ ಹೇಯ ಕೃತ್ಯ. ಘಟನೆ ವರದಿಯಾದ ಕೂಡಲೇ ಸಂಬಂಧಪಟ್ಟ ಪೊಲೀಸರಿಂದ ಮಾಹಿತಿ ಪಡೆದು, ಕಟ್ಟುನಿಟ್ಟಿನ ತನಿಖೆ ಕೈಗೊಂಡು, ಅಪರಾಧಿಗಳನ್ನು ಶೀಘ್ರ ಪತ್ತೆಹಚ್ಚುವಂತೆ ಸೂಚಿಸಿದ್ದೆ. ಪ್ರಕರಣದ ಸಂಬಂಧ ಪೊಲೀಸರು…
— CM of Karnataka (@CMofKarnataka) March 8, 2025
ಪ್ರಕರಣದ ಸಂಬಂಧ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ. ರಾಜ್ಯಕ್ಕೆ ಬರುವ ಪ್ರವಾಸಿಗರು ಸೇರಿದಂತೆ ಪ್ರತಿಯೊಬ್ಬರಿಗೂ ರಕ್ಷಣೆ ನೀಡಲು ನಮ್ಮ ಸರ್ಕಾರ ಬದ್ಧವಾಗಿದೆ. ಇಂತಹ ಘಟನೆಗಳು ಮರುಕಳಿಸದಂತೆ ಎಲ್ಲಾ ಅಗತ್ಯ ಕ್ರಮ ವಹಿಸಲಾಗುವುದು ಎಂದು ಹೇಳಿದ್ದಾರೆ.
ಕೃತ್ಯ ಮಾಡಿದ್ದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದ ಎಸ್ಪಿ
ಗಂಗಾವತಿಯಲ್ಲಿ ಎಸ್ಪಿ ಡಾ.ರಾಮ್ ಅರಸಿದ್ದಿ ಪ್ರತಿಕ್ರಿಯಿಸಿದ್ದು, ಗಾರೆ ಕೆಲಸ ಮಾಡುವ ಆರೋಪಿಗಳಿಬ್ಬರು ಕುಡಿದು ಗಲಾಟೆ ಮಾಡಿದ್ದಾರೆ. ಪ್ರವಾಸಿಗರನ್ನು ನೋಡಿ ಹಣ ಕಸಿದುಕೊಳ್ಳುವುದಕ್ಕೆ ಮುಂದಾಗಿದ್ದರು. ಈ ವೇಳೆ ಪ್ರವಾಸಿಗರ ಮತ್ತು ದುಷ್ಕರ್ಮಿಗಳ ನಡುವೆ ಗಲಾಟೆಯಾಗಿದೆ. ಕೃತ್ಯ ಮಾಡಿದ್ದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಬಳ್ಳಾರಿ ವಲಯ ಐಜಿಪಿ ಲೋಕೇಶ ಕುಮಾರ್ ಹೇಳಿದ್ದಿಷ್ಟು
ಬಳ್ಳಾರಿ ವಲಯ ಐಜಿಪಿ ಲೋಕೇಶ ಕುಮಾರ್ ಹೇಳಿಕೆ ನೀಡಿದ್ದು, ನಿನ್ನೆ ರಾತ್ರಿ ನಾಲ್ವರು ಪ್ರವಾಸಿಗರು, ಓರ್ವ ಹೋಮ್ ಸ್ಟೇ ಮಹಿಳೆ ಬಂದಿದ್ದರು. ಇಸ್ರೇಲ್ ಮಹಿಳೆ, ಅಮೆರಿಕದ ಪ್ರವಾಸಿಗ, ಮಹರಾಷ್ಟ್ರ ಮತ್ತು ಒರಿಸ್ಸಾ ಪ್ರವಾಸಿಗರು ಸಾಣಾಪುರ ಕೆರೆ ಬಳಿಯಿರೋ ಎಡದಂಡೆ ಕಾಲುವೆಗೆ ಬಂದಿದ್ದು, ವಾಯುವಿಹಾರಕ್ಕೆ ಬಂದು ನಕ್ಷತ್ರ ನೋಡ್ತಾ ಕೂತಿದ್ದರಂತೆ. ಈ ಸಮಯದಲ್ಲಿ ಮೂವರು ಯುವಕರು ಬಂದಿದ್ದರು ಎಂದರು.
ಇದನ್ನೂ ಓದಿ: ಯಾರನ್ನ ಕೇಳಿ ಬಸ್ ಟಿಕೆಟ್ ದರ ಹೆಚ್ಚಿಸಿದ್ದೀರಿ? ಅಂತ ಕುಡಿದ ಮತ್ತಿನಲ್ಲಿ ಕಂಡಕ್ಟರ್ ಮೇಲೆ ಹಲ್ಲೆ
ಪೆಟ್ರೋಲ್ಗಾಗಿ ತಮಗೆ ದುಡ್ಡು ಬೇಕು ಅಂತ ಕೇಳಿದ್ದರು. ಇಪ್ಪತ್ತು ರೂಪಾಯಿ ಕೊಟ್ಟರೆ, ನೂರು ರೂಪಾಯಿ ಕೇಳಿದ್ದರಂತೆ. ಈ ಸಮಯದಲ್ಲಿ ಮೂವರು ಪ್ರವಾಸಿಗರ ಮೇಲೆ ಕಲ್ಲಿನಿಂದ ಹಲ್ಲೆ ಮಾಡಿದ ದುಷ್ಕರ್ಮಿಗಳು ಬಳಿಕ ಎಡದಂಡೆ ಕಾಲುವೆಗೆ ದೂಡಿ ಓಡಿ ಹೋಗಿದ್ದರು. ಡೇನಿಯಲ್ ಮತ್ತು ಪಂಕಜ್ ಈಜಿ ದಡಕ್ಕೆ ಬಂದಿದ್ದಾರೆ. ಇನ್ನು ಹೋಮಸ್ಟೇ ಮಹಿಳಾ ಓನರ್, ಇಸ್ರೆಲ್ ಪ್ರವಾಸಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯವೆಸಗಲಾಗಿದೆ. ಈ ಬಗ್ಗೆ ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಗಾಗಿ ಆರು ತಂಡ ರಚನೆ ಮಾಡಿದ್ದೇವೆ ಎಂದು ತಿಳಿಸಿದ್ದರು.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 4:19 pm, Sat, 8 March 25