ಇಂದು ಗವಿಮಠ ರಥೋತ್ಸವ: ಜಾತ್ರೆ ಪ್ರಯುಕ್ತ 3 ದಿನ ನಡೆಯಲಿವೆ ಹತ್ತಾರು ಕಾರ್ಯಕ್ರಮಗಳು
ಕೊಪ್ಪಳದ ಗವಿಮಠದಲ್ಲಿ ನಡೆಯುವ ಪ್ರಸಿದ್ಧ ಜಾತ್ರೆ, ದಕ್ಷಿಣ ಭಾರತದ ಕುಂಭಮೇಳ ಎಂದೇ ಪ್ರಖ್ಯಾತ. ಇಂದಿನಿಂದ ಆರಂಭವಾಗುವ ಜಾತ್ರಾ ಮಹೋತ್ಸವದಲ್ಲಿ ಭಕ್ತಿ, ಜ್ಞಾನ, ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಸಮ್ಮಿಲನವಿದೆ. ರಥೋತ್ಸವ, ಭಕ್ತಿ ಸಭೆಗಳು, ಸಂಗೀತ ಕಾರ್ಯಕ್ರಮಗಳು, ಮತ್ತು ಪ್ರಮುಖ ವ್ಯಕ್ತಿಗಳ ಭಾಗವಹಿಸುವಿಕೆ ಜಾತ್ರೆಯ ವಿಶೇಷ ಅಂಶಗಳಾಗಿವೆ. ಜಾತ್ರೆಯು ಭಕ್ತಿ ಮತ್ತು ಜ್ಞಾನದ ಸಂಗಮವಾಗಿದ್ದು, ಭಕ್ತರಿಗೆ ಆಧ್ಯಾತ್ಮಿಕ ಅನುಭವ ನೀಡುವುದು ಉದ್ದೇಶ.
ಕೊಪ್ಪಳ, ಜನವರಿ 15: ಕೊಪ್ಪಳ (Koppla) ನಗರದಲ್ಲಿರುವ ಸುಪ್ರಸಿದ್ಧ ಗವಿಮಠದ ಜಾತ್ರೆಯನ್ನು (Gavimath Jatre) ದಕ್ಷಿಣ ಭಾರತದ ಕುಂಭಮೇಳ ಅಂತಲೇ ಕರೆಯುತ್ತಾರೆ. ಬುಧವಾರ (ಜನವರಿ 15) ಗವಿಸಿದ್ದೇಶ್ವರ ಜಾತ್ರಾ (Gavisiddeshwara Jatre) ಮಹೋತ್ಸವ ರಥೋತ್ಸವದೊಂದಿಗೆ ಆರಂಭವಾಗಲಿದೆ. ಮುಂದಿನ 15 ದಿನಗಳ ಕಾಲ ಜಾತ್ರೆ ನಡೆಯಲಿದೆ. ಜಾತ್ರೆ ಅಂಗವಾಗಿ ಮೂರು ದಿನಗಳ ಕಾಲ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
ಗವಿಮಠದ ಜಾತ್ರೆ, ಕೇವಲ ಜಾತ್ರೆಯಾಗಿರದೆ, ದಾಸೋಹ, ಅನುಭವ, ಜ್ಞಾನ, ಜೀವನ ಚಿಂತನೆಯ ಪಾಠವನ್ನು ತಿಳಿಯುವ ಭಕ್ತಿ ಮತ್ತು ಜ್ಞಾನದ ಸಂಗಮವಾಗಿರುತ್ತದೆ. ಜಾತ್ರೆಗೆ ಬಂದವರು ಜ್ಞಾನದ ಬುತ್ತಿಯನ್ನು ಹೊತ್ತೋಯ್ಯಲಿ ಎಂಬುವುದು ಮಠದ ಪೀಠಾಧಿಪತಿಯಾಗಿರುವ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಯವರ ಆಶಯವಾಗಿದೆ.
ಹೀಗಾಗಿ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರನ್ನು ಜಾತ್ರೆಗೆ ಆಹ್ವಾನಿಸಿ ಸತ್ಕರಿಸಿ, ಅವರ ಕಾರ್ಯವನ್ನು ಶ್ಲಾಘಿಸುವುದು ಮತ್ತು ಅವರ ಕೊಡುಗೆಯನ್ನು ಜನರಿಗೆ ತಿಳಿಸುವ ಕಾರ್ಯ ಮಠದಿಂದ ನಡೆದುಕೊಂಡು ಬಂದಿದೆ. ಜಾತ್ರೆಯ ಮೂರು ದಿನದ ಸಂಪೂರ್ಣ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: ಗವಿಸಿದ್ದೇಶ್ವರ ಜಾತ್ರಾ ಮಹಾದಾಸೋಹದಲ್ಲಿ ಸಾವಯವ ಬೆಲ್ಲದಿಂದ 14 ಲಕ್ಷ ಜಿಲೇಬಿ ತಯಾರು
ದಕ್ಷಿಣ ಭಾರತದ ಕುಂಭಮೇಳ ಮಹಾ ರಥೋತ್ಸವ
ಜನವರಿ 15 ರಂದು ಗವಿಮಠದ ಜಾತ್ರೆಯ ಅಂಗವಾಗಿ ಪ್ರತಿವರ್ಷ ಗವಿಸಿದ್ದೇಶ್ವರರ ಉತ್ಸವ ಮೂರ್ತಿಯನ್ನು ರಥದಲ್ಲಿ ಸ್ಥಾಪಿಸಿ ಮೆರವಣಿಗೆ ಮಾಡಲಾಗುತ್ತದೆ. ಇಂದು ಸಂಜೆ 5:30ಕ್ಕೆ ಮಠದ ಮುಂದಿರುವ ಮೈದಾನದಲ್ಲಿ, ಮಹಾ ರಥೋತ್ಸವ ನಡೆಯಲಿದೆ. ಧಾರವಾಡದ ಸುಪ್ರಸಿದ್ಧ ಹಿಂದುಸ್ಥಾನಿ ಗಾಯಕ ಪದ್ಮಶ್ರೀ ಪಂಡಿತ ಎಮ್ ವೆಂಕಟೇಶ್ ಕುಮಾರ್ ಉದ್ಘಾಟನೆ ಚಾಲನೆ ನೀಡಲಿದ್ದಾರೆ. ತುಮಕೂರು ಸಿದ್ದಗಂಗಾ ಮಠದ ಸಿದ್ದಲಿಂಗ ಮಹಾಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ.
ಚಲನಚಿತ್ರ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಇನ್ನು ಬಿಜೆಪಿ ರಾಜ್ಯ ಅಧ್ಯಕ್ಷ ವಿಜಯೇಂದ್ರ ಕೂಡಾ ಜಾತ್ರೆಯಲ್ಲಿ ಬಾಗಿಯಾಗಲಿದ್ದಾರೆ. ರಥೋತ್ಸವಕ್ಕೆ ದೇಶದ ಅನೇಕ ಕಡೆಯಿಂದ ಲಕ್ಷಾಂತರ ಭಕ್ತರು ಆಗಮಿಸಲಿದ್ದಾರೆ.
ಸಂಜೆ 6 ಗಂಟೆಗೆ ಮಠದ ಕೈಲಾಸ ಮಂಟಪದಲ್ಲಿ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ಸರಿಗಮಪ ಖ್ಯಾತಿಯ ಹರ್ಷ, ಧಾರವಾಡದ ಬಸವರಾಜ್ ವಂದಲಿ, ಹುಬ್ಬಳ್ಳಿಯ ಸುಜಯಿಂದ್ರ ಕುಲಕರ್ಣಿ ತಂಡದಿಂದ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಜನವರಿ 16 ರಂದು ಸಂಜೆ 6 ಗಂಟೆಗೆ ಮಠದ ಕೈಲಾಸ ಮಂಟಪದಲ್ಲಿ ಭಕ್ತಿ ಹಿತಚಿಂತನ ಸಭೆ ನೆಡಯಲಿದೆ. ಭಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದೇವರು, ವನಬಳ್ಳಾರಿಯ ಬಸವಲಿಂಗ ಮಹಾಸ್ವಾಮಿಗಳು ಕಾರ್ಯಕ್ರಮದ ಸಾನಿಧ್ಯ ವಹಿಸಲಿದ್ದಾರೆ. ಮುಖ್ಯ ಅತಿಥಿಯಾಗಿ ಫಾರೆಸ್ಟ್ ಮ್ಯಾನ್ ಆಫ್ ಇಂಡಿಯಾ ಖ್ಯಾತಿಯ ಅಸ್ಸಾಂನ ಜಾದವ್ ಪಾಯೆಂಗ್ ಆಗಮಿಸಲಿದ್ದಾರೆ. ಕಾರ್ಯಕ್ರಮದ ನಂತರ ಮಠದ ಆವರಣದಲ್ಲಿ ಮದ್ದು ಸುಡುವ ಕಾರ್ಯಕ್ರಮವಿದ್ದು, ಈ ಕಾರ್ಯಕ್ರಮಕ್ಕೆ ಕೂಡಾ ಅಪಾರ ಭಕ್ತರು ಸಾಕ್ಷಿಯಾಗಲಿದ್ದಾರೆ.
ಜನವರಿ 17 ರಂದು ಸಮಾರೋಪ ಸಮಾರಂಭ ನಡೆಯಲಿದ್ದು, ಹೆಬ್ಬಾಳ ಬೃಹನ್ಮಠದ ನಾಗಭೂಷಣ ಶಿವಾಚಾರ್ಯ ಸ್ವಾಮೀಜಿ, ಯೋಗ ಮತ್ತು ನಿಸರ್ಗ ಚಿಕಿತ್ಸಾ ಕೇಂದ್ರ ಶಿರೂರನ ಡಾ. ಬಸವಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸಲಿದ್ದಾರೆ. ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿಗಳಾದ ವಿ.ಶ್ರೀಶಾನಂದ್ ಸಮಾರೋಪ ಭಾಷಣ ಮಾಡಲಿದ್ದಾರೆ. ಕಾರ್ಯಕ್ರಮದ ನಂತರ ಖ್ಯಾತ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್ ಅವರಿಂದ ಹಾಸ್ಯ ಸಂಜೆ ಕಾರ್ಯಕ್ರಮ ನಡೆಯಲಿದೆ.
ಮೂರು ದಿನಗಳ ಕಾಲ ಮಠದ ಆವರಣದಲ್ಲಿ ಭಕ್ತಿ ಹಿತಚಿಂತನಾ ಸಮಾವೇಶ, ಧಾರ್ಮಿಕ ಕಾರ್ಯಕ್ರಮಗಳು, ಅನೇಕ ಕ್ರೀಡೆಗಳು, ಪಲಫುಷ್ಟ ಪ್ರದರ್ಶನ, ಕೃಷಿ ವಸ್ತುಗಳ ಪ್ರದರ್ಶನ ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆಯಲಿವೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ