ಭತ್ತದ ಕಣಜ ಕೊಪ್ಪಳದಲ್ಲಿ ಇಳುವರಿ ಕುಸಿತ: ದಿನದಿಂದ ದಿನಕ್ಕೆ ಹೆಚ್ಚುತ್ತಿದೆ ಅಕ್ಕಿ ಬೆಲೆ, ಗ್ರಾಹಕರಿಗೆ ಶಾಕ್
ರಾಜ್ಯದಲ್ಲಿ ಅತಿ ಹೆಚ್ಚು ಭತ್ತ ಬೆಳೆಯುವುದು, ರಾಜ್ಯದ ಭತ್ತದ ಕಣಜ ಅಂತ ಖ್ಯಾತಿ ಪಡೆದಿರೋ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ. ಸಾಮಾನ್ಯವಾಗಿ ಪ್ರತಿ ವರ್ಷ ಭತ್ತದ ಬೆಳೆಗಾರರು ಎರಡು ಭತ್ತದ ಬೆಳೆಗಳನ್ನು ಬೆಳೆಯುತ್ತಿದ್ದರು. ಆದ್ರೆ ಈ ಬಾರಿ ಮಳೆಯಾಗದೇ ಇರೋದರಿಂದ ಜಲಾಯಶಗಳು ಖಾಲಿಯಾಗಿವೆ. ತುಂಗಭದ್ರಾ ಜಲಾಶಯದಿಂದ ಕಾಲುವೆಗೆ ನೀರು ನಿಲ್ಲಿಸಲಾಗಿದೆ. ಇದರಿಂದ ಎರಡನೆ ಭತ್ತದ ಬೆಳೆಯನ್ನು ಬೆಳೆಯಲು ಸಾಧ್ಯವಿಲ್ಲದಂತಾಗಿದೆ.
ಕೊಪ್ಪಳ, ಡಿಸೆಂಬರ್ 7: ರಾಜ್ಯದ ಭತ್ತದ ಕಣಜ ಅಂತ ಖ್ಯಾತಿ ಪಡೆದಿರೋದು ಕೊಪ್ಪಳ ಜಿಲ್ಲೆಯ ಗಂಗಾವತಿ. ಆದ್ರೆ ಈ ಬಾರಿ ಭತ್ತದ ಕಣಜದಲ್ಲಿಯೇ (Paddy Fields) ಭತ್ತದ ಬೆಳೆ ಕಡಿಮೆಯಾಗಿದೆ. ಇದು ಅಕ್ಕಿ ಬೆಲೆ (Rice prices) ಹೆಚ್ಚಾಗಲು ಪ್ರಮುಖ ಕಾರಣವಾಗಿದೆ. ಕಳೆದ ವರ್ಷಕ್ಕಿಂತ ಈಗಾಗಲೇ ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ ಹೆಚ್ಚಾಗುತ್ತಿದೆ. ಮುಂದಿನ ದಿನದಲ್ಲಿ ಇನ್ನು ಕೂಡಾ ಅಕ್ಕಿ ಬೆಲೆ ಹೆಚ್ಚಾಗೋ ಆತಂಕ ಉಂಟಾಗಿದೆ.
ಗ್ರಾಹಕರು ಈಗಾಗಲೇ ಅನೇಕ ರೀತಿಯ ಬೆಲೆ ಏರಿಕೆಯಿಂದ ಶಾಕ್ ಅನುಭವಿಸುತ್ತಿದ್ದಾರೆ. ಒಂದಡೆ ಬರಗಾಲದಿಂದ ಜನರಿಗೆ ಸರಿಯಾಗಿ ಕೂಲಿ ಕೆಲಸ ಸಿಗ್ತಿಲ್ಲ. ದೈನಂದಿನ ಜೀವನ ನಡೆಸಲು ಕೂಡಾ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಆದ್ರೆ ಇದೇ ಸಮಯದಲ್ಲಿ ಗ್ರಾಹಕರು ಮತ್ತೊಂದು ಶಾಕ್ ಅನುಭವಿಸಬೇಕಾದ ಸ್ಥಿತಿ ಬಂದಿದೆ. ರಾಜ್ಯದ ಬಹುತೇಕ ಜನರು ತಮ್ಮ ದೈನಂದಿನ ಊಟಕ್ಕೆ ಅವಲಂಬಿಸಿರೋದು ಅನ್ನವನ್ನೇ. ಹೆಚ್ಚಿನ ಜನರು ಜೋಳ, ರಾಗಿ ಜೊತೆ ಅಕ್ಕಿಯನ್ನು ದೈನಂದಿನವಾಗಿ ಬಳಸುತ್ತಾರೆ. ಆದ್ರೆ ಅಕ್ಕಿ ಬೆಲೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಾಮಾನ್ಯವಾಗಿ ಪ್ರತಿ ಕ್ವಿಂಟಲ್ ಹೋಲಸೆಲ್ ಅಕ್ಕಿ ಬೆಲೆ ಮೂರುವರೆ ಸಾವಿರ ರೂಪಾಯಿ ಇರ್ತಿತ್ತು. ಆದ್ರೆ ಈ ಬಾರಿ ಬೇಸಿಗೆ ಆರಂಭಕ್ಕೂ ಮುನ್ನವೇ ಪ್ರತಿ ಕ್ವಿಂಟಲ್ ಅಕ್ಕಿ ಬೆಲೆ ನಾಲ್ಕುವರೆಯಿಂದ ಐದು ಸಾವಿರಕ್ಕೆ ಮುಟ್ಟಿದೆ. ಇನ್ನು ಚಿಲ್ಲರೆಯಾಗಿ ಸೋನಾ ಮಸೂರಿ ಅಕ್ಕಿ ಬೆಲೆ ಆರವತ್ತರಿಂದ ಎಪ್ಪತ್ತು ರೂಪಾಯಿಗೆ ಮಾರಾಟವಾಗುತ್ತಿದೆ. ಮುಂದಿನ ದಿನದಲ್ಲಿ ಅಕ್ಕಿ ಬೆಲೆ ಇನ್ನು ಹೆಚ್ಚಾಗೋ ಸಾಧ್ಯತೆ ಇದೆ ಅಂತಿದ್ದಾರೆ ಅಕ್ಕಿ ವ್ಯಾಪಾರಿಗಳು.
ರಾಜ್ಯದಲ್ಲಿ ಅತಿ ಹೆಚ್ಚು ಭತ್ತ ಬೆಳೆಯುವುದು, ರಾಜ್ಯದ ಭತ್ತದ ಕಣಜ ಅಂತ ಖ್ಯಾತಿ ಪಡೆದಿರೋ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ. ಅಲ್ಲದೆ ಕಾರಟಗಿ, ರಾಯಚೂರು, ಬಳ್ಳಾರಿ, ವಿಜಯನಗರ ಜಿಲ್ಲೆಯ ಅನೇಕ ಬಾಗಗಳಲ್ಲಿ ಹೆಚ್ಚಿನ ಭತ್ತವನ್ನು ಬೆಳೆಯುತ್ತಾರೆ. ಸಾಮಾನ್ಯವಾಗಿ ಪ್ರತಿ ವರ್ಷ ಭತ್ತದ ಬೆಳೆಗಾರರು ಎರಡು ಭತ್ತದ ಬೆಳೆಗಳನ್ನು ಬೆಳೆಯುತ್ತಿದ್ದರು. ಆದ್ರೆ ಈ ಬಾರಿ ಮಳೆಯಾಗದೇ ಇರೋದರಿಂದ ಜಲಾಯಶಗಳು ಖಾಲಿಯಾಗಿವೆ. ತುಂಗಭದ್ರಾ ಜಲಾಶಯದಿಂದ ಕಾಲುವೆಗೆ ನೀರು ನಿಲ್ಲಿಸಲಾಗಿದೆ. ಇದರಿಂದ ಎರಡನೆ ಭತ್ತದ ಬೆಳೆಯನ್ನು ಬೆಳೆಯಲು ಸಾಧ್ಯವಿಲ್ಲದಂತಾಗಿದೆ. ಎರಡು ಭತ್ತದ ಬೆಳೆ ಬಂದ್ರೆ ಅಕ್ಕಿ ಬೆಲೆ ಸ್ಥಿರವಾಗಿರುತ್ತಿತ್ತು. ಆದ್ರೆ ಈ ಬಾರಿ ಎರಡನೇ ಬೆಳೆ ಬಾರದೇ ಇರೋದರಿಂದ ಮುಂದಿನ ನವಂಬರ್ ವರಗೆ ಭತ್ತಕ್ಕಾಗಿ ಕಾಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಅಕ್ಕಿ ಬೆಲೆ ಹೆಚ್ಚಾಗೋ ಸಾಧ್ಯತೆ ಹೆಚ್ಚಾಗಿದೆ.
ಇದನ್ನೂ ಓದಿ: ಕೊಪ್ಪಳ: ಗೂಡು ಕಟ್ಟದ ರೇಷ್ಮೆ ಹುಳುಗಳು; ಆತಂಕದಲ್ಲಿ ರೇಷ್ಮೆ ಬೆಳೆಗಾರರು
ಈ ಬಾರಿ ರಾಜ್ಯದಲ್ಲಿ ಮಳೆ ಕೈಕೊಟ್ಟಿದ್ದರಿಂದ ಭತ್ತದ ಇಳುವರಿ, ಮತ್ತು ಭತ್ತದ ಎರಡನೇ ಬೆಳೆ ಬಾರದಂತಾಗಿದೆ. ಹೀಗಾಗಿ ಕೇಂದ್ರ ಸರ್ಕಾರವೇ ಅಕ್ಕಿ ಬೆಲೆ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕಿದೆ. ಇಲ್ಲದಿದ್ದರೆ ಈಗಾಗಲೇ ಬೆಲೆ ಏರಿಕೆಯಿಂದ ಶಾಕ್ ಆಗಿರುವ ಗ್ರಾಹಕರ ಜೇಬಿಗೆ ಮತ್ತಷ್ಟು ಕತ್ತರಿ ಬೀಳೋದು ಗ್ಯಾರಂಟಿ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ