AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕಾರ್ಖಾನೆಗಳ ಹೊಗೆಗೆ ರೋಸಿ ಹೋದ ಅನ್ನದಾತ: ಹೋರಾಟಕ್ಕೆ ಗವಿಸಿದ್ದೇಶ್ವರ ಸ್ವಾಮೀಜಿಯನ್ನ ಕರೀತಿವಿ ಎಂದ ರೈತರು

ಕೊಪ್ಪಳದ ಹಿರೇಬಗನಾಳ ಗ್ರಾಮದ ರೈತರು ಕಾರ್ಖಾನೆಗಳ ಹೊಗೆಯಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆಗಳು ಕಪ್ಪಾಗಿ, ಜಾನುವಾರುಗಳಿಗೆ ತಿನ್ನಲು ಯೋಗ್ಯವಲ್ಲದ ಸ್ಥಿತಿಗೆ ತಲುಪಿವೆ. ಅಧಿಕಾರಿಗಳ ಭರವಸೆಗಳ ಹೊರತಾಗಿಯೂ ಮಾಲಿನ್ಯ ಮುಂದುವರಿದಿದ್ದು, 80 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರು ನ್ಯಾಯಕ್ಕಾಗಿ ಗವಿಸಿದ್ದಪ್ಪನ ಮೊರೆ ಹೋಗಲು ಸಿದ್ಧರಾಗಿದ್ದಾರೆ.

ಕಾರ್ಖಾನೆಗಳ ಹೊಗೆಗೆ ರೋಸಿ ಹೋದ ಅನ್ನದಾತ: ಹೋರಾಟಕ್ಕೆ ಗವಿಸಿದ್ದೇಶ್ವರ ಸ್ವಾಮೀಜಿಯನ್ನ ಕರೀತಿವಿ ಎಂದ ರೈತರು
ಕಾರ್ಖಾನೆ, ಕಪ್ಪು ಧೂಳು
ಶಿವಕುಮಾರ್ ಪತ್ತಾರ್
| Edited By: |

Updated on:Jan 20, 2026 | 8:51 PM

Share

ಕೊಪ್ಪಳ, ಜನವರಿ 20: ಕೊಪ್ಪಳ (Koppal) ಜಿಲ್ಲೆ ಕಾರ್ಖಾನೆಗಳ (Factory) ಊರು. ಈ ಜಿಲ್ಲೆಯಲ್ಲಿ ಕಾರ್ಖಾನೆ ವಿರೋಧಿಸಿ ಕಳೆದ 80 ದಿನಗಳಿಂದ ಹೋರಾಟ ನಡೆಯುತ್ತಿದೆ. ಮತ್ತೊಂದು ಕಡೆ ಕಾರ್ಖಾನೆಗಳ ಹೊಗೆಯಿಂದ ಆ ಗ್ರಾಮದ ಜನ ರೋಸಿ ಹೋಗಿದ್ದಾರೆ. ನಿನ್ನೆ ಆ ಗ್ರಾಮದ ಜನ ಕಾರ್ಖಾನೆ ಅಧಿಕಾರಿಗಳನ್ನ ಗ್ರಾಮಕ್ಕೆ ಕರೆಸಿ ತರಾಟೆಗೆ ತಗೆದುಕೊಂಡಿದ್ದರು. ಕಾರ್ಖಾನೆಗಳು ಹೊರಸೂಸುವ ಹೊಗೆಯಿಂದ ಏನೆಲ್ಲಾ ಸಮಸ್ಯೆ ಆಗತ್ತೆ ಅನ್ನೊದನ್ನ ಬಿಚ್ಚಿಟ್ಟಿದ್ದರು. ಸಭೆಯಲ್ಲಿ ಅಧಿಕಾರಿಗಳು ಇನ್ಮುಂದೆ ಹೊಗೆ ಬಿಡಲ್ಲ ಎಂದು ಬರೆದುಕೊಟ್ಟಿದ್ದರು. ಆದರೂ ಆ ಗ್ರಾಮದಲ್ಲಿ ಹೊಗೆ ಮಾತ್ರ ಕಡಿಮೆ ಆಗಿಲ್ಲ. ಕಾರ್ಖಾನೆಗಳು ಬಿಡುವ ಹೊಗೆಯಿಂದ ರೈತರು ತತ್ತರಿಸಿ ಹೋಗಿದ್ದಾರೆ. ಜಮೀನುಗಳಲ್ಲಿ ಬೆಳೆದ ಬೆಳೆಗಳು ಕಪ್ಪು ಬಣ್ಣಕ್ಕೆ ತಿರುಗಿವೆ. ಇದರಿಂದ ರೋಸಿಹೋದ ರೈತರು ಇದೀಗ ಗವಿ ಸಿದ್ದಪ್ಪನ ಮೊರೆ ಹೋಗಲು ಸಿದ್ಧರಾಗಿದ್ದಾರೆ.

ರೈತರಿಗೆ ಸಂಕಷ್ಟ ತಂದಿಟ್ಟ ಕಾರ್ಖಾನೆಗಳ ಹೊಗೆ

ಕೊಪ್ಪಳ ತಾಲೂಕಿನ ಹಿರೇಬಗನಾಳ ಗ್ರಾಮ ಕಾರ್ಖಾನೆಗಳಿಂದ ನಲುಗಿ ಹೋಗಿದೆ. ಹೀರೆಬಗನಾಳ ಗ್ರಾಮದ ಗ್ರಾಮ ಪಂಚಾಯತ್​ ವ್ಯಾಪ್ತಿಯಲ್ಲಿ ಹತ್ತಕ್ಕೂ ಹೆಚ್ಚು ಕಾರ್ಖಾನೆಗಳಿವೆ. ಕಾರ್ಖಾನೆಗಳು ಬಿಡುವ ಹೊಗೆಯಿಂದ ಇದೀಗ ರೈತರಿಗೆ ಸಂಕಷ್ಟಕ್ಕೆ ತಂದಿಟ್ಟಿದೆ. ಹೊಗೆಯಿಂದ ಜಮೀನಿನಲ್ಲಿ ಬೆಳೆದ ಮೆಕ್ಕೆಜೋಳ, ಈರುಳ್ಳಿ ಬೆಳೆಗಳು ಕಪ್ಪು ಬಣ್ಣಕ್ಕೆ ತಿರುಗಿವೆ. ಬೆಳೆಗಳ ಮೇಲೆ ಕಪ್ಪು ಬೂದಿ ಬಂದು ಕೂತಿದೆ. ಇದರಿಂದ ಜಾನುವಾಗಳು ಸಹ ಬೆಳೆ ತಿನ್ನುವ ಪರಿಸ್ಥಿತಿಯಲ್ಲಿ ಇಲ್ಲದಂತಾಗಿದೆ.

ಇದನ್ನೂ ಓದಿ: ಮತ್ತೆ‌ ಮುನ್ನಲೆಗೆ ಬಂದ ಬಲ್ಡೋಟಾ ಕಾರ್ಖಾನೆ ವಿವಾದ: ಹೋರಾಟಕ್ಕಿಳಿದ ರೈತರು

ಗ್ರಾಮದ ಬಹುತೇಕ ಜಮೀನುಗಳು ಕಪ್ಪು ಬೂದಿಯಿಂದ ನಲುಗಿವೆ. ಹಿರೇಬಗನಾಳ ಗ್ರಾಮದ ಗವಿಸಿದ್ದಪ್ಪ ಪಲ್ಲೇದ್ ಅನ್ನೋ ರೈತ ಜಾನುವಾರುಗಳಿಗಾಗಿ ಮೆಕ್ಕೆಜೋಳ ಬೆಳದಿದ್ದರು. ಆದರೆ ಇದೀಗ ಮೆಕ್ಕೆಜೋಳ ಸಂಪೂರ್ಣ ಕಪ್ಪಾಗಿದೆ. ಮೆಕ್ಕೆಜೋಳ ಎಲೆಯ ಮೇಲೆಲ್ಲಾ ಕಪ್ಪು ಧೂಳು ಬಂದು ಕೂತಿದೆ. ನಿನ್ನೆ ಹಿರೇಬಗನಾಳ ಗ್ರಾಮಸ್ಥರು ಕಾರ್ಖಾನೆಗಳ ಸಿಬ್ಬಂದಿಯನ್ನ ಕರೆದು ತರಾಟೆಗೆ ತೆಗೆದುಕೊಂಡರು. ನಾಳೆಯಿಂದಲೆ ಹೊಗೆ ಬಂದ್ ಮಾಡುವಂತೆ ಸಹಿ ಮಾಡಿಸಿಕೊಂಡಿದ್ದರು. ಅಧಿಕಾರಿಗಳ ಸಹಿ ಮಾಡಿದ ಬಳಿಕ ಇಂದು ಟಿವಿ9 ರಿಯಾಲಿಟಿ ಚೆಕ್ ಮಾಡಿದ್ದು, ಕಾರ್ಖಾನೆಗಳ ಹೊಗೆಯಿಂದಾದ ಸಮಸ್ಯೆಯನ್ನ ತೆರೆದಿಟ್ಟಿದೆ.

ಗವಿ ಸಿದ್ದೇಶ್ವರ ಸ್ವಾಮೀಜಿಗಳ ಮೊರೆ

ನಿನ್ನೆ ಹಿರೇಬಗನಾಳ ಗ್ರಾಮದ ಜನ ಗ್ರಾಮದ ಸುತ್ತಮುತ್ತ ಇರುವ ವನ್ಯ ಸ್ಟೀಲ್, ಐಎಲ್​ಸಿ, ಪಿಬಿಎಸ್, ಠಾಕೂರ್ ಸೇರಿ ಹತ್ತಕ್ಕೂ ಹೆಚ್ಚು ಕಾರ್ಖಾನೆಗಳಿವೆ. ಈ ಕಾರ್ಖಾನೆಗಳಿಂದ ಕಳೆದ ಹಲವು ವರ್ಷಗಳಿಂದ ಗ್ರಾಮದ ಜನ ನರಕ ಅನುಭವಿಸುತ್ತಿದ್ದಾರೆ. ನಿನ್ನೆ ಕಾರ್ಖಾನೆ ಅಧಿಕಾರಿಗಳನ್ನ ಕರೆದು ತರಾಟೆಗೆ ತಗೆದುಕೊಂಡಿದ್ರು, ಅದಾದ ಬಳಿಕವೂ ಕಾರ್ಖಾನೆ ಅಧಿಕಾರಿಗಳು ಹೊಗೆ ಬಿಡೋದನ್ನ ನಿಲ್ಲಿಸಿಲ್ಲ. ಇಂದಿಗೂ ಹಿರೇಬಗನಾಳ ಗ್ರಾಮಸ್ಥರು ಕಾರ್ಖಾನೆಗಳ ಹೊಗೆಯಿಂದ ನರಳುತ್ತಿದ್ದಾರೆ. ಗ್ರಾಮದ ಜಮೀನನಲ್ಲಿ ಬೆಳೆದ ಬೆಳೆಗಳು ಇದೀಗ ಕಪ್ಪು ಬಣ್ಣಕ್ಕೆ ತಿರುಗುತ್ತಿವೆ. ಇದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಕಾರ್ಖಾನೆಗಳು ಹೊಗೆ ಕಡಿಮೆ ಮಾಡದೆ ಹೋದರೆ ನಾವು ಬದಕಲ್ಲ, ಹೋರಾಟಕ್ಕೆ ಗವಿ ಸಿದ್ದೇಶ್ವರ ಸ್ವಾಮೀಜಿಗಳನ್ನ ಕರೆಯುತ್ತೇವೆ ಅನ್ನೋದು ರೈತರ ಮಾತು.

ಇದನ್ನೂ ಓದಿ: ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ವಿರೋಧಕ್ಕೆ ಸೆಡ್ಡು: ಬಲ್ಡೋಟಾ ಕಂಪನಿಗಾಗಿ ಪ್ರತಿಭಟನೆ

ಒಟ್ಟಾರೆ ಹಿರೇಬಗನಾಳ ಗ್ರಾಮದ ಜನ, ಕಾರ್ಖಾನೆಗಳಿಂದ ನರಕಕ್ಕೆ ಸಿಲುಕಿದ್ದಾರೆ. ಬೆಳೆದ ಬೆಳೆಗಳನ್ನ ಜಾನುವಾರುಗಳು ಕೂಡ ತಿನ್ನಲಾಗದಂತಹ ಸ್ಥಿತಿನಿರ್ಮಾಣವಾಗಿದೆ. ನಿನ್ನೆ ಕಾಟಾಚಾರಕ್ಕೆ ಕಾರ್ಖಾನೆ ಅಧಿಕಾರಿಗಳು ಬಂದು ಹೋಗಿದ್ದು ಬಿಟ್ಟರೆ ಯಾವ ಬದಲಾವಣೆ ಆಗಿಲ್ಲ. ಎಂದಿನಂತೆ ಕಾರ್ಖಾನೆಗಳು ಹೊಗೆಯನ್ನ ಉಗುಳುತ್ತಿವೆ. ಸರ್ಕಾರ ಕೂಡಲೇ ಇದನ್ನು ಗಂಭೀರವಾಗಿ ಪರಿಗಣಿಸಬೇಕು, ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ದೊಡ್ಡ ಹೋರಾಟ ಆಗೋದು ಖಚಿತ ಎನ್ನಲಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 8:50 pm, Tue, 20 January 26