AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಟೀಲ್ ಪ್ಲಾಂಟ್ ಆರಂಭಕ್ಕೆ ಸ್ಥಳೀಯರ ವಿರೋಧ: ಫೆ 24ಕ್ಕೆ ಕೊಪ್ಪಳ ಬಂದ್​ಗೆ ಕರೆ

ಕೊಪ್ಪಳದಲ್ಲಿ ಬೃಹತ್ ಉಕ್ಕು ಘಟಕ ಸ್ಥಾಪನೆಯಿಂದ ಪರಿಸರ ಮಾಲಿನ್ಯದ ಆತಂಕ ಹೆಚ್ಚಾಗಿದೆ. ಈಗಾಗಲೇ ಅನೇಕ ಕಾರ್ಖಾನೆಗಳಿಂದಾಗಿ ವಾಯು ಮಾಲಿನ್ಯ ತೀವ್ರವಾಗಿದ್ದು, ಹೊಸ ಘಟಕದಿಂದ ಇನ್ನಷ್ಟು ತೊಂದರೆ ಎದುರಾಗುವ ಆತಂಕದಲ್ಲಿದ್ದಾರೆ ಜನರು. ಹೀಗಾಗಿ ಫೆಬ್ರವರಿ 24 ರಂದು ಕೊಪ್ಪಳ ಬಂದ್‌ಗೆ ಕರೆ ನೀಡಲಾಗಿದೆ.

ಸ್ಟೀಲ್ ಪ್ಲಾಂಟ್ ಆರಂಭಕ್ಕೆ ಸ್ಥಳೀಯರ ವಿರೋಧ: ಫೆ 24ಕ್ಕೆ ಕೊಪ್ಪಳ ಬಂದ್​ಗೆ ಕರೆ
ಸ್ಟೀಲ್ ಪ್ಲಾಂಟ್ ಆರಂಭಕ್ಕೆ ಸ್ಥಳೀಯರ ವಿರೋಧ: ಫೆ 24ಕ್ಕೆ ಕೊಪ್ಪಳ ಬಂದ್​ಗೆ ಕರೆ
ಸಂಜಯ್ಯಾ ಚಿಕ್ಕಮಠ
| Updated By: ಗಂಗಾಧರ​ ಬ. ಸಾಬೋಜಿ|

Updated on: Feb 15, 2025 | 6:31 PM

Share

ಕೊಪ್ಪಳ, ಫೆಬ್ರವರಿ 15: ತಮ್ಮೂರ ಬಳಿ ದೊಡ್ಡ ಫ್ಯಾಕ್ಟರಿ (Factory) ಬಂದರೆ ಜನರು ಸಂತಸ ಪಡುತ್ತಾರೆ. ಆದರೆ ಜಿಲ್ಲೆಯ ಜನರು ಫ್ಯಾಕ್ಟರಿ ಬಂದರೆ ಸಂಕಟ ಪಡುವ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಜಿಲ್ಲೆಯಲ್ಲಿ ಇನ್ನೂರಕ್ಕೂ ಹೆಚ್ಚು ಫ್ಯಾಕ್ಟರಿಗಳು ಕಾರ್ಯನಿರ್ವಹಿಸುತ್ತಿದ್ದು, ಅವುಗಳಿಂದ ಬರುವ ದೂಳು ಮತ್ತು ಹೊಗೆಯಿಂದ ಜನರ ಬದುಕು ದುಸ್ಥರವಾಗಿದೆ. ಇದೀಗ ರಾಜ್ಯದ ಎರಡನೇ ದೊಡ್ಡ ಸ್ಟೀಲ್ ಪ್ಲಾಂಟ್ ಕೊಪ್ಪಳ ನಗರಕ್ಕೆ ಹೊಂದಿಕೊಂಡಂತೆ ಆರಂಭವಾಗ್ತಿರೋದು ಜನರ ಆಕ್ರೋಶಕ್ಕೆ ಕಾರಣವಾಗಿದೆ. ತಮ್ಮೂರ ಬಳಿ ಫ್ಯಾಕ್ಟರಿ ಬೇಡ ಅಂತ ಜನ ಹೋರಾಟಕ್ಕೆ ಮುಂದಾಗಿದ್ದು, ಕೊಪ್ಪಳ ಬಂದ್​ಗೆ ಕೂಡ ಕರೆ ನೀಡಿದ್ದಾರೆ.

ಕೊಪ್ಪಳದಲ್ಲಿ ಬೃಹತ್ ಸ್ಟೀಲ್ ಘಟಕ ಆರಂಭಕ್ಕೆ ತಯಾರಿ

ಕೊಪ್ಪಳ ನಗರದಿಂದ ಕೂಗಳತೆ ದೂರದಲ್ಲಿ, ಅಂದರೆ ಕೊಪ್ಪಳ ತಾಲೂಕಿನ ಹಾಲವರ್ತಿ ಗ್ರಾಮದ ಬಳಿ ರಾಜ್ಯದಲ್ಲಿಯೇ ಎರಡನೇ ಅತಿ ದೊಡ್ಡ ಸ್ಟೀಲ್ ಪ್ಲಾಂಟ್ ಆರಂಭಕ್ಕೆ ಬಲ್ಡೋಟಾ ಸಂಸ್ಥೆ ಮುಂದಾಗಿದೆ. ಈಗಾಗಲೇ ಇಲ್ಲಿ ಇದೇ ಸಂಸ್ಥೆಯ ಎಂಎಸ್​ಪಿಎಲ್ ಸ್ಟೀಲ್ ಘಟಕವಿದ್ದು, ಇದೀಗ ಅದನ್ನು ದೊಡ್ಡ ಪ್ರಮಾಣದಲ್ಲಿ ವಿಸ್ತರಣೆಗೆ ಮುಂದಾಗಿದೆ. ಸರಿಸುಮಾರು 54 ಸಾವಿರ ಕೋಟಿ ರೂ. ಬಂಡವಾಳವನ್ನು ಹೂಡುತ್ತಿದ್ದು, ಇಲ್ಲಿ ವಾರ್ಷಿಕ 10.50 ಮಿಲಿಯನ್ ಟನ್ ಉತ್ಪಾದನೆ ಸಾಮಾರ್ಥ್ಯದ ಘಟಕದ ನಿರ್ಮಾಣಕ್ಕೆ ಮುಂದಾಗಿದೆ.

ಇದನ್ನೂ ಓದಿ: ಕೊಪ್ಪಳದಲ್ಲಿ ಅನಧಿಕೃತ ರೆಸಾರ್ಟ್​ಗಳ ಹಾವಳಿ: ಸರ್ಕಾರಕ್ಕೆ ಕೋಟ್ಯಂತರ ರೂ ವಂಚನೆ

ಈಗಾಗಲೇ ಅನೇಕ ವರ್ಷಗಳ ಹಿಂದೆಯೇ 980 ಎಕರೆ ಭೂಮಿಯನ್ನು ಕಂಪನಿ ರೈತರಿಂದ ಪಡೆದಿದ್ದು, ಇದೀಗ ಘಟಕ ಆರಂಭದ ಕೆಲಸ ಆರಂಭಿಸಿದೆ. ಇನ್ನೊಂದೆಡೆ ಬೆಂಗಳೂರಿನಲ್ಲಿ ಮೊನ್ನೆ ನಡೆದ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಕೂಡ ಸರ್ಕಾರ ಮತ್ತು ಕಂಪನಿ ಒಡಬಂಡಿಕೆಗೆ ಸಹಿಹಾಕಿವೆ. ಈ ಘಟಕದಿಂದ ಹದಿನೈದು ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ ಅಂತ ಕಂಪನಿ ಹೇಳಿದೆ. ಕೊಪ್ಪಳ ನಗರದ ಬಳಿಯೇ ದೊಡ್ಡ ಸ್ಟೀಲ್ ಘಟಕ ಆರಂಭವಾಗ್ತಿರೋದು ಜಿಲ್ಲೆಯ ಜನರ ಸಂತಸ ಹೆಚ್ಚಾಗಿಸಿಲ್ಲಾ, ಬದಲಾಗಿ ಸಂಕಟಕ್ಕೆ ಕಾರಣವಾಗುತ್ತಿದೆ.

ಯಾವುದೇ ಫ್ಯಾಕ್ಟರಿ ಬೇಡ

ಜಿಲ್ಲೆಯಲ್ಲಿ ಸರಿಸುಮಾರು 200 ಕ್ಕೂ ಹೆಚ್ಚು ಫ್ಯಾಕ್ಟರಿಗಳಿವೆ. ತುಂಗಭದ್ರಾ ಜಲಾಶಯ ಮತ್ತು ಸಂಡೂರು ಗಣಿ ಪ್ರದೇಶ ಸಮೀಪವಿರೋದರಿಂದ ಹೆಚ್ಚಿನ ಸ್ಟೀಲ್ ಮತ್ತು ಸಿಮೆಂಟ್ ಫ್ಯಾಕ್ಟರಿಗಳು ಆರಂಭವಾಗಿವೆ. ಅವು ಬಿಡ್ತಿರೋ ದೂಳಿನಿಂದ ಈಗಾಗಲೇ ಸುತ್ತಮುತ್ತಲಿನ ಜನರು ಬದುಕು ದುಸ್ಥರವಾಗಿದೆ. ರಾತೋರಾತ್ರಿ ಕಂಪನಿಗಳು ಹೊರಬಿಡೋ ದೂಳು ಮತ್ತು ಹೊಗೆಯಿಂದ ಜನರಿಗೆ ಶುದ್ದ ಗಾಳಿ ಸಿಗದಂತಾಗಿದ್ದು, ಆರೋಗ್ಯದ ಮೇಲೆ ಕೂಡ ದುಷ್ಪರಿಣಾಮ ಬೀರುತ್ತಿದೆ. ಇದೀಗ ಬಲ್ಡೋಟಾ ಕಂಪನಿ ಬೃಹತ್ ಸ್ಟೀಲ್ ಪ್ಲಾಂಟ್ ಆರಂಭಕ್ಕೆ ಮುಂದಾಗಿರೋದು ಜನರ ಆಕ್ರೋಶಕ್ಕೆ ಕಾರಣವಾಗಿದೆ.

ಫೆಬ್ರವರಿ 24ಕ್ಕೆ ಕೊಪ್ಪಳ ಬಂದ್

ರಾಜ್ಯ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಫ್ಯಾಕ್ಟರಿ ಆರಂಭಕ್ಕೆ ಸರ್ಕಾರ ಒಡಬಂಡಿಕೆಗೆ ಅಸ್ತು ಅಂದಿರೋದು ಕೊಪ್ಪಳ ಜನರ ಆಕ್ರೋಶಕ್ಕೆ ಕಾರಣವಾಗಿದೆ. ಕೊಪ್ಪಳ ನಗರಕ್ಕೆ ಹೊಂದಿಕೊಂಡ ಸ್ಥಳದಲ್ಲಿ ಘಟಕ ಆರಂಭವಾಗೋದರಿಂದ ಕೊಪ್ಪಳ ಮತ್ತೊಂದು ತೋರಣಗಲ್ ಆಗುತ್ತದೆ. ಜನರ ಆರೋಗ್ಯ ಹದೆಗೆಡುತ್ತದೆ. ಹೀಗಾಗಿ ಯಾವುದೇ ಕಾರಣಕ್ಕೂ ಕೂಡ ಫ್ಯಾಕ್ಟರಿ ಆರಂಭ ಮಾಡಬಾರದು. ಈಗಾಗಲೇ ಕೊಪ್ಪಳ ಸುತ್ತಮುತ್ತ ಸಾಕಷ್ಟು ಫ್ಯಾಕ್ಟರಿಗಳಿದ್ದು, ಅವುಗಳಿಂದಲೇ ಜನರಿಗೆ ತೊಂದರೆಯಾಗುತ್ತಿದ್ದು, ಇದೀಗ ಬೃಹತ್ ಘಟಕದ ನಿರ್ಮಾಣದಿಂದ ಮತ್ತಷ್ಟು ತೊಂದರೆಯಾಗುತ್ತದೆ ಅಂತಿದ್ದಾರೆ ಜನರು. ಹೀಗಾಗಿ ಕೊಪ್ಪಳ ನಗರದಲ್ಲಿ ಸಭೆ ಸಭೆ ನಡೆಸುತ್ತಿರುವ ಜನರು, ಬಲ್ಡೋಟಾ ಕಂಪನಿಯ ಸ್ಟೀಲ್ ಘಟಕ ಆರಂಭವಾಗೋದನ್ನು ತಡೆಯಲು ಮುಂದಾಗಿದ್ದಾರೆ. ಅದಕ್ಕಾಗಿ ಫೆಬ್ರವರಿ 24 ಕ್ಕೆ ಕೊಪ್ಪಳ ಬಂದ್ ಕರೆ ನೀಡಲಾಗಿದೆ.

ಇದನ್ನೂ ಓದಿ: ಕೊಪ್ಪಳ ಜಿಲ್ಲೆಯ ರೈತರಿಗೆ ಮುಳುವಾಯ್ತು ಕಾರ್ಖಾನೆ ಧೂಳು

ಈಗಾಗಲೇ ಕೊಪ್ಪಳ ಸುತ್ತಮುತ್ತ ವಿಪರೀತ ವಾಯುಮಾಲಿನ್ಯದಿಂದ ಜನರು ತೊಂದರೆಗೆ ಸಿಲುಕ್ಕಿದ್ದಾರೆ. ಹೀಗಾಗಿ ಸರ್ಕಾರ ಜನರ ಆರೋಗ್ಯವನ್ನು ಬಲಿ ಕೊಟ್ಟು ಫ್ಯಾಕ್ಟರಿ ಆರಂಭ ಮಾಡೋ ಪ್ರಯತ್ನಕ್ಕೆ ಮುಂದಾಗಬಾರದು ಅಂತ ಜನರು ಆಗ್ರಹಿಸುತ್ತಿದ್ದಾರೆ. ಫ್ಯಾಕ್ಟರಿ ಬೇಡ ಅನ್ನೋ ಆಂದೋಲನ ತೀರ್ವವಾಗುತ್ತಿದ್ದು, ಮುಂದೆ ಇದು ಯಾವ ಸ್ವರೂಪ ಪಡೆದುಕೊಳ್ಳಲಿದೆ ಅನ್ನೋದು ಕಾಲವೇ ಉತ್ತರಿಸಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.