
ಕೊಪ್ಪಳ, ಸೆಪ್ಟೆಂಬರ್ 08: ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಇತ್ತೀಚೆಗಷ್ಟೆ ಮುಸ್ಲಿಂ ಧರ್ಮದ ಬಗ್ಗೆ ನೀಡಿದ ಹೇಳಿಕೆ ವಿವಾದಕ್ಕೀಡಾಗಿತ್ತು. ಈಗ ಅವರು ಮತ್ತೊಂದು ಆಕ್ಷೇಪಾರ್ಹ ಹೇಳಿಕೆ ನೀಡಿರುವುದು ರಾಜಕಾರಣದಲ್ಲಿ ಮತ್ತೆ ಚರ್ಚೆಗೆ ಗ್ರಾಸವಾಗಿವೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಗುನ್ನಾಳ ಗ್ರಾಮದಲ್ಲಿ ನಡೆದ ಪದವಿಪೂರ್ವ ಕಾಲೇಜು ಉದ್ಘಾಟನಾ ಸಮಾರಂಭದಲ್ಲಿ ಅವರು ಆಡಿರುವ ಮಾತುಗಳು ಅಧಿಕಾರಿಗಳ ವಲಯದಲ್ಲಿ ಹಾಗೂ ರಾಜಕೀಯ ಅಂಗಳದಲ್ಲಿ ಹೊಸ ಸಂಚಲನ ಮೂಡಿಸಿವೆ.
ವೇದಿಕೆ ಮೇಲೆ ಮಾತನಾಡಿದ ಸಚಿವರು, ಯಾವ ಅಧಿಕಾರಿ ಮಾತು ಕೇಳುವುದಿಲ್ಲವೋ ಹೇಳಿ, ಅಂತಹ ಮಾತು ಕೇಳದ ಅಧಿಕಾರಿಗಳನ್ನು ಫೈರ್ ಮಾಡುತ್ತೇನೆ” ಎಂದು ಖಡಕ್ ಎಚ್ಚರಿಕೆ ನೀಡಿದರು. ಜೊತೆಗೆ ಯಲಬುರ್ಗಾ ತಹಶೀಲ್ದಾರ್ ಪ್ರಕಾಶ್ ನಾಶಿ ಅವರನ್ನು ವೇದಿಕೆಯಲ್ಲೇ ಹೆಸರೆತ್ತಿ ಪ್ರಸ್ತಾಪಿಸಿದ ಅವರು, “ನಾನು ಸಚಿವಸ್ಥಾನದ ಕಾರ್ಯಭಾರದಲ್ಲಿ ಸಂಪೂರ್ಣ ಬ್ಯುಸಿಯಾಗಿರುತ್ತೇನೆ. ಹೀಗಾಗಿ ನೀವೇ ನನ್ನ ಪಿಆರ್‌ಒ ಆಗಿ ಕೆಲಸ ಮಾಡಬೇಕು” ಎಂದು ಸೂಚನೆ ನೀಡಿದರು. ಅಲ್ಲದೆ, ತಮ್ಮ ಪಿಎಗೆ ಡಿಜಿಟಲ್ ಸಿಗ್ನೇಚರ್ ಬಳಸಿ ಪತ್ರಗಳನ್ನು ವಿಲೇವಾರಿ ಮಾಡುವಂತೆ ಹೇಳಿರುವುದಾಗಿಯೂ ತಿಳಿಸಿದ್ದಾರೆ..
ಉನ್ನತ ಶಿಕ್ಷಣ ಇಲಾಖೆಯ ವ್ಯಾಪ್ತಿ ದೊಡ್ಡದಾಗಿದ್ದು, ಸುಮಾರು 1.52 ಕೋಟಿ ವಿದ್ಯಾರ್ಥಿಗಳು ಹಾಗೂ 96 ವಿಶ್ವವಿದ್ಯಾಲಯಗಳು ಬರುತ್ತವೆ ಎಂದು ಇಲಾಖೆಯ ಜವಾಬ್ದಾರಿಯನ್ನು ವಿವರಿಸಿದರು. ತಮ್ಮ ಹೇಳಿಕೆಗಳ ನಡುವೆಯೇ ಆಡಳಿತದ ಸ್ಪಷ್ಟತೆ ನೀಡಿದ ರಾಯರೆಡ್ಡಿ, ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಗ್ಯಾರಂಟಿ ಯೋಜನೆಗಳು ಎಂದಿನಂತೆ ಮುಂದುವರಿಯಲಿವೆ, ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ ಎಂದು ಪುನರುಚ್ಚರಿಸಿದರು.
ಜನಪ್ರತಿನಿಧಿಯಾಗಿ ಕೆಲಸಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ನೀಡಿದ ಸೂಚನೆ ಇದಾಗಿದೆ ಎಂದು ಸಚಿವರ ಬೆಂಬಲಿಗರು ಸಮರ್ಥಿಸಿಕೊಳ್ಳುತ್ತಿದ್ದಾರೆ. ಆದರೆ, ಇತ್ತೀಚೆಗಷ್ಟೇ ಮುಸ್ಲಿಂ ಸಮುದಾಯ ಮತ್ತು ಧರ್ಮದ ಕುರಿತು ಸಚಿವರು ನೀಡಿದ್ದ ಹೇಳಿಕೆ ತೀವ್ರ ಆಕ್ಷೇಪ ವ್ಯಕ್ತವಾಗಿ ವಿವಾದ ಸೃಷ್ಟಿಸಿತ್ತು. ಆ ವಿವಾದ ತಣಿಯುವ ಮುನ್ನವೇ ಈಗ ವೇದಿಕೆಯಲ್ಲಿಯೇ ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿರುವುದು ರಾಜಕೀಯ ವಲಯದಲ್ಲಿ ಚರ್ಚೆ ಹುಟ್ಟುಹಾಕಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 1:29 pm, Tue, 8 September 26