ಮೊರಾರ್ಜಿ ದೇಸಾಯಿ ವಸತಿ ಶಾಲೆಯ SSLC ವಿದ್ಯಾರ್ಥಿಗಳಿಂದ ರ‍್ಯಾಗಿಂಗ್; ಜ್ಯೂನಿಯರ್ಸ್ ಗುದದ್ವಾರದಲ್ಲಿ ಪೆನ್ಸಿಲ್ ಇಟ್ಟು ವಿಕೃತಿ
ಜಿಲ್ಲೆಯ ಗಂಗಾವತಿ ತಾಲೂಕಿನ ಹೇಮಗುಡ್ಡದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯ SSLC ವಿದ್ಯಾರ್ಥಿಗಳ ವಿರುದ್ಧ ರ‍್ಯಾಗಿಂಗ್ ಆರೋಪ ಕೇಳಿ ಬಂದಿದೆ. SSLC ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಂದ ಬಟ್ಟೆ ಒಗೆಸೋದು, ಕೋಣೆ ಸ್ವಚ್ಛಗೊಳಿಸೋದು, ಬಸ್ಕಿ ಹೊಡೆಸೋದು, ಪ್ರಾಜೆಕ್ಟ್ ಕೆಲಸ ಮಾಡಿಸುವ ಮೂಲಕ ರ‍್ಯಾಗಿಂಗ್ ಮಾಡುತ್ತಿದ್ದಾರೆ ಎಂದು 6,7,8,9ನೇ ತರಗತಿ ವಿದ್ಯಾರ್ಥಿಗಳು ಆರೋಪ ಮಾಡಿದ್ದಾರೆ.
ಕೊಪ್ಪಳ, ಫೆ.06: ದೊಡ್ಡ ದೊಡ್ಡ ಕಾಲೇಜುಗಳಲ್ಲಿ, ಇಂಜಿನಿಯರಿಂಗ್, ಮೆಡಿಕಲ್ ಕಾಲೇಜಿನಲ್ಲಿ ಸೀನಿಯರ್ಸ್ ಜ್ಯೂನಿಯರ್ ವಿದ್ಯಾರ್ಥಿಗಳಿಗೆ( RAGGING) ರ‍್ಯಾಗಿಂಗ್ ಮಾಡೋದು, ತೊಂದರೆ ಕೊಡುವ ಸುದ್ದಿಗಳನ್ನು ಕೇಳುತ್ತಲೇ ಇರುತ್ತೇವೆ. ಆದರೆ ಅವರೆಲ್ಲಾ SSLC ವಿದ್ಯಾರ್ಥಿಗಳು (SSLC Students). ತಮ್ಮ ಕೆಳಗಿನ ತರಗತಿಯ ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್ ಮಾಡಿದ್ದಾರೆ. ಗುದದ್ವಾರದಲ್ಲಿ ಪೆನ್ಸಿಲ್ ಇಟ್ಟು ವಿಕೃತಿ ಮೆರದಿದ್ದಾರೆ. ಬಟ್ಟೆ ಒಗೆಸೋದು ಸೇರಿದಂತೆ ಅನೇಕ ಕೆಲಸಗಳನ್ನು ಮಾಡಿಸಿದ್ದು, ಯಾರಿಗಾದ್ರು ಹೇಳಿದ್ರೆ ಸುಮ್ಮನೇ ಬಿಡಲ್ಲಾ ಅಂತ ಬೆದರಿಕೆ ಹಾಕಿದ್ದಾರೆ. ಎಸ್ಎಸ್ಎಲ್ಸಿ ವಿದ್ಯಾರ್ಥಿಗಳ ಕಿರುಕುಳಕ್ಕೆ ಜ್ಯೂನಿಯರ್ ವಿದ್ಯಾರ್ಥಿಗಳು ಕಂಗಾಲಾಗಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೇಮಗುಡ್ಡದಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಎಸ್ಎಸ್ಎಲ್ಸಿ ಮಕ್ಕಳಿಂದ, ಜ್ಯೂನಿಯರ್ ವಿದ್ಯಾರ್ಥಿಗಳಿಗೆ ರ‍್ಯಾಗಿಂಗ್ ಮಾಡಿರುವ ಆರೋಪ ಕೇಳಿ ಬಂದಿದೆ. ಸಮಾಜ ಕಲ್ಯಾಣ ಇಲಾಖೆಯ ಅಡಿಯಲ್ಲಿರುವ ಹೇಮಗುಡ್ಡ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಬರೋಬ್ಬರಿ 246 ಮಕ್ಕಳಿದ್ದಾರೆ. ಆರರಿಂದ ಹತ್ತನೇ ತರಗತಿವರಗೆ ವಿದ್ಯಾರ್ಥಿಗಳು ವಸತಿ ಶಾಲೆಯಲ್ಲಿ ಓದುತ್ತಿದ್ದಾರೆ. ಆದರೆ ಇಲ್ಲಿನ ಎಸ್ಎಸ್ಎಲ್ಸಿಯಲ್ಲಿ ಓದುತ್ತಿರುವ ಐದಾರು ವಿದ್ಯಾರ್ಥಿಗಳು, ಶಾಲೆಯ 6,7,8, 9 ನೇ ತರಗತಿಯಲ್ಲಿ ಓದುತ್ತಿರುವ ಇಪ್ಪತ್ತಕ್ಕೂ ಹೆಚ್ಚು ಮಕ್ಕಳಿಗೆ ರ‍್ಯಾಗಿಂಗ್ ಮಾಡಿದ್ದಾರೆ.
ಗುದದ್ವಾರದಲ್ಲಿ ಪೆನ್ಸಿಲ್ ಇಟ್ಟು ವಿಕೃತಿ
ಪ್ರತಿನಿತ್ಯ ಹಾಸ್ಟೆಲ್ ನಲ್ಲಿ ಜ್ಯೂನಿಯರ್ ವಿದ್ಯಾರ್ಥಿಗಳಿಂದಲೇ ಕೋಣೆ ಸ್ವಚ್ಚಗೊಳಿಸಿಕೊಳ್ಳುವುದು, ತಮ್ಮ ಬಟ್ಟೆಯನ್ನು ಒಗೆಸಿಕೊಂಡಿದ್ದಾರೆ. ಜೊತೆಗೆ ತಾವು ಮಾಡಬೇಕಾದ ಶಾಲೆಯ ಪ್ರಾಜೆಕ್ಟ್ ಗಳನ್ನು ಕೂಡಾ ಜ್ಯೂನಿಯರ್ ವಿದ್ಯಾರ್ಥಿಗಳಿಂದಲೇ ಮಾಡಿಸಿದ್ದಾರೆ. ರಾತ್ರಿ ಸಮಯದಲ್ಲಿ ಹಾಸ್ಟೆಲ್ ಟೆರೆಸ್ ಮೇಲೆ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗಿ ಪೊರಕೆಯಿಂದ ಹೊಡೆದಿದ್ದಾರೆ. ಇಷ್ಟೇ ಆಲ್ಲದೆ ಕೆಲ ವಿದ್ಯಾರ್ಥಿಗಳ ಗುದದ್ವಾರದಲ್ಲಿ ಪೆನ್ಸಿಲ್ ಇಟ್ಟು ವಿಕೃತಿ ಮೆರೆದಿದ್ದಾರೆ. ಕಳೆದ ಕೆಲ ತಿಂಗಳಿಂದ ನೋವನ್ನು ಸಹಿಸಿಕೊಂಡಿದ್ದ ಜ್ಯೂನಿಯರ್ ವಿದ್ಯಾರ್ಥಿಗಳು, ಕೊನೆಗೂ ನೋವನ್ನು ಸಹಿಸಿಕೊಳ್ಳಲಾಗದೇ ತಮ್ಮ ಪೋಷಕರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಧಾರವಾಡ: ಸೌಹಾರ್ದವಾಗಿದ್ದ ಹಿಂದೂ ಮುಸ್ಲಿಮರು, ಅನಗತ್ಯವಾಗಿ ಅರೆಸ್ಟ್ ಆದವರಿಗೆ ಸಿಕ್ತು ಜಾಮೀನು, ಗರಗ ಪೊಲೀಸರ ಕೈವಾಡವೇನು?
ಕೆಲ ಪೋಷಕರು ಮಾಹಿತಿ ಗೊತ್ತಾಗುತ್ತಿದ್ದಂತೆ ಶಾಲೆಗೆ ಬಂದು ತಮ್ಮ ಮಕ್ಕಳ ಮೇಲೆ ಆಗುತ್ತಿರುವ ದೌರ್ಜನ್ಯದ ಬಗ್ಗೆ ಶಾಲೆಯ ಪ್ರಾಂಶುಪಾಲ ಮತ್ತು ಶಿಕ್ಷಕರಿಗೆ ಮಾಹಿತಿ ನೀಡಿದ್ದಾರೆ. ಆಗ ಶಿಕ್ಷಕರು, ವಿದ್ಯಾರ್ಥಿಗಳನ್ನು ವಿಚಾರಿಸಿದಾಗ, ಜ್ಯೂನಿಯರ್ ವಿದ್ಯಾರ್ಥಿಗಳು, ಎಸ್ಎಸ್ಎಲ್ಸಿಯ ಕೆಲ ವಿದ್ಯಾರ್ಥಿಗಳು ಹಾಸ್ಟೆಲ್ ನಲ್ಲಿ ತಮಗೆ ನೀಡ್ತಿರುವ ದೌರ್ಜನ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ. ಶಿಕ್ಷಕರಿಗೆ ಹೇಳಿದ್ರೆ ನಿಮ್ಮನ್ನು ಸುಮ್ಮನೇ ಬಿಡೋದಿಲ್ಲಾ ಅಂತ ಬೆದರಿಕೆ ಹಾಕಿದ್ದರಿಂದ ತಮಗೆ ಯಾವುದೇ ಮಾಹಿತಿ ನೀಡಿಲ್ಲಾ ಎಂದು ನೊಂದ ವಿದ್ಯಾರ್ಥಿಗಳು ತಿಳಿಸಿದ್ದಾರೆ. ಇನ್ನು ಈ ಬಗ್ಗೆ ಕೆಲ ಪಾಲಕರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೆ ಕೂಡಾ ಮಾಹಿತಿ ನೀಡಿದ್ದರಿಂದ, ಇಂದು ಗಂಗಾವತಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಶಾಲೆಗೆ ಆಗಮಿಸಿ, ವಿದ್ಯಾರ್ಥಿಗಳಿಂದ ಮಾಹಿತಿ ಪಡೆದಿದ್ದಾರೆ. ಇನ್ನು ತಪ್ಪು ಮಾಡಿದ ವಿದ್ಯಾರ್ಥಿಗಳ ವಿರುದ್ದ ಕ್ರಮ ಕೈಗೊಳ್ಳೋದಾಗಿ ಶಾಲೆಯ ಪ್ರಾಚಾರ್ಯ ವಿನಯಕುಮಾರ್ ಹೇಳಿದ್ದಾರೆ.
ಇಷ್ಟೆಲ್ಲಾ ಆದ್ರು ಕೂಡಾ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮಾತ್ರ ತಮ್ಮ ಅಧೀನದಲ್ಲಿರುವ ಶಾಲೆಗೆ ಭೇಟಿ ನೀಡುವ ಗೋಜಿಗೆ ಹೋಗದೆ ಇರೋದು, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳ ಕುಂಭಕರ್ಣ ನಿದ್ದೆಗೆ ಸಾಕ್ಷಿಯಾಗಿದೆ. ಇನ್ನಾದ್ರು ಕೂಡಾ, ಮುಂದೆ ಈ ರೀತಿಯ ಘಟನೆಗಳು ಯಾವುದೇ ಶಾಲೆಯಲ್ಲಿ ನಡೆಯದಂತೆ ಕ್ರಮ ಕೈಗೊಳ್ಳುವದರ ಜೊತೆಗೆ, ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವ ಕೆಲಸವನ್ನು ಮಾಡಬೇಕಿದೆ.
ರಾಜ್ಯದ ಪ್ರಮುಖ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ
Published On - 1:12 pm, Tue, 6 February 24