
ಕೊಪ್ಪಳ, ಜೂನ್ 15: ಜಿಲ್ಲೆಯಲ್ಲಿ ಕುತೂಹಲಕಾರಿ ಮತ್ತು ದೈವಿಕ ಪವಾಡದಂತಹ ಘಟನೆಯೊಂದು ನಡೆದಿದೆ. ಉದ್ಯಮಿಯೊಬ್ಬರ ಜಮೀನಿನಲ್ಲಿ ಶಿವಲಿಂಗ (Shivalinga) ಪತ್ತೆಯಾಗಿದೆ. ವಿಶೇಷ ಅಂದರೆ ಈ ಶಿವಲಿಂಗಕ್ಕೂ ರಾಜ್ಯದ ನೂತನ ಸಿಎಂ ಡಿಕೆ ಶಿವಕುಮಾರ್ಗೂ (DK Shivakumar) ಒಂದು ಅಪೂರ್ವ ಸಂಬಂಧ ಬೆಸೆದುಕೊಂಡಿದೆ. ಕನಸಿನಲ್ಲಿ ಕಂಡಂತೆ ಜಮೀನಿನಲ್ಲಿ ಶಿವಲಿಂಗ ಸಿಕ್ಕಿದ್ದು, ಇದೀಗ ಇಡೀ ಜಿಲ್ಲೆಯ ಜನರ ಹಿತದೃಷ್ಟಿ ಹಿನ್ನೆಲೆ ಈ ಅಪರೂಪದ ಲಿಂಗವನ್ನು ಸಿಎಂ ಕೈಗಿಡಲು ಉದ್ಯಮಿ ಸಜ್ಜಾಗಿದ್ದಾರೆ.
ಕೊಪ್ಪಳ ತಾಲೂಕಿನ ಬಸಾಪೂರದ ಬಳಿ ಇರುವ ನಗರದ ಉದ್ಯಮಿ ವಿಪಿನ್ ಕುಮಾರ್ ಅವರಿಗೆ ಸೇರಿದ ಜಮೀನಿನಲ್ಲಿ ಈ ದೈವಿಕ ಶಿವಲಿಂಗ ಸಿಕ್ಕಿದೆ. ಈ ಲಿಂಗ ಪತ್ತೆಯಾಗುವುದಕ್ಕೂ ಮುನ್ನ ವಿಪಿನ್ ಕುಮಾರ್ ಅವರಿಗೆ ವಿಚಿತ್ರ ಕನಸೊಂದು ಬಿದ್ದಿತ್ತಂತೆ. ಆ ಕನಸಿನಲ್ಲಿ, ತಮಗೆ ಸಿಗುವ ಶಿವಲಿಂಗವನ್ನು ಪರಮ ಶಿವಭಕ್ತರಾಗಿರುವ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಹಸ್ತಾಂತರಿಸಬೇಕು ಎಂಬ ಸಂದೇಶ ಸಿಕ್ಕಿತ್ತು ಎನ್ನಲಾಗಿದೆ. ಅಚ್ಚರಿಯ ಸಂಗತಿಯೆಂದರೆ, ಕನಸು ಬಿದ್ದ ಮರುದಿನವೇ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಜಡಿಯಪ್ಪ ಎಂಬ ರೈತನಿಗೆ ಈ ಪವಿತ್ರ ಶಿವಲಿಂಗ ಪ್ರತ್ಯಕ್ಷವಾಗಿದೆ. ಅಂದಿನಿಂದ ಆ ಶಿವಲಿಂಗವನ್ನು ಉದ್ಯಮಿ ಜೋಪಾನವಾಗಿಟ್ಟುಕೊಂಡಿದ್ದು, ಲಿಂಗವಿರುವ ಜಾಗಕ್ಕೆ ನಾಗರಹಾವೊಂದು ಪದೇಪದೇ ಬರುತ್ತಿರುವುದು ಸ್ಥಳೀಯರಲ್ಲಿ ಮತ್ತಷ್ಟು ವಿಸ್ಮಯ ಮೂಡಿಸಿದೆ.
ಇದನ್ನೂ ಓದಿ: ಅಂಜನಾದ್ರಿ ಆಂಜನೇಯನಿಗೆ ಸಮರ್ಪಿಸಿದ್ದ ಬಂಗಾರ ವಿವಾದಕ್ಕೆ ತೆರೆ, ಜನಾರ್ದನ ರೆಡ್ಡಿ ನಿರಾಳ
ಕನಸಿನಲ್ಲಿ ಬಂದ ಆದೇಶದಂತೆ ಉದ್ಯಮಿ ವಿಪಿನ್ ಕುಮಾರ್ ಈಗ ಶಿವಲಿಂಗವನ್ನು ಡಿ.ಕೆ. ಶಿವಕುಮಾರ್ ಅವರಿಗೆ ಹಸ್ತಾಂತರಿಸಲು ಕಾತುರದಿಂದ ಕಾಯುತ್ತಿದ್ದಾರೆ. ಆದರೆ, ಈ ಭಕ್ತಿಯ ಹಿಂದೆ ಕೊಪ್ಪಳ ಜಿಲ್ಲೆಯ ಜನರ ಮತ್ತು ರೈತರ ಹಿತದೃಷ್ಟಿಯೂ ಅಡಗಿದೆ. ಬಸಾಪೂರ ಭಾಗದಲ್ಲಿ ಬಲ್ಡೋಟಾ ಕಾರ್ಖಾನೆ ವಿಸ್ತರಣೆಯಾಗದಂತೆ ತಡೆಯಬೇಕು ಎನ್ನುವುದು ಇಡೀ ಜಿಲ್ಲೆಯ ಜನರ ಹಾಗೂ ಸ್ಥಳೀಯರ ಒತ್ತಾಯವಾಗಿದೆ. ಒಂದು ವೇಳೆ ಕಾರ್ಖಾನೆ ವಿಸ್ತರಣೆಯಾದರೆ ಕೊಪ್ಪಳದ ಜನರಿಗೆ ಶುದ್ಧ ಗಾಳಿ ಸಿಗುವುದು ಕಷ್ಟವಾಗುತ್ತದೆ ಮತ್ತು ರೈತರಿಗೂ ಭಾರೀ ತೊಂದರೆಯಾಗುತ್ತದೆ ಎನ್ನುವುದು ಇವರ ಕಳಕಳಿಯಾಗಿದೆ.
ಈಗಾಗಲೇ ಬಲ್ಡೋಟಾ ಕಾರ್ಖಾನೆ ವಿಸ್ತರಣೆಯನ್ನು ವಿರೋಧಿಸಿ ಕೊಪ್ಪಳದಲ್ಲಿ ಕಳೆದ 225 ದಿನಗಳಿಂದ ನಿರಂತರ ಹೋರಾಟ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ, ಪರಿಸರ ಮತ್ತು ರೈತರ ರಕ್ಷಣೆಗಾಗಿ ಶಿವಲಿಂಗವನ್ನೇ ಮುಂದಿಟ್ಟುಕೊಂಡು ಮುಖ್ಯಮಂತ್ರಿಗಳಿಗೆ ಮನವಿ ಮಾಡಲು ವಿಪಿನ್ ಕುಮಾರ್ ಮುಂದಾಗಿದ್ದಾರೆ. ಜಿಲ್ಲೆಯ ಜನರ ಸಾಮಾಜಿಕ ಕಳಕಳಿಯ ಸಂಕೇತವಾಗಿ ಈ ಶಿವಲಿಂಗವು ಸದ್ಯದಲ್ಲೇ ಡಿ.ಕೆ. ಶಿವಕುಮಾರ್ ಅವರ ಕೈ ಸೇರಲಿದೆ.
ಇದನ್ನೂ ಓದಿ: ಕೊನೆಗೂ ಕೊಪ್ಪಳದಲ್ಲಿ ಎರಡು ಕಾರ್ಖಾನೆಗಳು ಸೀಜ್: ದಶಕಗಳ ಹೋರಾಟಕ್ಕೆ ಜಯ!
ಒಟ್ಟಿನಲ್ಲಿ ಕೊಪ್ಪಳದಲ್ಲಿ ಪತ್ತೆಯಾಗಿರುವ ಈ ಶಿವಲಿಂಗ ಇದೀಗ ಇಡೀ ರಾಜ್ಯದ ಗಮನ ಸೆಳೆಯುತ್ತಿದೆ. ಪರಿಸರ ಮಾಲಿನ್ಯ ಮುಕ್ತ ಕೊಪ್ಪಳಕ್ಕಾಗಿ ಉದ್ಯಮಿ ಕೈಗೊಂಡಿರುವ ಈ ದೈವಿಕ ನಿರ್ಧಾರಕ್ಕೆ ಸ್ಥಳೀಯರು ಕೂಡ ಸಾಥ್ ನೀಡಿದ್ದಾರೆ. ಶಿವನ ಭಕ್ತ ಸಿಎಂ ಡಿಕೆ ಶಿವಕುಮಾರ್ ಈ ಶಿವಲಿಂಗವನ್ನು ಸ್ವೀಕರಿಸಿ, ಕಾರ್ಖಾನೆ ವಿಸ್ತರಣೆಗೆ ಬ್ರೇಕ್ ಹಾಕುತ್ತಾರೆ ಕಾದು ನೋಡಬೇಕಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.