
ಬೆಂಗಳೂರು, ಆಗಸ್ಟ್ 03: ಕಾವೇರಿ ಹಾಗೂ ಮಲೆನಾಡು ಜಲಾನಯನ ಪ್ರದೇಶಗಳಲ್ಲಿ ಸುರಿಯುತ್ತಿರುವ ಪ್ರಬಲ ಮುಂಗಾರು ಮಳೆಯಿಂದಾಗಿ ರಾಜ್ಯದ ಪ್ರಮುಖ ಜಲಾಶಯಗಳಿಗೆ ಹರಿದುಬರುತ್ತಿರುವ ಒಳಹರಿವಿನ ಪ್ರಮಾಣದಲ್ಲಿ ಗಣನೀಯ ಏರಿಕೆಯಾಗಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕಾವೇರಿ ನಾಡಿನ ಜೀವನಾಡಿ ಕೃಷ್ಣರಾಜಸಾಗರ (ಕೆ.ಆರ್.ಎಸ್) ಜಲಾಶಯದ ನೀರಿನ ಮಟ್ಟ 100 ಅಡಿಯ ಗಡಿ ದಾಟುವ ಮೂಲಕ ಶತಕದ ಸನಿಹಕ್ಕೆ ತಲುಪಿ ಭರ್ತಿಯಾಗುವತ್ತ ಸಾಗಿದೆ.
ಕೇವಲ ಮೂರು ದಿನಗಳ ಅಂತರದಲ್ಲೇ ಕೆ.ಆರ್.ಎಸ್ ಜಲಾಶಯದ ನೀರಿನ ಮಟ್ಟದಲ್ಲಿ ಬರೋಬ್ಬರಿ 8 ಅಡಿ ಏರಿಕೆ ಕಂಡುಬಂದಿದ್ದು, ಪ್ರಸ್ತುತ 23 ಟಿಎಂಸಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ ಭಾರೀ ಪ್ರಮಾಣದ ಒಳಹರಿವು ಮುಂದುವರಿದಿದ್ದು, ಇದೇ ವೇಗದಲ್ಲಿ ಇನ್ನು 10 ರಿಂದ 15 ದಿನಗಳ ಕಾಲ ನೀರು ಹರಿದುಬಂದರೆ ಕೆ.ಆರ್.ಎಸ್ ಸಂಪೂರ್ಣ ಭರ್ತಿಯಾಗುವ ನಿರೀಕ್ಷೆಯಿದೆ.
ಹಾಸನ ತಾಲೂಕಿನ ಗೊರೂರು ಸಮೀಪದ ಹೇಮಾವತಿ ಜಲಾಶಯದಲ್ಲೂ ನೀರಿನ ಪ್ರಮಾಣ ಗಣನೀಯವಾಗಿ ಹೆಚ್ಚಾಗಿದೆ. ಕಳೆದ ವರ್ಷ ಇದೇ ದಿನ 2921.40 ಅಡಿ (36.523 ಟಿಎಂಸಿ) ನೀರಿತ್ತು. ಆಗ 5,252 ಕ್ಯೂಸೆಕ್ ಒಳಹರಿವು, ನದಿಗೆ 2,400 ಕ್ಯೂಸೆಕ್ ಹಾಗೂ ಕಾಲುವೆಗೆ 4,300 ಕ್ಯೂಸೆಕ್ ಹೊರಹರಿವು ಇತ್ತು.
ಮಲೆನಾಡು ಭಾಗದಲ್ಲಿ ಆರ್ಭಟಿಸುತ್ತಿರುವ ಮಳೆಯಿಂದಾಗಿ ಕೊಪ್ಪಳ ಜಿಲ್ಲೆಯ ಮುನಿರಾಬಾದ್‌ನಲ್ಲಿರುವ ತುಂಗಭದ್ರಾ ಜಲಾಶಯಕ್ಕೆ ಹರಿದುಬರುವ ಒಳಹರಿವಿನಲ್ಲಿ ಭಾರೀ ಏರಿಕೆಯಾಗಿದೆ. ಒಂದೇ ದಿನದಲ್ಲಿ ಜಲಾಶಯದಲ್ಲಿ 4 ಟಿಎಂಸಿ ನೀರು ಸಂಗ್ರಹಗೊಂಡಿದ್ದು, ಕೊಪ್ಪಳ ಸೇರಿದಂತೆ ನಾಲ್ಕು ಜಿಲ್ಲೆಗಳ ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:28 am, Mon, 3 August 26