KSET Exam 2021: ಬಸ್ ಮುಷ್ಕರ; ನಾಳೆ ನಡೆಯಬೇಕಿದ್ದ ಕೆಸೆಟ್ ಪರೀಕ್ಷೆ ಮುಂದೂಡಿಕೆ
K-SET Exam 2021 Postponed: ನಾಲ್ಕು ದಿನಗಳಿಂದ ನಡೆಯುತ್ತಿರುವ ಸಾರಿಗೆ ಸಿಬ್ಬಂದಿಗಳ ಮುಷ್ಕರ ಹಿನ್ನೆಲೆಯಲ್ಲಿ KSET ಪರೀಕ್ಷೆಯನ್ನು ಮುಂದೂಡುವಂತೆ ಹಲವು ಪರೀಕ್ಷಾರ್ಥಿಗಳು ವಿಶ್ವವಿದ್ಯಾಲಯಕ್ಕೆ ಮನವಿ ಮಾಡಿದ್ದರು.
ನಾಲ್ಕು ದಿನಗಳಿಂದ ನಡೆಯುತ್ತಿರುವ ಅನಿರ್ದಿಷ್ಟಾವಧಿ ಬಸ್ ಮುಷ್ಕರದ ಕಾರಣದಿಂದ ನಾಳೆ (ಏಪ್ರಿಲ್ 10) ನಡೆಯಲಿದ್ದ KSET ಪರೀಕ್ಷೆಯನ್ನು ಮೈಸೂರು ವಿಶ್ವವಿದ್ಯಾಲಯ ಮುಂದೂಡಿದೆ. ಆದರೆ ಮುಂದಿನ ಪರೀಕ್ಷಾ ದಿನಾಂಕವನ್ನು ತಿಳಿಸಿಲ್ಲ. ಈ ಕುರಿತು ಸುತ್ತೋಲೆ ಹೊರಡಿಸಿರುವ ಮೈಸೂರು ವಿಶ್ವವಿದ್ಯಾಲಯದ ಪರೀಕ್ಷಾ ಸಂಯೋಜಕ ಹೆಚ್.ರಾಜಶೇಖರ್, KSET ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ತಿಳಿಸಿದ್ದಾರೆ. ಮುಂದಿನ ದಿನಗಳಲ್ಲಿ ಪರೀಕ್ಷೆ ನಡೆಯುವ ದಿನಾಂಕ ಇನ್ನಷ್ಟೇ ಘೋಷಣೆಯಾಗಬೇಕಿದೆ. ನಾಲ್ಕು ದಿನಗಳಿಂದ ನಡೆಯುತ್ತಿರುವ ಸಾರಿಗೆ ಸಿಬ್ಬಂದಿಗಳ ಮುಷ್ಕರ ಹಿನ್ನೆಲೆಯಲ್ಲಿ KSET ಪರೀಕ್ಷೆಯನ್ನು ಮುಂದೂಡುವಂತೆ ಹಲವು ಪರೀಕ್ಷಾರ್ಥಿಗಳು ವಿಶ್ವವಿದ್ಯಾಲಯಕ್ಕೆ ಮನವಿ ಮಾಡಿದ್ದರು. ಪರೀಕ್ಷಾರ್ಥಿಗಳ ಮನವಿ ಆಲಿಸಿದ ಮೈಸೂರು ವಿಶ್ವವಿದ್ಯಾಲಯದ KSET ಪರೀಕ್ಷೆಯನ್ನು ಮುಂದೂಡಿದೆ.
ನಾಲ್ಕು ದಿನಗಳಿಂದ ನಡೆಯುತ್ತಿದೆ ಸಾರಿಗೆ ಸಿಬ್ಬಂದಿ ಮುಷ್ಕರ
ಕಳೆದ ನಾಲ್ಕು ದಿನಗಳಿಂದ ಕರ್ನಾಟಕದಲ್ಲಿ ಸಾರಿಗೆ ಸಿಬ್ಬಂದಿಗಳ ಮುಷ್ಕರ ನಡೆಯುತ್ತಿದೆ. ಸಾರಿಗೆ ಸಂಸ್ಥೆ ನಿಗಮಗಳ ನೌಕರರು ಮುಷ್ಕರಕ್ಕೆ ಮುಂದಾದಾಗಲೆಲ್ಲ ಅತಿ ಹೆಚ್ಚು ಸಮಸ್ಯೆ ಎದುರಿಸುವರೆಂದರೆ ಸಾರ್ವಜನಿಕರು. ತಮ್ಮ ಸ್ವಂತ ಊರಿನಿಂದ ಯವುದೋ ಕೆಲಸದ ನಿಮಿತ್ತ ಬೇರೆ ಊರಿಗೆ ಹೋಗಿ ವಾಪಸ್ಸು ಊರಿಗೆ ಹಿಂತಿರುಗುವಾಗ ಬಸ್ಸಿಲ್ಲದೆ ಅವರರು ಪರದಾಡುವ ಪರಿ ಸಾಮಾನ್ಯ ಪದಗಳಲ್ಲಿ ಹೇಳಲು ಸಾಧ್ಯವಿಲ್ಲ. ಕೆಲವರು ಕೇವಲ ಬಸ್ ಖರ್ಚಿಗೆ ಅಂತ ದುಡ್ಡು ಇಟ್ಕೊಂಡಿರುತ್ತಾರೆ. ಬಸ್ ಇಲ್ಲವೆಂದು ಗೊತ್ತಾದಾಗ ಅವರು ಬರೆ ಹೊಟ್ಟೆಯಲ್ಲಿ ಬಸ್ ನಿಲ್ದಾಣದಲ್ಲಿ ಕಳೆಯಬೇಕಾಗುತ್ತದೆ. ಅವರ ಹಸಿದ ದೇಹದ ರಕ್ತ ಬಸ್ ನಿಲ್ದಾಣದ ಸೊಳ್ಳೆಗಳ ಪಾಲಾಗುತ್ತದೆ. ಪುರುಷರು ಆದರೆ ಓಕೆ, ಮಕ್ಕಳು ಮತ್ತು ಮಹಿಳೆಯರ ಗತಿಯೇನು? ಇದನ್ನು ಮಷ್ಕರ ನಿರತ ನೌಕರರಾಗಲೀ, ಸರ್ಕಾರವಾಗಲೀ ಯೋಚನೆ ಮಾಡುವುದಿಲ್ಲ.
ಮೂಲಗಳ ಪ್ರಕಾರ, ಕೆಎಸ್ಆರ್ಟಿಸಿಯ ದೈನಂದಿನ ಆದಾಯ ಸುಮಾರು ರೂ. 7 ಕೋಟಿಗಳಷ್ಟಿದೆ. ಹಾಗೆಯೇ, ಬಿಎಮ್ಟಿಸಿಯ ಒಂದು ದಿನದ ಆದಾಯ 2.5 ಕೋಟಿ ರೂಪಾಯಿಗಳಿಂದ 3 ಕೋಟಿ ರೂಪಾಯಿಗಳಷ್ಟಿದೆ. ವಾಯುವ್ಯ ಮತ್ತು ಈಶಾನ್ಯ ಸಾರಿಗೆ ಸಂಸ್ಥೆಗಳ ಪ್ರತಿದಿನದ ಆದಾಯ ತಲಾ 2 ಕೋಟಿ ರೂಪಾಯಿಗಳಷ್ಟಿದೆ. ಓದುಗರಿಗೆ ನೆನಪಿರಬಹುದು, ಕಳೆದ ವರ್ಷ ಕೊವಿಡ್-19 ಪಿಡುಗುನಿಂದಾಗಿ ಬಸ್ಗಳು ಓಡಾಟ ನಿಲ್ಲಿಸಿದ್ದಾಗ ಸಾರಿಗೆ ಸಂಸ್ಥೆಗೆ 2,250 ಕೋಟಿ ರೂಪಾಯಿ ನಷ್ಟ ಎದುರಾಗಿತ್ತು ಮತ್ತು ಜನಸಾಮಾನ್ಯರು ಸಹ ಬಹಳ ತೊಂದರೆ ಅನುಭವಿಸಿದ್ದರು.
ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರದಿಂದ ಜನಸಾಮಾನ್ಯರಿಗೆ ಭಾರಿ ತೊಂದರೆಯಾಗುತ್ತಿರುವ ಜೊತೆಗೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಎಲ್ಲ ನಾಲ್ಕು ನಿಗಮಗಳು ಅಪಾರ ನಷ್ಟ ಅನುಭವಿಸುತ್ತಿದೆ. ಇಲಾಖೆಯ ಮೂಲಗಳ ಪ್ರಕಾರ ಮುಷ್ಕರ ಆರಂಭವಾದ ದಿನದಿಂದ ಇಲ್ಲಿಯವರೆಗೆ ಅಂದರೆ ಕಳೆದ ಸಂಸ್ಥೆಯು ಮೂರು ದಿನಗಳಲ್ಲಿ ಸುಮಾರು 51 ಕೋಟಿ ರೂಪಾಯಿ ನಷ್ಟ ಅನುಭವಿಸಿವೆ. ಕೆಎಸ್ಆರ್ಟಿಸಿಗೆ ಅಂದಾಜು ರೂ 21 ಕೋಟಿ ನಷ್ಟ ಎದುರಾಗಿದ್ದರೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಮ್ಟಿಸಿ) ಹೆಚ್ಚು ಕಡಿಮೆ 9 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ. ವಾಯುವ್ಯ ಸಾರಿಗೆ ಸಂಸ್ಥೆ ಮತ್ತು ಈಶಾನ್ಯ ಸಾರಿಗೆ ಸಂಸ್ಥೆಗಳು ತಲಾ 10.5 ಕೋಟಿ ರೂಪಾಯಿಗಳ ನಷ್ಟ ಅನುಭವಿಸಿವೆ ಎಂದು ಮೂಲಗಳು ಹೇಳಿವೆ.
ಇದನ್ನೂ ಓದಿ: Tv9 Digital Live: ಮಕ್ಕಳ ಭವಿಷ್ಯಕ್ಕೆ ಕಂಟಕವಾಗುತ್ತಾ ಕೊರೊನಾ? ಪರೀಕ್ಷೆ ನಡೆಸುವ ಬಗ್ಗೆ ತಜ್ಞರ ಅಭಿಪ್ರಾಯಗಳು ಹೀಗಿವೆ..
(KSET exam 2021 postponed due to KSRTC BMTC bus strike)