ಕೆಎಸ್‌ಆರ್‌ಟಿಸಿ ಭರ್ಜರಿ ಕಾರ್ಯಾಚರಣೆ: ಟಿಕೆಟ್ ಇಲ್ಲದೆ ಪ್ರಯಾಣಿಸಿದವರಿಂದ ಒಂದೇ ತಿಂಗಳಲ್ಲಿ 9 ಲಕ್ಷ ರೂ. ದಂಡ ವಸೂಲಿ

ಟಿಕೆಟ್ ರಹಿತ ಪ್ರಯಾಣಿಕರ ವಿರುದ್ಧ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಮೇ ತಿಂಗಳಿನಲ್ಲಿ ನಡೆಸಿದ ಬೃಹತ್ ಕಾರ್ಯಾಚರಣೆಯಲ್ಲಿ ಬರೋಬ್ಬರಿ 8.94 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಒಂದು ತಿಂಗಳ ಈ ವಿಶೇಷ ತಪಾಸಣೆಯ ಅವಧಿಯಲ್ಲಿ ಒಟ್ಟು 4,476 ಟಿಕೆಟ್ ರಹಿತ ಪ್ರಯಾಣಿಕರಿಗೆ ದಂಡ ವಿಧಿಸಲಾಗಿದೆ.

ಕೆಎಸ್‌ಆರ್‌ಟಿಸಿ ಭರ್ಜರಿ ಕಾರ್ಯಾಚರಣೆ: ಟಿಕೆಟ್ ಇಲ್ಲದೆ ಪ್ರಯಾಣಿಸಿದವರಿಂದ ಒಂದೇ ತಿಂಗಳಲ್ಲಿ 9 ಲಕ್ಷ ರೂ. ದಂಡ ವಸೂಲಿ
ಕೆಎಸ್‌ಆರ್‌ಟಿಸಿ ಬಸ್
Image Credit source: tv9

Updated on: Jun 27, 2026 | 8:03 AM

ಮುಖ್ಯಾಂಶಗಳು

  • ಒಂದೇ ತಿಂಗಳಲ್ಲಿ 9 ಲಕ್ಷ ರೂ. ದಂಡ ವಸೂಲಿ
  • 42 ಸಾವಿರಕ್ಕೂ ಹೆಚ್ಚು ಬಸ್‌ಗಳಲ್ಲಿ ತಪಾಸಣೆ
  • 4 ಸಾವಿರಕ್ಕೂ ಹೆಚ್ಚು ಪ್ರಯಾಣಿಕರಿಗೆ ದಂಡ

ಬೆಂಗಳೂರು, ಜೂನ್ 27: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಬಸ್‌ಗಳಲ್ಲಿ ಟಿಕೆಟ್ ಪಡೆಯದೇ ಕದ್ದುಮುಚ್ಚಿ ಪ್ರಯಾಣಿಸುವವರ ವಿರುದ್ಧ ಸಾರಿಗೆ ಸಂಸ್ಥೆ ಮೇ ತಿಂಗಳಿನಲ್ಲಿ ಭರ್ಜರಿ ಕಾರ್ಯಾಚರಣೆ ನಡೆಸಿದೆ. ಕರ್ನಾಟಕ ಹಾಗೂ ನೆರೆಯ ರಾಜ್ಯಗಳಲ್ಲಿ ಸಂಚರಿಸುವ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಜಾಗೃತ ದಳದ ಸಿಬ್ಬಂದಿ ನಡೆಸಿದ ದಿಢೀರ್ ತಪಾಸಣೆಯ ವೇಳೆ ಸಿಕ್ಕಿಬಿದ್ದ ಟಿಕೆಟ್ ರಹಿತ ಪ್ರಯಾಣಿಕರಿಂದ ಒಟ್ಟು 8.94 ಲಕ್ಷ ರೂಪಾಯಿ ದಂಡ ವಸೂಲಿ ಮಾಡಲಾಗಿದೆ. ಸಂಸ್ಥೆಯ ಆದಾಯಕ್ಕೆ ನಷ್ಟ ಉಂಟುಮಾಡುವವರನ್ನು ಪತ್ತೆ ಹಚ್ಚಲು ಈ ವಿಶೇಷ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು.

42 ಸಾವಿರಕ್ಕೂ ಅಧಿಕ ಬಸ್‌ಗಳಲ್ಲಿ ಪರಿಶೀಲನೆ

ಕೆಎಸ್‌ಆರ್‌ಟಿಸಿ ಬಿಡುಗಡೆ ಮಾಡಿರುವ ಅಧಿಕೃತ ಮಾಹಿತಿಯ ಪ್ರಕಾರ, ಈ ಒಂದು ತಿಂಗಳ ಸುದೀರ್ಘ ಕಾರ್ಯಾಚರಣೆಯಲ್ಲಿ ಜಾಗೃತ ದಳದ ತಂಡಗಳು ಒಟ್ಟು 42,518 ಬಸ್‌ಗಳನ್ನು ತಪಾಸಣೆಗೆ ಒಳಪಡಿಸಿವೆ. ಈ ವೇಳೆ 4,353 ಪ್ರಕರಣಗಳನ್ನು ಪತ್ತೆ ಹಚ್ಚಲಾಗಿದ್ದು, ಟಿಕೆಟ್ ರಹಿತವಾಗಿ ಪ್ರಯಾಣಿಸುತ್ತಿದ್ದ 4,476 ಪ್ರಯಾಣಿಕರಿಗೆ ದಂಡ ವಿಧಿಸಲಾಗಿದೆ. ಈ ಇಡೀ ಕಾರ್ಯಾಚರಣೆಯಲ್ಲಿ ಸುಮಾರು 1.52 ಲಕ್ಷ ರೂಪಾಯಿ ಮೌಲ್ಯದ ಆದಾಯ ಸೋರಿಕೆಯನ್ನು ತಡೆಗಟ್ಟಲಾಗಿದ್ದು, ಒಟ್ಟಾರೆ 8.94 ಲಕ್ಷ ರೂ. ದಂಡದ ರೂಪದಲ್ಲಿ ಸಂಗ್ರಹವಾಗಿದೆ.

ನಿರ್ಲಕ್ಷ್ಯ ವಹಿಸಿದ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ

ಇದೇ ವೇಳೆ, ಇಂತಹ ಅಕ್ರಮಗಳಲ್ಲಿ ಭಾಗಿಯಾಗಿರುವ ಅಥವಾ ಟಿಕೆಟ್ ನೀಡುವಲ್ಲಿ ನಿರ್ಲಕ್ಷ್ಯ ಹಾಗೂ ಕರ್ತವ್ಯ ಲೋಪ ಎಸಗಿರುವ ಸಂಸ್ಥೆಯ ನೌಕರರ ವಿರುದ್ಧವೂ ಕೆಎಸ್‌ಆರ್‌ಟಿಸಿ ಕಠಿಣ ನಿಲುವು ತಳೆದಿದೆ. ಇಂತಹ ಅಕ್ರಮಗಳಿಗೆ ಕಾರಣರಾದ ಸಿಬ್ಬಂದಿಗಳ ವಿರುದ್ಧ ಈಗಾಗಲೇ ಇಲಾಖಾ ಮಟ್ಟದ ಶಿಸ್ತು ಕ್ರಮಗಳನ್ನು ಜರುಗಿಸಲಾಗಿದೆ ಎಂದು ಸಂಸ್ಥೆ ಖಚಿತಪಡಿಸಿದೆ.

ಇದನ್ನೂ ಓದಿ: BMTC, KSRTC ಬಸ್ ಟಿಕೆಟ್ ದರ ಬರೋಬ್ಬರಿ ಏರಿಕೆಯಾಗೋದು ಈ ಬಾರಿ ಪಕ್ಕಾ 

ಮುಂದಿನ ದಿನಗಳಲ್ಲೂ ಇಂತಹ ಕಾರ್ಯಾಚರಣೆಗಳು ಮುಂದುವರಿಯಲಿದ್ದು, ಪದೇ ಪದೇ ನಿಯಮ ಉಲ್ಲಂಘಿಸುವವರಿಗೆ ಮತ್ತಷ್ಟು ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ. ಪ್ರಯಾಣಿಕರು ಜವಾಬ್ದಾರಿಯಿಂದ ವರ್ತಿಸಿ, ಪ್ರಯಾಣದ ಅವಧಿಯಲ್ಲಿ ಸೂಕ್ತ ಟಿಕೆಟ್ ಅಥವಾ ಪಾಸ್‌ಗಳನ್ನು ಖರೀದಿಸಿ ಸಂಸ್ಥೆಯೊಂದಿಗೆ ಸಹಕರಿಸಬೇಕು ಎಂದು ಕೆಎಸ್‌ಆರ್‌ಟಿಸಿ ಮನವಿ ಮಾಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us