KSRTC Package Tour: ಅ. 21ರಿಂದ ದೀಪಾವಳಿಗೆ ಕರಾವಳಿಯಲ್ಲಿ ಕೆಎಸ್​ಆರ್​ಟಿಸಿಯಿಂದ ವಿಶೇಷ ಟೂರ್ ಪ್ಯಾಕೇಜ್

ಅಕ್ಟೋಬರ್ 21ರಿಂದ 27ರವರೆಗೆ ಕೆಎಸ್​ಆರ್​ಟಿಸಿ ದೀಪಾವಳಿ ಟೂರ್ ಪ್ಯಾಕೇಜ್ ಅನ್ನು ಪರಿಚಯಿಸಲಿದೆ. ಈ ಪ್ಯಾಕೇಜ್​​ನಲ್ಲಿ ಕುಂದಾಪುರ, ಉಡುಪಿ, ದಕ್ಷಿಣ ಕನ್ನಡದ ಸುತ್ತಮುತ್ತಲಿನ ದೇವಾಲಯಗಳ ದರ್ಶನ ಮಾಡಲು ಭಕ್ತರಿಗೆ ಅವಕಾಶವಿದೆ.

KSRTC Package Tour: ಅ. 21ರಿಂದ ದೀಪಾವಳಿಗೆ ಕರಾವಳಿಯಲ್ಲಿ ಕೆಎಸ್​ಆರ್​ಟಿಸಿಯಿಂದ ವಿಶೇಷ ಟೂರ್ ಪ್ಯಾಕೇಜ್
ಪ್ರಾತಿನಿಧಿಕ ಚಿತ್ರ
Edited By:

Updated on: Oct 17, 2022 | 12:26 PM

ಬೆಂಗಳೂರು: ಕೆಎಸ್​ಆರ್​ಟಿಸಿ (KSRTC) ಮಂಗಳೂರು ವಿಭಾಗದಿಂದ ದೀಪಾವಳಿ ಪ್ರಯುಕ್ತ ವಿಶೇಷ ಟೂರ್ ಪ್ಯಾಕೇಜ್ ಘೋಷಿಸಲಾಗಿದೆ. ದೀಪಾವಳಿ (Deepavali Festival) ಸಂದರ್ಭದ ವೀಕೆಂಡ್​ನಲ್ಲಿ ದಕ್ಷಿಣ ಕನ್ನಡದ ಪ್ರಮುಖ ದೇವಾಲಯಗಳಿಗೆ ಸಂಪರ್ಕ ಕಲ್ಪಿಸಲು ಪ್ಯಾಕೇಜ್ ಟೂರ್‌ಗಳನ್ನು ಕೆಎಸ್​ಆರ್​ಟಿಸಿ ಪರಿಚಯಿಸಿದೆ. ಕೆಎಸ್​ಆರ್​ಟಿಸಿ ಪ್ಯಾಕೇಜ್ ಟೂರ್ ಅಡಿಯಲ್ಲಿ 5ರಿಂದ 10 ಕೆಎಸ್‌ಆರ್‌ಟಿಸಿ ಬಸ್‌ಗಳು ಕಾರ್ಯ ನಿರ್ವಹಿಸಲಿವೆ.

ಈ ಬಗ್ಗೆ ಮಾಹಿತಿ ನೀಡಿರುವ ಕೆಎಸ್​ಆರ್​ಟಿಸಿ ಚೇರ್ಮನ್ ಎಂ. ಚಂದ್ರಪ್ಪ, ಈ ಹಿಂದೆ ದಸರಾ ಸಂದರ್ಭದಲ್ಲಿ ಮಂಗಳೂರು ದಸರಾ ದರ್ಶನ ಪ್ಯಾಕೇಜ್ ಟೂರ್ ಮಾಡಿದ್ದೆವು. ಇದೀಗ ಅದೇರೀತಿ ದೀಪಾವಳಿ ಟೂರ್ ಪ್ಯಾಕೇಜ್ ಮಾಡಲು ನಿರ್ಧರಿಸಿದ್ದೇವೆ. ಒಂದುವೇಳೆ ಸಾರ್ವಜನಿಕರಿಂದ ಬೇಡಿಕೆ ಹೆಚ್ಚಾದರೆ ಇನ್ನೂ ಹೆಚ್ಚಿನ ಬಸ್‌ಗಳನ್ನು ನಿಗದಿಪಡಿಸಲಾಗುವುದು ಎಂದಿದ್ದಾರೆ.

ಮಂಗಳೂರು ದಸರಾ ದರ್ಶನ ಪ್ಯಾಕೇಜ್ ಮಾದರಿಯಲ್ಲಿಯೇ ಅಕ್ಟೋಬರ್ 21ರಿಂದ 27ರವರೆಗೆ ಕೆಎಸ್​ಆರ್​ಟಿಸಿ ದೀಪಾವಳಿ ಟೂರ್ ಪ್ಯಾಕೇಜ್ ಅನ್ನು ಪರಿಚಯಿಸಲಿದೆ. ಈ ಪ್ಯಾಕೇಜ್​​ನಲ್ಲಿ ಕುಂದಾಪುರ, ಉಡುಪಿ, ದಕ್ಷಿಣ ಕನ್ನಡದ ಸುತ್ತಮುತ್ತಲಿನ ದೇವಾಲಯಗಳ ದರ್ಶನ ಮಾಡಲು ಭಕ್ತರಿಗೆ ಅವಕಾಶವಿದೆ. ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಮತ್ತು ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನವನ್ನು ಕೂಡ ಈ ಟೂರ್ ಪ್ಯಾಕೇಜ್​ನಲ್ಲಿ ಸೇರಿಸಲಾಗಿದೆ.

ಇದನ್ನೂ ಓದಿ: Mysore Dasara: ದಸರಾ ಉತ್ಸವ; ಮೈಸೂರಿಗೆ ವಿವಿಧ ಜಿಲ್ಲೆ, ರಾಜ್ಯಗಳಿಂದ ಕೆಎಸ್​ಆರ್​ಟಿಸಿ ವಿಶೇಷ ಬಸ್​

ವೀಕೆಂಡ್​​ನಲ್ಲಿ ದಕ್ಷಿಣ ಕನ್ನಡದ ವಿವಿಧ ಪ್ರಸಿದ್ಧ ದೇವಸ್ಥಾನಗಳ ಪ್ರವಾಸಕ್ಕೆ ಈ ಕೆಎಸ್​ಆರ್​ಟಿಸಿ ಬಸ್​ಗಳನ್ನು ಒದಗಿಸಲಾಗುವುದು. ಪುತ್ತೂರು ವಿಭಾಗಕ್ಕೆ ಅಂತಹ ಬೇಡಿಕೆ ಬಂದರೆ ಅಂತಹ ಟೂರ್ ಪ್ಯಾಕೇಜ್​ಗಳನ್ನೂ ಪರಿಚಯಿಸುತ್ತೇವೆ ಎಂದು ಕೆಎಸ್​ಆರ್​ಟಿಸಿ ಅಧಿಕಾರಿಗಳು ತಿಳಿಸಿದ್ದಾರೆ. ಹಾಗೇ, ನೋಂದಾಯಿತ ಕಟ್ಟಡ ಮತ್ತು ಇತರ ಕಟ್ಟಡ ಕಾರ್ಮಿಕರಿಗೆ ಉಚಿತವಾಗಿ ಬಸ್ ಪಾಸ್ ನೀಡಲು ಕೆಎಸ್ಆರ್​ಟಿಸಿ ನಿರ್ಧರಿಸಿದೆ.

ಫ್ರೀ ಬಸ್ ಪಾಸ್​ ಇದ್ದರೆ ಆ ಪ್ರಯಾಣಿಕರು ಬಸ್ ಹತ್ತುವ ಸ್ಥಳದಿಂದ 45 ಕಿ.ಮೀ ದೂರ ಉಚಿತವಾಗಿ ಪ್ರಯಾಣಿಸಬಹುದು. ಕರ್ನಾಟಕದಲ್ಲಿ ಸುಮಾರು 37 ಲಕ್ಷ ಕಾರ್ಮಿಕರು ನೋಂದಣಿಯಾಗಿದ್ದಾರೆ. ಅವರಲ್ಲಿ 1 ಲಕ್ಷ ಕಾರ್ಮಿಕರಿಗೆ ಪಾಸ್ ನೀಡಲು ಕಾರ್ಮಿಕ ಇಲಾಖೆ ಆದೇಶ ಹೊರಡಿಸಿದೆ. ಎಲ್ಲಾ ನೋಂದಾಯಿತ ಕಾರ್ಮಿಕರಿಗೆ ಹಂತ ಹಂತವಾಗಿ ರಕ್ಷಣೆ ನೀಡಲಾಗುವುದು ಎಂದು ಕೆಎಸ್​ಆರ್​ಟಿಸಿ ತಿಳಿಸಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:27 am, Mon, 17 October 22