
ಬೆಂಗಳೂರು, ಆಗಸ್ಟ್ 20: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯ (Shakti Scheme) ಉಚಿತ ಟಿಕೆಟ್‌ಗಳನ್ನು ದುರ್ಬಳಕೆ ಮಾಡಿಕೊಳ್ಳುವ ಆರೋಪಗಳಿಗೆ ಕಡಿವಾಣ ಹಾಕಲು ಕೆಎಸ್‌ಆರ್‌ಟಿಸಿ (KSRTC) ಕಠಿಣ ಕ್ರಮಕ್ಕೆ ಮುಂದಾಗಿದೆ. ಯೋಜನೆಯ ಟಿಕೆಟ್‌ಗಳನ್ನು ಅಕ್ರಮವಾಗಿ ಬಳಸಿ ಹಣ ಸಂಪಾದಿಸುವ ಅಥವಾ ಉಚಿತ ಟಿಕೆಟ್‌ಗಳನ್ನು ಅನಗತ್ಯವಾಗಿ ವಿತರಿಸುವ ಪ್ರಕರಣಗಳಿಗೆ ಕಡಿವಾಣ ಹಾಕಲು ಹೊಸ ಮಾರ್ಗಸೂಚಿ ಜಾರಿಗೊಳಿಸಲಾಗಿದೆ.
2023ರ ಜೂನ್ 11ರಂದು ಜಾರಿಗೆ ಬಂದ ಶಕ್ತಿ ಯೋಜನೆಯಡಿ ರಾಜ್ಯದ ಮಹಿಳೆಯರಿಗೆ ಸರ್ಕಾರಿ ಬಸ್‌ಗಳಲ್ಲಿ ಉಚಿತ ಪ್ರಯಾಣದ ಅವಕಾಶ ನೀಡಲಾಗಿದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯುಕೆಆರ್‌ಟಿಸಿ ಹಾಗೂ ಕೆಕೆಆರ್‌ಟಿಸಿ ಬಸ್‌ಗಳಲ್ಲಿ ಈ ಯೋಜನೆ ಜಾರಿಯಲ್ಲಿದೆ.
ಆದರೆ, ಕೆಲವು ಕಂಡಕ್ಟರ್‌ಗಳು ಯೋಜನೆಯ ಉಚಿತ ಟಿಕೆಟ್‌ಗಳನ್ನು ದುರ್ಬಳಕೆ ಮಾಡಿಕೊಂಡಿರುವ ಆರೋಪಗಳು ಹಲವು ಬಾರಿ ಕೇಳಿಬಂದಿವೆ. ಹೊರರಾಜ್ಯದ ಮಹಿಳೆಯರು ಅಥವಾ ಪುರುಷರಿಗೆ ಉಚಿತ ಟಿಕೆಟ್ ನೀಡಿ, ಅವರಿಂದ ಹಣ ಪಡೆದು ಅದನ್ನು ನಿಗಮಕ್ಕೆ ಜಮೆ ಮಾಡದೆ ಸ್ವಂತ ಲಾಭಕ್ಕೆ ಬಳಸಿಕೊಂಡಿರುವ ಪ್ರಕರಣಗಳೂ ವರದಿಯಾಗಿವೆ ಎನ್ನಲಾಗಿದೆ.
ಇನ್ನು ಕೆಲವರು ಪ್ರೋತ್ಸಾಹಧನ ಪಡೆಯುವ ಉದ್ದೇಶದಿಂದ ಶಕ್ತಿ ಯೋಜನೆಯ ಟಿಕೆಟ್‌ಗಳನ್ನು ಅನಗತ್ಯವಾಗಿ ವಿತರಿಸಿ ನಂತರ ಹರಿದು ಹಾಕಿರುವ ಆರೋಪವೂ ಇದೆ.
ಇಂತಹ ಅಕ್ರಮಗಳಿಗೆ ಕಡಿವಾಣ ಹಾಕಲು ಕೆಎಸ್‌ಆರ್‌ಟಿಸಿ ಎಂಡಿ ಶಿವಕುಮಾರ್ ಅವರಿಂದ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ ಎನ್ನಲಾಗಿದ್ದು, ಟಿಕೆಟ್ ದುರ್ಬಳಕೆ ಪ್ರಕರಣಗಳನ್ನು ಸಾಮಾನ್ಯ, ರೆಡ್ ಜೋನ್ ಹಾಗೂ ಅಸಾಧಾರಣ ಎಂದು ಮೂರು ವಿಭಾಗಗಳಾಗಿ ವಿಂಗಡಿಸಿ ಶಿಸ್ತು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ಮೂರು ಟಿಕೆಟ್‌ಗಳವರೆಗೆ ಉಚಿತ ಟಿಕೆಟ್‌ಗಳ ದುರ್ಬಳಕೆ ಕಂಡುಬಂದರೆ ಅದನ್ನು ಸಾಮಾನ್ಯ ಪ್ರಕರಣವಾಗಿ ಪರಿಗಣಿಸಲಾಗುತ್ತದೆ. ನಾಲ್ಕರಿಂದ ಐದು ಟಿಕೆಟ್‌ಗಳ ಅಕ್ರಮ ಪತ್ತೆಯಾದರೆ ರೆಡ್ ಜೋನ್‌ನಲ್ಲಿ ಇರಿಸಿ ಕ್ರಮ ಕೈಗೊಳ್ಳಲಾಗುತ್ತದೆ. ಅದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ದುರ್ಬಳಕೆ ಕಂಡುಬಂದರೆ ಅಸಾಧಾರಣ ಪ್ರಕರಣ ಎಂದು ಪರಿಗಣಿಸಲಾಗುತ್ತದೆ.
ಮೊದಲ ಹಂತದಲ್ಲಿ ದಂಡ ವಿಧಿಸುವುದರಿಂದ ಆರಂಭಿಸಿ, ಪ್ರಕರಣದ ಗಂಭೀರತೆ ಮತ್ತು ಪುನರಾವರ್ತನೆಯ ಆಧಾರದ ಮೇಲೆ ಅಮಾನತು ಹಾಗೂ ವಜಾ ಕ್ರಮ ಕೈಗೊಳ್ಳಲು ಕೆಎಸ್‌ಆರ್‌ಟಿಸಿ ಮುಂದಾಗಿದೆ.
ಇದನ್ನೂ ಓದಿ: KSRTC, BMTC-NWKSRTC, KKRTC ಸಂಕಷ್ಟದಲ್ಲಿ: ಶಕ್ತಿ ಯೋಜನೆಯ ಬಾಕಿ ಹಣ ಬಿಡುಗಡೆಗೆ ಸರ್ಕಾರಕ್ಕೆ ಪತ್ರ
ಪದೇಪದೇ ಶಕ್ತಿ ಯೋಜನೆಯ ಟಿಕೆಟ್‌ಗಳನ್ನು ದುರ್ಬಳಕೆ ಮಾಡಿಕೊಂಡಿರುವುದು ಸಾಬೀತಾದರೆ ಅಂತಹ ಸಿಬ್ಬಂದಿ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸಂಸ್ಥೆ ಎಚ್ಚರಿಕೆ ನೀಡಿದೆ.
ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:49 am, Thu, 20 August 26