ಸಿಲಿಕಾನ್ ಸಿಟಿಯಲ್ಲಿ ಕುಂದಾಪುರ ಕನ್ನಡ ಉತ್ಸವ 2026: ಯಕ್ಷಗಾನ, ಮೀನುಗಳ ಪ್ರದರ್ಶನಕ್ಕೆ ಹರಿದುಬಂದ ಜನಸಾಗರ
ಬೆಂಗಳೂರಿನಲ್ಲಿ 'ಟೀಮ್ ಕುಂದಾಪುರಿಯನ್ಸ್' ಆಯೋಜಿಸಿದ್ದ 'ಕುಂದಾಪ್ರ ಕನ್ನಡ ಉತ್ಸವ' ಆಗಸ್ಟ್ 30ರಂದು ಅದ್ಧೂರಿಯಾಗಿ ನೆರವೇರಿತು. ಈ ಉತ್ಸವವು ಕುಂದಾಪ್ರ ಕನ್ನಡ ಭಾಷೆ, ಕರಾವಳಿ ಸಂಸ್ಕೃತಿ, ಜಾನಪದ ಕಲೆಗಳು, ಯಕ್ಷಗಾನ ಮತ್ತು ಸಾಂಪ್ರದಾಯಿಕ ಆಟಗಳನ್ನು ರಾಜಧಾನಿಯಲ್ಲಿ ಅನಾವರಣಗೊಳಿಸಿತು. ಸಾವಿರಾರು ಜನ ಸೇರಿ ಆಚರಿಸಿದ ಈ ಕಾರ್ಯಕ್ರಮವು ಭಾಷೆ ಮತ್ತು ಸಂಸ್ಕೃತಿಯ ಉಳಿವಿಗೆ ಮಹತ್ವದ ಹೆಜ್ಜೆಯಾಯಿತು, ಮುಂದಿನ ಉತ್ಸವಗಳಿಗೆ ಸ್ಫೂರ್ತಿ ನೀಡಿತು.

ಬೆಂಗಳೂರು, ಆ,31: “ಬೆಂಗಳೂರಿನಲ್ಲೊಂದು ಪುಟ್ಟ ಕುಂದಾಪುರ ನಿರ್ಮಾಣವಾಗಿತ್ತು” ಎಂದರೆ ಖಂಡಿತ ತಪ್ಪಾಗಲಾರದು, ನಿನ್ನೆ, ಅಂದರೆ ಆಗಸ್ಟ್ 30 ರಂದು ಬೆಂಗಳೂರಿನ ವಿಜಯನಗರದ BGS ಮೈದಾನದಲ್ಲಿ ‘ಟೀಮ್ ಕುಂದಾಪುರಿಯನ್ಸ್’ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ಕುಂದಾಪುರ ಕನ್ನಡ ಉತ್ಸವ 2026’ ಅತ್ಯಂತ ವಿಜೃಂಭಣೆ ಮತ್ತು ಸಂಭ್ರಮದಿಂದ ನೆರವೇರಿತು. ಬೆಳಿಗ್ಗೆ 11 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಮೈದಾನದಾದ್ಯಂತ ಕೇವಲ ಕುಂದಾಪುರ ಕನ್ನಡದ ಸೊಗಡು, ಕರಾವಳಿಯ ಆಚಾರ-ವಿಚಾರ ಮತ್ತು ಸಂಸ್ಕೃತಿಯ ಹಬ್ಬವೇ ಮನೆಮಾಡಿತ್ತು.
ಕಾರ್ಯಕ್ರಮದ ಆರಂಭದಲ್ಲಿ ಜಾನಪದ ಕಲಾತಂಡಗಳ ವೈಭವದ ಮೆರವಣಿಗೆ ಎಲ್ಲರ ಗಮನ ಸೆಳೆಯಿತು. ಭಾಷೆಯ ಮೇಲಿನ ಪ್ರೀತಿಯಿಂದ ಸಾವಿರಾರು ಜನರು ಈ ಉತ್ಸವದಲ್ಲಿ ಭಾಗಿಯಾಗಿದ್ದರು. ರಂಗೇರಿದ ನೃತ್ಯ ವೈಭವ, ಡಿಜೆ ಕುಂದಾಪುರ ಹಾಗೂ ಕರಾವಳಿಯ ಗಂಡುಕಲೆ ಯಕ್ಷಗಾನ ಪ್ರದರ್ಶನ ನೋಡುಗರನ್ನು ಮಂತ್ರಮುಗ್ಧಗೊಳಿಸಿತು.

ಇಂದಿನ ಕಾಲಘಟ್ಟದಲ್ಲಿ ಮೂಲೆ ಸೇರಿರುವ ಹಳೆಯ ಕಾಲದ ಅಪರೂಪದ ವಸ್ತುಗಳ ಪ್ರದರ್ಶನ ಮತ್ತು ಕರಾವಳಿಯ ವಿವಿಧ ಬಗೆಯ ಮೀನುಗಳ ಪ್ರದರ್ಶನವನ್ನು ವೀಕ್ಷಿಸಲು ಜನಸಾಗರವೇ ಹರಿದುಬಂದಿತ್ತು. ಹಳ್ಳಿಯ ಸಾಂಪ್ರದಾಯಿಕ ಆಟೋಟ ಸ್ಪರ್ಧೆಗಳು ಬಾಲ್ಯದ ನೆನಪುಗಳನ್ನು ಮರುಕಳಿಸುವಂತೆ ಮಾಡಿದವು. ‘ಕುಂದಾಪುರ ಸಂವಾದ’ ಕಾರ್ಯಕ್ರಮದಲ್ಲಿ ಭಾಷೆ ಮತ್ತು ಸಂಸ್ಕೃತಿಯ ಬೆಳವಣಿಗೆ ಕುರಿತು ಅರ್ಥಪೂರ್ಣ ಚರ್ಚೆ ನಡೆಯಿತು. ಅಲ್ಲದೆ, ಕುಂದಾಪುರ ಭಾಗದ ವಿವಿಧ ಕ್ರಿಯೇಟರ್ಸ್ ಭಾಗವಹಿಸಿದ್ದ ‘ಯುವಸಂಗಮ’ ಕಾರ್ಯಕ್ರಮಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಯಿತು.

ಕಾರ್ಯಕ್ರಮದಲ್ಲಿ 10ಕ್ಕೂ ಹೆಚ್ಚು ಗಣ್ಯರು ಹಾಗೂ ಸಿನಿಮಾ ತಾರೆಯರು ಭಾಗವಹಿಸಿ, ಕುಂದಾಪುರದ ವಿಶಿಷ್ಟ ಸಂಸ್ಕೃತಿ ಮತ್ತು ಕುಂದಾಪ್ರ ಕನ್ನಡ ಭಾಷೆಯ ಉಳಿವಿಗಾಗಿ ವಹಿಸಬೇಕಾದ ಶ್ರಮದ ಕುರಿತು ಪ್ರೇರಣಾದಾಯಕರಾಗಿ ಮಾತನಾಡಿದರು. ವಿಶೇಷವೆಂದರೆ, ಇದು ಕೇವಲ ಕುಂದಾಪುರದ ಜನರಿಗೆ ಮಾತ್ರ ಸೀಮಿತವಾಗಿರಲಿಲ್ಲ. ಬೆಂಗಳೂರಿನ ಮೂಲೆ ಮೂಲೆಯಿಂದ ಬಂದ ಸಾವಿರಾರು ಕನ್ನಡ ಪ್ರೇಮಿಗಳು ಕರಾವಳಿಯ ಸಂಸ್ಕೃತಿ ಹಾಗೂ ಆಹಾರದ ಸವಿಯನ್ನು ಸವಿದರು.
ಇದನ್ನೂ ಓದಿ: ಸರ್ಕಾರದ ಮಹತ್ವಾಕಾಂಕ್ಷೆಯ ‘ಪ್ರಜಾಸೇವಾ ಅಭಿಯಾನ’, ಸ್ಥಳದಲ್ಲೇ ಸಾರ್ವಜನಿಕರ ಸಮಸ್ಯೆಗೆ ಪರಿಹಾರ
ತಾಯ್ನೆಲದಿಂದ ದೂರವಿದ್ದರೂ ತಮ್ಮ ಹುಟ್ಟೂರಿನ ಭಾಷೆ, ಕಲೆ ಹಾಗೂ ಸಂಪ್ರದಾಯವನ್ನು ರಾಜಧಾನಿಯಲ್ಲಿ ಉಳಿಸಿ ಬೆಳೆಸುತ್ತಿರುವ ‘ಟೀಮ್ ಕುಂದಾಪುರಿಯನ್ಸ್’ ಸಂಸ್ಥೆಯ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯ. 8ನೇ ವರ್ಷದ ಈ ಉತ್ಸವವು ಅಭೂತಪೂರ್ವ ಯಶಸ್ಸು ಕಂಡಿದ್ದು, ಮುಂದಿನ ದಿನಗಳಲ್ಲಿ ಇನ್ನು ದೊಡ್ಡ ಮಟ್ಟದಲ್ಲಿ ಉತ್ಸವ ಆಯೋಜಿಸಲು ಸಂಘಟಕರಿಗೆ ಸ್ಪೂರ್ತಿ ನೀಡಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:18 pm, Mon, 31 August 26




