ಬೆಳಗಾವಿಯಲ್ಲಿ ನಾಳೆ ಸಿಟಿ ರವಿ ವಿರುದ್ಧ ಪ್ರತಿಭಟನೆಗೆ ಕರೆ ಕೊಟ್ಟ ಹೆಬ್ಬಾಳ್ಕರ್ ಬೆಂಬಲಿಗರು
ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಅನ್ನು ಹೈಕೋರ್ಟ್ ಬಿಡುಗಡೆ ಮಾಡಿದೆ. ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಅಶ್ಲೀಲ ಪದ ಬಳಕೆ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ರವಿ ಬಿಡುಗಡೆಗೆ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದ್ದಾರೆ. ಆದರೆ, ನಾಳೆ ಬೆಳಗಾವಿಯಲ್ಲಿ ಸಚಿವೆ ಹೆಬ್ಬಾಳ್ಕರ್ ಬೆಂಬಲಿಗರಿಂದ ಪ್ರತಿಭಟನೆಗೆ ಕರೆ ನೀಡಲಾಗಿದೆ. ಸಿ.ಟಿ. ರವಿಯನ್ನ ಎಂಎಲ್‌ಸಿ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ.
ಬೆಳಗಾವಿ, ಡಿಸೆಂಬರ್ 20: ವಿಧಾನಪರಿಷತ್‌ನಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಸಿ.ಟಿ.ರವಿ (CT Ravi) ಅಶ್ಲೀಲ ಪದ ಬಳಕೆ ಮಾಡಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ನಿನ್ನೆ ಪೊಲೀಸರು ಬಂಧಿಸಿದ್ದರು. ಆದರೆ ಇಂದು ಇದೇ ಪ್ರಕರಣದಲ್ಲಿ ಸಿ.ಟಿ.ರವಿ ಬಿಡುಗಡೆಗೆ ಹೈಕೋರ್ಟ್ ಆದೇಶಿಸಿದೆ. ಮಧ್ಯಂತರ ಆದೇಶ ಸಿಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದ್ದಾರೆ. ಆದರೆ ನಾಳೆ ನಗರದಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರಿಂದ ಪ್ರತಿಭಟನೆಗೆ ಕರೆ ನೀಡಲಾಗಿದೆ.
ಎಂಎಲ್‌ಸಿ ಸಿ.ಟಿ.ರವಿ ಬಿಡುಗಡೆಗೆ ಹೈಕೋರ್ಟ್ ಆದೇಶಿಸಿದ ಹಿನ್ನೆಲೆ ಬೆಳಗಾವಿಯಲ್ಲಿ ನಾಳೆ ಬೆಳಗ್ಗೆ 11ಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಬೆಂಬಲಿಗರಿಂದ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಸಿಪಿಎಡ್ ಮೈದಾನದಿಂದ ಡಿಸಿ ಕಚೇರಿವರೆಗೂ ಮೆರವಣಿಗೆ ನಡೆಯಲಿದೆ. ಸದ್ಯ ಎಂಎಲ್‌ಸಿ ಸ್ಥಾನದಿಂದ ಸಿ.ಟಿ.ರವಿ ವಜಾಗೊಳಿಸುವಂತೆ ಆಗ್ರಹಿಸಿದ್ದಾರೆ.
ಕಾರ್ಯಕರ್ತರಿಂದ ಸಂಭ್ರಮಾಚರಣೆ
ಇನ್ನು ಸಿ.ಟಿ.ರವಿ ಬಿಡುಗಡೆಗೆ ಹೈಕೋರ್ಟ್ ಮಧ್ಯಂತರ ಆದೇಶ ಹಿನ್ನೆಲೆ ಎಲ್ಲೆಡೆ ಬಿಜೆಪಿ ಕಾರ್ಯಕರ್ತರಿಂದ ಸಂಭ್ರಮಾಚರಣೆ ಮಾಡಲಾಗುತ್ತಿದೆ. ಚಿಕ್ಕಮಗಳೂರಿನ ಬಸವನಹಳ್ಳಿ ರಸ್ತೆಯ ಸಿ.ಟಿ.ರವಿ ಮನೆ ಮುಂದೆ ಕಾರ್ಯಕರ್ತರಿಂದ ಸಂಭ್ರಮಸಲಾಗಿದ್ದು, ಸಿ.ಟಿ.ರವಿ ಸೋದರಿ ಮತ್ತು ಮಗ ಭಾಗಿ ಆಗಿದ್ದಾರೆ.
ಇದನ್ನೂ ಓದಿ: ಸಿಟಿ ರವಿಯವರನ್ನು ತಕ್ಷಣ ಬಿಡುಗಡೆ ಮಾಡುವಂತೆ ಹೈಕೋರ್ಟ್ ಆದೇಶ
ಸಿಟಿ ರವಿ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಲಾಗಿದ್ದು, ಅಪ್ಪನ ಪರ ಘೋಷಣೆ ಕೂಗಿ ಮಗ ಸೂರ್ಯ ಸಂಭ್ರಮಿಸಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ವಿರುದ್ಧ ಆಕ್ರೋಶ ಹೊರಹಾಕಲಾಗಿದೆ.
ಇತ್ತ ಮಂಡ್ಯ ಬಿಜೆಪಿ ಕಚೇರಿ ಮುಂದೆ ಕೂಡ ಎಂಎಲ್‌ಸಿ ಸಿ.ಟಿ.ರವಿ ಫೋಟೋ ಹಿಡಿದು ಕಾರ್ಯಕರ್ತರಿಂದ ಸಂಭ್ರಮಾಚರಣೆ ಮಾಡಲಾಗಿದೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತು ಕಾಂಗ್ರೆಸ್ ವಿರುದ್ಧ ಧಿಕ್ಕಾರ ಕೂಗಿದ್ದು, ಹೆಬ್ಬಾಳ್ಕರ್ ಪರ ಗೂಂಡಾಗಳನ್ನ ಬಂಧಿಸಿ ಬಂಧಿಸಿ ಎಂದು ಘೋಷಣೆ ಹಾಕಲಾಗಿದೆ.
ಇದನ್ನೂ ಓದಿ: ಅಪ್ಪ ತಪ್ಪು ಮಾಡಲ್ಲ ಅಂತ ಗೊತ್ತಿತ್ತು, ಸತ್ಯಕ್ಕೆ ಜಯ ಸಿಕ್ಕಿದೆ: ಸೂರ್ಯ, ಸಿಟಿ ರವಿ ಮಗ
ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಬಳಿ ಕೂಡ ಪಟಾಕಿ ಸಿಡಿಸಿ ಬಿಜೆಪಿ ಕಾರ್ಯಕರ್ತರು ಸಂಭ್ರಮಿಸಿದ್ದಾರೆ. ಬಿಜೆಪಿ ಧ್ವಜ ಹಿಡಿದು ಭಾರತ್ ಮಾತಾಕೀ ಜೈ ಎಂದು ಘೋಷಣೆ ಹಾಕಿದ್ದು, ಕಾಂಗ್ರೆಸ್ ವಿರುದ್ಧ ಬಿಜೆಪಿ ಕಾರ್ಯಕರ್ತರು ಧಿಕ್ಕಾರ ಕೂಗಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 7:15 pm, Fri, 20 December 24