
ಮಂಡ್ಯ, ನ.29: ಪಾಗಲ್ ಪ್ರೇಮಿಯೊಬ್ಬನ ಹುಚ್ಚಾಟ ಹಾಗೂ ಆತನಿಗೆ ಸಾಥ್ ನೀಡಿದ ರೌಡಿಶೀಟರ್ನ ದೌರ್ಜನ್ಯಕ್ಕೆ 17 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳು ನೇಣಿಗೆ ಶರಣಾಗಿರುವ ಮನಕಲಕುವ ಘಟನೆ ಮಂಡ್ಯ ತಾಲೂಕಿನ ಚಂದಗಾಲು ಗ್ರಾಮದಲ್ಲಿ ನಡೆದಿದೆ. ಮೃತ ಬಾಲಕಿಯನ್ನು ಸಿಂಚನ (17) ಎಂದು ಗುರುತಿಸಲಾಗಿದೆ.
ಮಗಳ ಸಾವಿಗೆ ರೌಡಿಶೀಟರ್ ಹೃತಿಕ್ ಗೌಡ ಅಲಿಯಾಸ್ ಚಿಂಟು ಹಾಗೂ ಆತನ ಸ್ನೇಹಿತರ ಕಿರುಕುಳವೇ ನೇರ ಕಾರಣ ಎಂದು ಮೃತಳ ತಾಯಿ ರಂಜಿತಾ ಮತ್ತು ತಂದೆ ನಿಂಗರಾಜು ಗಂಭೀರ ಆರೋಪ ಮಾಡಿದ್ದಾರೆ. ಪಕ್ಕದೂರಿನ ಯುವಕನಾಗಿದ್ದ ರೌಡಿಶೀಟರ್ ಹೃತಿಕ್ ಗೌಡ, ತನ್ನ ಸ್ನೇಹಿತನನ್ನು ಪ್ರೀತಿಸುವಂತೆ ಸಿಂಚನಾಗೆ ನಿರಂತರವಾಗಿ ಮೆಸೇಜ್ ಮಾಡಿ ಕಿರುಕುಳ ನೀಡುತ್ತಿದ್ದನು ಎನ್ನಲಾಗಿದೆ. ಅಷ್ಟೇ ಅಲ್ಲದೆ, “ನನ್ನ ದೋಸ್ತನ್ನೇ ಲವ್ ಮಾಡಬೇಕು, ಅವನನ್ನೇ ಮದುವೆಯಾಗಬೇಕು” ಎಂದು ಬೆದರಿಕೆ ಹಾಕುತ್ತಿದ್ದನು ಎಂದು ಆರೋಪಿಸಲಾಗಿದೆ. ಆದರೆ ಸಿಂಚನ ಮಾತ್ರ “ನಾನು ಚೆನ್ನಾಗಿ ಓದಬೇಕು” ಎಂದು ಪ್ರೀತಿಯ ಪ್ರಸ್ತಾವನೆಯನ್ನು ತಿರಸ್ಕರಿಸಿದ್ದಳು.
ಈ ವಿಚಾರವನ್ನು ಕೆಲವು ದಿನಗಳ ಹಿಂದೆಯೇ ಪೋಷಕರು ಯುವಕನ ಮನೆಯವರ ಗಮನಕ್ಕೂ ತಂದಿದ್ದರು. ಆದರೂ ಪುಂಡರ ಕಿರುಕುಳ ಮಾತ್ರ ನಿಂತಿರಲಿಲ್ಲ ಎಂದು ಕುಟುಂಬಸ್ಥರು ದೂರಿದ್ದಾರೆ. ಘಟನೆ ನಡೆದ ದಿನ ಎರಡು ಬೈಕ್ಗಳಲ್ಲಿ ನಾಲ್ವರು ಯುವಕರು ಸಿಂಚನ ಮನೆಗೆ ನುಗ್ಗಿ ಬಾಲಕಿ ಹಾಗೂ ಪೋಷಕರ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಮನೆಯೊಳಗಿಂದ ಜೋರಾಗಿ ಚೀರಾಟ ಕೇಳುತ್ತಿದ್ದಂತೆ ಸ್ಥಳೀಯರು ಸಹಾಯಕ್ಕೆ ಧಾವಿಸಿದ್ದು, ಅಷ್ಟರಲ್ಲಾಗಲೇ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಅವಮಾನ ಮತ್ತು ಭಯದಿಂದ ತೀವ್ರವಾಗಿ ಮನನೊಂದ ಸಿಂಚನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಕೈಯಲ್ಲಿ ಪುಸ್ತಕ ಹಿಡಿದು ಭವಿಷ್ಯದ ಕನಸು ಕಾಣಬೇಕಿದ್ದ ಮಗಳು ಇಂದು ಹೆಣವಾಗಿದ್ದಾಳೆ ಎಂದು ಪೋಷಕರು ಕಣ್ಣೀರಿಡುತ್ತಿದ್ದು, ಮಗಳ ಸಾವಿಗೆ ಕಾರಣರಾದ ಆರೋಪಿಗಳನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ನೀಡಬೇಕು ಎಂದು ಕುಟುಂಬಸ್ಥರು ಆಗ್ರಹಿಸಿದ್ದಾರೆ. ಸದ್ಯ ಮಂಡ್ಯದ ಶಿವಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಲೆಮರೆಸಿಕೊಂಡಿರುವ ರೌಡಿಶೀಟರ್ ಹೃತಿಕ್ ಗೌಡ ಹಾಗೂ ಆತನ ಸಹಚರರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ ನ
Published On - 5:33 pm, Sun, 29 November 26