AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೇಮಾವತಿ ಎಡದಂಡೆ ನಾಲೆ ಆಧುನೀಕರಣ ಕಾಮಗಾರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ

ಅದು ಸಾವಿರಾರು ರೈತರ ಜೀವನಾಡಿಯಾಗಿರುವ ನಾಲೆ‌. ನೀರು ಫೋಲಾಗುವುದನ್ನು ತಡೆಯಲು ಎಂದೇ ನಾಲೆ ಆಧುನೀಕರಣ ಮಾಡಲಾಗಿತ್ತು. ಕಾಮಗಾರಿ ಮುಗಿದ ಮೂರೇ ವರ್ಷಕ್ಕೆ ಕಾಂಕ್ರೀಟ್ ಕಿತ್ತು ಬಂದಿದ್ದು, ನೂರಾರು ಕೋಟಿ ರೂಪಾಯಿ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಅಷ್ಟಕ್ಕೂ ಆ ನಾಲೆ ಯಾವುದು? ಕಾಂಕ್ರೀಟ್ ಕಿತ್ತು ಬರ್ತಿರೋದಕ್ಕೆ ಕಾರಣ ಏನು ಅಂತಿರಾ? ಈ ಸ್ಟೋರಿ ನೋಡಿ.

ಹೇಮಾವತಿ ಎಡದಂಡೆ ನಾಲೆ ಆಧುನೀಕರಣ ಕಾಮಗಾರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ
Hemavati Canal
ಪ್ರಶಾಂತ್​ ಬಿ.
| Edited By: |

Updated on: Feb 21, 2025 | 9:10 PM

Share

ಮಂಡ್ಯ, (ಫೆಬ್ರವರಿ 21): ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಜೀವನಾಡಿ ಅಂದಾಕ್ಷಣ ತಟ್ಟನೆ ನೆನಪಾಗುವುದು ಕೆಆರ್​​ಎಸ್ ಡ್ಯಾಂ. ಆದ್ರೆ ಜಿಲ್ಲೆಯ ಏಳು ತಾಲ್ಲೂಕುಗಳ ಪೈಕಿ ಐದು ತಾಲ್ಲೂಕುಗಳು ಮಾತ್ರ ಕೆ.ಆರ್.ಎಸ್ ಅಚ್ಚುಕಟ್ಟು ವ್ಯಾಪ್ತಿಗೆ ಬಂದ್ರೆ ಉಳಿದ ಕೆ.ಆರ್.ಪೇಟೆ ಹಾಗೂ ನಾಗಮಂಗಲ ತಾಲ್ಲೂಕುಗಳಿಗೆ ಹಾಸನದ ಹೇಮಾವತಿ ಜಲಾಶಯವೇ ಆಸರೆ. ಈ ಎರಡು ತಾಲ್ಲೂಕುಗಳಿಗೆ ನೀರು ಪೂರೈಸುವ ಹೇಮಾವತಿ ಎಡದಂಡೆ ನಾಲೆ ಆಧುನೀಕರಣದ ಹೆಸರಲ್ಲಿ ನೂರಾರು ಕೋಟಿ ಲೂಟಿ ಮಾಡಿರುವ ಗಂಭೀರ ಆರೋಪ ಕೇಳಿಬಂದಿದೆ.

ಅಂದಹಾಗೆ ಈ ನಾಲೆಯನ್ನ ಆಧುನೀಕರಣ ಮಾಡಬೇಕು ಎಂಬುದು ರೈತರ ಬಹಳ ವರ್ಷಗಳ ಬೇಡಿಕೆಯಾಗಿತ್ತು. ಆ ಹಿನ್ನಲೆಯಲ್ಲಿ ಹಿಂದಿನ ಬಿಜೆಪಿ ಸರ್ಕಾರ 140 ಕೀಮಿ ನಾಲೆ ಅಭಿವೃದ್ದಿಗೆ ಮುಂದಾಗಿತ್ತು. ಅದಕ್ಕಾಗಿ 883 ಕೋಟಿ ರೂ. ಯೋಜನೆಯನ್ನ ಸಿದ್ದಪಡಿಸಿ, ಏಜೆನ್ಸಿಯೊಂದಕ್ಕೆ ಕಾಮಗಾರಿಯ ಗುತ್ತಿಗೆ ನೀಡಿತ್ತು. 2021ರಲ್ಲಿ ಆಧುನೀಕರಣ ಕಾಮಗಾರಿ ಮುಗಿದಿದೆ ಎಂದು ಹಣ ಬಿಡುಗಡೆ ಮಾಡಲಾಗಿದೆ. ಅದ್ರೆ ಕಾಮಗಾರಿ ಮುಗಿದ ಮೂರೇ ವರ್ಷಕ್ಕೆ ಕಾಂಕ್ರೀಟ್ ಕಿತ್ತು ಬರುತ್ತಿದೆ. ಹೀಗಾಗಿ ಇದು ಸಂಪೂರ್ಣವಾಗಿ ಕಳಪೆಯಿಂದ ಕೂಡಿದೆ ಎಂದು ರೈತರು ಆರೋಪಿಸುತ್ತಿದ್ದಾರೆ.

ಇದನ್ನೂ ಓದಿ: ಮಂಡ್ಯದಲ್ಲಿ ಕಾಂಗ್ರೆಸ್ ಜೆಡಿಎಸ್ ವಾಟರ್ ವಾರ್, ಕಾವೇರಿ ಆರನೇ ಹಂತದ ಯೋಜನೆಗೆ ದಳ ವಿರೋಧ: ಕಾರಣವೇನು?

ಅಲ್ಲದೆ ಕೆ.ಆರ್.ಪೇಟೆ ತಾಲ್ಲೂಕಿನ ಪಿ.ಬಿ.ಮಂಚನಹಳ್ಳಿ ಗ್ರಾಮದ ಬಳಿ ಎಸ್ಕೇಪ್ ಗೇಟ್ ಬದಲಾವಣೆ ಮಾಡದಿದ್ರೂ ಗುತ್ತಿಗೆ ಪಡೆದ ಸಂಸ್ಥೆಗೆ ಹಣ ಮಂಜೂರಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ. ಜೊತೆಗೆ ನಾಲೆಗೆ ರಕ್ಷಣ ಕಲ್ಲುಗಳನ್ನ ನಿರ್ಮಾಣ ಮಾಡಿದ್ದೇವೆ ಎಂದು ನಾಲ್ಕು ಕೋಟಿ ರೂ. ಹಣವನ್ನು ಸಹ ಅಬೇಸ್ ಮಾಡಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರ ಹಾಗೂ ಲೋಕಾಯುಕ್ತಕ್ಕೆ ದೂರು ಕೊಟ್ಟರೂ ಯಾವುದೇ ಪ್ರಯೋಜನವಾಗಿಲ್ಲ. ಭ್ರಷ್ಟ ಅಧಿಕಾರಿಗಳನ್ನ ಸರ್ಕಾರ ರಕ್ಷಣೆ ಮಾಡುತ್ತಿದೆ ಎಂದು ರೈತರು ಆರೋಪಿಸುತ್ತಿದ್ದಾರೆ.

ಇನ್ನು ಈ ಬಗ್ಗೆ ಮಂಡ್ಯ ಜಿಲ್ಲಾಧಿಕಾರಿ ಡಾ.ಕುಮಾರ್ ಅವರಿಗೂ ರೈತರು ದೂರು ನೀಡಿದ್ದು, ತನಿಖೆ ನಡೆಸುವಂತೆ ನೀರಾವರಿ ಇಲಾಖೆಯ ವ್ಯವಸ್ಥಾಪಕರಿಗೆ ಜಿಲ್ಲಾಧಿಕಾರಿಗಳು ಪತ್ರ ಬರೆದಿದ್ದಾರಂತೆ.

ಒಟ್ಟಿನಲ್ಲಿ ಹತ್ತಾರು ವರ್ಷಗಳ ಬೇಡಿಕೆ ಈಡೇರಿತು ಎನ್ನುವ ಸಂಭ್ರಮದಲ್ಲಿದ್ದ ರೈತರಿಗೆ ಕಳಪೆ ಕಾಮಗಾರಿ ಶಾಕ್ ತಂದೊಡ್ಡಿದೆ. ನೂರಾರು ಕೋಟಿ ಹಣ ನೀರಿನಲ್ಲಿ ಹೋಮ ಮಾಡಿದಂತಾಗಿದ್ದು, ಸರ್ಕಾರ ಈಗಲಾದರೂ ಎಚ್ಚೆತ್ತುಕೊಂಡು ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗುತ್ತಾ ಕಾದುನೋಡಬೇಕಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ