
ಮಂಡ್ಯ, ಸೆಪ್ಟೆಂಬರ್ 16: ಮದ್ದೂರಿನಲ್ಲಿ ಸಾಮೂಹಿಕ ಗಣೇಶ ವಿಸರ್ಜನೆಗೆ ಮೆರವಣಿಗೆಗೆ ಕ್ಷಣಗಣನೆ ಆರಂಭವಾಗಿದ್ದು, ಪಟ್ಟಣ ಕೇಸರಿಮಯವಾಗಿ ಮಾರ್ಪಟ್ಟಿದೆ. ಮದ್ದೂರಿನ ಪ್ರಮುಖ ರಸ್ತೆ, ಸರ್ಕಲ್ಗಳಲ್ಲಿ ಕೇಸರಿ ಬಂಟಿಂಗ್ಸ್, ರಸ್ತೆಯುದ್ದಕ್ಕೂ ಬ್ಯಾನರ್, ಬಾವುಟ ಅಳವಡಿಕೆ ಮಾಡಲಾಗಿದೆ.ಮಳವಳ್ಳಿ ರಸ್ತೆಯ ಈಶ್ವರನ ದೇಗುಲದಿಂದ ಆರಂಭವಾಗುವ ಮೆರವಣಿಗೆ ಪೇಟೆಬೀದಿ ಮಾರ್ಗವಾಗಿ ಕೊಲ್ಲಿ ಸರ್ಕಲ್ವರೆಗೂ ಸಾಗಲಿದೆ. ಪೇಟೆ ಬೀದಿಯ ಮಸೀದಿ ಪಕ್ಕದಲ್ಲೇ ಗಣೇಶ ಮೆರವಣಿಗೆ ಸಾಗಲಿದ್ದು, ಕಾರ್ಯಕ್ರಮದಲ್ಲಿ ವಿಪಕ್ಷ ನಾಯಕರಾದ ಆರ್.ಅಶೋಕ್, ಛಲವಾದಿ ನಾರಾಯಣಸ್ವಾಮಿ, MLC ಸಿ.ಟಿ.ರವಿ, ಮಾಜಿ ಸಚಿವ ಡಿ.ಸಿ.ತಮ್ಮಣ್ಣ ಸೇರಿದಂತೆ ಹಲವರು ಭಾಗಿಯಾಗಲಿದ್ದಾರೆ.
ಕಳೆದ ವರ್ಷ ಮದ್ದೂರಿನಲ್ಲಿ ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ನಡೆದಿದ್ದ ಕಲ್ಲು ತೂರಾಟ ಮತ್ತು ಗಲಾಟೆ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿರುವ ಬಿಜೆಪಿ-ಜೆಡಿಎಸ್ ದೋಸ್ತಿ ನಾಯಕರು, ಈ ಬಾರಿ ಅತ್ಯಂತ ಅದ್ದೂರಿಯಾಗಿ 108 ಗಣೇಶ ಮೂರ್ತಿಗಳ ಸಾಮೂಹಿಕ ವಿಸರ್ಜನೆ ಮಾಡಲು ಬೃಹತ್ ಯೋಜನೆ ರೂಪಿಸಿದ್ದಾರೆ. ಗಣೇಶೋತ್ಸವದ ನೆಪದಲ್ಲಿ ಮಂಡ್ಯ ಜಿಲ್ಲೆಯಲ್ಲಿ ದೋಸ್ತಿ ಪಕ್ಷಗಳು ಒಂದಾಗಿ ತಮ್ಮ ರಾಜಕೀಯ ಶಕ್ತಿಯನ್ನೂ ಪ್ರದರ್ಶಿಸಲು ಸಜ್ಜಾಗಿರುವುದರಿಂದ ಕಾರ್ಯಕ್ರಮ ಮಹತ್ವ ಪಡೆದುಕೊಂಡಿದೆ.
ಇದನ್ನೂ ಓದಿ: ಡಿಜೆಗೆ ಪೊಲೀಸರಿಂದ ಅನುಮತಿ ನಿರಾಕರಣೆ: ರಸ್ತೆಯಲ್ಲೇ ಗಣೇಶ ಮೂರ್ತಿ ಇಟ್ಟು ಪ್ರತಿಭಟನೆ
ಸಾಮೂಹಿಕ ಗಣೇಶ ವಿಸರ್ಜನೆ ಹಿನ್ನಲೆ ಮುಂಜಾಗ್ರತಾ ಕ್ರಮವಾಗಿ ಮದ್ದೂರಿನಲ್ಲಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಭದ್ರತೆಗೆ ಓರ್ವ ಎಸ್ಪಿ, ನಾಲ್ವರು DySP, 10 ಇನ್ಸ್ಪೆಕ್ಟರ್ಗಳು, 14 ಸಬ್ ಇನ್ಸ್ಪೆಕ್ಟರ್, 35 ಎಎಸ್ಐ, 2 ಕೆಎಸ್ಆರ್ಪಿ ತುಕಡಿ, 1 CRPF ತುಕಡಿ ಸೇರಿ 600ಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ. ಮೆರವಣಿಗೆ ತೆರಳುವ ಮಾರ್ಗಗಳಲ್ಲಿ 30 ಸಿಸಿಕ್ಯಾಮರಾಗಳ ಅಳವಡಿಕೆ ಮಾಡಲಾಗಿದ್ದು, ಮಳವಳ್ಳಿ ರಸ್ತೆಯ ಈಶ್ವರ ದೇವಾಲಯದಿಂದ ಆರಂಭವಾಗುವ ಮೆರವಣಿಗೆ ಪೇಟೆಬೀದಿ ಮಾರ್ಗವಾಗಿ ತೆರಳಿ ಶಿಂಷಾ ನದಿಯಲ್ಲಿ ಗಣೇಶ ವಿಸರ್ಜನೆ ನಡೆಯಲಿದೆ. ಅನುಮತಿ ಪಡೆದ ಮಾರ್ಗದಲ್ಲಿ ಮೆರವಣಿಗೆ ತೆರಳಲು ನಿರ್ಬಂಧ ಇಲ್ಲ. ಆದರೆ ಸುಪ್ರೀಂಕೋರ್ಟ್ ಮಾರ್ಗಸೂಚಿ ಪ್ರಕಾರ ಡಿಜೆಗೆ ಅನುಮತಿ ನಿರಾಕರಿಸಲಾಗಿದೆ. ಆದರೆ ಧ್ವನಿವರ್ಧಕ ಅನುಮತಿ ಪಡೆದು ಸ್ಪೀಕರ್ ಬಳಸಲು ಅವಕಾಶ ಇದೆ ಎಂದು ಮಂಡ್ಯ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭಾರಾಣಿ ಮಾಹಿತಿ ನೀಡಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.