ಮಳೆರಾಯನ ಮುನಿಸು: KRS ನೀರಿನ ಮಟ್ಟ ಕುಸಿತ; ಮಂಡ್ಯದಲ್ಲಿ ಕೃಷಿ ಚಟುವಟಿಕೆ ಸಂಪೂರ್ಣ ಸ್ತಬ್ಧ

Mandya Drought Crisis: ಮಂಡ್ಯ ಜಿಲ್ಲೆಯಲ್ಲಿ ತೀವ್ರ ಮಳೆ ಕೊರತೆಯಿಂದ ರೈತರು ಸಂಕಷ್ಟದಲ್ಲಿದ್ದಾರೆ. ಮುಂಗಾರು ಮಳೆ ಕೈಕೊಟ್ಟಿದ್ದರಿಂದ ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ತಬ್ಧಗೊಂಡಿವೆ. KRS ಜಲಾಶಯದ ನೀರಿನ ಮಟ್ಟ ಗಣನೀಯವಾಗಿ ಕುಸಿದಿದ್ದು, ಕೃಷಿಗೆ ನೀರಿಲ್ಲದೆ ಬಿತ್ತನೆ ಕಾರ್ಯ ಅಸಾಧ್ಯವಾಗಿದೆ. 83% ಮಳೆ ಕೊರತೆ ಎದುರಿಸುತ್ತಿರುವ ಜಿಲ್ಲೆಯನ್ನು ಬರ ಪೀಡಿತ ಎಂದು ಘೋಷಿಸುವಂತೆ ರೈತರು ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಮಳೆರಾಯನ ಮುನಿಸು: KRS ನೀರಿನ ಮಟ್ಟ ಕುಸಿತ; ಮಂಡ್ಯದಲ್ಲಿ ಕೃಷಿ ಚಟುವಟಿಕೆ ಸಂಪೂರ್ಣ ಸ್ತಬ್ಧ
ಬರ
Image Credit source: tv9 kannada
Edited By:

Updated on: Jul 24, 2026 | 6:02 PM

ಮುಖ್ಯಾಂಶಗಳು

  • ರಾಜ್ಯದಲ್ಲಿ ಮುಂದುವರಿದ ಮಳೆರಾಯನ ಮುನಿಸು
  • ಮಂಡ್ಯದಲ್ಲಿ ಕೃಷಿ ಚಟುವಟಿಕೆ ಸಂಪೂರ್ಣ ಸ್ತಬ್ಧ
  • ಜೀವನಾಡಿ ಕೆಆರ್​ಎಸ್ ಜಲಾಶಯ ನೀರಿನ ಮಟ್ಟ ಕುಸಿತ

ಮಂಡ್ಯ, ಜುಲೈ 24: ಜಿಲ್ಲೆಯಲ್ಲಿ ಮಳೆರಾಯನ (rain) ಮುನಿಸು ಮುಂದುವರಿದಿದೆ. ಮುಂಗಾರು ಶುರುವಾಗಿ ಜುಲೈ ಕಳೆಯುತ್ತಾ ಬಂದರೂ ಒಂದು ಹನಿ ಮಳೆಯಿಲ್ಲದೆ ಮಂಡ್ಯದ ರೈತರು ಕಂಗಾಲಾಗಿದ್ದಾರೆ. ಜಮೀನುಗಳು ಹಚ್ಚಹಸಿರಿನಿಂದ ಕಂಗೊಳಿಸಬೇಕಿದ್ದ ಸಮಯದಲ್ಲಿ ಒಣಭೂಮಿಯಾಗಿ (drought)  ಮಾರ್ಪಟ್ಟಿವೆ. ಇತ್ತ ಕೆಆರ್​ಎಸ್ ಜಲಾಶಯದಲ್ಲೂ ನೀರಿನ ಮಟ್ಟ ಕುಸಿದಿದ್ದು, ಕೃಷಿಗೆ ನೀರಿಲ್ಲದೆ ಬಿತ್ತನೆ ಕಾರ್ಯ ಸಂಪೂರ್ಣ ಸ್ತಬ್ಧಗೊಂಡಿದೆ.

ಜಿಲ್ಲೆಯಲ್ಲಿ ಬರೋಬ್ಬರಿ 83% ಮಳೆ ಕೊರತೆ

​ಮಂಡ್ಯ ಅಂದರೆ ನೆನಪಾಗುವುದು ಹಚ್ಚಹಸಿರಿನ ಕಬ್ಬಿನ ಗದ್ದೆಗಳು. ಆದರೆ ಈ ಬಾರಿ ಪರಿಸ್ಥಿತಿ ತದ್ವಿರುದ್ಧವಾಗಿದೆ. ಕಾವೇರಿ ಮಡಿಲಲ್ಲಿ ಮಳೆರಾಯನ ಕೃಪೆಯಿಲ್ಲದೆ ಕೃಷಿ ಚಟುವಟಿಕೆಗಳು ಸಂಪೂರ್ಣ ಸ್ತಬ್ಧಗೊಂಡಿವೆ. ಜುಲೈ ತಿಂಗಳಲ್ಲಿ ಆರ್ಭಟಿಸಬೇಕಿದ್ದ ಮುಂಗಾರು ಮಳೆ ಸಂಪೂರ್ಣ ಕೈಕೊಟ್ಟಿದ್ದು, ಮಂಡ್ಯ ಜಿಲ್ಲೆಯಲ್ಲಿ ಬರೋಬ್ಬರಿ 83% ಮಳೆ ಕೊರತೆ ಎದುರಾಗಿದೆ. ಇದರಿಂದ ಜಮೀನಿನಲ್ಲಿ ಉಳುಮೆ ಮಾಡುವುದಕ್ಕೂ ತೇವಾಂಶ ಇಲ್ಲದಂತಾಗಿದ್ದು, ರೈತರು ಆಗಸದತ್ತ ಮುಖ ಮಾಡಿ ಕುಳಿತುಕೊಳ್ಳುವಂತಾಗಿದೆ.​

ಕೃಷಿ ಚಟುವಟಿಕೆಗಿಲ್ಲ ನೀರು 

ಇನ್ನೊಂದೆಡೆ ಜೀವನಾಡಿ ಕೆಆರ್​ಎಸ್ ಜಲಾಶಯದ ಸ್ಥಿತಿ ಕೂಡ ಶೋಚನೀಯವಾಗಿದೆ. ಡ್ಯಾಂನಲ್ಲಿ ಸದ್ಯಕ್ಕೆ ಇರುವುದು ಕೇವಲ 92 ಅಡಿ ನೀರು ಮಾತ್ರ. ಇದರಲ್ಲಿ ಕೇವಲ 12 ಟಿಎಂಸಿ ನೀರು ಮಾತ್ರ ಬಳಕೆಗೆ ಲಭ್ಯವಿದೆ. ಹೀಗಾಗಿ ಸರ್ಕಾರ ಲಭ್ಯವಿರುವ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕೆ ಮಾತ್ರ ಕಾಯ್ದಿರಿಸಿದ್ದು, ಆಣೆಕಟ್ಟೆಯಿಂದ ಕೃಷಿಗೆ ನೀರು ಹರಿಸುವುದಿಲ್ಲ ಎಂದು ತಿಳಿಸಲಾಗಿದೆ.

ಇದನ್ನೂ ಓದಿ: Karnataka Dam Water Level: ಇನ್ನೊಂದೇ ವಾರದಲ್ಲಿ ಪೂರ್ಣ ಭರ್ತಿಯಾಗಲಿದೆ ಆಲಮಟ್ಟಿ ಡ್ಯಾಂ! ಜಲಾಶಯಗಳ ನೀರಿನ ಮಟ್ಟದ ವಿವರ

ಪರಿಣಾಮ ಕಾಲುವೆ ನಂಬಿಕೊಂಡಿದ್ದ ರೈತರಿಗೆ ಬಿತ್ತನೆ ಮಾಡಲಾಗದೆ ದೊಡ್ಡ ಹೊಡೆತ ಬಿದ್ದಿದೆ. ಜಿಲ್ಲೆಯಲ್ಲಿ ಈ ಬಾರಿ 2 ಲಕ್ಷದ 6 ಸಾವಿರ ಹೆಕ್ಟೇರ್ ಕೃಷಿ ಗುರಿ ಹೊಂದಲಾಗಿತ್ತು. ಆದರೆ, ಈವರೆಗೆ ಬಿತ್ತನೆಯಾಗಿರುವುದು ಕೇವಲ 18 ಸಾವಿರ ಹೆಕ್ಟೇರ್ ಮಾತ್ರ. ಅಂದರೆ ಶೇಕಡಾ 9 ರಷ್ಟು ಮಾತ್ರ.

ಬರ ಪೀಡಿತ ಜಿಲ್ಲೆ ಘೋಷಣೆ ಒತ್ತಾಯ

ಮಂಡ್ಯ ಜಿಲ್ಲೆಯ ಎಲ್ಲಾ 7 ತಾಲೂಕುಗಳಲ್ಲಿ ಈಗ ಬರದ ಛಾಯೆ ಆವರಿಸಿದೆ. ಮಳೆ ಇಲ್ಲ, ನದಿ ನೀರೂ ಸಿಗದೇ  ರೈತರು ಸಂಕಷ್ಟಕ್ಕೀಡಾಗಿದ್ದಾರೆ. ಹೀಗಾಗಿ ಮಂಡ್ಯ ಜಿಲ್ಲೆಯನ್ನ ಬರ ಪೀಡಿತ ಎಂದು ಘೋಷಿಸಿ ಪರಿಹಾರ ನೀಡಬೇಕು ಎಂದು ರೈತರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ದಿಲೀಪ್​, ಚೌಡಹಳ್ಳಿ

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದವನು. ಕಳೆದ 13 ವರ್ಷದಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ.‌ಪತ್ರಿಕೋಧ್ಯಮ ಪದವಿದರನಾಗಿದ್ದೇನೆ.ಮೊದಲಿಗೆ ಮೈಸೂರಿನ ಸ್ಥಳಿಯ ವಾಹಿನ ಹಾಗೂ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸಿದ್ದೆ.ನಂತರ ಪಬ್ಲಿಕ್ ಟಿವಿಯಲ್ಲಿ ಚಾಮರಾಜನಗರ ಜಿಲ್ಲಾವರದಿಗಾರನಾಗುವ ಅವಕಾಶ ಸಿಕ್ಕಿತು. ಅದಾದ ಬಳಿಕ ಐದು ವರ್ಷಗಳ ಕಾಲ ಚಾಮರಾಜನಗರದಲ್ಲಿ ಕೆಲಸ ನಿರ್ವಹಿಸಿದ್ದೇನೆ. ಬಳಿಕ 2018 ರಲ್ಲಿ ಟಿರ್ವಿ ಮೈಸೂರು ವರದಿಗಾರನಾಗುವ ಅವಕಾಶ ಸಿಕ್ಕಿತು. ಅಂದಿನಿಂದ ಮೈಸೂರು ಜಿಲ್ಲಾ ವರದಿಗಾರರನಾಗಿ ಕೆಲಸ ನಿರ್ವಹಿಸಿದ್ದೇನೆ. ಸಧ್ಯ ಮಂಡ್ಯ ಜಿಲ್ಲಾ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಕೃಷಿ, ಸಾಹಿತ್ಯ ಆಸಕ್ತಿ ಇದೆ.

Read More
Loading...
Unable to load recommendations.
Follow Us