ವಿಷ ಸೇವಿಸಿ ಬಳಿಕ ನಾಲೆಗೆ ಹಾರಿ ಒಂದೇ ಕುಟುಂಬದ ಮೂವರು ಸಾವು: ಕಾರಣವೇನು?
ಸಾಲಭಾದೆಯಿಂದ ವಿಸಿ ನಾಲೆಗೆ ಹಾರಿ ಒಂದೇ ಕುಟುಂಬದ ಮೂವರು ದಾರುಣ ಅಂತ್ಯ ಕಂಡಿರುವಂತಹ ಘಟನೆ ಮಂಡ್ಯ ತಾಲೂಕಿನ ಮಂಡ್ಯ ತಾಲೂಕಿನ ವಿಸಿ ನಾಲೆಯಲ್ಲಿ ನಡೆದಿದೆ. ಮೃತರು ಸುಮಾರು 3 ಲಕ್ಷ ರೂ. ಸಾಲ ಮಾಡಿಕೊಂಡಿದ್ದು, ಸಾಲಕೊಟ್ಟವರು ಮನೆ ಬಳಿ ಬಂದು ಗಲಾಟೆ ಮಾಡಿದ್ದಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಮಂಡ್ಯ, ಫೆಬ್ರವರಿ 24: ಇತ್ತೀಚೆಗೆ ಮೈಸೂರಿನ ವಿಶ್ವೇಶ್ವರಯ್ಯನಗರದ ಅಪಾರ್ಟ್ಮೆಂಟ್ನಲ್ಲಿ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದರು. ಹಣಕಾಸಿನ ಸಮಸ್ಯೆಯಿಂದಾಗಿ ಆತ್ಮಹತ್ಯೆ (death) ಮಾಡಿಕೊಂಡಿರುವುದಾಗಿ ಡೆತ್ನೋಟ್ನಲ್ಲಿ ಉಲ್ಲೇಖಿಸಲಾಗಿತ್ತು. ಇದೀಗ ಸಾಲಭಾದೆಗೆ ಬೇಸತ್ತು ಒಂದೇ ಕುಟುಂಬದ ಮೂವರು ವಿಷ ಸೇವಿಸಿ, ನಂತರ ವಿಸಿ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವಂತಹ ಘಟನೆ ಮಂಡ್ಯದಲ್ಲಿ ನಡೆದಿದೆ.
ಮರ್ಯಾದೆಗೆ ಅಂಜಿ ಆತ್ಮಹತ್ಯೆ
ಮಾಸ್ತಪ್ಪ, ರತ್ನಮ್ಮ ದಂಪತಿಯ ಮೃತದೇಹ ಪತ್ತೆ ಆಗಿದ್ದು, ಮಗಳು ಲಕ್ಷ್ಮೀ ಮೃತದೇಹಕ್ಕಾಗಿ ಶೋಧಕಾರ್ಯ ನಡೆದಿದೆ. ಮೃತರು ಶ್ರೀರಂಗಪಟ್ಟಣದ ಗಂಜಾಂ ನಿವಾಸಿಗಳು. ಮಾಸ್ತಪ್ಪ ಆಟೋ ಓಡಿಸಿಕೊಂಡು ಜೀವನ ಮಾಡುತ್ತಿದ್ದರು. ಸುಮಾರು 3 ಲಕ್ಷ ರೂಪಾಯಿ ಕೈಸಾಲ ಮಾಡಿಕೊಂಡಿದ್ದ ಮಾಸ್ತಪ್ಪ, ಸಾಲಕೊಟ್ಟವರು ಇಂದು ಮನೆ ಬಳಿ ಗಲಾಟೆ ಮಾಡಿದ್ದಕ್ಕೆ ನೊಂದಿದ್ದರು. ಮರ್ಯಾದೆಗೆ ಅಂಜಿ ಮಗಳೊಂದಿಗೆ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮೈಸೂರು: ಅಪಾರ್ಟ್ಮೆಂಟ್ನಲ್ಲಿ ಒಂದೇ ಕುಟುಂಬದ ನಾಲ್ವರ ಸಾವು
ಶ್ರೀರಂಗಪಟ್ಟಣದ ಗಂಜಾಂನಿಂದ ಆಟೋದಲ್ಲಿ ಬಂದು ಚಂದಗಾಲು ಬಳಿ ನಾಲೆ ಏರಿ ಮೇಲೆ ಆಟೋ ನಿಲ್ಲಿಸಿ ಮೊದಲು ದಂಪತಿ ಮತ್ತು ಮಗಳು ವಿಷ ಸೇವಿಸಿದ್ದಾರೆ. ಬಳಿಕ ವಿ.ಸಿ.ನಾಲೆಗೆ ಹಾರಿ ಮೂವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ನೇತೃತ್ವದಲ್ಲಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುಮಾರು 12 ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದ ಮಾಸ್ತಪ್ಪ, ಸಾಲಗಾರರ ಕಾಟದಿಂದ ಮನೆ ಮಾರಾಟ ಮಾಡಲೂ ಮುಂದಾಗಿದ್ದರು.
ಮೃತನ ಸಹೋದರ ಹೇಳಿದ್ದಿಷ್ಟು
ಮೃತನ ಸಹೋದರ ಶಂಕರ್ ಹೇಳಿಕೆ ನೀಡಿದ್ದು, ಸುಮಾರು 12 ಲಕ್ಷದಷ್ಟು ಸಾಲ ಇತ್ತು. ಜಮೀನು ಇನ್ನು ನಮ್ಮಗಳ ಹೆಸರಿಗೆ ಆಗಿರಲಿಲ್ಲ. ಹೀಗಾಗಿ ಜಮೀನು ಮಾರಲು ಸಾಧ್ಯವಾಗಲಿಲ್ಲ. ಇವಾಗ ಅಣ್ಣ, ಅತ್ತಿಗೆಯ ಶವ ಸಿಕ್ಕಿದೆ. ಮಗಳ ಶವ ಇನ್ನು ಸಿಕ್ಕಿಲ್ಲ. ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಬಗ್ಗೆ ಸ್ಥಳೀಯರಿಂದ ಮಾಹಿತಿ ಗೊತ್ತಾಗಿದೆ. ನಾಲೆ ಏರಿ ಮೇಲೆ ಆಟೋ ನಿಲ್ಲಿಸಿ, ವಿಷ ಸೇವಿಸಿದ್ದಾರೆ. ಆನಂತರ ನಾಲೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.
ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:57 pm, Mon, 24 February 25



