ಏ 15ಕ್ಕೆ ಬೆಂಗಳೂರಿಗೆ ಬಂದಿಳಿಯಲಿರುವ ಮೋದಿ: ಪ್ರಧಾನಿ ಮಂಡ್ಯ ಪ್ರವಾಸದ ವಿವರ ಹೀಗಿದೆ

ಪ್ರಧಾನಿ ನರೇಂದ್ರ ಮೋದಿ ಅವರು ಏಪ್ರಿಲ್ 15 ರಂದು ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಮಠಕ್ಕೆ ಭೇಟಿ ನೀಡಲಿದ್ದಾರೆ. ಭೈರವೈಕ್ಯ ಮಂದಿರ ಉದ್ಘಾಟಿಸಿ, ಕಾಲಭೈರವೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಬಿಜಿಎಸ್ ಕ್ರೀಡಾಂಗಣದಲ್ಲಿ ಭಕ್ತರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ಐತಿಹಾಸಿಕ ಭೇಟಿಯ ಸಂಪೂರ್ಣ ವೇಳಾಪಟ್ಟಿ ಮತ್ತು ಕಾರ್ಯಕ್ರಮಗಳ ವಿವರ ಇಲ್ಲಿದೆ.

ಏ 15ಕ್ಕೆ ಬೆಂಗಳೂರಿಗೆ ಬಂದಿಳಿಯಲಿರುವ ಮೋದಿ: ಪ್ರಧಾನಿ ಮಂಡ್ಯ ಪ್ರವಾಸದ ವಿವರ ಹೀಗಿದೆ
ಭೈರವೈಕ್ಯ ಮಂದಿರ, ಪ್ರಧಾನಿ ಮೋದಿ
Image Credit source: tv9 kannada
Edited By:

Updated on: Apr 14, 2026 | 3:16 PM

ಮಂಡ್ಯ, ಏಪ್ರಿಲ್​ 14: ಆದಿಚುಂಚನಗಿರಿಯಲ್ಲಿ (Adichunchanagiri) ಸುಮಾರು 80 ಕೋಟಿ ರೂ ವೆಚ್ಚದಲ್ಲಿ ಬೈರವೈಕ್ಯ ಮಂದಿರ ನಿರ್ಮಾಣವಾಗಿದ್ದು, ಸದ್ಯ ಉದ್ಘಾಟನೆಗೆ ಸಜ್ಜಾಗಿದೆ. ಚಾಲುಕ್ಯ, ಹೊಯ್ಸಳ, ಚೋಳರು ಮತ್ತು ಗಂಗರ ಕಾಲದ ಶಿಲ್ಪಕಲೆಗಳ ಸಮಾಗಮದೊಂದಿಗೆ ದ್ರಾವಿಡ ಶೈಲಿಯಲ್ಲಿ ನಿರ್ಮಾಣವಾಗಿರುವ ಮಂದಿರವನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಉದ್ಘಾಟನೆ ಮಾಡಲಿದ್ದಾರೆ. ಹೀಗಾಗಿ ನಾಳೆ ಅಂದರೆ ಏಪ್ರಿಲ್​ 15ರಂದು ಮಂಡ್ಯಕ್ಕೆ ಆಗಮಿಸಲಿದ್ದಾರೆ.

ಪ್ರಧಾನಿ ಮೋದಿ ಕಾರ್ಯಕ್ರಮದ ವೇಳಾಪಟ್ಟಿ ಹೀಗಿದೆ 

ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠಕ್ಕೆ ಭೇಟಿ ಹಿನ್ನೆಲೆ ನಾಳೆ ಬೆಳಗ್ಗೆ 10.05ಕ್ಕೆ HAL ಏರ್​ಪೋರ್ಟ್​ಗೆ ಪ್ರಧಾನಿ ಮೋದಿ ಆಗಮಿಸಿಲಿದ್ದಾರೆ. 10.10ಕ್ಕೆ ಬೆಂಗಳೂರಿನ ಹೆಚ್​​ಎಎಲ್​ನಿಂದ ತೆರಳುವ ಅವರು, ಬೆಳಗ್ಗೆ 10.50ಕ್ಕೆ ಆದಿಚುಂಚನಗಿರಿ ತಪೋವನ ಹೆಲಿಪ್ಯಾಡ್‌ಗೆ ಆಗಮಿಸುತ್ತಾರೆ. ಬಳಿಕ ರಸ್ತೆ ಮೂಲಕ ಶ್ರೀಕ್ಷೇತ್ರ ಆದಿಚುಂಚನಗಿರಿಗೆ ಆಗಮಿಸುತ್ತಾರೆ.

ಇದನ್ನೂ ಓದಿ: ಏಪ್ರಿಲ್ 15ರಂದು ಮಂಡ್ಯಕ್ಕೆ ಆಗಮಿಸಲಿರುವ ಮೋದಿ! ಆದಿಚುಂಚನಗಿರಿ ಮಠದಲ್ಲಿ ಗದ್ದಿಗೆ ಉದ್ಘಾಟನೆ

ಮೊದಲು ಗೋರಕ್ಷಕನಾಥರು ತಪಸ್ಸು ಮಾಡಿದ ಜ್ವಾಲಾಪೀಠ ದರ್ಶನ ಮಾಡಲಿರುವ ಪ್ರಧಾನಿ ಮೋದಿ, ನಂತರ ಕಾಲಭೈರವೇಶ್ವರಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಲಿದ್ದಾರೆ. ಇನ್ನು ಶ್ರೀಗಿರಿ ತಪೋವನದಿಂದ 1.5 ಕಿ.ಮೀ. ದೂರದಲ್ಲಿರುವ ಶ್ರೀಗುರು ಭೈರವೈಕ್ಯ ಮಂದಿರವನ್ನು ಬೆಳಗ್ಗೆ 11 ಗಂಟೆಗೆ ಉದ್ಘಾಟಿಸಲಿದ್ದಾರೆ. ನಂತರ ಬಿಜಿಎಸ್ ಕ್ರೀಡಾಂಗಣದಲ್ಲಿ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಭಕ್ತರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಬಳಿಕ HAL ವಿಮಾನ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಕೇರಳಕ್ಕೆ ಪ್ರಯಾಣ ಬೆಳೆಸಲಿದ್ದಾರೆ.

ಆದಿಚುಂಚನಗಿರಿಯಲ್ಲಿ ಹಬ್ಬದ ಸಂಭ್ರಮ: 2 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ

ಇನ್ನು ಪ್ರಧಾನಿ ಮೋದಿ ಆಗಮನ ಹಿನ್ನೆಲೆ ಆದಿಚುಂಚನಗಿರಿಯಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಆದಿಚುಂಚನಗಿರಿ ಕ್ಷೇತ್ರದಾದ್ಯಂತ ಫ್ಲೆಕ್ಸ್, ಕಟೌಟ್ಸ್ ರಾರಾಜಿಸುತ್ತಿವೆ. ಮಠದ ಕ್ರೀಡಾಂಗಣದಲ್ಲಿ ಬೃಹತ್ ವೇದಿಕೆ ನಿರ್ಮಾಣ ಮಾಡಲಾಗಿದ್ದು, ಕಾರ್ಯಕ್ರಮದಲ್ಲಿ 1 ಲಕ್ಷಕ್ಕೂ ಅಧಿಕ ಜನ ಭಾಗವಹಿಸುವ ನಿರೀಕ್ಷೆ ಇದೆ. ಹೀಗಾಗಿ ಆದಿಚುಂಚನಗಿರಿಯಲ್ಲಿ 2 ಸಾವಿರಕ್ಕೂ ಹೆಚ್ಚು ಪೊಲೀಸರ ನಿಯೋಜನೆ ಮಾಡಲಾಗಿದೆ.

ನಾಳೆ ಮದ್ಯ ಮಾರಾಟ ನಿಷೇಧ

ಆದಿಚುಂಚನಗಿರಿ ಸುತ್ತಮುತ್ತ ನಾಳೆ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ. ನಾಳೆ ಬೆಳಗ್ಗೆ 6ರಿಂದ ಸಂಜೆ 6 ಗಂಟೆವರೆಗೆ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬೆಳ್ಳೂರು ಪಟ್ಟಣ ಪಂಚಾಯಿತಿಯ 8 ಕಿಮೀ ವ್ಯಾಪ್ತಿಯಲ್ಲಿ ಮದ್ಯ ಮಾರಾಟಕ್ಕೆ ನಿಷೇಧಿಸಿ ಮಂಡ್ಯ ಡಿಸಿ ಡಾ.ಕುಮಾರ್ ಆದೇಶ ಹೊರಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 3:15 pm, Tue, 14 April 26

Follow Us