ಏಪ್ರಿಲ್ 15ರಂದು ಮಂಡ್ಯಕ್ಕೆ ಆಗಮಿಸಲಿರುವ ಮೋದಿ! ಆದಿಚುಂಚನಗಿರಿ ಮಠದಲ್ಲಿ ಗದ್ದಿಗೆ ಉದ್ಘಾಟನೆ
ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 15ರಂದು ಮಂಡ್ಯಕ್ಕೆ ಭೇಟಿ ನೀಡಲಿದ್ದಾರೆ. ನಾಗಮಂಗಲದ ಆದಿಚುಂಚನಗಿರಿ ಮಠದಲ್ಲಿ ಮಾಜಿ ಪೀಠಾಧಿಪತಿ ಬಾಲಗಂಗಾಧರನಾಥ ಸ್ವಾಮಿ ಅವರ ನೂತನ ಗದ್ದಿಗೆಯನ್ನು ಉದ್ಘಾಟಿಸಲಿದ್ದಾರೆ. ನಂತರ ಬಿಜಿಎಸ್ ಮೈದಾನದಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾಡಳಿತ ಭದ್ರತೆ ಹಾಗೂ ವ್ಯವಸ್ಥೆಗಳ ಸಿದ್ಧತೆ ಕೈಗೊಂಡಿದೆ. ಮೋದಿಯವರ ಸಂಪೂರ್ಣ ದಿನಚರಿ ಇಲ್ಲಿದೆ.

ಮಂಡ್ಯ, ಏಪ್ರಿಲ್ 11: ಪ್ರಧಾನಿ ನರೇಂದ್ರ ಮೋದಿ (Narendra Modi) ಏಪ್ರಿಲ್ 15ರಂದು ಮಂಡ್ಯ ಜಿಲ್ಲಾ ಪ್ರವಾಸ ಕೈಗೊಳ್ಳಲಿದ್ದು, ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಮಠದಲ್ಲಿ ನಡೆಯುವ ಮಹತ್ವದ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಬೆಳಗ್ಗೆ 11 ಗಂಟೆಗೆ ನೂತನ ಗದ್ದಿಗೆ ಉದ್ಘಾಟಿಸಲಿರುವ ಅವರು, ನಂತರ ಕೇರಳಕ್ಕೆ ಪ್ರಯಾಣಿಸಲಿದ್ದಾರೆ.
ಮೋದಿಯ ಅಂದಿನ ದಿನಚರಿಯೇನು?
ಬೆಳಿಗ್ಗೆ ದೆಹಲಿಯಿಂದ ಹೊರಟು ಬೆಂಗಳೂರಿನ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಮೋದಿ, ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಆದಿಚುಂಚನಗಿರಿ ಹೆಲಿಪ್ಯಾಡ್‌ಗೆ ಸುಮಾರು 10:50ಕ್ಕೆ ತಲುಪಲಿದ್ದಾರೆ. ಬಳಿಕ ರಸ್ತೆ ಮಾರ್ಗವಾಗಿ ಮಠಕ್ಕೆ ತೆರಳಿ, ಬೆಳಗ್ಗೆ 11 ಗಂಟೆಗೆ ಮಾಜಿ ಪೀಠಾಧಿಪತಿ ಬಾಲಗಂಗಾಧರನಾಥ ಸ್ವಾಮಿ ಅವರ ನೂತನ ಗದ್ದಿಗೆ (ಮಂದಿರ) ಉದ್ಘಾಟನೆ ನೆರವೇರಿಸಲಿದ್ದಾರೆ. ನಂತರ BGS ಮೈದಾನದಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಯಲಿದ್ದು, ಸಾವಿರಾರು ಭಕ್ತರು ಭಾಗವಹಿಸುವ ನಿರೀಕ್ಷೆಯಿದೆ. ಕಾರ್ಯಕ್ರಮದ ನಂತರ ಪ್ರಧಾನಿ ಮೋದಿ ಅವರು ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಮರಳಿ ಅಲ್ಲಿಂದ ಕೇರಳಕ್ಕೆ ಪ್ರಯಾಣ ಮುಂದುವರಿಸಲಿದ್ದಾರೆ.
ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ
ಪ್ರಧಾನಿ ಭೇಟಿ ಹಿನ್ನೆಲೆ ಜಿಲ್ಲಾಧಿಕಾರಿ ಕುಮಾರ್ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆದಿದ್ದು, ಭದ್ರತೆ, ಪ್ರೋಟೋಕಾಲ್ ಹಾಗೂ ಲಾಜಿಸ್ಟಿಕ್ಸ್ ವ್ಯವಸ್ಥೆಗಳ ಕುರಿತು ಸಮಗ್ರ ಪರಿಶೀಲನೆ ನಡೆಸಲಾಗಿದೆ. ಕಾರ್ಯಕ್ರಮ ಸ್ಥಳದ ಸಮೀಪ ಮೂರು ಹೆಲಿಪ್ಯಾಡ್‌ಗಳ ನಿರ್ಮಾಣ, ವಿಶೇಷ ಗ್ರೀನ್ ರೂಂ ಸಿದ್ಧತೆ, ನಿರಂತರ ವಿದ್ಯುತ್ ಪೂರೈಕೆ ಹಾಗೂ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಆರ್. ನಂದಿನಿ, ಎಸ್‌ಪಿ ವಿ.ಜೆ. ಶೋಭಾರಾಣಿ ಹಾಗೂ ಎಡಿಸಿ ಬಿ.ಸಿ. ಶಿವಾನಂದ ಮೂರ್ತಿ ಉಪಸ್ಥಿತರಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.



