ಭಾರತೀಯ ವಾಯುಪಡೆಯಲ್ಲಿ ಪ್ರಜ್ವಲಿಸಿದ ಪ್ರಜ್ವಲ್ ಶೆಟ್ಟಿ: ಆಕಾಶದಲ್ಲಿ ‘ನೀಲಕಂಠ’ ರಫೇಲ್ ಹಾರಿಸಿ ಶೌರ್ಯ ಮೆರೆದ ಮಂಗಳೂರಿನಲ್ಲಿ ಯುವಕ
ಮಂಗಳೂರಿನ ಹೆಮ್ಮೆಯ ಪ್ರಜ್ವಲ್ ಆರ್. ಶೆಟ್ಟಿ ಯುಪಿಎಸ್ಸಿ ಪರೀಕ್ಷೆಯಲ್ಲಿ 42ನೇ ರ್ಯಾಂಕ್ ಗಳಿಸಿ, ಇದೀಗ ಭಾರತೀಯ ವಾಯುಪಡೆಯ ಶಕ್ತಿಶಾಲಿ 'ರಫೇಲ್' ಯುದ್ಧ ವಿಮಾನ ಹಾರಿಸುವ ಪೈಲಟ್ ಆಗಿದ್ದಾರೆ. ಎನ್ಡಿಎ ತರಬೇತಿಯಿಂದ ಆರಂಭಿಸಿ, ಹೈದರಾಬಾದ್ನ ಏರ್ ಫೋರ್ಸ್ ಅಕಾಡೆಮಿಯಲ್ಲಿ ಪ್ರಥಮ ಸ್ಥಾನ ಗಳಿಸಿ, 'ಗೋಲ್ಡನ್ ಆ್ಯರೋಸ್' ಸ್ಕ್ವಾಡ್ರನ್ನ ರಫೇಲ್ ಪೈಲಟ್ ಆಗಿ ಬೆಳೆದ ಅವರ ಪಯಣ ಕನ್ನಡಿಗರಿಗೆ ಮತ್ತು ಭಾರತೀಯರಿಗೆ ಅಪಾರ ಸ್ಫೂರ್ತಿಯಾಗಿದೆ.

ಮಂಗಳೂರು, ಅ.30: ಯುಪಿಎಸ್ಸಿ (UPSC) ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 42ನೇ ರ್ಯಾಂಕ್ ಗಳಿಸಿ, ಇಂದು ಭಾರತೀಯ ವಾಯುಪಡೆಯ (IAF) ಅತ್ಯಂತ ಸುಧಾರಿತ ಹಾಗೂ ಶಕ್ತಿಶಾಲಿ ಯುದ್ಧ ವಿಮಾನವಾದ ‘ರಫೇಲ್’ (Rafale) ಹಾರಿಸುವ ಹಂತಕ್ಕೆ ಬೆಳೆದು ನಿಂತ ಕರಾವಳಿಯ ಕಣ್ಣುಮಣಿ ಫ್ಲೈಟ್ ಲೆಫ್ಟಿನೆಂಟ್ ಪ್ರಜ್ವಲ್ ಆರ್. ಶೆಟ್ಟಿ (Flight Lieutenant Prajwal R. Shetty) ದೇಶ ಹಾಗೂ ಮಂಗಳೂರಿಗೆ ಅಪಾರ ಕೀರ್ತಿ ತಂದಿದ್ದಾರೆ. ಮಂಗಳೂರಿನ ಅರೇಕಳ ಉಳಿಡೊಟ್ಟು ರಮೇಶ್ ಶೆಟ್ಟಿ ಹಾಗೂ ಕೋಡೆತ್ತೂರು ಮೂಡುದೇವಸ್ಯ ಸೀತಾ ಆರ್. ಶೆಟ್ಟಿ ದಂಪತಿಯ ಪುತ್ರರಾದ ಪ್ರಜ್ವಲ್ ಶೆಟ್ಟಿ ಅವರ ಶೌರ್ಯ ಮತ್ತು ಸಾಧನೆಯ ಪಯಣ ಪ್ರತಿಯೊಬ್ಬ ಭಾರತೀಯನಿಗೂ ತೀವ್ರ ಸ್ಪೂರ್ತಿದಾಯಕವಾಗಿದೆ.
ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಿಂದ ಏರ್ ಫೋರ್ಸ್ವರೆಗೆ ಮಿಂಚಿನ ಪಯಣ:
ಎನ್ಡಿಎ ತರಬೇತಿ:
ಪಿಯುಸಿ ಶಿಕ್ಷಣ ಪೂರ್ಣಗೊಳಿಸಿದ ತಕ್ಷಣವೇ ಕಠಿಣವಾದ ಯುಪಿಎಸ್ಸಿ ಪರೀಕ್ಷೆಯಲ್ಲಿ 42ನೇ ರ್ಯಾಂಕ್ ಪಡೆದ ಪ್ರಜ್ವಲ್, ಪುಣೆಯ ಪ್ರತಿಷ್ಠಿತ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ (NDA) 3 ವರ್ಷಗಳ ಸೇನಾ ತರಬೇತಿ ಪಡೆದರು. ಈ ವೇಳೆ ‘ಸೂಪರ್ ಡಿಮೋನಾ’ ವಿಮಾನ ಹಾರಾಟ ಕಲಿತು ತಮ್ಮ ವಾಯುಯಾನ ವೃತ್ತಿಜೀವನಕ್ಕೆ ಗಟ್ಟಿ ಬಡಿಪಾಯ ಹಾಕಿಕೊಂಡರು.
ಹೈದರಾಬಾದ್ನಲ್ಲಿ ಪ್ರಥಮ ರ್ಯಾಂಕ್:
ಹೈದರಾಬಾದ್ನ ಏರ್ ಫೋರ್ಸ್ ಅಕಾಡೆಮಿಯಲ್ಲಿ ಒಂದು ವರ್ಷದ ಹಾರಾಟ ತರಬೇತಿ ಪಡೆದಾಗ ಪಿಲಾಟಸ್ ಮತ್ತು ಕಿರಣ್ ವಿಮಾನಗಳಲ್ಲಿ ತರಬೇತಿ ಪೂರ್ಣಗೊಳಿಸಿದರು. ವಾಯುಯಾನ ವಿಷಯಗಳಲ್ಲಿ (Aviation Subjects) ಪ್ರಥಮ ಸ್ಥಾನ ಗಳಿಸಿ ಶೈಕ್ಷಣಿಕ ಶ್ರೇಷ್ಠತೆ ಮೆರೆದ ಪ್ರಜ್ವಲ್, ಇದೇ ಅವಧಿಯಲ್ಲಿ ಬಿ.ಟೆಕ್ (B.Tech) ಪದವಿಯನ್ನೂ ಪಡೆದುಕೊಂಡರು.
ಕಮಿಷನ್ ಮತ್ತು ಹಾಕ್ ವಿಮಾನ ತರಬೇತಿ:
ಡಿಸೆಂಬರ್ 2022ರಲ್ಲಿ ಭಾರತೀಯ ವಾಯುಪಡೆಯ ಫೈಟರ್ ಸ್ಟ್ರೀಮ್ಗೆ ಕಮಿಷನ್ ಆದ ಅವರು, ಪಶ್ಚಿಮ ಬಂಗಾಳದ ಕಲೈಕುಂಡದಲ್ಲಿ ‘ಹಾಕ್’ ಯುದ್ಧ ವಿಮಾನದಲ್ಲಿ ತರಬೇತಿ ಪಡೆದು ಮತ್ತೊಮ್ಮೆ ಅಗ್ರಸ್ಥಾನ ಗಳಿಸಿದರು.
ಇದನ್ನೂ ಓದಿ: ಶೇಖ್ ಹಸೀನಾ ಪಲಾಯನದ ವಿಡಿಯೋ ಹಂಚಿಕೊಂಡಿದ್ದ ಬಾಂಗ್ಲಾದೇಶ ವಾಯುಪಡೆಯ ಮಾಜಿ ಅಧಿಕಾರಿ ನಿಗೂಢ ಸಾವು
‘ಗೋಲ್ಡನ್ ಬ್ಯಾರಲ್ಸ್’ ರಫೇಲ್ ಸ್ಕ್ವಾಡ್ರನ್ ಹಾಗೂ ವಾರಾಣಸಿ ಏರ್ ಶೋ ಸಾಧನೆ:
ವಿವಿಧ ಹಂತಗಳ ಕಠಿಣ ತರಬೇತಿಗಳ ಬಳಿಕ ಪ್ರಜ್ವಲ್ ಶೆಟ್ಟಿ ಅವರಿಗೆ ಭಾರತೀಯ ವಾಯುಪಡೆಯ ಅತ್ಯಂತ ಶಕ್ತಿಶಾಲಿ ‘ರಫೇಲ್’ ಫೈಟರ್ ಜೆಟ್ ಹಾರಿಸುವ ಹೆಮ್ಮೆಯ ಅವಕಾಶ ಲಭಿಸಿತು. ಅಂಬಾಲಾದಲ್ಲಿರುವ ಪ್ರಸಿದ್ಧ 17ನೇ ಸ್ಕ್ವಾಡ್ರನ್ ‘ಗೋಲ್ಡನ್ ಆ್ಯರೋಸ್’ ಪಡೆಯ ಭಾಗವಾಗಿರುವ ಪ್ರಜ್ವಲ್, ರಫೇಲ್ ವಿಮಾನದ ಕನ್ವರ್ಷನ್ ತರಬೇತಿ ಪೂರ್ಣಗೊಳಿಸಿ ಪ್ರಸ್ತುತ ಸಂಪೂರ್ಣ ಕಾರ್ಯಾಚರಣೆಯ ರಫೇಲ್ ಫೈಟರ್ ಪೈಲಟ್ ಆಗಿ ದೇಶಸೇವೆ ಸಲ್ಲಿಸುತ್ತಿದ್ದಾರೆ.
ಇತ್ತೀಚೆಗೆ ಭಾರತೀಯ ವಾಯುಪಡೆಯ 94ನೇ ಸಂಸ್ಥಾಪನಾ ದಿನದ ಅಂಗವಾಗಿ ವಾರಾಣಸಿಯಲ್ಲಿ ನಡೆದ ‘ವಿಂಗ್ಸ್ ಓವರ್ ಗಂಗೆ’ ಬೃಹತ್ ವೈಮಾನಿಕ ಪ್ರದರ್ಶನದಲ್ಲಿ ಪ್ರಜ್ವಲ್ ಪ್ರಮುಖ ಆಕರ್ಷಣೆಯಾಗಿದ್ದರು. ಮೂರು ರಫೇಲ್ ವಿಮಾನಗಳನ್ನು ಒಳಗೊಂಡಿದ್ದ ‘ನೀಲಕಂಠ’ ಫಾರ್ಮೇಷನ್ನ ಮಧ್ಯಭಾಗದ ಪ್ರಮುಖ ಜಾಗದಲ್ಲಿ ರಫೇಲ್ ಹಾರಿಸಿ ತಮ್ಮ ಸಾಹಸ ಹಾಗೂ ಕೌಶಲ್ಯ ಪ್ರದರ್ಶಿಸಿ ಕೋಟ್ಯಂತರ ದೇಶವಾಸಿಗಳ ಮನಗೆದ್ದಿದ್ದಾರೆ. ಕಠಿಣ ಪರಿಶ್ರಮ, ನಿರಂತರ ಕಲಿಕೆ ಮತ್ತು ಶಿಸ್ತಿನಿಂದ ಕರಾವಳಿಯ ಯುವಕನೊಬ್ಬ ಭಾರತೀಯ ಸೇನೆಯ ಅತ್ಯುನ್ನತ ಸ್ಕ್ವಾಡ್ರನ್ನಲ್ಲಿ ರಫೇಲ್ ಪೈಲಟ್ ಆಗಿ ಹೊರಹೊಮ್ಮಿರುವುದು ಇಡೀ ಕರ್ನಾಟಕವೇ ಹೆಮ್ಮೆಪಡುವ ವಿಷಯವಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




