ಮೇಕೆದಾಟು ಯೋಜನೆಗೆ ತಮಿಳುನಾಡು ಕ್ಯಾತೆ, ಮತ್ತೊಂದು ಹೆಜ್ಜೆ ಮುಂದಿಟ್ಟ ವಿಜಯ್: ಸಿಎಂ ಡಿಕೆ ಶಿವಕುಮಾರ್ ಖಡಕ್ ಪ್ರತಿಕ್ರಿಯೆ

ಮೇಕೆದಾಟು ಜಲಾಶಯ ಯೋಜನೆಗೆ ಸಂಬಂಧಿಸಿ ತಮಿಳುನಾಡು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದ ಬೆನ್ನಲ್ಲೇ, ಉಭಯ ರಾಜ್ಯಗಳ ನಡುವೆ ರಾಜಕೀಯ ಸಂಘರ್ಷ ತಾರಕಕ್ಕೇರಿದೆ. ತಮಿಳುನಾಡಿನ ನೂತನ ಸಿಎಂ ಜೋಸೆಫ್ ವಿಜಯ್ ಸರ್ಕಾರವು ಯೋಜನೆಯನ್ನು ಬಲವಾಗಿ ವಿರೋಧಿಸುತ್ತಿದ್ದರೆ, ಇತ್ತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮಿಳುನಾಡಿನ ಕ್ಯಾತೆಗೆ ತಕ್ಕ ತಿರುಗೇಟು ನೀಡಿದ್ದಾರೆ.

ಮೇಕೆದಾಟು ಯೋಜನೆಗೆ ತಮಿಳುನಾಡು ಕ್ಯಾತೆ, ಮತ್ತೊಂದು ಹೆಜ್ಜೆ ಮುಂದಿಟ್ಟ ವಿಜಯ್: ಸಿಎಂ ಡಿಕೆ ಶಿವಕುಮಾರ್ ಖಡಕ್ ಪ್ರತಿಕ್ರಿಯೆ
ಡಿಕೆ ಶಿವಕುಮಾರ್ ಹಾಗೂ ವಿಜಯ್
Image Credit source: PTI

Updated on: Jun 19, 2026 | 7:04 AM

ಬೆಂಗಳೂರು, ಜೂನ್ 19: ಕಾವೇರಿ ನದಿ ನೀರಿನ ಹಂಚಿಕೆ ಹಾಗೂ ಮೇಕೆದಾಟು ಜಲಾಶಯ ನಿರ್ಮಾಣದ ವಿಚಾರದಲ್ಲಿ ಕರ್ನಾಟಕ (Karnataka) ಮತ್ತು ತಮಿಳುನಾಡು (Tamil Nadu) ನಡುವಿನ ಕಾನೂನು ಮತ್ತು ರಾಜಕೀಯ ಸಂಘರ್ಷ ಮತ್ತೆ ಬಿಗುವಿನ ರೂಪ ಪಡೆದುಕೊಳ್ಳುವ ಲಕ್ಷಣ ಕಾಣಿಸಿದೆ. ಇತ್ತೀಚೆಗಷ್ಟೇ ಸುಪ್ರೀಂಕೋರ್ಟ್‌ ತಮಿಳುನಾಡು ಸರ್ಕಾರದ ಮರುಪರಿಶೀಲನಾ ಅರ್ಜಿಯನ್ನು ವಜಾಗೊಳಿಸಿ ಕರ್ನಾಟಕಕ್ಕೆ ನಿರಾಳತೆ ನೀಡಿತ್ತು. ಆದಾಗ್ಯೂ, ತಮಿಳುನಾಡಿನ ನೂತನ ಮುಖ್ಯಮಂತ್ರಿ ಜೋಸೆಫ್ ವಿಜಯ್ ನೇತೃತ್ವದ ಸರ್ಕಾರವು ಮೇಕೆದಾಟು ಯೋಜನೆಗೆ ಅಡ್ಡಗಾಲು ಹಾಕಲು ಮುಂದಾಗಿದೆ. ತಮಿಳುನಾಡು ವಿಧಾನಸಭೆಯ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಅವರ ಭಾಷಣದ ಮೂಲಕ, ಯಾವುದೇ ಕಾರಣಕ್ಕೂ ಮೇಕೆದಾಟು ಡ್ಯಾಂ ನಿರ್ಮಿಸಲು ಬಿಡುವುದಿಲ್ಲ ಎಂದು ತಮಿಳುನಾಡು ಪ್ರತಿಜ್ಞೆ ಮಾಡಿದೆ.

ಮುಖ್ಯಾಂಶಗಳು

  • ಸುಪ್ರೀಂಕೋರ್ಟ್‌ನಲ್ಲಿ ತಮಿಳುನಾಡು ಅರ್ಜಿ ವಜಾ.
  • ಮೇಕೆದಾಟು ಯೋಜನೆಗೆ ಕರ್ನಾಟಕ ಸಜ್ಜು.
  • ತಳ ತಲುಪಿದ ಕೆಆರ್​ಎಸ್ ಡ್ಯಾಂ: ಕೃಷಿಗೆ ನೀರಿಲ್ಲ ಎಂದ ಮಂಡ್ಯ ಡಿಸಿ.

ಸಿಎಂ ಡಿಕೆ ಶಿವಕುಮಾರ್ ಖಡಕ್ ಪ್ರತಿಕ್ರಿಯೆ

ತಮಿಳುನಾಡು ಸರ್ಕಾರದ ಈ ರಾಜಕೀಯ ಗಿಮಿಕ್‌ಗೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಖಡಕ್ ಪ್ರತಿಕ್ರಿಯೆ ನೀಡಿದ್ದಾರೆ. ‘ಮೇಕೆದಾಟು ಕೇವಲ ನನ್ನ ಹೃದಯಕ್ಕೆ ಹತ್ತಿರವಾದ ಯೋಜನೆಯಲ್ಲ, ಇದು ಇಡೀ ದಕ್ಷಿಣ ಭಾರತದ ಹಿತಾಸಕ್ತಿ ಒಳಗೊಂಡಿರುವ ಪ್ರಾಜೆಕ್ಟ್. ಈ ಯೋಜನೆಯಿಂದ ಕರ್ನಾಟಕಕ್ಕಿಂತ ತಮಿಳುನಾಡಿನ ರೈತರಿಗೇ ಹೆಚ್ಚಿನ ಅನುಕೂಲವಾಗಲಿದೆ. ಕೋರ್ಟ್ ಆದೇಶದಂತೆ ಅವರ ಪಾಲಿನ 177 ಟಿಎಂಸಿ ನೀರನ್ನು ಬಿಡಲು ನಾವು ಎಂದಿಗೂ ಬದ್ಧರಾಗಿದ್ದೇವೆ. ಈ ಯೋಜನೆಯಿಂದ ನಾವು ಒಂದು ಬಕೆಟ್ ನೀರನ್ನೂ ಕೃಷಿಗೆ ಬಳಸುವುದಿಲ್ಲ. ಇದು ಕೇವಲ ಬೆಂಗಳೂರಿನ ಕುಡಿಯುವ ನೀರು ಮತ್ತು 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಗೆ ಮಾತ್ರ ಸೀಮಿತವಾಗಿದೆ. ತಮಿಳುನಾಡು ಸರ್ಕಾರದ ಜೊತೆ ಈ ಕುರಿತು ಯಾವುದೇ ಸಮಯದಲ್ಲಿ ಮಾತುಕತೆ ನಡೆಸಲು ನಾವು ಸಿದ್ಧರಿದ್ದೇವೆ’ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ.

ಬರಿದಾದ ಕಾವೇರಿ, ಕುಡಿಯುವ ನೀರಿಗಷ್ಟೇ ಆದ್ಯತೆ

ಇತ್ತೀಚೆಗೆ ಮುಂಗಾರು ಮಳೆ ಕ್ಷೀಣಿಸಿರುವುದರಿಂದ ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ನೀರಿನ ಮಟ್ಟ ತಳ ತಲುಪಿದೆ. ಕೊಡಗು ಜಿಲ್ಲೆಯಲ್ಲಿ ಮಳೆ ಕೈಕೊಟ್ಟಿದ್ದರಿಂದ ಕಾವೇರಿ ನದಿ ಸಂಪೂರ್ಣ ಬರಿದಾಗಿದ್ದು, ಕಳೆದ ವರ್ಷ 15 ಅಡಿಯಷ್ಟಿದ್ದ ನೀರಿನ ಮಟ್ಟ ಈ ಬಾರಿ ಕೇವಲ ಒಂದು ಅಡಿಗೆ ಕುಸಿದಿದೆ. ಕೆಆರ್‌ಎಸ್ (KRS) ಜಲಾಶಯದಲ್ಲಿ ಸದ್ಯ ಲಭ್ಯವಿರುವ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕೆ ಮಾತ್ರ ಬಳಸಲು ಸಾಧ್ಯವಿದ್ದು, ಕೃಷಿಗೆ ನೀರು ಹರಿಸಲು ಸಾಧ್ಯವೇ ಇಲ್ಲ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ್ ತಿಳಿಸಿದ್ದಾರೆ.

ಇದನ್ನೂ ಓದಿ: ನೂತನ ಸಿಎಂಗೆ ಆರಂಭದಲ್ಲೇ ಸಾಲು ಸಾಲು ಸವಾಲುಗಳು: ಆಡಳಿತ ಯಂತ್ರಕ್ಕೆ ಚುರುಕು ಮುಟ್ಟಿಸಲು ಡಿಕೆ ಶಿವಕುಮಾರ್ ಮಹತ್ವದ ಸಭೆ

ಈ ನಡುವೆ ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರು ಉನ್ನತ ಮಟ್ಟದ ಸಭೆ ನಡೆಸಿ, ರಾಜ್ಯದಲ್ಲಿ ಎದುರಾಗಬಹುದಾದ ಕುಡಿಯುವ ನೀರಿನ ಅಭಾವವನ್ನು ಎದುರಿಸಲು ತುರ್ತು ಯೋಜನೆಗಳನ್ನು ರೂಪಿಸಿದ್ದಾರೆ. ಕರ್ನಾಟಕ ಸರ್ಕಾರವು ಮೇಕೆದಾಟು ಯೋಜನೆಯ ಪರಿಷ್ಕೃತ ವಿವರವಾದ ಯೋಜನಾ ವರದಿಯನ್ನು (DPR) ಕೇಂದ್ರಕ್ಕೆ ಸಲ್ಲಿಸಲು ಸಿದ್ಧತೆ ನಡೆಸಿದ್ದು, ಪರಿಸರ ಇಲಾಖೆಯ ಅನುಮತಿ ಸಿಕ್ಕ ತಕ್ಷಣ ಭೂಮಿ ಪೂಜೆ ನೆರವೇರಿಸಲು ತೀರ್ಮಾನಿಸಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಗಣಪತಿ ಶರ್ಮಾ

ಕೇರಳದ ಕಾಸರಗೋಡು ಮೂಲದ ಕನ್ನಡಿಗ, ಪ್ರಸ್ತುತ ಬೆಂಗಳೂರಿನಲ್ಲಿ ವಾಸ. 14 ವರ್ಷಗಳಿಂದ ಪತ್ರಕರ್ತನಾಗಿ ಕಾರ್ಯನಿರ್ವಹಿಸುತ್ತಿದ್ದು, ವರದಿಗಾರಿಕೆ ಅನುಭವದ ಜತೆಗೆ ಬರವಣಿಗೆ, ಅನುವಾದದಲ್ಲಿ ಆಸಕ್ತಿ ಮತ್ತು ಪರಿಣತಿ. ಪ್ರಚಲಿತ ವಿದ್ಯಮಾನಗಳು, ರಾಜ್ಯ-ರಾಷ್ಟ್ರ ರಾಜಕೀಯ, ಉದ್ಯಮ, ವೈಯಕ್ತಿಕ ಹಣಕಾಸು ವಿಚಾರಗಳ ಬರವಣಿಗೆಯ ಬಗ್ಗೆ ಹೆಚ್ಚಿನ ಆಸಕ್ತಿ, ಒಲವು. ವಿಜಯ ಕರ್ನಾಟಕ, ಸಮಯ ನ್ಯೂಸ್ ಟಿವಿ, ವಿಜಯವಾಣಿ, ಪ್ರಜಾವಾಣಿ ಪತ್ರಿಕೆಗಳು ಹಾಗೂ ಡಿಜಿಟಲ್ ಮೀಡಿಯಾದಲ್ಲಿ ಕೆಲಸ ಮಾಡಿದ ಅನುಭವ. 2022 ರಿಂದ ಟಿವಿ9 ಕನ್ನಡ ಡಿಜಿಟಲ್​ನಲ್ಲಿ ಕಾರ್ಯನಿರ್ವಹಣೆ.

Read More
Loading...
Unable to load recommendations.
Follow Us