AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಧ್ಯಪ್ರಾಚ್ಯ ಯುದ್ಧದ ಬಿಸಿ: ಹೋಟೆಲ್, ಆಟೋ ಗ್ಯಾಸ್ ಅಷ್ಟೇ ಅಲ್ಲ ಈಗ ಮದುವೆ ಕೂಡ ದುಬಾರಿ!

ಪಶ್ಚಿಮ ಏಷ್ಯಾದ ಯುದ್ಧದ ಬಿಕ್ಕಟ್ಟಿನಿಂದಾಗಿ ಬೆಂಗಳೂರಿನಲ್ಲಿ ಕಮರ್ಷಿಯಲ್ ಗ್ಯಾಸ್, ಆಟೋ ಎಲ್​ಪಿಜಿ ಮಾತ್ರವಲ್ಲದೆ ಮದುವೆ ವೆಚ್ಚ ಕೂಡ ಶೇ 30 ರಷ್ಟು ಏರಿಕೆಯಾಗಿದೆ. ಆಮದು ಸಾಮಗ್ರಿಗಳ ಕೊರತೆ ಮತ್ತು ಗ್ಯಾಸ್ ಬೆಲೆ ಏರಿಕೆಯಿಂದಾಗಿ ಅದ್ದೂರಿ ಮದುವೆಗಳು ಈಗ ಬಜೆಟ್ ಮಿತಿಗೆ ಒಳಗಾಗುತ್ತಿದ್ದು, ಜನರು ಅತಿಥಿಗಳ ಪಟ್ಟಿ ಮತ್ತು ಅಲಂಕಾರಿಕ ವೆಚ್ಚಗಳಿಗೆ ಕತ್ತರಿ ಹಾಕುತ್ತಿದ್ದಾರಂತೆ!

ಮಧ್ಯಪ್ರಾಚ್ಯ ಯುದ್ಧದ ಬಿಸಿ: ಹೋಟೆಲ್, ಆಟೋ ಗ್ಯಾಸ್ ಅಷ್ಟೇ ಅಲ್ಲ ಈಗ ಮದುವೆ ಕೂಡ ದುಬಾರಿ!
ಸಾಂದರ್ಭಿಕ ಚಿತ್ರImage Credit source: MediaForge AI
ಗಣಪತಿ ಶರ್ಮಾ
|

Updated on: May 10, 2026 | 9:15 AM

Share

ಬೆಂಗಳೂರು, ಮೇ 10: ಮಧ್ಯಪ್ರಾಚ್ಯದಲ್ಲಿನ ಉದ್ವಿಗ್ನ ಪರಿಸ್ಥಿತಿಯು ಕೇವಲ ಪೆಟ್ರೋಲ್, ಡೀಸೆಲ್ ಅಥವಾ ಗ್ಯಾಸ್ ಬೆಲೆಗಳ ಮೇಲೆ ಮಾತ್ರವಲ್ಲದೆ, ಸಾಮಾನ್ಯ ಜನರ ಜೀವನದ ಅವಿಭಾಜ್ಯ ಅಂಗವಾದ ಮದುವೆ (Marriages) ಸಮಾರಂಭಗಳಿಗೂ ಭಾರಿ ಹೊಡೆತ ನೀಡಿದೆ. ಯುದ್ಧದ ಹಿನ್ನೆಲೆಯಲ್ಲಿ ಅಲಂಕಾರಿಕ ವಸ್ತುಗಳು ಮತ್ತು ಕಚ್ಚಾ ಪದಾರ್ಥಗಳ ಆಮದು ಕುಂಠಿತಗೊಂಡಿದ್ದು, ಬೆಂಗಳೂರಿನಲ್ಲಿ ಈ ಬಾರಿ ಮದುವೆಯ ಸೀಸನ್ ಅಧ್ವಾನಗೊಂಡಿದೆ. ಮದುವೆ ಸಂಘಟಕರ ವ್ಯವಹಾರದಲ್ಲಿ ಭಾರಿ ಏರಿಳಿತಗಳು ಕಂಡುಬರುತ್ತಿದ್ದು, ಬೆಲೆ ಏರಿಕೆಯ ಕಾರಣದಿಂದಾಗಿ ‘ಅದ್ದೂರಿ ಮದುವೆ’ಗಳು ಈಗ ಸರಳವಾಗುತ್ತಿವೆ ಎಂದು ವರದಿಯಾಗಿದೆ.

ಮುಖ್ಯಾಂಶಗಳು

  • ಆಮದು ಸಾಮಗ್ರಿಗಳ ಕೊರತೆಯಿಂದಾಗಿ ಮದುವೆ ವೆಚ್ಚದಲ್ಲಿ ಶೇ 30 ರಷ್ಟು ಹೆಚ್ಚಳ.
  • ಬೆಲೆ ಏರಿಕೆ ಬಿಸಿಯಿಂದಾಗಿ ಅತಿಥಿಗಳ ಪಟ್ಟಿ ಮತ್ತು ಕಾರ್ಯಕ್ರಮಗಳ ಸಂಖ್ಯೆಯಲ್ಲಿ ಕಡಿತ.
  • ಆಹಾರದ ಮೆನು ಉಳಿಸಿಕೊಳ್ಳಲು ಅಲಂಕಾರ ಮತ್ತು ಇತರೆ ವೆಚ್ಚಗಳಿಗೆ ಕತ್ತರಿ.

ಬಜೆಟ್ ಮೀರಿದ ಮದುವೆ ವೆಚ್ಚ

ಯುದ್ಧ ಮತ್ತು ಅಂತರಾಷ್ಟ್ರೀಯ ಬಿಕ್ಕಟ್ಟಿನಿಂದಾಗಿ ಮದುವೆಯ ಬಜೆಟ್ ಶೇ 30 ರಿಂದ 40 ರಷ್ಟು ಏರಿಕೆಯಾಗಿದೆ ಎಂದು ಇವೆಂಟ್ ಮ್ಯಾನೇಜ್‌ಮೆಂಟ್ ಸಂಸ್ಥೆಗಳು ತಿಳಿಸಿರುವುದಾಗಿ ‘ಡೆಕ್ಕನ್ ಹೆರಾಲ್ಡ್’ ವರದಿ ತಿಳಿಸಿದೆ. ಒಂದು ವರ್ಷದ ಹಿಂದೆಯೇ ಮದುವೆ ಯೋಜನೆ ರೂಪಿಸಿದ್ದರೂ, ಪ್ರಸ್ತುತ ವಸ್ತುಗಳ ಬೆಲೆ ಹೆಚ್ಚಾಗಿರುವುದರಿಂದ ಅನಿವಾರ್ಯವಾಗಿ ಕಾರ್ಯಕ್ರಮಗಳನ್ನು ಕಡಿತಗೊಳಿಸಲಾಗುತ್ತಿದೆ. ವಿದೇಶಿ ಹೂವುಗಳು ಮತ್ತು ಅಲಂಕಾರಿಕ ವಸ್ತುಗಳ ಲಭ್ಯತೆ ಕಡಿಮೆಯಾಗಿದ್ದು, ಐಷಾರಾಮಿ ಮದುವೆಗಳ ಸಂದರ್ಭದಲ್ಲೂ ಜನರು ಅನಿವಾರ್ಯವಾಗಿ ಸ್ಥಳೀಯ ವಸ್ತುಗಳ ಮೊರೆ ಹೋಗಬೇಕಾಗಿದೆ ಎಂದು ‘ಡೆಕ್ಕನ್ ಹೆರಾಲ್ಡ್’ ವರದಿ ಉಲ್ಲೇಖಿಸಿದೆ.

ಆಹಾರದ ಮೇಲೆ ಹೆಚ್ಚಿನ ಪ್ರಭಾವ

ಭಾರತೀಯ ಮದುವೆಗಳಲ್ಲಿ ಊಟಕ್ಕೆ ಅತಿ ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ. ಗ್ಯಾಸ್ ಮತ್ತು ದಿನಸಿ ಪದಾರ್ಥಗಳ ಬೆಲೆ ಏರಿಕೆಯಾದರೂ, ಜನರು ಆಹಾರದ ಮೆನು ಬದಲಿಸಲು ಇಷ್ಟಪಡುತ್ತಿಲ್ಲ. ಬದಲಾಗಿ, ಹೋಟೆಲ್‌ಗಳು ಮತ್ತು ಕ್ಯಾಟರಿಂಗ್ ಸಂಸ್ಥೆಗಳು ಅಡುಗೆಗಾಗಿ ಅತಿ ಹೆಚ್ಚು ಗ್ಯಾಸ್ ಬಳಸುವ ಪದಾರ್ಥಗಳ ಬದಲಿಗೆ ಪರ್ಯಾಯ ವ್ಯವಸ್ಥೆಗಳನ್ನು ಹುಡುಕುತ್ತಿವೆ. ಕಾರ್ಮಿಕರ ಕೊರತೆಯೂ ಮದುವೆ ಉದ್ಯಮಕ್ಕೆ ದೊಡ್ಡ ಸವಾಲಾಗಿ ಪರಿಣಾಮ ಬೀರಿದೆ.

ಚಳಿಗಾಲದ ಮದುವೆಗಳಿಗೆ ಭೀತಿ

ಸದ್ಯಕ್ಕೆ ಮಾರುಕಟ್ಟೆಯಲ್ಲಿ ಹಳೆಯ ಸ್ಟಾಕ್ ಇರುವುದರಿಂದ ಬೆಲೆಗಳು ಸ್ವಲ್ಪ ಮಟ್ಟಿಗೆ ನಿಯಂತ್ರಣದಲ್ಲಿವೆ. ಆದರೆ, ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನ ಪರಿಸ್ಥಿತಿ ಹೀಗೆಯೇ ಮುಂದುವರಿದು ಆಮದು ಸ್ಥಗಿತಗೊಂಡರೆ, ಬರುವ ಚಳಿಗಾಲದ ಮದುವೆ ಸೀಸನ್ ವೇಳೆ ಬೆಲೆಗಳು ಇನ್ನೂ ಗಗನಕ್ಕೇರಲಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ. ಒಟ್ಟಿನಲ್ಲಿ ಯುದ್ಧದ ಪರಿಣಾಮವು ಮದುವೆ ಮನೆಯ ಸಂಭ್ರಮದ ಮೇಲೆ ಆರ್ಥಿಕ ಹೊರೆಯಾಗಿ ಪರಿಣಮಿಸಿರುವುದಂತೂ ಸುಳ್ಳಲ್ಲ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us