ಸಚಿವ ರಾಮಲಿಂಗಾರೆಡ್ಡಿಯ ಧಾರ್ಮಿಕ ಬದ್ಧತೆ: ದೇವಾಲಯಗಳ 10,700 ಎಕರೆ ಆಸ್ತಿ ರಕ್ಷಣೆ
ಕರ್ನಾಟಕದ ಮುಜರಾಯಿ ಇಲಾಖೆ 10,700 ಎಕರೆ ದೇವಾಲಯ ಭೂಮಿಯನ್ನು ಒತ್ತುವರಿಯಿಂದ ಮುಕ್ತಗೊಳಿಸಿದೆ. ರಾಮಲಿಂಗಾರೆಡ್ಡಿ ನೇತೃತ್ವದಲ್ಲಿ 5022 ಆಸ್ತಿಗಳಿಗೆ ಕಂದಾಯ ದಾಖಲೆಗಳನ್ನು ಸೃಷ್ಟಿಸಲಾಗಿದೆ. ಕಾಂಗ್ರೆಸ್ ಸರ್ಕಾರದ ಈ ಕ್ರಮವನ್ನು ಅರ್ಚಕರು ಮತ್ತು ಹಿಂದೂ ಸಮುದಾಯ ಸ್ವಾಗತಿಸಿದೆ. ದೇವರು, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವುದನ್ನು ಬಿಜೆಪಿ ಬೀಡಬೇಕು ಎಂದು ಕಿಡಿಕಾರಿದ್ದಾರೆ.
ಬೆಂಗಳೂರು, ಡಿಸೆಂಬರ್ 21: ಬುಟಾಟಿಕೆ ಮತ್ತು ಪೊಳ್ಳು ಹಿಂದುತ್ವವಾದ ಪ್ರತಿಪಾದಕರಾದ ಬಿಜೆಪಿಯವರು ಧರ್ಮ ಧರ್ಮಗಳ ನಡುವೆ ದ್ವೇಷದ ಬೆಂಕಿ ಹಚ್ಚಿ, ಹಿಂದೂ ಧರ್ಮದ ಉಳಿವಿಗಾಗಿ ಯಾವುದೇ ಕಾರ್ಯ ಮಾಡದಿದ್ದರೂ, ಬರೀ ಬಾಯಿ ಮಾತಿನಲ್ಲಿ ಹಿಂದೂ ಧರ್ಮ, ದೇವಾಲಯಗಳ (Temples) ಬಗ್ಗೆ ಪುಂಖಾನುಪುಂಖವಾಗಿ ಬೊಗಳೆ ಭಾಷಣ ಮಾಡುವವರ ಮುಂದೆ ಯಾವುದೇ ಸದ್ದುಗದ್ದಲವಿಲ್ಲದೆ ತಮ್ಮ ಕಾರ್ಯಕ್ರಮಗಳು ಹಾಗೂ ಯೋಜನೆಗಳ ಮೂಲಕ ಹಿಂದೂ ಧರ್ಮ ಮತ್ತು ದೇವಾಲಯಗಳ ರಕ್ಷಣೆಗೆ ಪಣ ತೊಟ್ಟಿರುವ ರಾಮಲಿಂಗಾರೆಡ್ಡಿಯವರ ಕಾರ್ಯ ಆಸ್ತಿಕ ಸಮುದಾಯದಲ್ಲಿ ಸಂತೋಷದ ಹೊನಲನ್ನು ಹರಿಸಿದೆ ಎಂದು ಅರ್ಚಕ ಸಮುದಾಯ ತಿಳಿಸಿದೆ.
ರಾಜ್ಯದ ಮುಜರಾಯಿ ದೇವಸ್ಥಾನದ ವ್ಯಾಪ್ತಿಯಲ್ಲಿ ಬರುವ ಸಾವಿರಾರು ಎಕರೆ ಜಮೀನು ಅನ್ಯರ ಪಾಲಾಗಿತ್ತು. ಕೆಲ ಸಂಸ್ಥೆಗಳು, ಟ್ರಸ್ಟ್ಗಳು ಹಾಗೂ ಖಾಸಗಿ ವ್ಯಕ್ತಿಗಳು ಜಮೀನನ್ನು ಒತ್ತುವರಿ ಮಾಡಿಕೊಂಡಿದ್ದರು. ಇದನ್ನು ಹಿಂದಿನ ಬಿಜೆಪಿ ಸರಕಾರ ತೆರವು ಮಾಡುವ ಕಡೆ ಯಾವುದೇ ಒಲವು ತೋರಲಿಲ್ಲ. ಹೀಗಾಗಿ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಮುಜರಾಯಿ ಇಲಾಖೆ ಖಾತೆಯನ್ನು ವಹಿಸಿಕೊಂಡ ರಾಮಲಿಂಗಾ ರೆಡ್ಡಿ ಅವರ ಬದ್ಧತೆಯಿಂದ ಈವರೆಗೆ ರಾಜ್ಯದ ವಿವಿಧ ದೇವಸ್ಥಾನಗಳ 10,700 ಎಕರೆ ಜಮೀನನ್ನು ರಕ್ಷಣೆ ಮಾಡಲಾಗಿದೆ. ಒಟ್ಟು 5022 ಆಸ್ತಿಗಳಿಗೆ ಕಂದಾಯ ಇಲಾಖೆಯಿಂದ ಸೂಕ್ತ ದಾಖಲೆಗಳನ್ನು ಸೃಷ್ಟಿಸಿ, ದೇವಸ್ಥಾನಗಳ ಅಧೀನಕ್ಕೆ ನೀಡಲಾಗಿದೆ.
ಒತ್ತುವರಿ ತೆರವುಗೊಳಿಸಿದ ಮುಜರಾಯಿ ಇಲಾಖೆ
ಮುಜರಾಯಿ ಇಲಾಖೆ ವ್ಯಾಪ್ತಿಗೆ ಸೇರಿದ 34,564 ದೇವಸ್ಥಾನಗಳ ಪೈಕಿ ಬಹುತೇಕ ದೇವಸ್ಥಾನಗಳಿಗೆ ಸರ್ಕಾರ ಮತ್ತು ದಾನಿಗಳು ನೀಡಿದ ಆಸ್ತಿಯಿದೆ. ಆದರೆ, ಬಹುತೇಕ ದೇವಸ್ಥಾನಗಳ ಆಸ್ತಿ ಖಾಸಗಿ ಪಾಲಾಗಿತ್ತು. ಇದೀಗ ಸರ್ವೆ ನಡೆಸಿ, ಕಳೆದ ಒಂದೂವರೆ ವರ್ಷದ ಅವಧಿಯಲ್ಲಿ ಸುಮಾರು 10 ಸಾವಿರಕ್ಕೂ ಹೆಚ್ಚು ಆಸ್ತಿಗಳನ್ನು ಮರು ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: ಮುಜರಾಯಿ ದೇವಸ್ಥಾನಗಳಲ್ಲಿ ಶೌಚಾಲಯದ ಸಮಸ್ಯೆ: ಶೌಚಗೃಹ ನಿರ್ಮಾಣ ಮಾಡುವಂತೆ ಅರ್ಚಕರ ಸಂಘ ಮನವಿ
ರಾಜ್ಯದಲ್ಲಿ 34,166 ಸಿ ದರ್ಜೆಯ ದೇವಸ್ಥಾನಗಳು, 193 ಬಿ ದರ್ಜೆಯ ದೇವಸ್ಥಾನ ಹಾಗೂ 205 ಎ ದರ್ಜೆಯ ದೇವಸ್ಥಾನಗಳಿವೆ. ಈ ದೇವಸ್ಥಾನಗಳಿಗೆ ಸರ್ಕಾರದಿಂದ ಹಾಗೂ ದಾನಿಗಳಿಂದ ದಾನದ ರೂಪದಲ್ಲಿ ಬಂದ ಸಾವಿರಾರು ಎಕರೆ ಆಸ್ತಿಯಿದೆ. ಆದರೆ, ಈವರೆಗೆ ಆ ಆಸ್ತಿಗಳಿಗೆ ಸೂಕ್ತ ದಾಖಲೆಗಳಿರಲಿಲ್ಲ. ಇದೀಗ ಕಂದಾಯ ಇಲಾಖೆ ಎಲ್ಲ ಆಸ್ತಿಗಳಿಗೆ ದಾಖಲೆ ಒದಗಿಸುವ ಕೆಲಸ ಮಾಡಿದೆ.
ದಾಖಲೆ ಸೃಷ್ಟಿಸಿಕೊಡುವಲ್ಲಿ ಕಂದಾಯ ಇಲಾಖೆ ಯಶಸ್ವಿ
ನಮ್ಮ ಸರ್ಕಾರ ಹಿಂದೂ ದೇವಾಲಯಗಳ ಅಭಿವೃದ್ಧಿಗೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಖಾಸಗಿಯವರು ಒತ್ತುವರಿ ಮಾಡಿಕೊಂಡಿದ್ದ ಜಮೀನನ್ನು ದೇವಸ್ಥಾನಗಳಿಗೆ ಮರಳಿ ಕೊಡಿಸಲಾಗಿದೆ. ದಾಖಲೆಗಳು ಇಲ್ಲದೇ ಇದ್ದ ಜಮೀನುಗಳಿಗೆ ಸೂಕ್ತ ದಾಖಲೆ ಸೃಷ್ಟಿಸಿಕೊಡುವಲ್ಲಿ ಕಂದಾಯ ಇಲಾಖೆ ಯಶಸ್ವಿಯಾಗಿದೆ.
ರಾಜ್ಯದಲ್ಲಿ ಮುಜರಾಯಿ ಆಸ್ತಿಗಳ ಸಂರಕ್ಷಣೆಯನ್ನು ಅಭಿಯಾನ ಮಾದರಿಯಲ್ಲಿ ಕೈಗೊಂಡ ಪರಿಣಾಮ ವರ್ಷದಲ್ಲಿ 5022 ಆಸ್ತಿಗಳನ್ನು ಇಲಾಖೆಯ ವಶಕ್ಕೆ ಪಡೆಯಲಾಗಿದೆ. ಇದಕ್ಕೆ ಸೂಕ್ತ ದಾಖಲೆ ಒದಗಿಸಿದ ಕಂದಾಯ ಇಲಾಖೆಯ ಸಚಿವ ಕೃಷ್ಣ ಬೈರೇಗೌಡ ಹಾಗೂ ಇಲಾಖೆ ಅಧಿಕಾರಿಗಳಿಗೆ ಮುಜರಾಯಿ ಇಲಾಖೆ ವತಿಯಿಂದ ರಾಮಲಿಂಗಾರೆಡ್ಡಿ ಧನ್ಯವಾದ ಸಲ್ಲಿಸಿದ್ದಾರೆ.
ಕಿಚ್ಚು ಹಚ್ಚಿಸುವ ಕೆಲಸ ಬಿಜೆಪಿ ಬಿಡಬೇಕು
ದೇವರು, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವ ಬಿಜೆಪಿ, ಆ ಪಕ್ಷದಿಂದ ಮಾಡಲು ಆಗದ ಕೆಲಸವನ್ನು ನಾವು ಮಾಡಿದ್ದೇವೆ. ಧರ್ಮ ಬೇರೆ ರಾಜಕೀಯ ಬೇರೆ, ಧರ್ಮ ಭಾವನೆಗೆ ಸಂಬಂಧಿಸಿದ್ದು ಅದರೊಡನೆ ರಾಜಕೀಯ ಬೆರೆಸಿ, ಕಿಚ್ಚು ಹಚ್ಚಿಸುವ ಕೆಲಸವನ್ನು ಇನ್ನಾದರೂ ಬಿಜೆಪಿ ಬಿಡಬೇಕು ಎಂದಿದ್ದಾರೆ.
ಇದನ್ನೂ ಓದಿ: ಮುಜರಾಯಿ ಇಲಾಖೆಗಳಿಂದ ದೇಗುಲ, ಮಠಗಳನ್ನ ಮುಕ್ತಗೊಳಿಸಿ; ಹೊಸ ಕಾಯ್ದೆ ಜಾರಿಗೊಳಿಸಿ -ಸುಬುಧೇಂದ್ರ ತೀರ್ಥ
ಹಿಂದೂ ದೇವಾಲಯಗಳನ್ನು ರಕ್ಷಿಸಲು ಇವರ ಅಧಿಕಾರವಧಿಯಲ್ಲಿ ಇವರಿಗೆ ಸಾಧ್ಯವಾಗಲಿಲ್ಲವೇಕೆ? ಕಾಂಗ್ರೆಸ್ ಸರ್ಕಾರವೇ ಬಂದು ಈ ಕ್ರಾಂತಿಕಾರಿ ಬದಲಾವಣೆ ಮಾಡಲೆಂದು ಕಾಯುತ್ತಿದ್ದರೇ ಇವರು ಎಂದು ಕಿಡಿಕಾರಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.