ಮುಜರಾಯಿ ದೇವಸ್ಥಾನಗಳಲ್ಲಿ ಶೌಚಾಲಯದ ಸಮಸ್ಯೆ: ಶೌಚಗೃಹ ನಿರ್ಮಾಣ ಮಾಡುವಂತೆ ಅರ್ಚಕರ ಸಂಘ ಮನವಿ
ಮುಜರಾಯಿ ವ್ಯಾಪ್ತಿಯ ದೇವಸ್ಥಾನಗಳಿಗೆ ದಿನದಿಂದ ದಿನಕ್ಕೆ ಬರುವ ಭಕ್ತರ ಸಂಖ್ಯೆ ಜಾಸ್ತಿಯಾಗುತ್ತಿದೆ. ಆದರೆ, ದೇವಸ್ಥಾನಗಳಲ್ಲಿ ಶೌಚಾಲಯದಂತಹ ಮೂಲಭೂತ ಸೌಕರ್ಯಗಳ ಕೊರತೆ ಎದುರಾಗಿದ್ದು, ಈ ಸಮಸ್ಯೆ ಬಗೆಹರಿಸುವಂತೆ ಭಕ್ತರು ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಇದೀಗ ಅರ್ಚಕರ ಸಂಘ ಕೂಡ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.
ಬೆಂಗಳೂರು, ಅಕ್ಟೋಬರ್ 17: ಪ್ರತಿವರ್ಷ ಮುಜರಾಯಿ ಇಲಾಖೆ ದೇವಸ್ಥಾನಗಳ ಅಭಿವೃದ್ಧಿಗೆಂದೇ ಕೋಟ್ಯಂತರ ರೂಪಾಯಿ ಖರ್ಚು ಮಾಡಲಾಗುತ್ತದೆ. ಆದರೆ, ದೇವಸ್ಥಾನಗಳಲ್ಲಿ ಇರಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಇಲಾಖೆ ಹಿಂದೆ ಉಳಿದಿದೆ. ದೇವಸ್ಥಾನಗಳದಲ್ಲಿ ಇರಬೇಕಾದ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ, ನೆರಳಿನ ವ್ಯವಸ್ಥೆ, ಮಕ್ಕಳಿಗೆ ಹಾಲುಣಿಸುವ ಕೇಂದ್ರಗಳು ಇಲ್ಲವಾಗಿವೆ. ಈ ಕುರಿತಾಗಿ ಆದಾಷ್ಟು ಬೇಗ ಕ್ರಮ ತೆಗೆದುಕೊಳ್ಳಬೇಕು ಎಂದು ಭಕ್ತರು ಆಗ್ರಹಿಸಿದ್ದಾರೆ.
ದೇವಸ್ಥಾನಗಳಲ್ಲಿ ಶೌಚಾಲಯದ ಹಾಗೂ ಮಕ್ಕಳಿಗೆ ಹಾಲುಣಿಸುವ ಕೇಂದ್ರಗಳ ಕೊರತೆ ಇದ್ದು, ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಡುವಂತೆ ಆಖಿಲ ಕರ್ನಾಟಕ ಅರ್ಚಕರ ಸಂಘ ಮುಜರಾಯಿ ಇಲಾಖೆಗೆ ಮನವಿ ಸಲ್ಲಿಸಿದೆ.
ಎ ಮತ್ತು ಬಿ ವರ್ಗದ ದೇವಸ್ಥಾನಗಳಲ್ಲಿ ಸಮಸ್ಯೆ
ಎ ಮತ್ತು ಬಿ ವರ್ಗದ ದೇವಸ್ಥಾನಗಳಿಗೆ ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ದೂರದ ಊರುಗಳಿಂದ ಬರುತ್ತಾರೆ. ಆದರೆ ಬಂದವರಿಗೆ ಸರಿಯಾಗಿ ಶೌಚಾಲಯದ ವ್ಯವಸ್ಥೆ ಇಲ್ಲ. ಅಲ್ಲದೇ ಶಿಶುಗಳನ್ನೂ ಕರೆದುಕೊಂಡು ದೇವಸ್ಥಾನಕ್ಕೆ ಬರುತ್ತಾರೆ. ಅಂಥವರಿಗೆ ಹಾಲುಣಿಸುವ ಕೇಂದ್ರಗಳು ಇಲ್ಲ. ಇವುಗಳನ್ನ ನಿರ್ಮಾಣ ಮಾಡಿದರೆ ಅನುಕೂಲವಾಗಲಿದೆ. ಸದ್ಯ ಬನಶಂಕರಿ ದೇವಸ್ಥಾನದಲ್ಲಿ ಶೌಚಾಲಯ ಹಾಗೂ ಮಕ್ಕಳಿಗೆ ಹಾಲುಣಿಸುವ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ. ಉಳಿದ ಯಾವುದೇ ದೇವಸ್ಥಾನದಲ್ಲಿ ಈ ವ್ಯವಸ್ಥೆ ಇಲ್ಲ. ಮೂಲಸೌಕರ್ಯ ಕೊರತೆಯಿಂದಾಗಿ ಅರ್ಚಕರಿಗೂ ಸಮಸ್ಯೆಗಳಾಗುತ್ತಿವೆ. ಹೀಗಾಗಿ ಆದಷ್ಟು ಬೇಗ ಮುಜರಾಯಿ ಇಲಾಖೆ ಕ್ರಮ ತೆಗೆದುಕೊಳ್ಳಬೇಕು ಎಂದು ಅರ್ಚಕರ ಸಂಘ ಒತ್ತಾಯಿಸಿರುವುದಾಗಿ ಅಖಿಲ ಕರ್ನಾಟಕ ಅರ್ಚಕರ ಅಸೋಸಿಯೇಷನ್ ಅಧ್ಯಕ್ಷ ಕೆಆರ್ ದೀಕ್ಷಿತ್ ತಿಳಿಸಿದ್ದಾರೆ.
ಮುಜರಾಯಿ ಇಲಾಖೆ ಅಧಿಕಾರಿಗಳು ಹೇಳಿದ್ದೇನು?
ಈ ವಿಚಾರವಾಗಿ ಮುಜರಾಯಿ ಇಲಾಖೆಯ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಶೌಚಾಲಯಗಳ ಕೊರತೆ ಇರುವುದು ನಿಜ. ಸದ್ಯ ಮುಖ್ಯ ದೇವಸ್ಥಾನಗಳಲ್ಲಿ ಶೌಚಾಲಯದ ವ್ಯವಸ್ಥೆ ಇದೆ. ಬೇರೆ ದೇವಸ್ಥಾನಗಳಲ್ಲಿ ಶೌಚಾಲಯದ ವ್ಯವಸ್ಥೆ ಇಲ್ಲ. ಈ ಕುರಿತಾಗಿ ಕ್ರಮ ತೆಗೆದುಕೊಳ್ಳುತ್ತೇವೆ. ಎಲ್ಲಿ ಅಗತ್ಯ ಹೆಚ್ಚು ಇದೆಯೋ ಅಲ್ಲಿ ಶೌಚಾಲಯಗಳ ವ್ಯವಸ್ಥೆಯನ್ನು ಮೊದಲು ಮಾಡಿಸುತ್ತೇವೆ ಎಂದು ಮುಜರಾಯಿ ಇಲಾಖೆಯ ಆಯುಕ್ತರಾದ ವೆಂಕಟೇಶ್ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕದ ಹಲವೆಡೆ ವರುಣಾರ್ಭಟ; ಅಥಣಿಯಲ್ಲಿ ಯಲ್ಲಮ್ಮ ದೇವಿಗೆ ಜಲದಿಗ್ಬಂಧನ, ಚಿಕ್ಕಮಗಳೂರಲ್ಲಿ ಭೂ ಕುಸಿತ
ಒಟ್ಟಿನಲ್ಲಿ ದೇವಸ್ಥಾನಗಳಲ್ಲಿ ನೀರಿಗೆ ವ್ಯವಸ್ಥೆ, ನೆರಳಿನ ವ್ಯವಸ್ಥೆ, ಶಾಚಾಲಯ ವ್ಯವಸ್ಥೆ ಮುಖ್ಯವಾಗಿದ್ದು, ಇವುಗಳನ್ನು ಕಲ್ಪಿಸುವುದಕ್ಕೆ ಮುಜರಾಯಿ ಇಲಾಖೆ ಭರವಸೆ ನೀಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ