AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತೀಯ ರೈಲ್ವೆಯೊಂದಿಗೆ ವಿಲೀನವಾಗಲಿದೆ ಕೊಂಕಣ ರೈಲ್ವೆ: ಸಚಿವ ಸೋಮಣ್ಣ ಕೊಟ್ಟ ಕಾರಣ ಇಲ್ಲಿದೆ

ಕರ್ನಾಟಕದಲ್ಲಿ 742 ಕಿ.ಮೀ. ಜಾಲ ಹೊಂದಿರುವ ಕೊಂಕಣ ರೈಲ್ವೆ ಬಗ್ಗೆ ರೈಲ್ವೆ ಖಾತೆಯ ರಾಜ್ಯ ಸಚಿವ ವಿ ಸೋಮಣ್ಣ ಮಹತ್ವದ ಮಾಹಿತಿ ನೀಡಿದ್ದಾರೆ. ಕೊಂಕಣ ರೈಲ್ವೆ ಮುಂದಿನ ದಿನಗಳಲ್ಲಿ ಭಾರತೀಯ ರೈಲ್ವೆ ಜೊತೆ ವಿಲೀನವಾಗಲಿದೆ ಎಂದು ಅವರು ತಿಳಿಸಿದ್ದು, ಅದಕ್ಕೆ ಕಾರಣವೇನು ಎಂಬುದನ್ನೂ ಬಹಿರಂಗಪಡಿಸಿದ್ದಾರೆ. ಮಾಹಿತಿಗೆ ಮುಂದೆ ಓದಿ.

ಭಾರತೀಯ ರೈಲ್ವೆಯೊಂದಿಗೆ ವಿಲೀನವಾಗಲಿದೆ ಕೊಂಕಣ ರೈಲ್ವೆ: ಸಚಿವ ಸೋಮಣ್ಣ ಕೊಟ್ಟ ಕಾರಣ ಇಲ್ಲಿದೆ
ಸಚಿವ ಸೋಮಣ್ಣ & ಕೊಂಕಣ ರೈಲು
Ganapathi Sharma
|

Updated on:Sep 17, 2024 | 7:46 AM

Share

ಬೆಂಗಳೂರು, ಸೆಪ್ಟೆಂಬರ್ 17: ಜನರಿಗೆ ನೀಡುವ ಸೇವೆಗಳನ್ನು ಸುಧಾರಿಸುವುದಕ್ಕಾಗಿ ಕೊಂಕಣ ರೈಲ್ವೆಯನ್ನು ಭಾರತೀಯ ರೈಲ್ವೆಯೊಂದಿಗೆ ವಿಲೀನಗೊಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ರೈಲ್ವೆ ಖಾತೆಯ ರಾಜ್ಯ ಸಚಿವ ವಿ ಸೋಮಣ್ಣ ಹೇಳಿದ್ದಾರೆ. ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ ಪುಣೆ ಹುಬ್ಬಳ್ಳಿ ನಡುವಣ ವಂದೇ ಭಾರತ್ ರೈಲನ್ನು ಸ್ವಾಗತಿಸಲು ಬೆಳಗಾವಿ ರೈಲು ನಿಲ್ದಾಣಕ್ಕೆ ಬಂದ ಅವರು, ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದರು. ಇದೇ ವೇಳೆ, ಕೊಂಕಣ ರೈಲ್ವೆ ವಿಲೀನದ ವಿಚಾರ ಪ್ರಸ್ತಾಪಿಸಿದರು.

ಕೊಂಕಣ ರೈಲ್ವೆ ಜಾಲವು ಕೇರಳದಿಂದ ಮಹಾರಾಷ್ಟ್ರದವರೆಗೆ ವ್ಯಾಪಿಸಿದೆ. ಕರ್ನಾಟಕ ರಾಜ್ಯವೊಂದರಲ್ಲೇ ಒಟ್ಟು 742 ಕಿ.ಮೀ. ಕ್ರಮಿಸುತ್ತದೆ ಎಂದು ಸೋಮಣ್ಣ ತಿಳಿಸಿದರು.

ಪ್ರಯಾಣಿಕರಿಗೆ ಇನ್ನಷ್ಟು ಉತ್ತಮ ಸೇವೆಗಳನ್ನು ಒದಗಿಸುವ ಅಗತ್ಯವಿದೆ. ಹೀಗಾಗಿ ಭಾರತೀಯ ರೈಲ್ವೇಯೊಂದಿಗೆ ವಿಲೀನಗೊಳಿಸುವ ಬಗ್ಗೆ ಪರಿಗಣಿಸಲಾಗುತ್ತಿದೆ ಎಂದು ಅವರು ತಿಳಿಸಿದರು.

ವಿಲೀನ ವಿಚಾರ ರಾಜ್ಯಗಳ ಜತೆ ಚರ್ಚಿಸಿದ್ದೇವೆ: ಸೋಮಣ್ಣ

ವಿಲೀನ ವಿಚಾರವಾಗಿ ನಾವು ಕರ್ನಾಟಕ, ಕೇರಳ ಮತ್ತು ಗೋವಾ ಸರ್ಕಾರಗಳೊಂದಿಗೆ ಮಾತುಕತೆ ನಡೆಸಿದ್ದೇವೆ. ಮಹಾರಾಷ್ಟ್ರಕ್ಕೆ ಮನವರಿಕೆ ಮಾಡಿಕೊಟ್ಟ ನಂತರ, ವಿಲೀನ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಹಿಂದೆ ರೈಲ್ವೆ ಇಲಾಖೆಯು ರಾಜ್ಯ ಸರ್ಕಾರದ ಶೇ 50ರಷ್ಟು ಕೊಡುಗೆಯೊಂದಿಗೆ ರಾಜ್ಯದಲ್ಲಿ ಯೋಜನೆಗಳನ್ನು ಅನುಷ್ಠಾನಗೊಳಿಸುತ್ತಿತ್ತು. ಆದರೆ ಈಗ ರಾಜ್ಯ ಸರ್ಕಾರದಿಂದ ಯಾವುದೇ ಸಹಕಾರ ದೊರೆಯುವುದಿಲ್ಲ. ಈ ಕಾರಣಕ್ಕೆ ಎಲ್ಲಾ ವೆಚ್ಚವನ್ನು ಕೇಂದ್ರವೇ ಭರಿಸಲು ನಿರ್ಧರಿಸಿದೆ ಎಂದು ಸೋಮಣ್ಣ ತಿಳಿಸಿದರು.

‘ಕರ್ನಾಟಕದ ಯೋಜನೆಗಳು ಶೀಘ್ರ ಪೂರ್ಣ’

ರಾಜ್ಯದ ಹಲವು ಬಾಕಿ ಇರುವ ಯೋಜನೆಗಳನ್ನು ಶೀಘ್ರ ಪೂರ್ಣಗೊಳಿಸಲಾಗುವುದು. ಮೂರು ವರ್ಷಗಳಲ್ಲಿ ಬೆಳಗಾವಿ-ಧಾರವಾಡ ನಡುವಿನ ನೇರ ರೈಲು ಮಾರ್ಗದ ಕಾಮಗಾರಿಯನ್ನು ಪೂರ್ಣಗೊಳಿಸಲಾಗುವುದು ಎಂದು ಅವರು ಹೇಳಿದ್ದಾರೆ. ಮೂರು ತಿಂಗಳಲ್ಲಿ ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ರೈಲ್ವೆ ಇಲಾಖೆಗೆ ಹಸ್ತಾಂತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ-ಪುಣೆ ವಂದೇ ಭಾರತ್​ ರೈಲು, ಇಲ್ಲಿದೆ ವೇಳಾಪಟ್ಟಿ

ಸೋಮವಾರ ಆರಂಭವಾದ ಹುಬ್ಬಳ್ಳಿ-ಪುಣೆ ವಂದೇ ಭಾರತ್​ ರೈಲು ಧಾರವಾಡ, ಸತಾರಾ, ಸಾಂಗ್ಲಿ, ಮೀರಜ್ ನಿಲ್ದಾಣಗಳಲ್ಲಿ ನಿಲುಗಡೆ ಹೊಂದಿದೆ. ಹುಬ್ಬಳ್ಳಿ-ಪುಣೆ ವಂದೇ ಭಾರತ್ ರೈಲು ಕೇವಲ 8.5 ಗಂಟೆಗಳಲ್ಲಿ 557 ಕಿಮೀ ಕ್ರಮಿಸುತ್ತದೆ. ಇತರ ರೈಲುಗಳಿಗೆ ಹೋಲಿಸಿದರೆ ಪ್ರಯಾಣದ ಸಮಯವನ್ನು ಸುಮಾರು 3 ಗಂಟೆಗಳಷ್ಟು ಕಡಿಮೆ ಮಾಡುತ್ತದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 7:45 am, Tue, 17 September 24