ಮೈಸೂರು ಪಾದಯಾತ್ರೆಗೂ ಮುನ್ನ ಬಿಜೆಪಿಯಿಂದ ರಾಜ್ಯಾದ್ಯಂತ ಬೆಳೆ ಹಾನಿ ಪರಿಶೀಲನೆ
ಸುರಿದ ಮಳೆಯಿಂದ ಮತ್ತು ನದಿಗಳಿಂದ ಉಂಟಾದ ಪ್ರವಾಹದಿಂದ ರಾಜ್ಯದ ಹಲವು ಕಡೆ ಬೆಳೆ ಹಾನಿಯಾಗಿದೆ. ಬೆಳೆ ಹಾನಿಯಿಂದ ರೈತ ಕಂಗಾಲಾಗಿದ್ದಾನೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಹೀಗಾಗಿ ರಾಜ್ಯ ಬಿಜೆಪಿ ನಾಯಕರು ರಾಜ್ಯಾದ್ಯಂತ ಪ್ರವಾಸ ಮಾಡಿ ಬೆಳ ಹಾನಿ ಪ್ರದೇಶಗಳಿಗೆ ಭೇಟಿ ನೀಡಲಿದ್ದಾರೆ.

ಬೆಂಗಳೂರು, ಜುಲೈ 29: ಕರ್ನಾಟಕದಲ್ಲಿ ನಿರಂತರ ಮಳೆ (Rain), ಗಾಳಿ ಮತ್ತು ಉಕ್ಕಿ ಹರಿಯುತ್ತಿರುವ ನದಿಯಿಂದ ಸಾಕಷ್ಟು ಅವಾಂತರ ಸೃಷ್ಟಿಯಾಗಿದೆ. ಚಿಕ್ಕಮಗಳೂರು, ಉತ್ತರ ಕನ್ನಡ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮಳೆಯಿಂದ ಗುಡ್ಡ ಕುಸಿದು ಸಾಕಷ್ಟು ಹಾನಿಯಾಗಿವೆ. ಕೆಲ ರಸ್ತೆ ಮತ್ತು ರೈಲು ಸಂಪರ್ಕ ಬಂದ್ ಆಗಿವೆ. ಉತ್ತರ ಕರ್ನಾಟಕದ ಬೆಳಗಾವಿ (Belagavi) ಜಿಲ್ಲೆಯಲ್ಲಿನ ಸಪ್ತ ನದಿಗಳು (River) ತುಂಬಿ ಹರಿಯುವುತ್ತಿರುವುದರಿಂದ ಕೆಲ ಗ್ರಾಮಗಳಿಗೆ ನೀರು ನುಗ್ಗಿದೆ. ಇದರಿಂದ ಸಾಕಷ್ಟು ಬೆಳೆ ಹಾನಿಯಾಗಿದೆ. ಬೆಳೆ ಹಾನಿಯಾದ ಜಮೀನುಗಳಿಗೆ ಮಂಗಳವಾರ ಬಿಜೆಪಿ (BJP) ನಾಯಕರು ಆರು ತಂಡಗಳಾಗಿ ರಂದು ಭೇಟಿ ನೀಡಿ, ಪರಿಶೀಲನೆ ನಡೆಸಲಿದ್ದಾರೆ.
ವಿಪಕ್ಷ ನಾಯಕ ಆರ್.ಅಶೋಕ್, ಶಾಸಕರಾದ ಆರಗ ಜ್ಞಾನೇಂದ್ರ, ಡಾ.ಸಿ.ಎನ್.ಅಶ್ವತ್ಥ್ ನಾರಾಯಣ, ಮಾಜಿ ಸಚಿವ ಬಿ.ಶ್ರೀರಾಮುಲು, ವಿಧಾನಪರಿಷತ್ನ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಸಭೆ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್ ನೇತೃತ್ವದ ತಂಡಗಳು ರಾಜ್ಯಾದ್ಯಂತ ಸಂಚರಿಸಲಿವೆ.
ವಿಪಕ್ಷ ನಾಯಕ ಆರ್. ಅಶೋಕ್ ನೇತೃತ್ವದ ತಂಡ ದಕ್ಷಿಣ ಕನ್ನಡ ಮತ್ತು ಬೆಳಗಾವಿ ಜಿಲ್ಲೆಗೆ ಭೇಟಿ ನೀಡಲಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಶಾಸಕ ಆರಗ ಜ್ಞಾನೇಂದ್ರ ನೇತೃತ್ವದ ತಂಡ ಪ್ರವಾಸ ಕೈಗೊಳ್ಳಲಿದೆ. ಮಾಜಿ ಸಚಿವ ಅಶ್ವತ್ಥ್ ನಾರಾಯಣ ನೇತೃತ್ವದ ತಂಡ ಕೊಡಗು ಮತ್ತು ಉಡುಪಿ ಜಿಲ್ಲೆಗಳಲ್ಲಿ ಪರಿಶೀಲನೆ ನಡೆಸಲಿದೆ.
ಇದನ್ನೂ ಓದಿ: ಬೆಂಗಳೂರಿನಿಂದ ಮೈಸೂರಿಗೆ ಬಿಜೆಪಿ ಪಾದಯಾತ್ರೆ: ರೂಪುರೇಷ ಸಿದ್ಧ, ಇಲ್ಲಿದೆ ರೂಟ್ಮ್ಯಾಪ್
ವಿಧಾನಪರಿಷತ್ ವಿರೋಧ ಪಕ್ಷದ ನಾಯಕರಾಗಿ ಛಲವಾದಿ ನಾರಾಯಣಸ್ವಾಮಿ ನೇತೃತ್ವದ ತಂಡ ರಾಯಚೂರು, ಯಾದಗಿರಿ ಜಿಲ್ಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತದೆ. ವಿರೋಧ ಪಕ್ಷದ ಉಪ ನಾಯಕ ಅರವಿಂದ್ ಬೆಲ್ಲದ್ ನೇತೃತ್ವದ ತಂಡ ಬಾಗಲಕೋಟೆ, ವಿಜಯಪುರ ಜಿಲ್ಲೆಗಳಲ್ಲಿ ಪರಿಶೀಲನೆಗೆ ಇಳಿಯಲಿದೆ. ಮಾಜಿ ಸಚಿವ ಬಿ. ಶ್ರೀರಾಮುಲು ನೇತೃತ್ವದ ತಂಡ ಕೊಪ್ಪಳ, ಬಳ್ಳಾರಿ, ವಿಜಯನಗರ ಜಿಲ್ಲೆಗಳಿಗೆ ಭೇಟಿ ನೀಡಲಿದೆ. ಶ್ರೀರಾಮುಲು ನೇತೃತ್ವದ ತಂಡದಲ್ಲಿ ಶಾಸಕ ಜನಾರ್ದನ ರೆಡ್ಡಿ ಇದ್ದಾರೆ.
ಬರ ಅಧ್ಯಯನ ನಡೆಸಿದ್ದ ಬಿಜೆಪಿ
ರಾಜ್ಯದಲ್ಲಿ ಬರಗಾಲ ಆವರಸಿದ್ದ ಸಮಯದಲ್ಲಿ ರಾಜ್ಯ ಬಿಜೆಪಿ ನಾಯಕರು 17 ತಂಡಗಳಾಗಿ ಬರ ಅಧ್ಯಯನ ನಡೆಸಿದ್ದರು. ನವೆಂಬರ್ ತಿಂಗಳಲ್ಲಿ ಒಂದು ವಾರಗಳ ಕಾಲ ರಾಜ್ಯಾದ್ಯಂತ ಬಿಜೆಪಿ ನಾಯಕರು ಬರ ಅಧ್ಯಯನ ನಡೆಸಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




