AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಳೆಯಿಂದ ಚಿಕ್ಕಮಗಳೂರು ಜಿಲ್ಲೆಯಲ್ಲೇ 100 ಕೋಟಿ ರೂ ಅಧಿಕ ನಷ್ಟ: ಏನೇನಾಗಿದೆ? ಇಲ್ಲಿದೆ ವಿವರ

ಮಲೆನಾಡಿನ ಭಾಗದಲ್ಲಿ ಮಳೆರಾಯ ಅಬ್ಬರಿಸುತ್ತಿದ್ದಾನೆ. ಪ್ರವಾಹ ಪರಿಸ್ಥಿತಿಯೇ ನಿರ್ಮಾಣವಾಗಿದೆ. ಇತ್ತ ಚಿಕ್ಕಮಗಳೂರಿನಲ್ಲಿ ಮಳೆ ಮುಂದುವರೆದಿದೆ. ಪರಿಣಾಮ ಜಿಲ್ಲೆಯಲ್ಲಿ 100 ಕೋಟಿಗೂ ಅಧಿಕ ನಷ್ಟ ಉಂಟಾಗಿದೆ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಹೇಳಿದ್ದಾರೆ. ವಾಡಿಕೆಗಿಂತ ಶೇಕಡಾ 25ರಷ್ಟು ಹೆಚ್ಚು ಮಳೆಯಾಗಿದೆ ಎಂದಿದ್ದಾರೆ.

ಮಳೆಯಿಂದ ಚಿಕ್ಕಮಗಳೂರು ಜಿಲ್ಲೆಯಲ್ಲೇ 100 ಕೋಟಿ ರೂ ಅಧಿಕ ನಷ್ಟ: ಏನೇನಾಗಿದೆ? ಇಲ್ಲಿದೆ ವಿವರ
ಮಳೆಯಿಂದ ಚಿಕ್ಕಮಗಳೂರು ಜಿಲ್ಲೆಯಲ್ಲೇ 100 ಕೋಟಿ ರೂ. ಅಧಿಕ ನಷ್ಟ, ಏನೇನಾಗಿದೆ? ಇಲ್ಲಿದೆ ವಿವರ
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Edited By: |

Updated on: Jul 22, 2024 | 3:44 PM

Share

ಚಿಕ್ಕಮಗಳೂರು, ಜುಲೈ 22: ಜಿಲ್ಲೆಯಾದ್ಯಂತ ಸುರಿದ ಮಳೆಯಿಂದ (Rain) ನೂರು ಕೋಟಿಗೂ ಅಧಿಕ ನಷ್ಟವಾಗಿದೆ. ಮೇ ತಿಂಗಳಲ್ಲಿ ಮಳೆಯಿಂದಾಗಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ (meena nagaraj) ಹೇಳಿದ್ದಾರೆ. ನಗರದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈನಲ್ಲಿ ಅತಿ ಹೆಚ್ಚು ಮಳೆಯಾಗಿ ಅಪಾರ ಪ್ರಮಾಣದ ಹಾನಿಯಾಗಿದೆ. ಜಿಲ್ಲೆಯಲ್ಲಿ ವಾಡಿಕೆಗಿಂತ ಶೇಕಡಾ 25ರಷ್ಟು ಹೆಚ್ಚು ಮಳೆಯಾಗಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ಮಳೆಯಾಗಿದೆ ಎಂದರು.

ಜಿಲ್ಲೆಯಲ್ಲಿ ಭಾರಿ ಮಳೆ ಗಾಳಿಗೆ ಮೂಡಿಗೆರೆ, ಚಿಕ್ಕಮಗಳೂರು ತಾಲೂಕಿನಲ್ಲಿ‌ 192 ಮನೆಗಳಿಗೆ ಹಾನಿಯಾಗಿದೆ. ಈವರೆಗೂ ಹಾನಿಗೊಳಗಾದ 77 ಮನೆಗಳಿಗೆ ಪರಿಹಾರ ನೀಡಲಾಗಿದೆ. ಬಿರುಗಾಳಿ ಸಹಿತ ಭಾರಿ ಮಳೆಗೆ 1,849 ವಿದ್ಯುತ್ ಕಂಬಗಳಿಗೆ ಹಾನಿ ಉಂಟಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ಶಿರೂರು ಗುಡ್ಡ ಕುಸಿತ: 7 ದಿನದಿಂದ ನಿಂತಲ್ಲೇ ನಿಂತ ಲಾರಿಗಳು, ಊಟ-ಶೌಚಾಲಯಕ್ಕೂ ಚಾಲಕರು ಪರದಾಟ

ಮಳೆಯಿಂದ ಸರ್ಕಾರಿ ಕಟ್ಟಡಗಳಿಗೆ ಹಾನಿಯಾಗಿದ್ದು 48 ಕೋಟಿ ರೂ. ನಷ್ಟವಾಗಿದೆ. 41 ಸೇತುವೆಗಳಿಗೆ ಹಾನಿಯಾಗಿದೆ. ಚಾರ್ಮಾಡಿಘಾಟ್​​​-ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಗುಡ್ಡ ಕುಸಿದಿದೆ.  ಮಳೆಯಿಂದಾಗಿ ಹೆದ್ದಾರಿಯಲ್ಲಿ 8.5 ಕಿ.ಮೀ.ವರೆಗೆ ಹಾನಿಯಾಗಿದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜೊತೆ ಚರ್ಚಿಸಿ ಸ್ಥಳ ಪರಿಶೀಲನೆ ನಡೆಸಲಾಗಿದೆ ಎಂದು ತಿಳಿಸಿದರು.

ಪ್ರವಾಸಿಗರಿಗೆ ನಿಷೇಧ

ಮುಳ್ಳಯ್ಯನಗಿರಿಯಲ್ಲಿ ಸಾಲು ಸಾಲು ಗುಡ್ಡ ಮತ್ತು ಭೂ ಕುಸಿತವಾಗಿದೆ. ಹೀಗಾಗಿ ಪ್ರವಾಸಿಗರು ಜಿಲ್ಲೆಗೆ ಪ್ರವಾಸ ಬರುವುದನ್ನ ಮುಂದುಡಬೇಕು. ಜುಲೈ 29 ರ ವರೆಗೂ ಚಂದ್ರದ್ರೋಣ ಪರ್ವತದ ಸಾಲಿನ‌ ತಾಣಗಳಿಗೆ ಪ್ರವಾಸಿಗರ ಭೇಟಿ ನಿಷೇಧಿಸಲಾಗಿದೆ. ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ದತ್ತಪೀಠ, ಹೊನ್ನಮ್ಮನ ಹಳ್ಳ ತಾಣಗಳಿಗೆ ಪ್ರವಾಸಿಗರಿಗೆ ನಿಷೇಧ ಹೇರಲಾಗಿದೆ.

ಇದನ್ನೂ ಓದಿ: ಶೃಂಗೇರಿ ಮಂಗಳೂರು ಹೆದ್ದಾರಿಯಲ್ಲಿ ಮತ್ತೆ ಗುಡ್ಡ ಕುಸಿತ, ರಸ್ತೆಯುದ್ದಕ್ಕೂ ಮಣ್ಣು, ಬೃಹತ್​ ಬಿರುಕು

ಶೃಂಗೇರಿಯ ಹೊಸದೇವರಹಳ್ಳಿಯಲ್ಲಿ ರಸ್ತೆ ಕುಸಿದು ಪ್ರಪಾತಕ್ಕೆ ಲಾರಿ ಬಿದ್ದಿದೆ. ಸುಮಾರು 50 ಅಡಿ ಆಳದಲ್ಲಿ ಲಾರಿ ಬಿದ್ದಿದೆ. ಅದೃಷ್ಟವಶಾತ್ ಲಾರಿ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬಾಳೆಹೊನ್ನೂರು ಪಟ್ಟಣದ ಮೀನು ಮಾರುಕಟ್ಟೆ ಮುಳುಗಡೆಯಾಗಿದೆ. ಭದ್ರಾ ನದಿಯ ಹರಿವಿನಿಂದಾಗಿ ಬಾಳೆಹೊನ್ನೂರು ಪಟ್ಟಣದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನೆರೆಯ ಆತಂಕವೇ ಶುರುವಾಗಿದೆ. ಕಳೆದ ಮೂರು ದಿನಗಳಿಂದ ನಿರಂತರ ಮಳೆಯಿಂದಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣ ಆಗಿದೆ. ಹೀಗಾಗಿ ಮುಂಜಾಗ್ರತೆಯಾಗಿ ಪ್ರವಾಸಿಗರಿಗೆ ಎಚ್ಚರಿಕೆ ನೀಡಲಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.