ಸಿಎಂಗೆ ಪತ್ರ ಬರೆದು ರಾಮನಗರದ ಮಹತ್ವ ತಿಳಿಸಿದ ಸಂಸದ ಡಾ ಮಂಜುನಾಥ್
ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಯೆ ಸಮಂಜಸವಾಗಿರುವುದಿಲ್ಲ. ರಾಮನಗರಕ್ಕೆ ಭಾವನಾತ್ಮಕ, ಧಾರ್ಮಿಕ, ಐತಿಹಾಸಿಕ ಹಾಗೂ ಪೌರಾಣಿಕ ಇತಿಹಾಸವಿದೆ. ಹಾಗಾಗಿ ಜಿಲ್ಲೆಗೆ ಮರುನಾಮಕರಣ ಮಾಡುವುದು ಸರಿಯಾದ ಕ್ರಮವಲ್ಲ ಎಂದು ಸಿಎಂ ಸಿದ್ದರಾಮಯ್ಯಗೆ ಸಂಸದ ಡಾ. ಸಿಎನ್ ಮಂಜುನಾಥ್ ಪತ್ರ ಬರೆದಿದ್ದಾರೆ.
ಬೆಂಗಳೂರು, ಜುಲೈ 12: ರಾಮನಗರ (Ramanagara) ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡಬೇಕು ಎಂದು ಇತ್ತೀಚೆಗೆ ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಕಾಂಗ್ರೆಸ್ ನಾಯಕರು ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದ್ದರು. ಈ ವಿಚಾರ ಸಾಕಷ್ಟು ವಿರೋಧಕ್ಕೂ ಕಾರಣವಾಗಿತ್ತು. ಸದ್ಯ ಇದರ ಬೆನ್ನಲ್ಲೇ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ನೂತನ ಬಿಜೆಪಿ ಸಂಸದ ಡಾ. ಸಿಎನ್ ಮಂಜುನಾಥ್ (CN Manjunath) ಸಿದ್ದರಾಮಯ್ಯಗೆ ಪತ್ರ ಬರೆದಿದ್ದು, ಮರುನಾಮಕರಣ ಮಾಡದಂತೆ ಮನವಿ ಮಾಡಿದ್ದಾರೆ.
ಸಂಸದ ಡಾ. ಸಿಎನ್ ಮಂಜುನಾಥ್ ಪತ್ರದಲ್ಲೇನಿದೆ?
ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಮರುನಾಮಕರಣ ಮಾಡುವ ಪ್ರಸ್ತಾವನೆಯೆ ಸಮಂಜಸವಾಗಿರುವುದಿಲ್ಲ. ರಾಮನಗರಕ್ಕೆ ಭಾವನಾತ್ಮಕ, ಧಾರ್ಮಿಕ, ಐತಿಹಾಸಿಕ ಹಾಗೂ ಪೌರಾಣಿಕ ಇತಿಹಾಸವಿದೆ. ಕ್ಲೋಸ್‌ಪೇಟೆಗೆ ರಾಮನಗರವೆಂದು ಮರುನಾಮಕರಣ ಮಾಡಿದವರು ರಾಜ್ಯದ ಹೆಸರಾಂತ ಮಾಜಿ ಸಿಎಂ ದಿವಂಗತ ಕೆಂಗಲ್ ಹನುಮಂತಯ್ಯನವರು. ಧಾರ್ಮಿಕ ಗುರುಗಳಾದ ಆದಿ ಚುಂಚನಗಿರಿಯ ಬಾಲಗಂಗಾಧರನಾಥ ಮಹಾಸ್ವಾಮಿಜೀಯವರು ಹಾಗೂ ನಡೆದಾಡುವ ದೇವರು ಸಿದ್ದಗಂಗಾ ಮಠದ ಶಿವಕುಮಾರ ಮಹಾಸ್ವಾಮಿಜೀಯವರು ರಾಮನಗರ ಜಿಲ್ಲೆಯವರು.
ಇದನ್ನೂ ಓದಿ: ರಾಮನಗರ ಜಿಲ್ಲೆ ಹೆಸರು ಬದಲಾವಣೆ ಹಿಂದಿನ ತಂತ್ರವೇನು? ಡಿಕೆಶಿ- ಎಚ್‌ಡಿಕೆ ನಡುವೆ ಮತ್ತೊಂದು ಸಮರಕ್ಕೆ ಮುನ್ನುಡಿಯಾಗುತ್ತಾ?
ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೆಗೌಡರು ಸಹ ಈ ಜಿಲ್ಲೆಗೆ ಸೇರಿದವರು, ರಾಮನಗರ ಜಿಲ್ಲೆಯು ರಾಜ್ಯಕ್ಕೆ ಐದುಬಾಲ ಮುಖ್ಯಮಂತ್ರಿ ಪದವಿಯನ್ನು ನೀಡಿದೆಯಲ್ಲದೆ ರಾಮನಗರದಿಂದ ಗೆದ್ದು ಮುಖ್ಯಮಂತ್ರಿಯವರಾಗಿದ್ದ ಹೆಚ್.ಡಿ. ದೇವೇಗೌಡರವರು ಈ ದೇಶದ ಪ್ರಧಾನಿಯಾಗಿದ್ದರು. ರಾಮನಗರ ಕಣ್ಣ ಮಹರ್ಷಿಯ ನಾಡು. ರಾಮಾಯಣದಲ್ಲಿನ ರಾಮಚಂದ್ರ ರಾಮಗಿರಿಯಲ್ಲಿ ತಂಗಿರುವ ಇತಿಹಾಸವಿದೆ. ಈಗಾಗಲೇ ರಾಮನಗರವು ರೇಷ್ಮೆ ನಾಡೆಂದೇ ಪ್ರಸಿದ್ದಿಯಾಗಿದೆ.
ಇದರ ಜೊತೆಗೆ ರಾಮನಗರದ ಹೆಸರು ಹೇಳುತ್ತಿದಂತೆ ಜಾನಪದ ಲೋಕ, ಚನ್ನಪಟ್ಟಣದ ಗೊಂಬೆಗಳು, ಅರ್ಕಾವತಿ, ಕಾವೇರಿ, ಶಿಂಷಾ, ಕಣ್ಣ ನದಿಗಳು, ಮಂಚನಬೆಲೆ, ಬೈರಮಂಗಲ, ಹಾರೋಬೆಲೆ, ಕಣ್ಣ ಮತ್ತು ಇಗ್ಗಲೂರು ಜಲಾಶಯಗಳು. ರಾಮಗಿರಿ, ಕೃಷ್ಣಗಿರಿ, ರೇವಣ್ಣಸಿದ್ದೇಶ್ವರ ಬೆಟ್ಟ, ಯತಿರಾಜಗಿರಿ, ಸೋಮಗಿರಿ, ಸಿಡಿಲಕಲ್ಲು ಮತ್ತು ಜಲಸಿದ್ದೇಶ್ವರ ಬೆಟ್ಟ, ಕಬ್ಬಾಳುದುರ್ಗ, ಸಾವನದುರ್ಗ, ಮೇಕೆದಾಟು ಮುಂತಾದವುಗಳು ನೆನಪಿಗೆ ಬರುತ್ತವೆ. ಈ ಹಿನ್ನೆಲೆಯಲ್ಲಿ ಈ ಜಿಲ್ಲೆಗೆ ರಾಮನಗರ ಎಂಬ ಹೆಸರೇ ರಕ್ಷಾಕವಚದಂತಿದೆ.
ಇದನ್ನೂ ಓದಿ: ರಾಮನಗರ ಜಿಲ್ಲೆ ಹೆಸರು ಬದಲಾವಣೆ ಬಗ್ಗೆ ಎಚ್‌ಡಿಕೆ ಖಡಕ್ ಮಾತು, ಡಿಕೆಶಿ ಮಹತ್ವದ ಸಲಹೆ
ಅಭಿವೃದ್ಧಿಯ ದೃಷ್ಟಿಯಿಂದಲೇ ರಾಮನಗರ ಜಿಲ್ಲೆಗೆ ಬೆಂಗಳೂರು ದಕ್ಷಿಣ ಜಿಲ್ಲೆಯೆಂದು ಮರುನಾಮಕರಣ ಮಾಡುವ ಬದಲು ರಾಮನಗರವನ್ನೇ ಬ್ರಾಂಡ್ ರಾಮನಗರವನ್ನಾಗಿ ಮಾಡಿ ಜಿಲ್ಲೆಯನ್ನು ಸಮಗ್ರವಾಗಿ ಅಭಿವೃದ್ಧಿ ಮಾಡಬಹುದಾಗಿದೆ. ರಾಮನಗರಕ್ಕೆ ತನ್ನದೆ ಇತಿಹಾಸವಿರುವುದರಿಂದ ಜಿಲ್ಲೆಗೆ ಮರುನಾಮಕರಣ ಮಾಡುವುದು ಸರಿಯಾದ ಕ್ರಮವಲ್ಲ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 10:42 pm, Fri, 12 July 24