ಲೋಕಾಯುಕ್ತ ಅಧಿಕಾರ ಕಸಿದಿದ್ದ ಸಿಎಂ ಈಗ ಅದೇ ಲೋಕಾಯುಕ್ತ ಬಲೆಯಲ್ಲಿ!
2016.. ಮೊದಲ ಅವಧಿಯಲ್ಲಿ ಸಿಎಂ ಪಟ್ಟಕ್ಕೇರಿದ್ದ ಸಿದ್ದರಾಮಯ್ಯ ಅಂದು ಲೋಕಾಯುಕ್ತ ಅಧಿಕಾರವನ್ನೇ ಮೊಟಕುಗೊಳಿಸಿದ್ದರು. ಆ ಮೂಲಕ ಲೋಕಾಯುಕ್ತ ಹಲ್ಲಿಲ್ಲದ ಹಾವಿನಂತಾಗಿತ್ತು. ಲೋಕಾಯುಕ್ತಕ್ಕೆ ಪರ್ಯಾಯವಾಗಿ ಸಿಎಂ ಸಿದ್ದರಾಮಯ್ಯ ಎಸಿಬಿ ರಚನೆ ಮಾಡಿದ್ದರು. ಇದೀಗ ಲೋಕಾಯುಕ್ತ ಅಧಿಕಾರ ಕಸಿದಿದ್ದ ಸಿಎಂ ಸಿದ್ದರಾಮಯ್ಯ ಅದೇ ಲೋಕಾಯುಕ್ತದ ಬಲೆಯಲ್ಲೇ ಸಿಲುಕಿದ್ದಾರೆ. ಹಾಗಾದ್ರೆ, ಮುಡಾ ಹಗರಣದಲ್ಲಿ ಲೋಕಾಯುಕ್ತ ತನಿಖೆ ಎದುರಿಸಬೇಕಾದ ಸಿಎಂಗೆ ಮುಂದಿರೋ ಆಯ್ಕೆಗಳೇನು? ಎನ್ನುವ ವಿವರ ಈ ಕೆಳಗಿನಂತಿದೆ ನೋಡಿ.
ಬೆಂಗಳೂರು, (ಸೆಪ್ಟೆಂಬರ್ 25): ಇಡೀ ದೇಶಕ್ಕೆ ಮಾದರಿಯಾಗುವಂತೆ ಭ್ರಷ್ಟಾಚಾರಿಗಳಿಗೆ ಚಳಿ ಬಿಡಿಸಲು ಲೋಕಾಯುಕ್ತ ಎಂಬ ಸಂಸ್ಥೆಯನ್ನು ಮೊದಲು ಹುಟ್ಟುಹಾಕಿದ್ದೇ ಕರ್ನಾಟಕದಲ್ಲಿ. ಲೋಕಾಯುಕ್ತ ನ್ಯಾಯಮೂರ್ತಿಗಳು ಹಾಗೂ ಪೊಲೀಸರು, ಭ್ರಷ್ಟರ ಎದೆಯಲ್ಲಿ ನಡುಕ ಹುಟ್ಟಿಸಿದ್ದರು. ಭ್ರಷ್ಟರನ್ನು ಸಾಕ್ಷ್ಯ ಸಮೇತ ಬೆತ್ತಲೆಗೊಳಿಸುವಲ್ಲಿ ನಿಸ್ಸೀಮರಾಗಿದ್ದ ಲೋಕಾಯುಕ್ತ ತಂಡ, ಪ್ರತಿ ದಾಳಿಯ ವೇಳೆಯಲ್ಲೂ ರಾಜ್ಯಾದ್ಯಂತ ಸದ್ದು ಮಾಡುತ್ತಿತ್ತು. ದಶಕಗಳ ಹಿಂದೆಯೇ ಕೋಟಿ ಕೋಟಿ ಲಂಚದ ಹಣದ ಸಮೇತ ಭ್ರಷ್ಟ ಅಧಿಕಾರಿಗಳನ್ನು ಹಿಡಿದು ದಂಡಿಸುತ್ತಿದ್ದ ದೃಶ್ಯಗಳು ರೋಮಾಂಚನ ಸೃಷ್ಟಿಸುತ್ತಿತ್ತು. ಆದ್ರೆ, 2016ರಲ್ಲಿ ಅಂದಿನ ಸಿಎಂ ಸಿದ್ದರಾಮಯ್ಯ ಅವರ ಅಧಿಕಾರಾವಧಿಯಲ್ಲಿ ಭ್ರಷ್ಟಾಚಾರ ನಿಗ್ರಹ ದಳ ಎಸಿಬಿ ರಚನೆಯಾಯ್ತು. ಎಸಿಬಿ ರಚನೆಯ ಮೂಲಕ ಲೋಕಾಯುಕ್ತರ ಅಧಿಕಾರ ಮೊಟಕಾಯ್ತು. 1988ರ ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಲೋಕಾಯುಕ್ತಕ್ಕೆ ಲಭ್ಯವಾಗಿದ್ದ ಪೊಲೀಸ್ ತನಿಖಾ ಅಧಿಕಾರವನ್ನು ಕಿತ್ತುಕೊಂಡು ಎಸಿಬಿಗೆ ನೀಡಲಾಯ್ತು. ಬಳಿಕ ಸಿದ್ದರಾಮಯ್ಯ ಕಾಲದಲ್ಲಿ ರಚನೆಯಾಗಿದ್ದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ಗೆ ಕರ್ನಾಟಕ ಹೈಕೋರ್ಟ್ ಕೊನೆ ಮೊಳೆ ಹೊಡೆದು ಮತ್ತೆ ಲೋಕಾಯುಕ್ತಕ್ಕೆ ಪವರ್ ನೀಡಿತ್ತು. ಅಂದು ಲೋಕಾಯುಕ್ತವನ್ನು ಲೋಕಾಯುಕ್ತರ ಸಂಸ್ಥೆಯನ್ನೇ ಬುಡಮೇಲು ಮಾಡಿದ್ದ ಸಿಎಂ ಸಿದ್ದರಾಮಯ್ಯ ಇದೀಗ ಅದೇ ಲೋಕಾಯುಕ್ತ ಬಲೆಗೆ ಸಿಲುಕಿದ್ದಾರೆ.
ಹೌದು….ಮುಡಾ ಹಗರಣ ಪ್ರಕರಣಕ್ಕೆ ಸಂಬಂಧಸಿದಂತೆ ಇಂದು(ಸೆ,25) ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್, ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತ ತನಿಖೆಗೆ ಆದೇಶಿಸಿದೆ. ಮುಂದಿನ ಮೂರು ತಿಂಗಳಲ್ಲಿ ವರದಿ ನೀಡುವಂತೆ ಸೂಚನೆ ನೀಡಿದೆ. ಈ ಮೂಲಕ ಶೀಘ್ರದಲ್ಲಿಯೇ ಸಿದ್ದರಾಮಯ್ಯ ವಿರುದ್ಧ ಎಫ್‌ಐಆರ್ ದಾಖಲು ಮಾಡಿ ತನಿಖೆ ಕೈಗೊಳ್ಳಲಾಗುತ್ತದೆ. ಹೀಗಾಗಿ ಸದ್ಯ ಎಲ್ಲರ ಚಿತ್ತ ಮೈಸೂರಿನ ಲೋಕಾಯುಕ್ತರತ್ತ ನೆಟ್ಟಿದೆ.
ಇದನ್ನೂ ಓದಿ: ಸಿದ್ದರಾಮಯ್ಯಗೆ ಮುಡಾಫ್: ಹೈಕೋರ್ಟ್-ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶದ ಸಾರ ಇಲ್ಲಿದೆ
ಕೋರ್ಟ್ ತೀರ್ಪು ಬರುತ್ತಿದ್ದಂತೆ ಸಿಎಂ ಸಿದ್ದರಾಮಯ್ಯ ವಿರುದ್ಧ ದೂರು ದಾಖಲು ಸಾಧ್ಯತೆ ಇದೆ. ಮೈಸೂರಿನ ಲೋಕಾಯುಕ್ತ ಕಚೇರಿಯಲ್ಲೇ ದೂರು ದಾಖಲಾಗುವುದು ಖಚಿತ ಎನ್ನುವ ಮಾಹಿತಿ ಲಭ್ಯವಾಗಿದೆ. ಇನ್ನು ಎಫ್‌ಐಆರ್ ದಾಖಲಾದರೆ ಸಿಎಂ ಸಿದ್ದರಾಮಯ್ಯ ಅವರನ್ನು ಬಂಧನ ಮಾಡಿದರೂ ಅಚ್ಚರಿಪಡಬೇಕಿಲ್ಲ.
ಸಿದ್ದರಾಮಯ್ಯ.. ಮುಂದಿನ ದಾರಿ ಯಾವುದಯ್ಯಾ?
ಸಿಎಂ ಸಿದ್ದರಾಮಯ್ಯ ನಾಳೆಯೇ ಹೈಕೋರ್ಟ್ ಮೆಟ್ಟಿಲೇರಲು ಸಿದ್ಧತೆ ನಡೆಸಿದ್ದಾರೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್ ತನಿಖೆಗೆ ಆದೇಶ ನೀಡಿರುವುದನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಜನಪ್ರತಿನಿಧಿಗಳ ವಿಶೇಷ ಕೋರ್ಟ್ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡುವಂತೆಯೂ ಮನವಿ ಮಾಡಲಿದ್ದಾರೆ. ಹೈಕೋರ್ಟ್ ತಡೆಯಾಜ್ಞೆ ನೀಡಿದರೆ ಸಿದ್ಧರಾಮಯ್ಯಗೆ ತನಿಖೆಯಿಂದ ರಿಲೀಫ್ ಸಿಕ್ಕಂತಾಗಲಿದೆ. ಇನ್ನು ತನಿಖೆಗೆ ರಾಜ್ಯಪಾಲರು ನೀಡಿದ್ದ ಅನುಮತಿ ಎತ್ತಿ ಹಿಡಿದ ನಿನ್ನೆಯ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲು ಸಿಎಂ ಸಿದ್ಧತೆ ನಡೆಸಿದ್ದಾರೆ. ರಾಜ್ಯಪಾಲರ ಆದೇಶಕ್ಕೆ ಹೈಕೋರ್ಟ್ ವಿಭಾಗೀಯ ಪೀಠ ತಡೆಯಾಜ್ಞೆ ನೀಡಿದರೂ ಸಿದ್ದರಾಮಯ್ಯಗೆ ರಿಲೀಫ್ ಸಿಗಲಿದೆ. ಒಂದು ವೇಳೆ ಹೈಕೋರ್ಟ್ ವಿಭಾಗೀಯ ಪೀಠದಲ್ಲೂ ರಿಲೀಫ್ ಸಿಗದಿದ್ದರೆ ತಕ್ಷಣ ಸುಪ್ರೀಂಕೋರ್ಟ್ ಮೆಟ್ಟಿಲೇರಲೂ ಸಿಎಂ ಪರ ವಕೀಲರು ಸಿದ್ಧತೆ ನಡೆಸಿದ್ದಾರೆ.
ಎಸಿಬಿ ರದ್ದುಪಡಿಸಿ ಲೋಕಾಯುಕ್ತಕ್ಕೆ ಬಲ ತುಂಬಿದ್ದ ಹೈಕೋರ್ಟ್
1988ರ ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಲೋಕಾಯುಕ್ತಕ್ಕೆ ಲಭ್ಯವಾಗಿದ್ದ ಪೊಲೀಸ್ ತನಿಖಾ ಅಧಿಕಾರವನ್ನು ಕಿತ್ತುಕೊಂಡು ಎಸಿಬಿಗೆ ನೀಡಲಾಯ್ತು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾರ ಅವಧಿಯಲ್ಲಿ ಭ್ರಷ್ಟ್ರಾಚಾರ ಪ್ರಕರಣಗಳ ತನಿಖೆಗಾಗಿ ರಚಿಸಿದ್ದ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ)ವನ್ನು 2022ರಲ್ಲಿ ಕರ್ನಾಟಕ ಹೈಕೋರ್ಟ್ ರದ್ದುಪಡಿಸುವ ಮೂಲಕ ಐತಿಹಾಸಿಕ ತೀರ್ಪು ನೀಡಿತ್ತು. ಅಲ್ಲದೇ ಎಸಿಬಿ ಮುಂದಿದ್ದ ಎಲ್ಲಾ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡುವಂತೆ ಸೂಚಿಸಿತ್ತು.
ಬೆಂಗಳೂರು ವಕೀಲರ ಸಂಘ, ಸಮಾಜ ಪರಿವರ್ತನ ಸಮುದಾಯ ಮತ್ತು ವಕೀಲ ಬಿ.ಜಿ.ಚಿದಾನಂದ ಅರಸ್ ಅವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಅಂದಿನ ಹೈಕೋರ್ಟ್ ನ್ಯಾಯಮೂರ್ತಿಗಳಾಗಿದ್ದ ಬಿ.ವೀರಪ್ಪ ಮತ್ತು ಎಚ್.ಎಸ್.ಹೇಮಲೇಖಾ ಅವರಿದ್ದ ದ್ವೀಸದಸ್ಯ ಪೀಠವು ಎತ್ತಿ ಹಿಡಿದಿತ್ತು. 2016ರ ಮಾರ್ಚ್ 14ರಂದು ಎಸಿಬಿ ರಚಿಸಲು ಮಾಡಿರುವ ಕಾರ್ಯಾದೇಶವನ್ನು ರಾಜ್ಯ ಸರ್ಕಾರ ಸರಿಯಾಗಿ ಮಾಡಿಲ್ಲ. ಅಲ್ಲದೆ ಲೋಕಾಯುಕ್ತ ತನಿಖೆಗೆ ಸಂಬಂಧಿಸಿದ ಅಧಿಕಾರವನ್ನು ಲೋಕಾಯುಕ್ತ ಪೊಲೀಸರಿಂದ ಹಿಂಪಡೆದಿರುವ ಸೂಚನೆಯ ಬಗ್ಗೆಯೂ ಸರಿಯಾದ ಕ್ರಮವಿಲ್ಲ. ಹಾಗಾಗಿ ಹಿಂದಿನ ಅಧಿಸೂಚನೆಗಳನ್ನು ಸೂಪರ್ ಸೀಡ್ ಮಾಡಿ ಹೊರಡಿಸಿರುವ ಎಸಿಬಿಯನ್ನು ವಜಾ ಮಾಡಲಾಗಿದೆ ಎಂದು ಪೀಠವು ಆದೇಶದಲ್ಲಿ ಹೇಳಿತ್ತು. ಇದೀಗ ಸಿಎಂ ಸಿದ್ದರಾಮಯ್ಯ ಅದೇ ಲೋಕಾಯುಕ್ತ ಬಲೆಗೆ ಸಿಲುಕುವಂತಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:56 pm, Wed, 25 September 24