ಮಂಗಳೂರು, ಸೆಪ್ಟೆಂಬರ್ 25: ರಾಜ್ಯಪಾಲರ ಆದೇಶ ಪ್ರಶ್ನಿಸಿದ್ದ ಸಿದ್ದರಾಮಯ್ಯಗೆ ಕಾನೂನು ಹೋರಾಟದಲ್ಲಿ ಆರಂಭಿಕ ಹಿನ್ನಡೆಯಾಗಿದೆ. ಇದರ ಮಧ್ಯೆ ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಿದ್ದರಾಮಯ್ಯ ವಿರುದ್ಧ ತನಿಖೆಗೆ ಆದೇಶ ನೀಡಿದೆ. ಆ ಮೂಲಕ ಸಿಎಂ ಟೆನ್ಷನ್ ಶುರುವಾಗಿದೆ. ಸದ್ಯ ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ನಿವೃತ್ತ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ (Santosh Hegde), ಲಾಲ್ ಬಹದ್ದೂರ್ ಶಾಸ್ತ್ರಿ ರಾಜೀನಾಮೆ ಉದಾಹರಣೆಯೊಂದಿಗೆ ಸಿಎಂಗೆ ಮಹತ್ವದ ಸಲಹೆ ನೀಡಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು. ಈ ಹಿಂದೆ ರೈಲ್ವೆ ಸಚಿವರಾಗಿದ್ದಾಗ ಲಾಲ್ ಬಹದ್ದೂರ್ ಶಾಸ್ತ್ರಿ ಅಪಘಾತ ಮಾಡಿದಾಗ ರಾಜೀನಾಮೆ ನೀಡಿದ್ದರು. ರಾಜೀನಾಮೆ ಕೊಡಬೇಕೋ, ಕೊಡಬೇಡವೋ ಅನ್ನೋದು ಅವರಿಗೆ ಬಿಟ್ಟಿದ್ದು. ಇಂತಹ ಗಂಭೀರ ಆರೋಪ ಕೇಳಿಬಂದಾಗ ರಾಜೀನಾಮೆ ಕೊಡಬೇಕು. ಒಂದು ವೇಳೆ ರಾಜೀನಾಮೆ ಕೊಡದಿದ್ದರೆ ಕಾನೂನಿನಲ್ಲಿ ಯಾವುದೇ ತಪ್ಪಿಲ್ಲ. ಆದರೆ ಸಾರ್ವಜನಿಕರ ದೃಷ್ಟಿಯಲ್ಲಿ ನನಗೆ ಅನಿಸಿದಾಗ ರಾಜೀನಾಮೆ ಕೊಡಬೇಕು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯಗೆ ಪಿತೃಪಕ್ಷದ ಕಂಟಕ? ತುಂಗಭದ್ರೆಗೆ ಬಾಗಿನ ಅರ್ಪಿಸಿ ಮುಡಾ ಬಲೆಯಲ್ಲಿ ಸಿಕ್ಕಿಬಿದ್ರಾ?
ಹೈಕೋರ್ಟ್ ಕೂಡ ಮೇಲ್ನೋಟಕ್ಕೆ ಇದರಲ್ಲಿ ಪುರಾವೆ ಇದೆ ಎಂದು ಹೇಳಿದೆ. ಹಾಗಾಗಿ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕೆನಿಸುತ್ತಿದೆ. ರಾಜೀನಾಮೆ ಕೊಡುವುದು ಸಿದ್ದರಾಮಯ್ಯಗೆ ಬಿಟ್ಟದ್ದು. ಯಾವ ತನಿಖಾ ಸಮಿತಿ ಉತ್ತಮವೆಂದು ಹೇಳಲ್ಲ, ಸರ್ಕಾರಕ್ಕೆ ಬಿಟ್ಟ ವಿಚಾರ. ಯಾವುದೇ ತನಿಖಾ ಸಮಿತಿ ವಿಚಾರಣೆ ಮಾಡಬಹುದು. ಅವರು ಆರೋಪಿಯಲ್ಲವೆಂದು ತೀರ್ಪು ಬಂದರೆ ಮತ್ತೆ ಹುದ್ದೆ ಅಲಂಕರಿಸಲಿ. ಹೈಕೋರ್ಟ್ ತೀರ್ಪಿಗೂ ಮುನ್ನ ನಾನು ತಪ್ಪೇ ಮಾಡಿಲ್ಲವೆಂದು ಹೇಳಿದ್ದರು. ಈಗ ಕೋರ್ಟ್ ಮೇಲ್ನೋಟಕ್ಕೆ ತಪ್ಪು ಕಂಡುಬಂದಿದೆ ಎಂದು ಹೇಳಿದೆ. ಸದ್ಯ ಅವರು ಹೇಳಿದ್ದು ಸರಿಯಿಲ್ಲವೆಂದು ಆಯ್ತಲ್ಲ ಎಂದಿದ್ದಾರೆ.
ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಡಲ್ಲ ಅಂತಾ ಹೇಳುತ್ತಿದ್ದಾರೆ. ಹಾಗಾದರೆ ನ್ಯಾಯಾಲಯ ಮುಚ್ಚುಬಿಡಿ, ಯಾಕೆ ಬೇಕು ಕೋರ್ಟ್? ನಿಮ್ಮ ಪರವಾಗಿ ಬಂದ್ರೆ ನ್ಯಾಯ, ನಿಮ್ಮ ವಿರುದ್ಧ ಬಂದ್ರೆ ಅನ್ಯಾಯನಾ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಸಿದ್ದರಾಮಯ್ಯ ರಾಜೀನಾಮೆಗೆ ಪಟ್ಟು: ಕರ್ನಾಟಕದಾದ್ಯಂತ ತೀವ್ರಗೊಂಡ ಬಿಜೆಪಿ ಪ್ರತಿಭಟನೆ
ಸಿದ್ದರಾಮಯ್ಯ ಅವರೇ ನೀವು ಸುಪ್ರೀಂಕೋರ್ಟ್ ಮೊರೆ ಹೋಗಿ. ಸಿಎಂ ಸಿದ್ದರಾಮಯ್ಯಗೆ ನ್ಯಾಯ ಸಿಗಲಿ ಅನ್ನೋದು ನನ್ನ ಬಯಕೆ. ಆದರೆ ನ್ಯಾಯಾಂಗ ವ್ಯವಸ್ಥೆಗೆ ತಲೆಬಾಗಿ ಎಂದು ಹೇಳಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.