ಮುಡಾ ಹಗರಣ: ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿಗೆ ಸುಪ್ರೀಂ ಕೋರ್ಟ್ನಲ್ಲಿ ಬಿಗ್ ರಿಲೀಫ್
ಕರ್ನಾಟಕದ ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಮತ್ತು ಸಚಿವ ಭೈರತಿ ಸುರೇಶ್ಗೆ ಸಮನ್ಸ್ ನೀಡುವ ವಿಚಾರದಲ್ಲಿ ಜಾರಿ ನಿರ್ದೇಶನಾಲಯಕ್ಕೆ ಸುಪ್ರೀಂ ಕೋರ್ಟ್ನಲ್ಲಿ ಭಾರಿ ಹಿನ್ನಡೆಯಾಗಿದೆ. ಇದರಿಂದ ಸಿಎಂ ಪತ್ನಿ ಹಾಗೂ ಭೈರತಿ ಸುರೇಶ್ ನಿರಾಳರಾದಂತಾಗಿದೆ. ಇಡಿ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್, ಅಷ್ಟಕ್ಕೇ ಸುಮ್ಮನಾಗದೆ ಸಂಸ್ಥೆಯನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿರುವ ಬಗ್ಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ.

ಬೆಂಗಳೂರು, ಜುಲೈ 21: ಮುಡಾ ಹಗರಣ (MUDA Scam) ಸಂಬಂಧ ಜಾರಿ ನಿರ್ದೇಶನಾಲಯ (ED) ತನಿಖೆ ವಿಚಾರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ (Parvathi Siddaramaiah) ಹಾಗೂ ಸಚಿವ ಭೈರತಿ ಸುರೇಶ್ಗೆ ಸುಪ್ರೀಂ ಕೋರ್ಟ್ನಲ್ಲಿ ಬಿಗ್ ರಿಲೀಫ್ ದೊರೆತಿದೆ. ಪಾರ್ವತಿ ಅವರಿಗೆ ಜಾರಿ ನಿರ್ದೇಶನಾಲಯ ನೀಡಿದ್ದ ನೋಟಿಸ್ ಅನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಇಡಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ (Supreme Court) ವಜಾಗೊಳಿಸಿದೆ. ಅಷ್ಟೇ ಅಲ್ಲದೆ, ಇಡಿಯನ್ನು ರಾಜಕೀಯವಾಗಿ ಬಳಸಿಕೊಳ್ಳುವ ಬಗ್ಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಅರ್ಜಿಯ ವಿಚಾರಣೆ ಕೈಗೆತ್ತಿಕೊಳ್ಳುವ ಕುರಿತು ವಿಚಾರಣೆ ನಡೆಸಿದ ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮುರ್ತಿ ಬಿಆರ್ ಗವಾಯಿ ಅವರಿದ್ದ ಪೀಠ, ಇಡಿಯನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ, ಅರ್ಜಿಯನ್ನು ವಜಾಗೊಳಿಸಿದೆ.
ಸುಪ್ರೀಂ ಕೋರ್ಟ್ ಹೇಳಿದ್ದೇನು?
‘ದಯವಿಟ್ಟು ನಾವು ಬಾಯಿ ತೆರೆಯುವಂತೆ ಮಾಡಬೇಡಿ. ಹಾಗೆ ಮಾಡಿದರೆ, ನಾವು ಇಡಿ ಬಗ್ಗೆ ಕೆಲವು ಕಟು ಟೀಕೆಗಳನ್ನು ಮಾಡಬೇಕಾಗಬಹುದು. ದುರದೃಷ್ಟವಶಾತ್, ನನಗೆ ಮಹಾರಾಷ್ಟ್ರದಲ್ಲಿ ಸ್ವಲ್ಪ ಅನುಭವವಿದೆ. ನೀವು ಈಗ ದೇಶಾದ್ಯಂತ ಈ ರೀತಿಯ ವರ್ತನೆ ಮುಂದುವರಿಸಬಾರದು. ರಾಜಕೀಯ ಪೈಪೋಟಿಯನ್ನು ಏನಿದ್ದರೂ ಮತದಾರರ ಎದುರು ಮಾಡಿಕೊಳ್ಳಲಿ. ಇಡಿಯನ್ನು ಏಕೆ ಎಂದು ಬಳಸಲಾಗುತ್ತಿದೆ’ ಎಂದು ಅಡಿಷನಲ್ ಸಾಲಿಸಿಟರ್ ಜನರಲ್ ಎಸ್ವಿ ರಾಜಿ ಅವರನ್ನುದ್ದೇಶಿಸಿ ಸಿಜೆಐ ಬಿಆರ್ ಗವಾಯಿ ಪ್ರಶ್ನಿಸಿದರು.
ಮುಂದುವರಿದು, ಏಕಸದಸ್ಯ ಪೀಠದ ತೀರ್ಪಿನಲ್ಲಿ ನಮಗೆ ಲೋಪ ಕಂಡುಬಂದಿಲ್ಲ. ಹೀಗಾಗಿ ಇಡಿ ಅರ್ಜಿಯನ್ನು ವಜಾಗೊಳಿಸುತ್ತಿದ್ದೇವೆ ಎಂದರು. ಇದರೊಂದಿಗೆ ಇದೀಗ, ಮುಡಾ ಹಗರಣದಲ್ಲಿ ಸಿಎಂ ಪತ್ನಿ ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್ ನಿರಾಳರಾದಂತಾಗಿದೆ.
ಇದನ್ನೂ ಓದಿ: ಮುಡಾ ಹಗರಣದ ಮತ್ತಷ್ಟು ಕರ್ಮಕಾಂಡ ಬಯಲು: ಒಬ್ಬನೇ ವ್ಯಕ್ತಿಗೆ 30ಕ್ಕೂ ಹೆಚ್ಚು ಸೈಟ್ ಹಂಚಿಕೆ, ಇಡಿ ತನಿಖೆಯಲ್ಲಿ ಪತ್ತೆ
ಮುಡಾ ಹಗರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ನಿ ಪಾರ್ವತಿ ಮತ್ತು ಸಚಿವ ಬೈರತಿ ಸುರೇಶ್ಗೆಗೆ ಇಡಿ ನೀದಿದ್ದ ಸಮನ್ಸ್‌ಗೆ ತಡೆಯಾಜ್ಞೆ ನೀಡಿದ್ದ ಕರ್ನಾಟಕ ಹೈಕೋರ್ಟ್ ಅಂತಿಮವಾಗಿ 2025ರ ಮಾರ್ಚ್ನಲ್ಲಿ ಅದನ್ನು ರದ್ದುಗೊಳಿಸಿತ್ತು. ಇಡಿ ಜಾರಿಗೊಳಿಸಿದ್ದ ಸಮನ್ಸ್ ಪ್ರಶ್ನಿಸಿ ಸಿಎಂ ಪತ್ನಿ ಹಾಗೂ ಬೈರತಿ ಸುರೇಶ್ ಸಲ್ಲಿಸಿದ್ದ ಎರಡು ಪ್ರತ್ಯೇಕ ಅರ್ಜಿಗಳ ಕುರಿತು ಕರ್ನಾಟಕ ಹೈಕೋರ್ಟ್ ಧಾರವಾಡ ಪೀಠದ ನ್ಯಾ. ಎಂ ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿ ತೀರ್ಪು ನೀಡಿತ್ತು. ಅದನ್ನು ಪ್ರಶ್ನಿಸಿ ಇಡಿ ಸುಪ್ರೀಂ ಕೋರ್ಟ್ ಮೊರೆ ಹೋಗಿತ್ತು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:20 pm, Mon, 21 July 25








