ಭಕ್ತರ ಜಯಘೋಷದ ನಡುವೆ ಬಿಲ್ಲನ್ನೇರಿದ ಗೊರವಯ್ಯ, ಶೂನ್ಯವನ್ನು ದಿಟ್ಟಿಸುತ್ತಾ ‘ಮುತ್ತಿನರಾಶಿ ಮೂರು ಭಾಗ ಆದೀತಲೆ ಪರಾಕ್’ ಎಂದು ಕಾರಣಿಕ ನುಡಿದು ಹಿಮ್ಮುಖವಾಗಿ ಜಿಗಿದರು. ಗೊರವ ಸಮುದಾಯದ ಪ್ರಮುಖರು ಭಕ್ತಿಯಿಂದ ಅವರನ್ನು ಕಂಬಳಿಯಲ್ಲಿ ಹಿಡಿದರು. ಮೈಲಾರದಲ್ಲಿ ಗೊರವಯ್ಯ ನುಡಿಯುವ ಕಾರಣಿಕವನ್ನು ಬಗೆಬಗೆಯಾಗಿ ವ್ಯಾಖ್ಯಾನಿಸಲಾಗುತ್ತದೆ. ಈ ಬಾರಿಯ ಕಾರಣಿಕವಾಗಿರುವ ‘ಮುತ್ತಿನರಾಶಿ ಮೂರು ಭಾಗ ಆದೀತಲೆ ಪರಾಕ್’ ಎಂಬ ಸಾಲನ್ನು ಇದೇ ರೀತಿ ಹಲವು ಬಗೆಗಳಲ್ಲಿ ಅರ್ಥೈಸಲಾಗುತ್ತಿದೆ.
‘ರಾಜಕೀಯವಾಗಿ ಕೇಂದ್ರ, ರಾಜ್ಯದಲ್ಲಿ ಮೈತ್ರಿ ಸರ್ಕಾರ ಬರುವ ಮುನ್ಸೂಚನೆ ಈ ಕಾರಣಿಕದಲ್ಲಿದೆ. ಇದನ್ನು 3 ಭಾಗದಲ್ಲಿ ಮಳೆ ಬೆಳೆ ಸಮೃದ್ಧಿ, 1 ಭಾಗದಲ್ಲಿ ಸ್ವಲ್ಪ ಸಮಸ್ಯೆ ಎಂದೂ ವಿಶ್ಲೇಷಿಸಬಹುದು ಎಂದು ಮೈಲಾರ ಲಿಂಗೇಶ್ವರದ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಅಭಿಪ್ರಾಯಪಟ್ಟರು.
‘ಮುತ್ತಿನರಾಶಿ’ ಎಂದರೆ ಸಂಪತ್ತು ಎಂದೂ, ಅದು ‘ಮೂರು ಭಾಗ ಆಗುತ್ತದೆ’ ಎಂದರೆ ಮೂರು ಪಟ್ಟು ಹೆಚ್ಚಾಗುತ್ತದೆ ಎಂದೂ ಕೆಲವರು ವ್ಯಾಖ್ಯಾನಿಸಿದ್ದಾರೆ. ಇನ್ನೂ ಕೆಲವರು ಇದು ‘ಶುಭ ಕಾರಣಿಕ. ಕೊರೊನಾದಿಂದ ದೇಶ ಸುಧಾರಿಸಿಕೊಂಡಿದೆ. ದೇಶದ ಆರ್ಥಿಕ ಸ್ಥಿತಿ ಉತ್ತಮಗೊಳ್ಳುತ್ತದೆ’ ಎಂದು ಹೇಳುತ್ತಿದ್ದಾರೆ. ಕೆಲವರು ಮಾತ್ರ ಕಾರಣಿಕವನ್ನು ಮತ್ತೊಂದು ಬಗೆಯಾಗಿ ವಿವರಿಸುತ್ತಿದ್ದಾರೆ. ಮೂರು ಭಾಗ ಎಂದರೆ ಇರುವ ಸಂಪತ್ತು ಹಂಚಿಹೋಗಬಹುದು ಎನ್ನುವ ಅರ್ಥದಲ್ಲಿ ವಿವರಿಸುತ್ತಿದ್ದಾರೆ.
ಇದರ ಕುರಿತು ಪ್ರತಿಕ್ರಿಯೆ ನೀಡಿರುವ ಜ್ಯೋತಿಷಿ ಡಾ.ಬಸವರಾಜ್ ಗುರೂಜಿ, ಈ ಬಾರಿಯ ಕಾರಣಿಕ ಭವಿಷ್ಯ ‘ಮುತ್ತಿನ ರಾಶಿ ಮೂರು ಭಾಗ ಆದೀತಲೆ’ ಇದರ ಅರ್ಥ ಸತ್ವ, ರಜೋ, ತಮೋಗುಣವಾಗಿ ಮೂರುಭಾಗ. ಅಂದರೆ ಮನಸ್ಸುಗಳು ವಿಂಗಡಣೆ ಆಗಬಹುದು ಎಂದು ವಿಶ್ಲೇಷಿಸಿದ್ದಾರೆ.
ಕಳಚಿಬಿದ್ದ ತ್ರಿಶೂಲ: ಭಕ್ತರಲ್ಲಿ ಬೇಸರ
ಮೈಲಾರ ಲಿಂಗೇಶ್ವರನ ಕಾರಣಿಕ ನುಡಿಯುವ ಮೊದಲೇ ದೇಗುಲ ಮುಂದಿನ ಕಟ್ಟೆಯಲ್ಲಿದ್ದ ಕಲ್ಲಿನ ತ್ರಿಶೂಲ ಕಳಚಿಬಿದ್ದಿದೆ. ಇದು ಅಪಶಕುನದ ಸೂಚನೆ ಎಂದು ಭಕ್ತರು ಆತಂಕ ವ್ಯಕ್ತಪಡಿಸಿದರು. ತ್ರಿಶೂಲವನ್ನು ಈ ಮೊದಲು ಇದ್ದಂತೆಯೇ ಶಾಸ್ತ್ರೋಕ್ತವಾಗಿ ಮರು ಸ್ಥಾಪಿಸಬೇಕು ಎಂದು ಸ್ಥಳಕ್ಕೆ ಭೇಟಿ ನೀಡಿದ ಮುಜರಾಯಿ ಅಧಿಕಾರಿಗಳಿಗೆ ಆಗ್ರಹಿಸಿದರು.
ಮೈಲಾರಲಿಂಗ ಕಾರಣಿಕ
ಕಳೆದ ವರ್ಷ ‘ಸಂಪಾಯಿತಲೇ ಪರಾಕ್’
ಮೈಲಾರ ಕ್ಷೇತ್ರದಲ್ಲಿ ಕಳೆದ ವರ್ಷ ಅಂದರೆ ಫೆ.20, 2020ರಂದು ಗೊರವಯ್ಯ ‘ಸಂಪಾಯಿತಲೇ ಪರಾಕ್’ ಎಂದು ಕಾರಣಿಕ ನುಡಿದಿದ್ದರು. ‘ಮಳೆ ಬೆಳೆ ಚೆನ್ನಾಗಿ ಆಗುತ್ತದೆ. ರೈತರ ಬದುಕು ಸುಧಾರಿಸುತ್ತದೆ’ ಎಂದು ಭಕ್ತರು ಅಂದಿನ ಕಾರಣಿಕವನ್ನು ವ್ಯಾಖ್ಯಾನಿಸಿಕೊಂಡಿದ್ದರು. ಅದರಂತೆಯೇ ಕಳೆದ ವರ್ಷ ಮಳೆ-ಬೆಳೆ ಚೆನ್ನಾಗಿ ಆಗಿತ್ತು. ಕೊರೊನಾ ಲಾಕ್ಡೌನ್ ಕಾರಣದಿಂದಾಗಿ ಕೃಷಿ ಮಾರುಕಟ್ಟೆಗೆ ಸಮಸ್ಯೆಯಾಗಿದ್ದರೂ ಬೆಳೆಗಳಿಗೆ ಅತಿವೃಷ್ಟಿ ಹೊರತುಪಡಿಸಿ ಕೀಟಬಾಧೆ ಅಥವಾ ರೋಗಬಾಧೆ ಹೆಚ್ಚಾಗಿ ಕಾಣಿಸಿಕೊಂಡಿರಲಿಲ್ಲ. ಈ ಹಿನ್ನೆಲೆಯಲ್ಲಿ ಈ ವರ್ಷದ ಕಾರಣಿಕವೂ ಶುಭ ಸೂಚಕ ಎಂಬ ಮಾತು ಮಹತ್ವ ಪಡೆದುಕೊಂಡಿದೆ.
ಇದನ್ನೂ ಓದಿ: ಸಂಪಾಯಿತಲೇ ಪರಾಕ್ ಎಂದು ಭವಿಷ್ಯ ನುಡಿದ ಗೊರವಯ್ಯ: ಅನ್ನದಾತರಲ್ಲಿ ಮಂದಹಾಸ