ಸಿದ್ದರಾಮಯ್ಯ ಕುಟುಂಬಕ್ಕೆ ಅನ್ನ, ಆಶ್ರಯ ಕೊಟ್ಟ ಮರಿಸ್ವಾಮಿ ಯಾರು ಗೊತ್ತೇ? ಸಿಎಂ ಅಂದ್ರೆ ಈ ಕುಚುಕು ಗೆಳೆಯನಿಗೆ ಪ್ರಾಣವಂತೆ!
Who is Siddaramaiah's Friend Mariswamy: ಮೈಸೂರಿನ ಕುವೆಂಪು ನಗರ ವಿಶ್ವಮಾನ ಜೋಡಿ ರಸ್ತೆಯಲ್ಲಿ ಸಿಎಂ ಸಿದ್ದರಾಮಯ್ಯ ಹೊಸ ಮನೆ ನಿರ್ಮಾಣವಾಗುತ್ತಿದ್ದು, ಅದರ ವೀಕ್ಷಣೆಗೆ ಬಂದಿದ್ದ ಅವರು ಸ್ನೇಹಿತ ಮರಿಸ್ವಾಮಿ ಬಗ್ಗೆ ಮಾತನಾಡಿದ್ದರು. ಈವರೆಗೆ ತಾವಿದ್ದುದು ಗೆಳೆಯ ಮರಿಸ್ವಾಮಿ ಮನೆಯಲ್ಲಿ. ತಮಗೆ, ಮಕ್ಕಳಿಗೆ ಅನ್ನ ಹಾಗೂ ಆಶ್ರಯ ಕೊಟ್ಟವರು ಅವರೇ ಎಂದಿದ್ದರು. ಹಾಗಾದರೆ ಈ ಮರಿಸ್ವಾಮಿ ಯಾರು? ಸಿದ್ದರಾಮಯ್ಯ ಹಾಗೂ ಅವರ ನಡುವಣ ಸ್ನೇಹ ಎಂತಹದ್ದು? ಸಂಪೂರ್ಣ ವಿವರ ಇಲ್ಲಿದೆ.

ಮೈಸೂರು, ಅಕ್ಟೋಬರ್ 6: ‘ಮರಿಸ್ವಾಮಿಯೇ (Mariswamy) ನನ್ನ ಆಶ್ರಯದಾತ. ನಾನು, ನನ್ನ ಮಕ್ಕಳು ಮೈಸೂರಿಗೆ ಬಂದಾಗ ಆಶ್ರಯ, ಅನ್ನ-ಆಹಾರ ನೀಡಿದ್ದು ಅವನೇ. ಮರಿಸ್ವಾಮಿ ಯಾರೆಂದು ನಿಮಗೆ ಗೊತ್ತೇ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಮ್ಮ ಕುಚುಕು ಗೆಳೆಯನ ಬಗ್ಗೆ ಮುಕ್ತ ಕಂಠದಿಂದ ಶ್ಲಾಘಿಸಿದ್ದರು. ಮೈಸೂರಿನ ಕುವೆಂಪು ನಗರ ವಿಶ್ವಮಾನ ಜೋಡಿ ರಸ್ತೆಯಲ್ಲಿ ತಮಗಾಗಿ ನಿರ್ಮಾಣವಾಗುತ್ತಿರುವ ಹೊಸ ಮನೆಯನ್ನು ವೀಕ್ಷಿಸಿದ ಬಳಿಕ ಅವರು ಈ ಮಾತುಗಳನ್ನಾಡಿದ್ದರು. ಅಂದಹಾಗೆ, ಸಿಎಂ ಸಿದ್ದರಾಮಯ್ಯ ಒಂದಲ್ಲ, ಎರಡಲ್ಲ, ನಾಲ್ಕು ದಶಕಗಳಿಗೂ ಹೆಚ್ಚು ಕಾಲದಿಂದ ಕರ್ನಾಟಕ ರಾಜಕಾರಣದಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ ಅಪರೂಪದ ನಾಯಕ. ಅನ್ನಭಾಗ್ಯ ಸೇರಿ ಹಲವು ಯೋಜನೆಗಳನ್ನು ನೀಡಿ ಬಡವರ ಪಾಲಿನ ಅನ್ನದಾತ ಅನ್ನೋ ಹೆಗ್ಗಳಿಕೆಗೆ ಸಿದ್ದರಾಮಯ್ಯ ಪಾತ್ರರಾಗಿದ್ದಾರೆ. ಆದರೆ, ಅಂತಹ ಸಿದ್ದರಾಮಯ್ಯ ಅವರೇ, ಮೈಸೂರಿನಲ್ಲಿ ತನಗೊಬ್ಬ ಅನ್ನದಾತ ಹಾಗೂ ಆಶ್ರಯದಾತ ಇರುವ ಬಗ್ಗೆ ಹೆಮ್ಮೆಯಿಂದ ಹಾಗೂ ಖುಷಿಯಿಂದ ಹೇಳಿಕೊಂಡಿದ್ದಾರೆ. ಅದು ಬೇರೆ ಯಾರ ಬಗ್ಗೆಯೂ ಅಲ್ಲ. ತಮ್ಮ ಆಪ್ತ ಸ್ನೇಹಿತ ಮರಿಸ್ವಾಮಿ ಬಗ್ಗೆ.
ಸಿದ್ದರಾಮಯ್ಯ, ಮರಿಸ್ವಾಮಿ ಮಧ್ಯೆ 5 ದಶಕಗಳ ಸ್ನೇಹ!
ಸಿದ್ದರಾಮಯ್ಯ ಹಾಗೂ ಮರಿಸ್ವಾಮಿ ಅವರದ್ದು ಬರೋಬ್ಬರಿ 50 ವರ್ಷಕ್ಕೂ ಮೀರಿದ ಸ್ನೇಹ. ಸಿದ್ದರಾಮಯ್ಯ ಬಗ್ಗೆ ಎಲ್ಲರಿಗೂ ಗೊತ್ತಿದೆ. ಆದರೆ ಮರಿಸ್ವಾಮಿ ಬಗ್ಗೆ ಸಿದ್ದರಾಮಯ್ಯ ಅವರ ಆಪ್ತರನ್ನು ಹೊರತುಪಡಿಸಿದರೆ, ಬಹುತೇಕ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಖುದ್ದು ಸಿದ್ದರಾಮಯ್ಯ ಅವರ ಜೊತೆ ಇರುವವರಿಗೂ ಗೊತ್ತಿಲ್ಲ!
ಸಿದ್ದರಾಮಯ್ಯ ಆಪ್ತಸ್ನೇಹಿತ ಮರಿಸ್ವಾಮಿ ಯಾರು?
ಮರಿಸ್ವಾಮಿ ಮೂಲತಃ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕು ಸುಗ್ಗನಹಳ್ಳಿ ಗ್ರಾಮದವರು. ಅವರು ತಾಯಿ ಮನೆ ಮೈಸೂರು ತಾಲ್ಲೂಕು ಕುಪ್ಪೆಗಾಲ ಗ್ರಾಮ. ಅಂದ್ರೆ ಸಿಎಂ ಸಿದ್ದರಾಮಯ್ಯ ಬಾಲ್ಯದಲ್ಲಿ ಓದಿದ ಶಾಲೆ ಇರುವ ಗ್ರಾಮ. ಇನ್ನು ಸಿದ್ದರಾಮಯ್ಯ ಅವರ ಹುಟ್ಟೂರು ಸಿದ್ದರಾಮನಹುಂಡಿ ಇರುವುದು ಸಹಾ ಇದೇ ಕುಪ್ಪೆಗಾಲ ಗ್ರಾಮದ ಪಕ್ಕದಲ್ಲಿ. ಅಸಲಿಗೆ ಸಿದ್ದರಾಮಯ್ಯ ಹಾಗೂ ಮರಿಸ್ವಾಮಿ ಅವರ ಸೋದರ ಮಾವ ಕೆಂಪಯ್ಯ ಕ್ಲಾಸ್‌ಮೇಟ್‌ಗಳು. ರಾಮಸ್ವಾಮಿ ಅವರಿಗೂ ಸಿದ್ದರಾಮಯ್ಯ ಅವರಿಗೂ ಸುಮಾರು 6 ರಿಂದ 7 ವರ್ಷ ವಯಸ್ಸಿನ ವ್ಯತ್ಯಾಸವಿದೆ. ಮರಿಸ್ವಾಮಿ ಅವರು ಎಂಎ ಓದಿದ್ದಾರೆ.
ಮರಿಸ್ವಾಮಿಗೆ ಸಿದ್ದರಾಮಯ್ಯ ಪರಿಚಯವಾಗಿದ್ದು ಹೇಗೆ?
ಮರಿಸ್ವಾಮಿ ಅವರಿಗೆ ಸಿದ್ದರಾಮಯ್ಯ ಪರಿಚಯವಾಗಿದ್ದೇ ಆಕಸ್ಮಿಕ ಎನ್ನಬಹುದು. ಶ್ರೀರಂಗಪಟ್ಟಣದಲ್ಲಿ ತಂದೆ ಮನೆಯಲ್ಲಿದ್ದ ಮರಿಸ್ವಾಮಿ ಅವರನ್ನು ಕಲಿಕೆಗಾಗಿ ತಾಯಿ ಮನೆ ಕುಪ್ಪೆಗಾಲಕ್ಕೆ ಕಳುಹಿಸಲಾಗಿತ್ತು. ಮರಿಸ್ವಾಮಿ ಅವರನ್ನು ಓದಿಸಿದ್ದು ಅವರ ಸೋದರ ಮಾವ ಹಾಗೂ ಸಿದ್ದರಾಮಯ್ಯ ಅವರ ಕ್ಲಾಸ್‌ಮೇಟ್ ಕೆಂಪಯ್ಯ. ಹೀಗೆ ಸೋದರ ಮಾವನ ಮನೆಗೆ ಹೋದವರಿಗೆ ಓದು ಮಾತ್ರವಲ್ಲ ಜೀವದ ಗೆಳೆಯ ಸಿದ್ದರಾಮಯ್ಯ ಸಿಕ್ಕಿದ್ದರು.
ಕೃಷ್ಣ ಸುಧಾಮ, ಕರ್ಣ ಸುಯೋಧನರ ಮೀರಿಸಿದ ಸ್ನೇಹ!
ಸಿದ್ದರಾಮಯ್ಯ ಹಾಗೂ ಮರಿಸ್ವಾಮಿ ಅವರ ಸ್ನೇಹ ಕೃಷ್ಣ ಸುಧಾಮ ಹಾಗೂ ಕರ್ಣ ಸುಯೋಧನನ ಸ್ನೇಹವನ್ನು ಮೀರಿಸಿದ್ದು. ಅದು 1970 ರ ಸಮಯ. ಸಿದ್ದರಾಮಯ್ಯ ಮರಿಸ್ವಾಮಿ ಸೋದರ ಮಾವ ಕೆಂಪಯ್ಯ ಮನೆಗೆ ಬರುತ್ತಿದ್ದರು. ಆದರೂ ಮರಿಸ್ವಾಮಿ ಎಂದೂ ಸಿದ್ದರಾಮಯ್ಯರನ್ನು ಮಾತನಾಡಿಸಿರಲಿಲ್ಲ. ಆದರೆ ಒಮ್ಮೆ ಮೈಸೂರಿನ ಹಾರ್ಡವಿಕ್ ಶಾಲೆಯಲ್ಲಿ ಮರಿಸ್ವಾಮಿ ಆಕಸ್ಮಿಕವಾಗಿ ಸಿದ್ದರಾಮಯ್ಯ ಅವರನ್ನು ಭೇಟಿಯಾದರು. ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಬಂದಿದ್ದ ಮರಿಸ್ವಾಮಿ ಅವರನ್ನು ಸಿದ್ದರಾಮಯ್ಯ ಅವರೇ ಮಾತನಾಡಿಸಿದ್ದರು. ಆ ವೇಳೆ ಸಿದ್ದರಾಮಯ್ಯ ಅದೇ ಶಾಲೆಯ ಬಳಿ ನಿಂತಿದ್ದರು. ಮರಿಸ್ವಾಮಿ ನೋಡಿದವರೇ, ಏನಯ್ಯಾ ಇಲ್ಲಿ ಎಂದು ಮಾತನಾಡಿಸಿದ್ದರು. ಆಗ ಸಿದ್ದರಾಮಯ್ಯ ಎಲ್ಎಲ್ಬಿ ಫೈನಲ್ ಇಯರ್‌ನಲ್ಲಿದ್ದರು. ಮರಿಸ್ವಾಮಿ ತಾವು ಪರೀಕ್ಷೆ ಬರೆಯಲು ಬಂದಿರುವುದಾಗಿ ಹೇಳಿದ್ದರು. ಆಗ ಸಿದ್ದರಾಮಯ್ಯ, ಮರಿಸ್ವಾಮಿಗೆ ಪರೀಕ್ಷಾ ಕೇಂದ್ರ ಹುಡುಕಲು ಸಹಾಯ ಮಾಡಿದ್ದರು. ಅವತ್ತು ಆರಂಭವಾದ ಇವರಿಬ್ಬರ ಸ್ನೇಹ ಇಂದಿಗೂ ಮುಂದುವರಿದಿದೆ.
ಮರಿಸ್ವಾಸಮಿ ಸ್ವಂತ ಮನೆ, ಆದರೆ ಸಿದ್ದರಾಮಯ್ಯ ನಿವಾಸ!

ಸದ್ಯ ಮೈಸೂರಿನ ಟಿಕೆ ಬಡಾವಾಣೆಯಲ್ಲಿರುವ ಮರಿಸ್ವಾಮಿ ಮನೆಯಲ್ಲೇ ಸಿಎಂ ಸಿದ್ದರಾಮಯ್ಯ ಇರುವುದು. ಅದು ಮರಿಸ್ವಾಮಿ ಅವರ ಸ್ವಂತ ಮನೆಯಾದರೂ ಎಲ್ಲರೂ ಅದನ್ನು ಸಿದ್ದರಾಮಯ್ಯ ಅವರ ಮನೆ ಎಂದೇ ಭಾವಿಸಿರುವುದು ಹಾಗೂ ಕರೆಯುವುದು. ಜನ ಸಾಮಾನ್ಯರು ಮಾತ್ರವಲ್ಲ, ಸಿದ್ದರಾಮಯ್ಯ ಬೆಂಬಲಿಗರು, ಕಾಂಗ್ರೆಸ್ ಕಾರ್ಯಕರ್ತರು, ಕೈ ಮುಖಂಡರು ಅಷ್ಟೇ ಏಕೆ ಅಧಿಕಾರಿಗಳು, ಪೊಲೀಸರು ಸಹಾ ಅದನ್ನು ಸಿದ್ದರಾಮಯ್ಯ ನಿವಾಸ ಅಂತಲೇ ಗುರುತಿಸುತ್ತಾರೆ. ಇದರಲ್ಲಿ ಏನು ವಿಶೇಷ ಇಲ್ಲ ಬಿಡಿ. ಯಾಕಂದರೆ ಈ ಮನೆಯನ್ನು ಮರಿಸ್ವಾಮಿ ಕಟ್ಟಿಸಿದ್ದೇ ಸಿದ್ದರಾಮಯ್ಯ ಅವರಿಗಾಗಿ! ಅಂದಹಾಗೆ ಇದು ಮರಿಸ್ವಾಮಿ ಅವರು ಸಿದ್ದರಾಮಯ್ಯ ಅವರಿಗಾಗಿ ಮಾಡಿದ ಮೊದಲ ಮನೆಯಲ್ಲ!
ಸಿದ್ದರಾಮಯ್ಯಗೆ ಮನೆ ಹುಡುಕಿಕೊಡುತ್ತಿದ್ದ ಮರಿಸ್ವಾಮಿ

ನಿಮಗೆ ಗೊತ್ತಿರಲಿ ಇವರಿಬ್ಬರ ಸ್ನೇಹ ಗಟ್ಟಿಯಾಗಿದ್ದೇ ಮನೆಯ ವಿಚಾರವಾಗಿ. ಎಸ್ಎಸ್ಎಲ್ಸಿ ಪರೀಕ್ಷೆ ಬರೆಯಲು ಬಂದಾಗ ಮಾತನಾಡಿಸಿ ಸಹಾಯ ಮಾಡಿದ ಸಿದ್ದರಾಮಯ್ಯ ಅವರು ತದನಂತರ ಮರಿಸ್ವಾಮಿ ಅವರಿಗೆ ಆಪ್ತರಾಗಿಬಿಟ್ಟರು. ಪ್ರಪ್ರಥಮ ಬಾರಿ 70 ರ ದಶಕದಲ್ಲಿ ಮರಿಸ್ವಾಮಿ ಮೈಸೂರಿನ ಡಿ ಸುಬ್ಬಯ್ಯ ರಸ್ತೆಯ ಹಾಸ್ಟೆಲ್‌ನಲ್ಲಿ ಇದ್ದರು. ಆಗ ಸಿದ್ದರಾಮಯ್ಯ ಅಲ್ಲಿಗೆ ಬಂದು ಮರಿಸ್ವಾಮಿ ಜೊತೆ ರೂಂನಲ್ಲಿ ಉಳಿದಕೊಂಡರು. ಅಲ್ಲಿಂದ ಸಿದ್ದರಾಮಯ್ಯ ಅವರಿಗೆ ಮನೆ ಮಾಡಿಕೊಡುವ ಜವಾಬ್ದಾರಿ ಮರಿಸ್ವಾಮಿ ಹೆಗಲೇರಿತು. ಹಾಸ್ಟೆಲ್ ನಂತರ ಸಿದ್ದರಾಮಯ್ಯ ಅವರಿಗಾಗಿ ಮರಿಸ್ವಾಮಿ ಮೊದಲು ಮನೆ ಮಾಡಿದ್ದು ಟಿಕೆ ಬಡಾವಣೆಯಲ್ಲಿ. ಅಲ್ಲಿ ಎಂಐಜಿ ಮನೆಯನ್ನು ಮರಿಸ್ವಾಮಿ ಬಾಡಿಗೆಗೆ ಪಡೆದರು. ಅಲ್ಲಿ ಮರಿಸ್ವಾಮಿ ಹಾಗೂ ಸಿದ್ದರಾಮಯ್ಯ ವಾಸಿಸತೊಡಗಿದರು. ಕೆಲ ವರ್ಷಗಳ ನಂತರ ಅಲ್ಲಿಂದ ಎಸ್‌ಬಿಎಂ ಬಡಾವಣೆಗೆ ಶಿಫ್ಟ್ ಆದರೂ ತದನಂತರ ಇವರಿಬ್ಬರ ಜರ್ನಿ ರಾಮಕೃಷ್ಣ ನಗರ, ಅಲ್ಲಿ ಇಲ್ಲಿ ಮುಂದುವರಿದಿತ್ತು. ಹೀಗೆ ಪದೇ ಪದೇ ಮನೆ ಬದಲಾಯಿಸುವ ಬದಲು ಏಕೆ ಸ್ವಂತ ಮನೆ ಮಾಡಬಾರದು ಅಂತಾ ಮರಿಸ್ವಾಮಿ ಅವರಿಗೆ ಅನಿಸಿತು. ಆಗಲೇ ರೂಪುಗೊಂಡಿದ್ದು ಟಿಕೆ ಬಡಾವಣೆಯ ಈಗ ಇರುವ ಮನೆ. ಮರಿಸ್ವಾಮಿ ಅವರು ಈ ಮನೆ ಕಟ್ಟಿದ್ದೇ ಸಿದ್ದರಾಮಯ್ಯ ಅವರಿಗಾಗಿ. ಸಿದ್ದರಾಮಯ್ಯ ಅವರಿಗೆ ಮೊದಲಿನಿಂದಲೂ ಮನೆಯ ಬಗ್ಗೆ ಆಸಕ್ತಿ ಇರಲಿಲ್ಲ. ಅವರು ಬಹುತೇಕ ತಮ್ಮ ಸಮಯವನ್ನು ಹೋರಾಟ, ರಾಜಕಾರಣ ಅಂತಾ ಹೊರಗೆಯೇ ಕಳೆಯುತ್ತಿದ್ದರು. ಮರಿಸ್ವಾಮಿ ಯಾವುದೇ ಮನೆ ಮಾಡಿದರೂ ತುಟಿಕ್ ಪಿಟಿಕ್ ಅನ್ನದೇ ಆ ಮನೆಗೆ ಹೋಗುತ್ತಿದ್ದರು. ಈ ಮನೆಯನ್ನು ಸಹಾ ಮರಿಸ್ವಾಮಿ ಅವರೇ ನಿಂತು ಕಟ್ಟಿಸಿದ್ದು. ಸಿದ್ದರಾಮಯ್ಯ ಎಂದೂ ಮನೆಯ ಬಗ್ಗೆ ಸಲಹೆ ಸೂಚನೆ ನೀಡಿದವರಲ್ಲ.
ಸಿದ್ದರಾಮಯ್ಯಗೆ ಅನ್ನದಾತ, ಅಶ್ರಯದಾತ, ಆಪ್ತಮಿತ್ರ

ಮರಿಸ್ವಾಮಿ ಅವರನ್ನು ಸಿದ್ದರಾಮಯ್ಯ ಅನ್ನದಾತ, ಆಶ್ರದಾತ ಅಥವಾ ಅದಕ್ಕೂ ಮೀರಿ ಆಪ್ತಮಿತ್ರ ಅಂದಿದ್ದು ಸಿದ್ದರಾಮಯ್ಯ ಅವರ ಆಪ್ತರಿಗೆ ಆಶ್ಚರ್ಯ ತಂದಿಲ್ಲ. ಯಾಕೆಂದರೆ, ಮರಿಸ್ವಾಮಿ ಅವರ ಸಿದ್ದರಾಮಯ್ಯ ಭಕ್ತಿ ನಿಜಕ್ಕೂ ಅನನ್ಯ, ಅಪರೂಪ, ಅನುರೂಪ. ಮರಿಸ್ವಾಮಿ ಅವರು ಸಿದ್ದರಾಮಯ್ಯ ಅವರನ್ನು ಅರ್ಜುನ ಕೃಷ್ಣನನ್ನು ಆರಾಧಿಸಿದಂತೆ ಆರಾಧಿಸುತ್ತಾರೆ. ಕರ್ಣ ಸುಯೋಧನನನ್ನು ಪ್ರೀತಿಸಿದಂತೆ ಪ್ರೀತಿಸುತ್ತಾರೆ. ಅದರ ಪ್ರತಿಫಲವೇ ಸಿದ್ದರಾಮಯ್ಯ ಬಾಯಲ್ಲಿ ಮರಿಸ್ವಾಮಿ ಬಗ್ಗೆ ಆ ಮಾತುಗಳು ಬಂದಿದ್ದು.
ಮರಿಸ್ವಾಮಿಗೆ ಸ್ವಂತ ಮನೆಯವರಿಗಿಂತಲೂ ಹೆಚ್ಚು ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯಗೆ ಜೀವಕ್ಕೆ ಜೀವ ಕೊಡುವ ಕೋಟ್ಯಂತರ ಅಭಿಮಾನಿಗಳಿದ್ದಾರೆ, ಅವರನ್ನು ಹಿಂಬಾಲಿಸುವ ಬೆಂಬಲಿಗರಿದ್ದಾರೆ. ಅವರನ್ನು ಸಮರ್ಥಿಸಿಕೊಳ್ಳುವ ಕಾರ್ಯಕರ್ತರು ಮುಖಂಡರ ಪಡೆಯೇ ಇದೆ. ಆದರೆ ಸಿದ್ದರಾಮಯ್ಯ ಅವರ ನೆರಳಿನಂತೆ ಇರುವುದು ಮರಿಸ್ವಾಮಿ ಮಾತ್ರ. ಒಬ್ಬರೇ ಇದ್ದಾಗ ಸಾಥ್ ಕೊಡುವುದು ಮರಿಸ್ವಾಮಿ ಮಾತ್ರ. ನಿಮಗೆ ಅಚ್ಚರಿಯಾಗಬಹುದು, ಮರಿಸ್ವಾಮಿ ಅವರಿಗೆ ತನ್ನದೇ ಆದ ಕುಟುಂಬವಿದೆ. ಆದರೆ ಸಿದ್ದರಾಮಯ್ಯ ಅವರು ಮೈಸೂರಿಗೆ ಬಂದರೆ ಮರಿಸ್ವಾಮಿ ಅವರು ತನ್ನ ಕುಟುಂಬ ಮನೆ ಮಕ್ಕಳು ಹಾಗೂ ಬೇರೆ ಎಲ್ಲಾ ಕೆಲಸಗಳನ್ನು ಬದಿಗಿಡುತ್ತಾರೆ. ಸಿದ್ದರಾಮಯ್ಯ ವಾಪಸ್ಸು ಮೈಸೂರಿನಿಂದ ಹೋಗುವವರೆಗೂ ಅವರನ್ನು ಬಿಟ್ಟು ಅಲ್ಲಾಡುವುದಿಲ್ಲ. ಸಿದ್ದರಾಮಯ್ಯ ಊಟ ಮಾಡಿದ ನಂತರವೇ ಮರಿಸ್ವಾಮಿ ಊಟ ಮಾಡುವುದು. ಅವರು ನಿದ್ದೆ ಮಾಡಿದ ನಂತರವೇ ಮರಿಸ್ವಾಮಿ ನಿದ್ದೆ ಮಾಡುವುದು. ಅವರು ಮೈಸೂರಿನಲ್ಲಿ ಇದ್ದಷ್ಟು ದಿನವೂ ಅವರು ತಮ್ಮ ಮನೆಗೆ ಹೋಗುವುದಿಲ್ಲ. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಸಿದ್ದರಾಮಯ್ಯ ಮೈಸೂರಿನಿಂದ ವಿಮಾನ ಅಥವಾ ಕಾರಿನಲ್ಲಿ ಹೊರಟರು ಅವರು ಬೆಂಗಳೂರು ತಲುಪುವವರೆಗೂ ಮರಿಸ್ವಾಮಿ ಟಿಕೆ ಬಡಾವಣೆಯ ಮನೆ ಬಿಟ್ಟು ಕದಲುವುದಿಲ್ಲ. ಒಂದು ವೇಳೆ ಕಾರಣಾಂತರದಿಂದ ಸಿದ್ದರಾಮಯ್ಯ ವಾಪಸ್ಸು ಬಂದು ಬಿಟ್ಟರೆ ? ಈ ದೃಷ್ಟಿಯಿಂದ ಮನೆಯಲ್ಲೇ ಇರುತ್ತಾರೆ. ಸಿದ್ದರಾಮಯ್ಯ ಬೆಂಗಳೂರು ತಲುಪಿದರು ಅಂತಾ ಗೊತ್ತಾದ ನಂತರವೇ ಮರಿಸ್ವಾಮಿ ತಮ್ಮ ಮನೆ ಕಡೆ ಮುಖ ಮಾಡುತ್ತಾರೆ. ಅಷ್ಟರಮಟ್ಟಿಗೆ ಮರಿಸ್ವಾಮಿ ಸಿದ್ದರಾಮಯ್ಯ ಅವರ ನೆರಳಾಗಿದ್ದಾರೆ.
ಇದನ್ನೂ ಓದಿ: ಮರಿಸ್ವಾಮಿ ಮನೆಯೇ ನನಗೆ ಅದೃಷ್ಟದ ನಿವಾಸ, 2 ಬಾರಿ ಮುಖ್ಯಮಂತ್ರಿಯಾಗಲು ಇದೇ ಕಾರಣ
ಇನ್ನು ಊಟದ ವಿಚಾರ ಬಂದರೆ ಸಿದ್ದರಾಮಯ್ಯ ಅವರಿಗೆ ಏನು ಬೇಕು? ಏನು ಬೇಡ ? ಎಲ್ಲವೂ ಮರಿಸ್ವಾಮಿಗೆ ಗೊತ್ತಿದೆ. ಉಪ್ಪು, ಹುಳಿ, ಖಾರ ಯಾವ ಸಮಯಕ್ಕೆ, ಯಾವ ಊಟ, ತಿಂಡಿ ಬೇಕು ಅದರ ಇಂಚಿಂಚೂ ಮಾಹಿತಿ ಮರಿಸ್ವಾಮಿ ಅವರ ಬಳಿ ಇದೆ.
ಎಲೆ ಮರೆಯ ಕಾಯಿ: ಪ್ರಚಾರದಿಂದ ದೂರ
ಇನ್ನು ಮರಿಸ್ವಾಮಿ ತಾವು ಎಂದೂ ತಾವು ಮಾಡಿದ ಕೆಲಸಕ್ಕೆ ಪ್ರಚಾರ ಬಯಸಿದವರಲ್ಲ. ತಾವಾಯ್ತು ತಮ್ಮ ಸಿದ್ದರಾಮಯ್ಯ ಅವರ ಒಡನಾಟವಾಯ್ತು ಎಂದೇ ಉಳಿದವರು. ಪ್ರಚಾರ, ವಿವಾದಗಳಿಂದ ದೂರವೇ ಉಳಿದವರು. ಅಷ್ಟೇ ಏಕೆ ಎಲೆ ಮರೆಯ ಕಾಯಿಯಂತಿರುವ ಮರಿಸ್ವಾಮಿ ಅವರನ್ನು ಬಹುತೇಕರು ನೋಡಿಯೇ ಇಲ್ಲ. ಆಡಂಬರವಿಲ್ಲದ ಸೀದಾ ಸಾದ ಬದುಕನ್ನು ಕಟ್ಟಿಕೊಂಡಿರುವವರು ಮರಿಸ್ವಾಮಿ. ಎಂದೂ ಎಲ್ಲಿಯೂ ತಮಗೆ ಸಿದ್ದರಾಮಯ್ಯ ಗೊತ್ತು. ತನಗೆ ಆಪ್ತರು ಅಥವಾ ನಾನು ಅವರಿಗೆ ಈ ರೀತಿ ಮಾಡಿದೆ ಆ ರೀತಿ ಮಾಡಿದೆ ಅಂತಾ ಅಪ್ಪಿ ತಪ್ಪಿಯೂ ಬಾಯಿ ಬಿಟ್ಟವರಲ್ಲ. ಬಲಗೈಯಲ್ಲಿ ಮಾಡಿದ್ದು ಎಡಗೈಗೂ ಗೊತ್ತಾಗಬಾರದು ಎಂಬ ಮಾತಿಗೆ ಅನ್ವರ್ಥವಾಗಿ ಮರಿಸ್ವಾಮಿ ಸಿದ್ದರಾಮಯ್ಯ ಅವರ ಒಳ್ಳೆಯದು, ಕೆಟ್ಟದ್ದು ಎಲ್ಲದರಲ್ಲೂ ಜೊತೆಗಿದ್ದಾರೆ. ಇದೇ ಕಾರಣಕ್ಕೆ ಸಿದ್ದರಾಮಯ್ಯ ಮರಿಸ್ವಾಮಿ ಅವರನ್ನು ಅನ್ನದಾತ ಆಪ್ತ ಮಿತ್ರ ಮಾತ್ರವಲ್ಲ ಆಶ್ರಯದಾತ ಎಂದು ಕರೆದಿದ್ದು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:25 am, Mon, 6 October 25



