ಮುಡಾ ಹಗರಣ: ಸಿದ್ದರಾಮಯ್ಯ ಪತ್ನಿಗೆ ಹಂಚಿಕ್ಕೆಯಾಗಿದ್ದ 14 ಸೈಟ್​ಗಳ ದಾಖಲೆ ಪರಿಶೀಲಿಸಿದ ಇಡಿ, ಪ್ರಶ್ನೆಗಳ ಸುರಿಮಳೆ

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣ ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ. ಹಗರಣ ಸಂಬಂಧ ಮುಡಾ ಕಚೇರಿ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿ, ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಇಡಿ ಅಧಿಕಾರಿಗಳು ಇಂದೂ ಕೂಡ ದಾಖಲೆಗಳನ್ನು ಪರಿಶೀಲಿಸಲಿದ್ದಾರೆ.

ಮುಡಾ ಹಗರಣ: ಸಿದ್ದರಾಮಯ್ಯ ಪತ್ನಿಗೆ ಹಂಚಿಕ್ಕೆಯಾಗಿದ್ದ 14 ಸೈಟ್​ಗಳ ದಾಖಲೆ ಪರಿಶೀಲಿಸಿದ ಇಡಿ, ಪ್ರಶ್ನೆಗಳ ಸುರಿಮಳೆ
ಮುಡಾ ಕಚೇರಿಯಲ್ಲಿ ಇಡಿ ದಾಖಲೆ ಪರಿಶೀಲನೆ
Edited By: ವಿವೇಕ ಬಿರಾದಾರ

Updated on: Oct 19, 2024 | 8:50 AM

ಮೈಸೂರು, ಅಕ್ಟೋಬರ್​ 19: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಕಚೇರಿ ಮತ್ತು ಮುಡಾ ಪ್ರಕರಣದ ಎ4 ದೇವರಾಜು ಮನೆ ಮೇಲೆ ಶುಕ್ರವಾರ (ಅ.18) ರಂದು ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ದಾಳಿ ಮಾಡಿದ್ದರು. ರಾತ್ರಿವರೆಗೂ ಅಧಿಕಾರಿಗಳು ಮುಡಾ (Muda) ಕಚೇರಿಯಲ್ಲಿ ದಾಖಲೆಗಳನ್ನು ಪರಿಶೀಲಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿಯವರಿಗೆ ಹಂಚಿಕೆಯಾಗಿದ್ದ 14 ನಿವೇಶನ ​ಮತ್ತು ಕೆಸರೆ ಗ್ರಾಮದ ಸರ್ವೆ ನಂ‌.464ರ ಜಮೀನಿನ ದಾಖಲೆಗಳನ್ನು ಇಡಿ ಅಧಿಕಾರಿಗಳು ಪರಿಶೀಲಿಸಿದರು. ಜೊತೆಗೆ ಇಡಿ ಅಧಿಕಾರಿಗಳು ತಾಲೂಕು ಕಚೇರಿಯಲ್ಲೂ ಸರ್ವೆ ನಂ.464ರ ಜಮೀನುಗಳ ದಾಖಲೆ ಪರಿಶೀಲನೆ ನಡೆಸಿದರು. ಮೈಸೂರು ತಾಲೂಕಿನ ಕೆಸರೆ ಗ್ರಾಮದ ಸರ್ವೆ ನಂ‌.464 ಭೂಮಿಗೆ ಸಂಬಂಧಿಸಿದ 1970 ನೇ ಇಸವಿಯ ಎಂಆರ್​ ಪ್ರತಿಯನ್ನು ಪಡೆದರು. ಅಲ್ಲದೇ ತಹಶೀಲ್ದಾರ್, ಎಫ್​ಡಿಎ, ಎಸ್​ಡಿಎ ಸೇರಿದಂತೆ ಇತರರ ಬಳಿ ಹಲವು ಮಾಹಿತಿ ಕೇಳಿ ಪಡೆದರು.

ಮುಡಾ ಆಯುಕ್ತರಿಗೆ ಇಡಿ ಅಧಿಕಾರಿಗಳಿಂದ 41 ಪ್ರಶ್ನೆ

ಮುಡಾ ಕಚೇರಿ ಮೇಲೆ ದಾಳಿ ಮಾಡಿದ ಇಡಿ ಅಧಿಕಾರಿಗಳು ಮುಡಾ ಅಕ್ರಮ, 14 ಸೈಟ್, ಅಧಿಸೂಚನೆ, ಡಿನೋಟಿಫಿಕೇಷನ್, ಭೂಸ್ವಾಧೀನ, ಪರಿಹಾರ, ಹಂಚಿಕೆ ಪತ್ರ, ಸಿಎಂ ಪತ್ನಿ ಪಡೆದಿದ್ದಾರೆ ಎನ್ನಲಾದ 14 ಸೈಟ್‌ಗಳು ಸೇರಿದಂತೆ ಇಡಿ ಮುಡಾದಲ್ಲಿ ನಡೆದಿರುವ ಹಗರಣದ ಬಗ್ಗೆ ಇಡಿ ಪ್ರಶ್ನೆ ಕೇಳಿತ್ತು. ಒಂದಲ್ಲ ಎರಡಲ್ಲ ಬರೋಬ್ಬರಿ 41 ಪ್ರಶ್ನೆಗಳ ಮುಡಾ ಆಯುಕ್ತರ ಮುಂದಿಟ್ಟಿತ್ತು.

ಇಡಿ ಅಧಿಕಾರಿಗಳು ಶುಕ್ರವಾರ ದೇವರಾಜು ಅವರ ಮನೆಯಲ್ಲಿ ಕೆಸರೆ ಗ್ರಾಮದ ಸರ್ವೆ ನಂ.464ರ ಭೂ ದಾಖಲೆಗಳನ್ನು ವಶಕ್ಕೆ ಪಡೆದರು. ಈ ದಾಖಲೆಗಳನ್ನು ಇಟ್ಟುಕೊಂಡು ಇಡಿ ಅಧಿಕಾರಿಗಳು ಪ್ರಾಥಮಿಕ ವಿಚಾರಣೆ ನಡೆಸಿದರು. ಜಮೀನಿ ಪರಭಾರೆ, ಮಾಲೀಕತ್ವ ಸೇರಿ ಕೆಲ ವಿಚಾರಗಳ ಬಗ್ಗೆ ದೇವರಾಜು ಅವರನ್ನು ಪ್ರಶ್ನಿಸಿ ಉತ್ತರ ಪಡೆದರು.

ಇದನ್ನೂ ಓದಿ: ಮುಡಾ ಕಚೇರಿ ಮೇಲಿನ ಇಡಿ ದಾಳಿಯ ಸ್ಫೋಟಕ ಮಾಹಿತಿ: ಆಯುಕ್ತರಿಗೆ ಕೇಳಿದ 41 ಪ್ರಶ್ನೆಗಳು ಯಾವ್ಯಾವು?

ಅಲ್ಲದೇ ಅಗತ್ಯವಿದ್ದಾಗ ನೋಟಿಸ್ ಜಾರಿ ಮಾಡಿದಾಗ ಅಗತ್ಯ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗುವಂತೆ ಇಡಿ ಅಧಿಕಾರಿಗಳು ಸೂಚನೆ ನೀಡಿದರು. ಹಾಗೇ ಪ್ರಕರಣ ಗಂಭೀರವಾಗಿದ್ದು ತನಿಖೆಗೆ ಸಹಕರಿಸುವಂತೆ ತಾಕೀತು ಮಾಡಿದರು.

ಇಂದೂ ದಾಖಲೆ ಪರಿಶೀಲನೆ

ಇಡಿ ಅಧಿಕಾರಿಗಳು ಇಂದೂ ಸಹ ಮುಡಾ ಕಚೇರಿಯಲ್ಲಿ ದಾಖಲೆ ಪರಿಶೀಲನೆ ಮಾಡಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಮುಡಾ ಕಚೇರಿಗೆ ಇಡಿ ಅಧಿಕಾರಿಗಳು ತೆರಳಲಿದ್ದಾರೆ. ಶುಕ್ರವಾರ ಬೆಳಗ್ಗೆ 11 ರಿಂದ ರಾತ್ರಿ 11ರವರೆಗೂ ಇಡಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದರು. ಸತತ 12 ಗಂಟೆಗಳ ಕಾಲ ಮುಡಾ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 8:35 am, Sat, 19 October 24

ದಿಲೀಪ್​, ಚೌಡಹಳ್ಳಿ

ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಚೌಡಹಳ್ಳಿ ಗ್ರಾಮದವನು. ಕಳೆದ 13 ವರ್ಷದಿಂದ ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ನಿರ್ವಹಿಸುತ್ತಿದ್ದೇನೆ.‌ಪತ್ರಿಕೋಧ್ಯಮ ಪದವಿದರನಾಗಿದ್ದೇನೆ.ಮೊದಲಿಗೆ ಮೈಸೂರಿನ ಸ್ಥಳಿಯ ವಾಹಿನ ಹಾಗೂ ಪತ್ರಿಕೆಯಲ್ಲಿ ಕೆಲಸ ನಿರ್ವಹಿಸಿದ್ದೆ.ನಂತರ ಪಬ್ಲಿಕ್ ಟಿವಿಯಲ್ಲಿ ಚಾಮರಾಜನಗರ ಜಿಲ್ಲಾವರದಿಗಾರನಾಗುವ ಅವಕಾಶ ಸಿಕ್ಕಿತು. ಅದಾದ ಬಳಿಕ ಐದು ವರ್ಷಗಳ ಕಾಲ ಚಾಮರಾಜನಗರದಲ್ಲಿ ಕೆಲಸ ನಿರ್ವಹಿಸಿದ್ದೇನೆ. ಬಳಿಕ 2018 ರಲ್ಲಿ ಟಿರ್ವಿ ಮೈಸೂರು ವರದಿಗಾರನಾಗುವ ಅವಕಾಶ ಸಿಕ್ಕಿತು. ಅಂದಿನಿಂದ ಮೈಸೂರು ಜಿಲ್ಲಾ ವರದಿಗಾರರನಾಗಿ ಕೆಲಸ ನಿರ್ವಹಿಸಿದ್ದೇನೆ. ಸಧ್ಯ ಮಂಡ್ಯ ಜಿಲ್ಲಾ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದೇನೆ. ಕೃಷಿ, ಸಾಹಿತ್ಯ ಆಸಕ್ತಿ ಇದೆ.

Read More
Loading...
Unable to load recommendations.
Follow Us