ಇ.ಡಿಗೆ ಸಿಕ್ತು ಮುಡಾ 631 ಸೈಟ್ಗಳ ಮಾಹಿತಿ: ಬೇನಾಮಿ ಸೈಟ್ಗಳೇ ಹೆಚ್ಚು, ಈ ವಾರ ಜಪ್ತಿ ಸಾಧ್ಯತೆ
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು 142 ಸ್ಥಿರಾಸ್ತಿಗಳನ್ನು ಈಗಾಗಲೇ ಜಪ್ತಿ ಮಾಡಿದೆ. ಇದೀಗ 631 ಹೆಚ್ಚುವರಿ ನಿವೇಶನಗಳನ್ನು ಜಪ್ತಿ ಮಾಡುವ ಸಾಧ್ಯತೆ ಇದೆ. ಇವುಗಳ ವಿವರವನ್ನು ಜಾರಿ ನಿರ್ದೇಶನಾಲಯಕ್ಕೆ ಮುಡಾ ಆಯುಕ್ತರು ಸಲ್ಲಿಕೆ ಮಾಡಿದ್ದಾರೆ. ಬಹುತೇಕ ನಿವೇಶನಗಳು ಬೇನಾಮಿ ಹೆಸರಿನಲ್ಲಿವೆ ಎಂದು ತಿಳಿದುಬಂದಿದೆ.
ಮೈಸೂರು, ಜನವರಿ 27: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗಷ್ಟೇ 142 ಸೈಟ್ಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದ ಜಾರಿ ನಿರ್ದೇಶನಾಲಯ ಇದೀಗ ಮತ್ತೆ 631 ನಿವೇಶನಗಳಲ್ಲಿ ಸೀಜ್ ಮಾಡುವ ಸಾಧ್ಯತೆ ಇದೆ. 631 ನಿವೇಶನಗಳ ಬಗ್ಗೆ ಮುಡಾ ಆಯುಕ್ತರು ಜಾರಿ ನಿರ್ದೇಶನಲಯಕ್ಕೆ ವಿವರಗಳನ್ನು ಕಳುಹಿಸಿದ್ದಾರೆ. ತುರ್ತಾಗಿ ವಿವರ ಒದಗಿಸುವಂತೆ ಕೆಲವು ದಿನಗಳ ಹಿಂದೆ ಜಾರಿ ನಿರ್ದೇಶನಾಲಯ ಸೂಚನೆ ನೀಡಿತ್ತು.
ಈ 631 ಸೈಟ್ಗಳಲ್ಲಿ ಬೇನಾಮಿ ನಿವೇಶನಗಳೇ ಹೆಚ್ಚಿವೆ. ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಬೇನಾಮಿಗಳೇ ಹೆಚ್ಚಿರುವುದು ಗೊತ್ತಾಗಿದೆ. ಇವರ ಹೆಸರಿನಲ್ಲಿ ಕೆಲವು ಪ್ರತಿಷ್ಠಿತ ಉದ್ಯಮಿಗಳು ಕೂಡ ಸೈಟ್ ಪಡೆದಿರುವುದು ತಿಳಿದುಬಂದಿದೆ. ಹೀಗಾಗಿ ಈ ವಾರವೇ ಜಾರಿ ನಿರ್ದೇಶನಾಲಯ ಈ ಎಲ್ಲಾ ಸೈಟ್ಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಸಾಧ್ಯತೆ ಇದೆ.
ಮುಡಾದ ಅಂದಾಜು 300 ಕೋಟಿ ರೂಪಾಯಿ ಮೌಲ್ಯದ 142 ಸ್ಥಿರಾಸ್ತಿಯನ್ನು ಜಾರಿ ನಿರ್ದೇಶನಾಲಯ ಎರಡು ವಾರಗಳ ಹಿಂದೆ ಮುಟ್ಟುಗೋಲು ಹಾಕಿಕೊಂಡಿತ್ತು. ನಂತರ ಉಳಿದ ಸೈಟ್ಗಳ ವಿವರ ಶೀಘ್ರ ಕಳುಹಿಸುವಂತೆ ಮುಡಾಗೆ ಸೂಚಿಸಿತ್ತು. ಅದರಂತೆ ಇದೀಗ ಮುಡಾ ಆಯುಕ್ತರು ವಿವರಗಳನ್ನು ಕಳುಹಿಸಿಕೊಟ್ಟಿದ್ದಾರೆ.
ವರದಿಯನ್ನು ಲೋಕಾಯುಕ್ತ ಅಧಿಕಾರಿಗಳು ಕೋರ್ಟ್ಗೆ ಸಲ್ಲಿಕೆ ಮಾಡಬೇಕಿದೆ. ಮತ್ತೊಂದೆಡೆ, ಮುಡಾ ಹಗರಣ ಸಂಬಂಧ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಕೋರಿ ಸಲ್ಲಿಕೆ ಆಗಿರುವ ಅರ್ಜಿಯ ವಿಚಾರಣೆಯೂ ನಡೆಯುತ್ತಿದೆ. ಈ ವಿಚಾರವಾಗಿ ಇಂದು ಕರ್ನಾಟಕ ಹೈಕೋರ್ಟ್ ಮಹತ್ವದ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.
ಮುಡಾ ಪ್ರಕರಣದಲ್ಲಿ ಅಧಿಕಾರಿಗಳು, ಸಿಬ್ಬಂದಿ ತಪ್ಪೆಸಗಿದ್ದಾರೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾತ್ರ ಇಲ್ಲ ಎಂದು ಲೋಕಾಯುಕ್ತ ವರದಿಯಲ್ಲಿ ಹೇಳಲಾಗಿದೆ. ಇದನ್ನು, ಪ್ರಮುಖ ದೂರುದಾರ ಸ್ನೇಹಮಯಿ ಕೃಷ್ಣ ಪ್ರಶ್ನಿಸಿದ್ದಾರೆ. ಮುಖ್ಯಮಂತ್ರಿಗಳ ಪ್ರಭಾವ ಇಲ್ಲದೆ ಅಧಿಕಾರಿಗಳು ಆ ರೀತಿಯ ತಪ್ಪೆಸಗಲು ಸಾಧ್ಯವೇ ಇಲ್ಲ ಎಂದು ಅವರು ಹೇಳಿದ್ದಾರೆ.
142 ಸೈಟ್ಗಳ ಮರುಮಾರಾಟ ಮಾಡದಂತೆ ಸೂಚನೆ
ಎರಡು ವಾರಗಳ ಹಿಂದೆ ಜಪ್ತಿ ಮಾಡಿರುವ 142 ಸೈಟ್ ಪಟ್ಟಿಯನ್ನು ಸಬ್ ರಿಜಿಸ್ಟ್ರಾರ್ ಕಚೇರಿಗೆ ಕಳುಹಿಸಿದ ಜಾರಿ ನಿರ್ದೇಶನಾಲಯ, ಅವುಗಳನ್ನು ಮರುಮಾರಾಟ ಮಾಡಿಕೊಡದಂತೆ ಸೂಚನೆ ನೀಡಿದೆ. ಮೈಸೂರಿನ 4 ನೋಂದಣಿ ಕಚೇರಿಗೆ ಅಧಿಕೃತ ಮಾಹಿತಿ ಕೊಟ್ಟಿದೆ.
ಇದನ್ನೂ ಓದಿ: ಮುಡಾ ಹಗರಣ: ಇಡಿಯಿಂದ 300 ಕೋಟಿ ರೂ ಮೌಲ್ಯದ ಸ್ಥಿರಾಸ್ತಿ ಮುಟ್ಟುಗೋಲು
ಕೆಲವು ಸೈಟ್ಗಳನ್ನು ವ್ಯಕ್ತಿಗಳು ಈಗಾಗಲೇ ಮಾರಾಟ ಮಾಡಲು ಮುಂದಾಗಿದ್ದರು. ಹೀಗಾಗ ಜಾರಿ ನಿರ್ದೇಶನಾಲಯ ಈ ಕ್ರಮ ಕೈಗೊಂಡಿದೆ. ನಮ್ಮಿಂದ ಅಧಿಕೃತ ಆದೇಶ ಬರುವವರೆಗೂ ನೋಂದಣಿ ಮಾಡಬೇಡಿ, ಬೇರೆಯವರಿಗೆ ಯಾವುದೇ ಆಸ್ತಿ ರಿಜಿಸ್ಟರ್ ಮಾಡಿಕೊಡಬೇಡಿ ಎಂದು ಸೂಚನೆ ನೀಡಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ