ಮೈಸೂರು ಬಿಜೆಪಿಯಲ್ಲಿ ಭಿನ್ನಮತದ ಕಿಡಿಹಚ್ಚಿದ ಪ್ರತಾಪ್ ಸಿಂಹ ಆ ಒಂದು ಹೇಳಿಕೆ!
ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ ನೀಡಿದ್ದ ಒಂದು ಹೇಳಿಕೆ ಈಗ ಮೈಸೂರು ಬಿಜೆಪಿಯಲ್ಲಿ ಕಿಡಿಹೊತ್ತಿಸಿದೆ! ಇದು ಪ್ರತಾಪ್ ಸಿಂಹ ರಾಜ್ಯ ರಾಜಕಾರಣ ಪ್ರವೇಶದ ಮೇಲೂ ಪರಿಣಾಮ ಬೀರುತ್ತಾ? ಅಷ್ಟಕ್ಕೂ ಮೈಸೂರಲ್ಲಿ ಪ್ರತಾಪ್ ಹೇಳಿಕೆಗೆ ಆಕ್ಷೇಪ ವ್ಯಕ್ತವಾಗಿದ್ದು ಯಾಕೆ? ಎಲ್ಲ ವಿವರಗಳು ಇಲ್ಲಿವೆ.

ಬೆಂಗಳೂರು, ಜನವರಿ 8: ರಾಜ್ಯ ರಾಜಕಾರಣಕ್ಕೆ ಎಂಟ್ರಿಯಾಗುತ್ತಿರುವ ಬಗ್ಗೆ ಮಾಜಿ ಸಂಸದ ಪ್ರತಾಪ್ ಸಿಂಹ (Pratap Simha) ಬಹಿರಂಗ ಹೇಳಿಕೆ ನೀಡಿದ ಬೆನ್ನಲ್ಲೇ ಬಿಜಪಿಯ (BJP) ಮೈಸೂರು ಘಟಕದಲ್ಲಿ ಅಸಮಾಧಾನ ಸ್ಫೋಟಗೊಳ್ಳುವ ಸುಳಿವು ಗೋಚರಿಸಿದೆ. ಮಾಜಿ ಸಂಸದ ಪ್ರತಾಪ್ ಸಿಂಹ ಹಾಗೂ ಮಾಜಿ ಶಾಸಕ, ಹಾಲಿ ನಗರ ಬಿಜೆಪಿ ಅಧ್ಯಕ್ಷ ಎಲ್. ನಾಗೇಂದ್ರ ನಡುವೆ ಜಟಾಪಟಿ ಏರ್ಪಡುವ ಎಲ್ಲ ಲಕ್ಷಣ ಕಾಣಿಸಿದೆ. ಚಾಮರಾಜ ವಿಧಾನಸಭಾ ಕ್ಷೇತ್ರದ ಟಿಕೆಟ್ ವಿಚಾರವೇ ಈ ಜಟಾಪಟಿಗೆ ಮೂಲ ಕಾರಣವಾಗಿದ್ದು, ಇದೀಗ ಪ್ರತಾಪ್ ಸಿಂಹಗೆ ಬಹಿರಂಗವಾಗಿಯೇ ಎಲ್. ನಾಗೇಂದ್ರ ಟಾಂಗ್ ಕೊಟ್ಟಿದ್ದಾರೆ.
ಜನವರಿ 5ರಂದು ಮೈಸೂರಿನ ಚಾಮರಾಜ ಕ್ಷೇತ್ರದಲ್ಲಿ ಆಯೋಜಿಸಿದ್ದ ಸ್ನೇಹ ಬಳಗದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ, ರಾಜ್ಯ ರಾಜಕಾರಣಕ್ಕೆ ಪ್ರವೇಶಿಸುವ ಸುಳಿವು ನೀಡಿದ್ದರು. 2024ರ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದ ಬಳಿಕ ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕಾರಣದತ್ತ ಹೆಜ್ಜೆ ಇಡುವುದಾಗಿ ಪರೋಕ್ಷವಾಗಿ ಹೇಳಿದ್ದ ಪ್ರತಾಪ್ ಸಿಂಹ, ‘ಚಾಮರಾಜ ಕ್ಷೇತ್ರ ಹಣದ ಪ್ಯಾಕೇಟ್ ಕೊಟ್ಟು ಗೆಲ್ಲುವ ಕ್ಷೇತ್ರ ಅಲ್ಲ. ಇಲ್ಲಿ ಮತದಾರರು ಕೆಲಸ ನೋಡಿ ಬೆಂಬಲಿಸುವ ಪ್ರಜ್ಞಾವಂತರು’ ಎಂದು ಹೇಳಿಕೆ ನೀಡಿ ಚಾಮರಾಜ ಕ್ಷೇತ್ರದಿಂದ ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಣಕ್ಕಿಳಿಯುವ ಒಲವು ವ್ಯಕ್ತಪಡಿಸಿದ್ದರು. ಈ ಹೇಳಿಕೆಯೇ ಇದೀಗ ಮೈಸೂರು ಬಿಜೆಪಿಯಲ್ಲಿ ಭಿನ್ನಮತದ ಕಿಡಿಹಚ್ಚಿದೆ.
ಕೋರ್ಟ್‌ನಿಂದ ಯಾವ ಸ್ಟೇ ಕೂಡ ತಂದಿಲ್ಲ: ಪ್ರತಾಪ್ ಸಿಂಹಗೆ ನಾಗೇಂದ್ರ ಟಾಂಗ್
ಪ್ರತಾಪ್ ಸಿಂಹ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಿರುವ ಎಲ್. ನಾಗೇಂದ್ರ, ‘ಚಾಮರಾಜ ಕ್ಷೇತ್ರದ ಟಿಕೆಟ್ ಯಾರಿಗೆ ಕೊಡಬೇಕು ಎಂಬುದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ಈ ಮೂಲಭೂತ ವಿಚಾರ ಪ್ರತಾಪ್ ಸಿಂಹಗೆ ಗೊತ್ತಿರಬೇಕಿತ್ತು. ಅವರು ಯಾವ ಕಾರಣಕ್ಕೆ ಆ ರೀತಿ ಹೇಳಿಕೆ ನೀಡಿದರು ಗೊತ್ತಿಲ್ಲ’ ಎಂದು ಹೇಳಿದ್ದಾರೆ. ನಾನು ಪಕ್ಷದ ಸಂಘಟನೆಗಾಗಿ ದುಡಿಯುತ್ತಿದ್ದೇನೆ, ನನ್ನ ವಿರುದ್ಧ ಯಾವುದೇ ಆಪಾದನೆಗಳಿಲ್ಲ. ನಾನು ಕೋರ್ಟ್‌ನಿಂದ ಯಾವ ಸ್ಟೇ ಕೂಡ ತಂದಿಲ್ಲ ಎಂದು ಟಾಂಗ್ ಕೊಟ್ಟಿದ್ದಾರೆ.
ಪಾರ್ಲಿಮೆಂಟ್ ಟಿಕೆಟ್ ವಿಚಾರವನ್ನೂ ಎತ್ತಿಹಿಡಿದ ನಾಗೇಂದ್ರ, ‘ಆ ಸಮಯದಲ್ಲೂ ಅವರಿಗೆ ಟಿಕೆಟ್ ಯಾಕೆ ಸಿಗಲಿಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ನಾನು ಕಡಿಮೆ ಅಂತರದಲ್ಲಿ ಸೋತಿದ್ದೇನೆ. ನನ್ನ ಕ್ಷೇತ್ರದ ಜೊತೆಗೆ ಇನ್ನೂ ನಾಲ್ಕು ಕ್ಷೇತ್ರಗಳನ್ನು ಗೆಲ್ಲಿಸುವ ಗುರಿ ಇದೆ. ನಮ್ಮ ವರಿಷ್ಠರು ಎಲ್ಲವನ್ನೂ ಗಮನಿಸುತ್ತಿದ್ದಾರೆ’ ಎಂದು ಹೇಳಿದರು. ಪಕ್ಷದ ಇತಿ-ಮಿತಿಯನ್ನು ಮೀರಿ ಯಾರೂ ವರ್ತಿಸಬಾರದು, ಸಾರ್ವಜನಿಕರಿಗೆ ಗೊಂದಲ ಮೂಡಿಸಬಾರದು ಎಂದೂ ಎಚ್ಚರಿಕೆ ನೀಡಿದ್ದಾರೆ.
2028ರ ಟಿಕೆಟ್ಗೆ ಈಗಲೇ ಶುರುವಾಯ್ತು ಕಲಹ
‘ಕಳೆದ ಬಾರಿ ಅವರು (ಪ್ರತಾಪ್ ಸಿಂಹ) ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆ ಪ್ರಚಾರಕ್ಕೂ ಬಂದಿರಲಿಲ್ಲ. ಯದುವೀರ್ ಅವರಿಗೆ ನಾವು 56,500 ಮತ ದೊರಕಿಸಿಕೊಟ್ಟಿದ್ದೇವೆ. ಅವರು (ಪ್ರತಾಪ್ ಸಿಂಗ ಉದ್ದೇಶಿಸಿ) ಈಗ ರಾಜ್ಯ ನಾಯಕರಾಗಿ ಬೆಳೆದಿದ್ದಾರೆ. ಅವರು ಬೇರೆ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲಿ. ಅವರು ಬೇರೆ ಊರಿನಿಂದ ಬಂದವರು, ನಾನು ಇದೇ ಊರಿನವನು. ನನ್ನ ಹುಟ್ಟೂರಲ್ಲೇ ನನ್ನ ಹೋರಾಟ’ ಎಂದು ನಾಗೇಂದ್ರ ಹೇಳಿದ್ದಾರೆ. ಅಲ್ಲದೆ, 2028ರಲ್ಲೂ ಟಿಕೆಟ್ ಸಿಗುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಮಂಡಲ ಅಧ್ಯಕ್ಷರು ಯಾರ ಪರ ಇದ್ದಾರೆ ಎಂದು ಕೇಳಿದರೆ ಸ್ಪಷ್ಟವಾಗುತ್ತದೆ ಎಂದು ಹೇಳಿದ ನಾಗೇಂದ್ರ, ‘ನನಗೆ ಅವರಿಗಿಂತ ನೂರು ಪಟ್ಟು ಹೆಚ್ಚು ಕಾರ್ಯಕರ್ತರು ಜೊತೆಗಿದ್ದಾರೆ. ನನ್ನ ಸಂಬಂಧಿಕರು, ಸ್ನೇಹಿತರು ಎಲ್ಲರೂ ನನ್ನ ಜೊತೆ ಇದ್ದಾರೆ. ಬಿಜೆಪಿಯಲ್ಲಿದ್ದು ‘ಕವರ್ ಸಂಸ್ಕೃತಿ’ ಬಗ್ಗೆ ಮಾತನಾಡಬಾರದಿತ್ತು. ಮುಂದಿನ ದಿನಗಳಲ್ಲಿ ಅವರ ವರ್ತನೆ ಬದಲಿಸಿಕೊಳ್ಳಲಿ’ ಎಂದು ತಿರುಗೇಟು ನೀಡಿದರು.
ಇದನ್ನೂ ಓದಿ: ರಾಜ್ಯ ರಾಜಕಾರಣಕ್ಕೆ ಪ್ರತಾಪ್ ಸಿಂಹ ಅಧಿಕೃತ ಎಂಟ್ರಿ: ಕ್ಷೇತ್ರ ಯಾವುದು ಗೊತ್ತಾ?
ಒಟ್ಟಿನಲ್ಲಿ, ಪ್ರತಾಪ್ ಸಿಂಹ ರಾಜ್ಯ ರಾಜಕಾರಣದ ಬಗ್ಗೆ ಹಾಗೂ ಮುಂದಿನ ಚುನಾವಣೆ ಬಗ್ಗೆ ಬಹಿರಂಗವಾಗಿ ಮಾತನಾಡಿದ ಬೆನ್ನಲ್ಲೇ ಮೈಸೂರು ಬಿಜೆಪಿಯಲ್ಲಿ ಅಸಮಾಧಾನ ತೀವ್ರಗೊಂಡಿಡದೆ.