
ಮೈಸೂರು, ಜುಲೈ 7: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026ರ (Mysuru Dasara 2026) ಆಚರಣೆ ಸಮೀಪಿಸುತ್ತಿರುವ ಬೆನ್ನಲ್ಲೇ, ನಾಡಹಬ್ಬದ ಪ್ರಮುಖ ಆಕರ್ಷಣೆಯಾಗಿರುವ ದಸರಾ ಗಜಪಡೆಯ ಆಯ್ಕೆ ಪ್ರಕ್ರಿಯೆಗೆ ಅರಣ್ಯ ಇಲಾಖೆ ಚಾಲನೆ ನೀಡಿದೆ. ವಿವಿಧ ಆನೆ ಶಿಬಿರಗಳಲ್ಲಿರುವ ಗಜಪಡೆಯ ಆರೋಗ್ಯ ತಪಾಸಣೆ ಅತ್ಯಂತ ವೈಜ್ಞಾನಿಕ ಹಾಗೂ ಸುಧಾರಿತ ಮಾದರಿಯಲ್ಲಿ ಪ್ರಗತಿಯಲ್ಲಿದೆ ಎಂದು ಮೈಸೂರು (Mysuru) ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ತಿಳಿಸಿದೆ.
ದಸರಾ ಮಹೋತ್ಸವದ ಅಂಗವಾಗಿ ಮತ್ತಿಗೋಡು, ದುಬಾರೆ ಮತ್ತು ರಾಮಾಪುರ ಆನೆಗಳ ಶಿಬಿರಗಳಿಗೆ ಪಶುವೈದ್ಯಾಧಿಕಾರಿಗಳ ವಿಶೇಷ ತಜ್ಞರ ತಂಡವು ಈಗಾಗಲೇ ಭೇಟಿ ನೀಡಿದೆ. ಶಿಬಿರಗಳಲ್ಲಿರುವ ಸುಮಾರು 20ಕ್ಕೂ ಹೆಚ್ಚು ಆನೆಗಳ ಆರೋಗ್ಯವನ್ನು ಕೂಲಂಕಷವಾಗಿ ತಪಾಸಣೆ ಮಾಡಲಾಗಿದ್ದು, ತದನಂತರ ಆನೆಗಳ ರಕ್ತ ಮತ್ತು ಮಲದ ಮಾದರಿಗಳನ್ನು (Samples) ಸಂಗ್ರಹಿಸಿ ವಿವಿಧ ಪ್ರಯೋಗಾಲಯಗಳಿಗೆ ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ.
ಗಜಪಡೆಯ ಇತಿಹಾಸದಲ್ಲೇ ಈ ಬಾರಿ ಅತ್ಯಂತ ಅಪರೂಪದ ಹಾಗೂ ಪ್ರಮುಖ ಹೆಜ್ಜೆಯೊಂದನ್ನು ಅರಣ್ಯ ಇಲಾಖೆ ಇರಿಸಿದೆ. ಶಿಬಿರಗಳಲ್ಲಿರುವ ಹೆಣ್ಣಾನೆಗಳ ಗರ್ಭಧಾರಣೆಯನ್ನು ನಿಖರವಾಗಿ ಪರೀಕ್ಷಿಸಲು ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ (Ultrasound Scanning) ಮುಖಾಂತರ ತಪಾಸಣೆ ನಡೆಸುವ ಕಾರ್ಯ ಪ್ರಗತಿಯಲ್ಲಿದೆ. ಇದರ ಜೊತೆಗೆ, ಅತ್ಯಂತ ಪ್ರಮುಖವಾಗಿ ಈ ಬಾರಿ ಮೊಟ್ಟಮೊದಲ ಬಾರಿಗೆ ಆನೆಗಳ ಹೃದಯದ ಆರೋಗ್ಯ ಮತ್ತು ಸಾಮರ್ಥ್ಯವನ್ನು ಪರೀಕ್ಷಿಸಲು ಇಸಿಜಿ (ECG) ಪರೀಕ್ಷೆಯನ್ನು ಕೈಗೊಳ್ಳಲಾಗುತ್ತಿದೆ.
ಪ್ರಯೋಗಾಲಯಗಳಿಂದ ವೈದ್ಯಕೀಯ ವರದಿಗಳು ಬಂದ ತಕ್ಷಣ, ಮೈಸೂರು ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ನೇತೃತ್ವದ ಅಧಿಕೃತ ತಂಡವು ವಿವಿಧ ಆನೆ ಶಿಬಿರಗಳಿಗೆ ಖುದ್ದಾಗಿ ಭೇಟಿ ನೀಡಿ ಅಂತಿಮವಾಗಿ ಆನೆಗಳ ಆಯ್ಕೆ ಪ್ರಕ್ರಿಯೆಯನ್ನು ಕೈಗೊಳ್ಳಲಿದೆ. ಆನೆಗಳ ಈ ತಾತ್ಕಾಲಿಕ ಆಯ್ಕೆಯ ಪಟ್ಟಿಯನ್ನು ಎಲ್ಲಾ ಆರೋಗ್ಯ ವಿವರಗಳೊಂದಿಗೆ ರಾಜ್ಯ ಮಟ್ಟದ ದಸರಾ ಆನೆಗಳ ಆಯ್ಕೆ ಸಮಿತಿಗೆ ಸಲ್ಲಿಕೆ ಮಾಡಲಾಗುತ್ತದೆ.
2026ನೇ ಸಾಲಿನ ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ವಿಜಯದಶಮಿ ಜಂಬೂಸವಾರಿ ಮೆರವಣಿಗೆಯು ಕಳೆದ ಸಾಲಿಗಿಂತ ಈ ಬಾರಿ ಸುಮಾರು 20 ದಿನಗಳು ತಡವಾಗಿ ಬರಲಿದೆ. ಈ ಕಾರಣದಿಂದಾಗಿ ಆನೆಗಳ ಆಯ್ಕೆ ಪ್ರಕ್ರಿಯೆಯನ್ನು ಹಾಗೂ ಗಜಪಯಣದ ಸಿದ್ಧತೆಗಳನ್ನು ಕಳೆದ ವರ್ಷಕ್ಕೆ ಹೋಲಿಸಿದರೆ ಕೊಂಚ ತಡವಾಗಿಯೇ ಆರಂಭಿಸಲಾಗುತ್ತಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಆಷಾಢ ಮಾಸದಲ್ಲಿ ಚಾಮುಂಡಿ ದರ್ಶನ: ಈ ಬಾರಿ 300 ರೂ. ಟಿಕೆಟ್ ರದ್ದು! ಭಕ್ತರು ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ