ದಸರಾ ಮಹೋತ್ಸವಕ್ಕೆ ನಾಳೆ ಉದ್ಘಾಟನೆ: ಸಾಂಸ್ಕೃತಿಕ ನಗರಿಯಲ್ಲಿ ಹಬ್ಬದ ಸಡಗರ; ಈ ಬಾರಿಯ ವಿಶೇಷತೆಗಳೇನು?

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಳೆ ಚಾಮುಂಡಿಬೆಟ್ಟದಲ್ಲಿ ಉದ್ಘಾಟನೆಗೊಳ್ಳಲಿರುವ ನಾಡಹಬ್ಬ ದಸರಾಗೆ ಸಕಲ ಸಿದ್ಧತೆ ನಡೆದಿದೆ. ಕೊಪ್ಪಳದ ಗವಿಮಠದ ಶ್ರೀ ಗವಿಸಿದ್ಧೇಶ್ವರ ಸ್ವಾಮೀಜಿಗಳು ಚಾಲನೆ ನೀಡಲಿದ್ದಾರೆ. ಖಾಸಗಿ ದರ್ಬಾರ್, ಸಾಂಸ್ಕೃತಿಕ ಕಾರ್ಯಕ್ರಮಗಳು, ಆಹಾರ ಮೇಳ, ಪುಷ್ಪ ಪ್ರದರ್ಶನ ಸೇರಿದಂತೆ ಹಲವು ಕಾರ್ಯಕ್ರಮಗಳು ಈ ಬಾರಿಯ ದಸರಾ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸಲಿವೆ.

ದಸರಾ ಮಹೋತ್ಸವಕ್ಕೆ ನಾಳೆ ಉದ್ಘಾಟನೆ: ಸಾಂಸ್ಕೃತಿಕ ನಗರಿಯಲ್ಲಿ ಹಬ್ಬದ ಸಡಗರ; ಈ ಬಾರಿಯ ವಿಶೇಷತೆಗಳೇನು?
ಮೈಸೂರು ದಸರಾ ಮಹೋತ್ಸವ
Image Credit source: tv9 kannada
Edited By:

Updated on: Oct 10, 2026 | 4:09 PM

ಮುಖ್ಯಾಂಶಗಳು

  • ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ-2026 ನಾಳೆ ಉದ್ಘಾಟನೆ
  • ಚಾಮುಂಡಿಬೆಟ್ಟದಲ್ಲಿ ನಾಳೆ ಉದ್ಘಾಟಿಸುವ ಗವಿಮಠದ ಸಿದ್ದೇಶ್ವರಶ್ರೀಗಳು
  • ಸಿಎಂ, ಡಿಸಿಎಂ ಸೇರಿ ಹಲವರು ಭಾಗಿ

ಮೈಸೂರು, ಅಕ್ಟೋಬರ್​​ 10: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಡಹಬ್ಬ ದಸರಾ ಉದ್ಘಾಟನೆಗೆ ಸಾಂಸ್ಕೃತಿಕ ನಗರಿ ಮೈಸೂರು ಸಜ್ಜಾಗಿದೆ. ನಾಳೆ (ಅಕ್ಟೋಬರ್​​ 11) ಚಾಮುಂಡಿಬೆಟ್ಟದಲ್ಲಿ ನಾಡದೇವತೆ ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ದಸರಾ ಮಹೋತ್ಸವಕ್ಕೆ ಅಧಿಕೃತ ಚಾಲನೆ ಸಿಗಲಿದೆ. ಕೊಪ್ಪಳದ ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ದಸರಾ ಉದ್ಘಾಟಿಸಲಿದ್ದಾರೆ. ಇತ್ತ ಅರಮನೆಯಲ್ಲಿ ಖಾಸಗಿ ದರ್ಬಾರ್, ಆಹಾರ ಮೇಳ, ಪುಷ್ಪ ಪ್ರದರ್ಶನ ಸೇರಿದಂತೆ ನಗರಾದ್ಯಂತ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಅವುಗಳ ಸಿದ್ಧತೆಯೂ ನಡೆದಿದೆ.

ಧನುರ್ ಲಗ್ನದಲ್ಲಿ ಗವಿಶ್ರೀಗಳಿಂದ ದಸರಾಕ್ಕೆ ಚಾಲನೆ 

ನಾಡಹಬ್ಬ ಮೈಸೂರು ದಸರಾ ನಾಡಿನ ಸಾಂಸ್ಕೃತಿಕ ಪರಂಪರೆ, ಧಾರ್ಮಿಕ ಆಚರಣೆ ಹಾಗೂ ವೈಭವದ ಪ್ರತೀಕ. ಈ ಬಾರಿಯ ದಸರಾ ಮಹೋತ್ಸವಕ್ಕೆ ಮೈಸೂರು ಸಕಲ ರೀತಿಯಲ್ಲಿ ಸಜ್ಜಾಗಿದೆ. ಚಾಮುಂಡಿಬೆಟ್ಟದಲ್ಲಿ ನಾಡದೇವತೆ ತಾಯಿ ಚಾಮುಂಡೇಶ್ವರಿ ಸನ್ನಿಧಿಯಲ್ಲಿ ದಸರಾ ಉದ್ಘಾಟನೆ ನಡೆಯಲಿದೆ. ಕೊಪ್ಪಳದ ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ಶುಭ ಧನುರ್ ಲಗ್ನದಲ್ಲಿ ದಸರಾಕ್ಕೆ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 11.50ರಿಂದ ಮಧ್ಯಾಹ್ನ 12.13ರವರೆಗೆ ಉದ್ಘಾಟನಾ ಕಾರ್ಯಕ್ರಮ ನಡೆಯಲಿವೆ.

ಇದನ್ನೂ ಓದಿ: ಮೈಸೂರು ದಸರಾ: ಚಾಮುಂಡಿ ಬೆಟ್ಟದಲ್ಲಿ ಮಹಿಷಾ ದಸರಾಗೆ ಪೊಲೀಸರ ಬ್ರೇಕ್, ಪುರಭವನದಲ್ಲಿ ಅವಕಾಶ

ದಸರಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್, ಸಚಿವ ಡಾ. ಯತೀಂದ್ರ, ಶಾಸಕ ಜಿ.ಟಿ. ದೇವೇಗೌಡ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಇನ್ನು ಸಂಜೆ 5 ಗಂಟೆಗೆ ಮೈಸೂರು ಅರಮನೆ ವೇದಿಕೆಯಲ್ಲಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ. ಡಿಕೆ ಶಿವಕುಮಾರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿಯನ್ನು ರುಕ್ಮಿಣಿ ವಿಜಯಕುಮಾರ್ ಅವರಿಗೆ ಪ್ರದಾನ ಮಾಡಲಾಗುತ್ತದೆ.

ದಸರಾ ಉದ್ಘಾಟನೆಯೊಂದಿಗೆ ಹಲವು ಕಾರ್ಯಕ್ರಮಗಳಿಗೂ ಚಾಲನೆ

ದಸರಾ ಉದ್ಘಾಟನೆಯ ದಿನವೇ ಮೈಸೂರಿನಲ್ಲಿ ಹಬ್ಬದ ಸಂಭ್ರಮ ಕಳೆಗಟ್ಟಲಿದೆ. ಬೆಳಗ್ಗೆ ಕುಪ್ಪಣ್ಣ ಪಾರ್ಕ್‌ನಲ್ಲಿ ಪುಷ್ಪ ಪ್ರದರ್ಶನಕ್ಕೆ ಚಾಲನೆ ಸಿಗಲಿದೆ. ಅಗ್ರಹಾರದ ನೃತ್ಯಶಾಲೆಯಲ್ಲಿ ಪುಸ್ತಕ ಮೇಳ ಹಾಗೂ ವಸ್ತು ಪ್ರದರ್ಶನ ಉದ್ಘಾಟನೆಯಾಗಲಿದೆ. ಸಂಜೆ ಮಹಾರಾಜ ಕಾಲೇಜು ಮೈದಾನದಲ್ಲಿ ಆಹಾರ ಮೇಳ, ದೇವರಾಜ ಅರಸು ಕ್ರೀಡಾಂಗಣದಲ್ಲಿ ಕುಸ್ತಿ ಪಂದ್ಯಾವಳಿ ಹಾಗೂ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿ ಕನ್ನಡ ಪುಸ್ತಕ ಮಾರಾಟ ಮೇಳ ಆರಂಭವಾಗಲಿವೆ.

ಇದರ ಜೊತೆಗೆ ಕಾವಾ ಆವರಣದಲ್ಲಿ ಲಲಿತಕಲೆ ಮತ್ತು ಕರಕುಶಲ ಶಿಬಿರ, ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ರಾಜ್ಯ ದಸರಾ ಸಿಎಂ ಕಪ್ ಕ್ರೀಡಾಕೂಟ ನಡೆಯಲಿದೆ. ಸಂಜೆ 6.30ಕ್ಕೆ ಸಯ್ಯಾಜಿರಾವ್ ರಸ್ತೆಯಲ್ಲಿ ವಿದ್ಯುತ್ ದೀಪಾಲಂಕಾರ ಉದ್ಘಾಟನೆಗೊಳ್ಳಲಿದೆ. ರಾತ್ರಿ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ವಸ್ತು ಪ್ರದರ್ಶನಕ್ಕೂ ಚಾಲನೆ ದೊರೆಯಲಿದೆ. ಹೀಗೆ ಮೊದಲ ದಿನದಿಂದಲೇ ಮೈಸೂರಿನಲ್ಲಿ ದಸರಾ ಸಂಭ್ರಮ ಮನೆಮಾಡಲಿದೆ.

ಖಾಸಗಿ ದರ್ಬಾರ್ ಸಂಭ್ರಮ ಜೋರು 

ಇನ್ನು ಮೈಸೂರು ಅರಮನೆಯಲ್ಲಿ ಖಾಸಗಿ ದರ್ಬಾರ್ ಸಂಭ್ರಮವೂ ಜೋರಾಗಿದೆ. ಅರಮನೆಯ ಧಾರ್ಮಿಕ ವಿಧಿವಿಧಾನಗಳ ಕುರಿತು ರಾಜಮಾತೆ ಪ್ರಮೋದಾದೇವಿ ಒಡೆಯರ್ ಮಾಹಿತಿ ನೀಡಿದ್ದಾರೆ. ಸಿಂಹಾಸನ ಜೋಡಣೆ, ಸಿಂಹಾಸನಕ್ಕೆ ಸಿಂಹ ಜೋಡಣೆ, ಕಂಕಣಧಾರಣೆ ಹಾಗೂ ಸಿಂಹಾಸನಾರೋಹಣ ಸೇರಿದಂತೆ ಹಲವು ಸಾಂಪ್ರದಾಯಿಕ ಆಚರಣೆಗಳು ನಡೆಯಲಿವೆ. ನವರಾತ್ರಿಯ ವಿವಿಧ ದಿನಗಳಲ್ಲಿ ಸರಸ್ವತಿ ಪೂಜೆ, ಕಾಳರಾತ್ರಿ ಪೂಜೆ, ದುರ್ಗಾಷ್ಟಮಿ ಪೂಜೆ ಹಾಗೂ ಮಹಾನವಮಿ ಆಚರಣೆಗಳು ನಡೆಯಲಿವೆ.

ಅಕ್ಟೋಬರ್ 20ರಂದು ಮಹಾನವಮಿ ಅಂಗವಾಗಿ ಚಂಡಿಹೋಮ ನಡೆಯಲಿದೆ. ಬಳಿಕ ಅರಮನೆಯ ಖಾಸಗಿ ಆಯುಧಗಳನ್ನು ಕೋಡಿ ಸೋಮೇಶ್ವರ ದೇವಸ್ಥಾನಕ್ಕೆ ಕೊಂಡೊಯ್ದು ಎಣ್ಣೆ ಪೂಜೆ ನೆರವೇರಿಸಲಾಗುತ್ತದೆ. ನಂತರ ಅರಮನೆಯ ಕಲ್ಯಾಣ ಮಂಟಪದಲ್ಲಿ ಆಯುಧ ಪೂಜೆ ನಡೆಯಲಿದೆ. ಪಟ್ಟದ ಆನೆ, ಪಟ್ಟದ ಹಸು, ಪಟ್ಟದ ಒಂಟೆ, ಪಟ್ಟದ ಕುದುರೆಗಳು, ವಾಹನಗಳು ಹಾಗೂ ಅರಮನೆಯ ಕತ್ತಿ, ಈಟಿ, ಗುರಾಣಿ ಸೇರಿದಂತೆ ವಿವಿಧ ಆಯುಧಗಳಿಗೆ ಪೂಜೆ ಸಲ್ಲಿಸಲಾಗುತ್ತದೆ.

ವಿಜಯಯಾತ್ರೆಗೆ ಸಾಂಪ್ರದಾಯಿಕ ಸಿದ್ಧತೆ

ಅಕ್ಟೋಬರ್ 21ರಂದು ವಿಜಯದಶಮಿ, ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ವಿಜಯಯಾತ್ರೆಗೆ ಸಾಂಪ್ರದಾಯಿಕ ಸಿದ್ಧತೆ ನಡೆಯಲಿದೆ. ಬೆಳಗ್ಗೆ ಪಟ್ಟದ ಆನೆ, ಹಸು, ಕುದುರೆ ಹಾಗೂ ಒಂಟೆಗಳು ಅರಮನೆಯ ಆನೆ ಬಾಗಿಲಿಗೆ ಆಗಮಿಸಲಿವೆ. ಬಳಿಕ ಅರಮನೆಯಲ್ಲಿ ಧಾರ್ಮಿಕ ವಿಧಿವಿಧಾನಗಳು ನೆರವೇರಲಿವೆ. ವಿಜಯಯಾತ್ರೆ ಹಾಗೂ ಶಮಿ ಪೂಜೆಯ ನಂತರ ಕಂಕಣ ವಿಸರ್ಜನೆ ನಡೆಯಲಿದೆ. ಚಾಮುಂಡೇಶ್ವರಿ ವಿಗ್ರಹವನ್ನು ಸ್ವಸ್ಥಾನಕ್ಕೆ ತಲುಪಿಸುವ ಮೂಲಕ ಶರನ್ನವರಾತ್ರಿ ಆಚರಣೆ ಸಂಪನ್ನಗೊಳ್ಳಲಿದೆ.

ಇದನ್ನೂ ಓದಿ: ಮೈಸೂರು ದಸರಾ ಭದ್ರತೆಗೆ 6,000ಕ್ಕೂ ಹೆಚ್ಚು ಪೊಲೀಸರ ನಿಯೋಜನೆ: ಶಿಥಿಲಕಟ್ಟಡ, ಮರಗಳಲ್ಲಿ ಕುಳಿತು ಜಂಬೂಸವಾರಿ ವೀಕ್ಷಣೆಗೆ ನಿಷೇಧ

ಒಟ್ಟಿನಲ್ಲಿ ಮೈಸೂರು ದಸರಾ ಕೇವಲ ಉತ್ಸವವಲ್ಲ, ಅದು ನಾಡಿನ ಪರಂಪರೆ, ಸಂಸ್ಕೃತಿ ಹಾಗೂ ವೈಭವದ ಅನಾವರಣ. ಚಾಮುಂಡಿಬೆಟ್ಟದ ಧಾರ್ಮಿಕ ಸಂಭ್ರಮದಿಂದ ಹಿಡಿದು ಅರಮನೆಯ ಖಾಸಗಿ ದರ್ಬಾರ್, ಸಾಂಸ್ಕೃತಿಕ ಕಾರ್ಯಕ್ರಮಗಳು, ಆಹಾರ ಮೇಳ, ಪುಷ್ಪ ಪ್ರದರ್ಶನ ಹಾಗೂ ವಿದ್ಯುತ್ ದೀಪಾಲಂಕಾರದವರೆಗೆ ಎಲ್ಲೆಲ್ಲೂ ದಸರಾ ಕಳೆಗಟ್ಟಿದೆ. ವಿಜಯದಶಮಿಯ ಜಂಬೂಸವಾರಿ ಕಣ್ತುಂಬಿಕೊಳ್ಳಲು ಕಾತರದಿಂದ ಕಾಯುತ್ತಿರುವ ಜನರಿಗೆ ಮತ್ತೊಮ್ಮೆ ಮೈಸೂರು ದಸರಾ ಸಂಭ್ರಮದ ರಸದೌತಣ ನೀಡಲಿದೆ.

Mysur dasara 2026: ನಾಳೆ ನಾಡಹಬ್ಬ ಮೈಸೂರು ದಸರಾ-2026 ಉದ್ಘಾಟನೆ ಸಿದ್ಧತೆ ಹೇಗಿದೆ ನೋಡಿ! | #TV9D
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More
Loading...
Unable to load recommendations.
Follow Us