
ಮೈಸೂರು, ಅಕ್ಟೋಬರ್ 10: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದೆ. ದಸರಾ ಸಂಭ್ರಮದ ನಡುವೆಯೇ ಮೈಸೂರಿನಲ್ಲಿ ಹಲವು ಬೆಳವಣಿಗೆಗಳು ಮುನ್ನೆಲೆಗೆ ಬಂದಿವೆ. ಒಂದೆಡೆ ಚಾಮುಂಡಿ ಬೆಟ್ಟದಲ್ಲಿ ಮಹಿಷಾ ದಸರಾ ಆಚರಣೆಗೆ ಪೊಲೀಸರು ನಿರ್ಬಂಧ ವಿಧಿಸಿದ್ದು, ಮತ್ತೊಂದೆಡೆ ಜಂಬೂಸವಾರಿಯ ಗೋಲ್ಡ್ ಪಾಸ್‌ಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿವೆ ಎಂಬ ಆರೋಪ ಕೇಳಿಬಂದಿದೆ.
ಮೈಸೂರಿನಲ್ಲಿ ಮಹಿಷಾ ದಸರಾ ಆಚರಣಾ ಸಮಿತಿ ಮಹಿಷಾ ದಸರಾ ಕಾರ್ಯಕ್ರಮಕ್ಕೆ ಸಿದ್ಧತೆ ಮಾಡಿಕೊಂಡಿತ್ತು. ಆದರೆ, ಚಾಮುಂಡಿ ಬೆಟ್ಟದಲ್ಲಿ ಆಚರಣೆಗೆ ಪೊಲೀಸರು ನಿರ್ಬಂಧ ವಿಧಿಸಿದ್ದಾರೆ. ದಸರಾ ಸಂದರ್ಭದಲ್ಲಿ ಪ್ರವಾಸಿಗರಿಗೆ ತೊಂದರೆಯಾಗುವ ಹಾಗೂ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಆದರೆ, ನಗರದ ಪುರಭವನದಲ್ಲಿ ಮಹಿಷಾ ದಸರಾ ಆಚರಣೆಗೆ ಅವಕಾಶ ನೀಡಲಾಗಿದೆ.
ಮೈಸೂರು ದಸರಾ ಜಂಬೂಸವಾರಿಯನ್ನು ಕಣ್ತುಂಬಿಕೊಳ್ಳಲು ಜನರು ಕಾತರರಾಗಿದ್ದಾರೆ. ಈ ನಡುವೆ ಜಂಬೂಸವಾರಿ ವೀಕ್ಷಣೆಗೆ ನೀಡಲಾಗುವ ಗೋಲ್ಡ್ ಪಾಸ್‌ಗಳು ಕಾಳಸಂತೆಯಲ್ಲಿ ಮಾರಾಟವಾಗುತ್ತಿವೆ ಎಂಬ ಆರೋಪ ಕೇಳಿಬಂದಿದೆ.
ಜಂಬೂಸವಾರಿಯಲ್ಲಿ ಪಾಲ್ಗೊಳ್ಳಲಿರುವ ಗಜಪಡೆಯ ಎರಡನೇ ಹಂತದ ಸಿಡಿಮದ್ದು ತಾಲೀಮು ಯಶಸ್ವಿಯಾಗಿ ಪೂರ್ಣಗೊಂಡಿದೆ. ಏಳು ಫಿರಂಗಿಗಳ ಮೂಲಕ ಮೂರು ಸುತ್ತುಗಳಲ್ಲಿ ಒಟ್ಟು 21 ಬಾರಿ ಸಿಡಿಮದ್ದು ಸಿಡಿಸಿ ತಾಲೀಮು ನಡೆಸಲಾಗಿದೆ. ಸಿಡಿಮದ್ದಿನ ಭಾರೀ ಶಬ್ದಕ್ಕೂ ದಸರಾ ಆನೆಗಳು ಬೆದರದೆ ನಿಂತು ಶಬ್ದಾಭ್ಯಾಸದಲ್ಲಿ ಪಾಲ್ಗೊಂಡಿವೆ.
ಮರದ ಅಂಬಾರಿ ಹೊರುವ ತಾಲೀಮು ವೇಳೆ ಅರ್ಧ ದಾರಿಯಲ್ಲೇ ನಿಂತಿದ್ದ ಮಹೇಂದ್ರ ಆನೆಯನ್ನು ಈ ಬಾರಿಯ ಕ್ಯಾಪ್ಟನ್ ಆಯ್ಕೆ ಪ್ರಕ್ರಿಯೆಯಿಂದ ಕೈಬಿಡಲಾಗಿದೆ. ಧನಂಜಯ, ಪ್ರಶಾಂತ, ಸುಗ್ರೀವ ಹಾಗೂ ಏಕಲವ್ಯ ಆನೆಗಳು ಮರದ ಅಂಬಾರಿ ಹೊರುವ ತಾಲೀಮಿನಲ್ಲಿ ಸಮರ್ಥವಾಗಿ ಪಾಲ್ಗೊಳ್ಳುತ್ತಿವೆ.
ಈ ಬಾರಿಯ ಮೈಸೂರು ದಸರಾ ಮಹೋತ್ಸವದ ಭದ್ರತೆಗಾಗಿ 6 ಸಾವಿರಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗುತ್ತಿದೆ ಎಂದು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ತಿಳಿಸಿದ್ದಾರೆ.
ದಸರಾ ಅಂಗವಾಗಿ ಮೈಸೂರಿನಲ್ಲಿ ಆಯೋಜಿಸಲಾಗಿರುವ ಕಂಬಳಕ್ಕೆ ಕೋಣಗಳ ಆಯ್ಕೆ ಪ್ರಕ್ರಿಯೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮೀಯಾರು ಜೋಡುಕೆರೆಯಲ್ಲಿ ನಡೆಯುತ್ತಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ